ಬೆಂಗಳೂರು: ಎರಡೂ ರಾಷ್ಟ್ರೀಯ ಪಕ್ಷಗಳು ವಿಧಾನಸಭೆ ಚುನಾವಣೆಯಲ್ಲಿ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತಿರುವ 50 ಕ್ಷೇತ್ರಗಳ ಗೆಲುವಿನತ್ತ ಹೆಚ್ಚಿನ ಗಮನ ಹರಿಸಿವೆ.
ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಮ್ಯಾಜಿಕ್ ನಂಬರ್ 113ರ ಗಡಿ ದಾಟಲು ಸರ್ಕಸ್ ನಡೆಸುತ್ತಿವೆ. ತಾವು ಖಚಿತವಾಗಿ ಗೆಲ್ಲಬಹುದು ಎಂದುಕೊಂಡಿರುವ ತಲಾ 65 ಕ್ಷೇತ್ರಗಳ ಬಗ್ಗೆ ಈ ಎರಡೂ ಪಕ್ಷಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ 113ರ ಮೆಟ್ಟಿಲು ಮುಟ್ಟಲು ಇನ್ನೂ 50 ಕ್ಷೇತ್ರಗಳ ಗೆಲುವು ಅನಿವಾರ್ಯವಾಗಿದೆ. ಇವು ಗೆಲುವು ಫಿಫ್ಟಿ ಫಿಫ್ಟಿ ಎಂಬಂತಿದ್ದು, ʼಬಿʼ ಪಟ್ಟಿಯಲ್ಲಿವೆ.
ಬಿ ಪಟ್ಟಿಯಲ್ಲಿ ಇರುವ 50 ಕ್ಷೇತ್ರಗಳೇ ಬಿಜೆಪಿ, ಕಾಂಗ್ರೆಸ್ ಟಾರ್ಗೆಟ್ ಆಗಿದ್ದು, ಇಲ್ಲಿ ಗೆಲ್ಲಿಸಿಕೊಂಡವರೇ ಅಧಿಕಾರ ಹಿಡಿಯಲಿದ್ದಾರೆ. ಆ ಐವತ್ತು ಕ್ಷೇತ್ರಗಳನ್ನು ಗುರುತಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಹೆಚ್ಚಿನ ಸಮಯ ಅತ್ತ ಕಡೆ ಹರಿಸಿದ್ದಾರೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಕ್ಲಿಷ್ಟವಾದ ಫೈಟ್ ಇದೆ. ಹೀಗಾಗಿ ಆ ಭಾಗದಲ್ಲಿ ಟಾರ್ಗೆಟ್ ಮಾಡಿದ್ದಾರೆ.
ಆ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ವಿಶೇಷ ಟೀಮ್ ರಚನೆ ಮಾಡಿದೆ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಬಿಜೆಪಿ ವರಿಷ್ಠರು ಜವಾಬ್ದಾರಿ ನೀಡಿದ್ದಾರೆ. ಪಂಚಾಯತ್‌ಗೆ ಒಬ್ಬರಂತೆ ಜವಾಬ್ದಾರಿ ನೀಡಲಾಗಿದೆ. ಆ ಮೂಲಕ ಹೋಬಳಿ ಕಬ್ಜ ಮಾಡಿ ಗೆಲುವಿನ ದಡ ಸೇರಲು ಬಿಜೆಪಿ ತಂತ್ರಗಾರಿಕೆ ಹೆಣೆದಿದೆ. ಇದೇ ರೀತಿ ಕಾಂಗ್ರೆಸ್‌ನಿಂದಲೂ ಆ ಕ್ಷೇತ್ರಗಳನ್ನು ಗೆಲ್ಲಲು ತಂತ್ರಗಾರಿಕೆ ನಡೆದಿದೆ.
ಬೆಂಗಳೂರಿನಲ್ಲಿ ಗೋವಿಂದರಾಜು ನಗರ, ಜಯನಗರ, ಮಹಾದೇವಪುರ, ಪುಲಕೇಶಿ ನಗರ, ರಾಮನಗರ, ಮಾಗಡಿ, ಮುಳಬಾಗಿಲು, ಬೆಳಗಾವಿ ಉತ್ತರ, ಬಾದಾಮಿ, ಕೆ.ಆರ್ ಪೇಟೆ, ಬಳ್ಳಾರಿ ನಗರ, ಚಿತ್ರದುರ್ಗ, ಪುತ್ತೂರು, ಪಾವಗಡ, ಹುಬ್ಬಳ್ಳಿ ಧಾರವಾಡ ಕೇಂದ್ರ, ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗ ನಗರ, ಮೂಡಿಗೆರೆ, ಶೃಂಗೇರಿ, ತರಿಕೇರೆ, ಮಂಗಳೂರು ಉತ್ತರ ಮುಂತಾದವು ಉಭಯ ಪಕ್ಷಗಳಿಗೆ ಆತಂಕ ಮೂಡಿಸಿರುವ ಕ್ಷೇತ್ರಗಳಾಗಿವೆ.