ರಾಜು ಪಾಟೀಲ್, ವಿಸ್ತಾರ ನ್ಯೂಸ್, ವಿಜಯಪುರ
ವಿಜಯಪುರ ಜಿಲ್ಲೆಯನ್ನು ದ್ರಾಕ್ಷಿ – ನಿಂಬೆ ಕಣಜ ಎಂದೂ ಕರೆಯಲಾಗುತ್ತದೆ. ಕೃಷ್ಣೆ ಮತ್ತು ಭೀಮಾ ನದಿಗಳ ಮಧ್ಯೆ ಇರುವ ಈ ನಾಡು ಬಸವನ ನಾಡು (vijayapura district) ಎನಿಸಿಕೊಂಡಿದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪ 40 ಡಿಗ್ರಿಗಿಂತಲೂ ಅಧಿಕವಿದ್ದು, ಬಿಸಿಲನಾಡಿನಲ್ಲಿ ತಾಪಮಾನಕ್ಕಿಂತ ವಿಧಾನಸಭೆ ಚುನಾವಣಾ ಕಾವು ಹೆಚ್ಚಾಗಿದೆ. ಸಮ ಸಮಾಜದ ಕನಸು ಕಂಡ ಬಸವ ಭೂಮಿಯಲ್ಲಿ ಜಾತಿ ರಾಜಕಾರಣವೇ ಪ್ರಧಾನವಾಗಿದೆ. ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಜಿಲ್ಲೆಯಲ್ಲಿ 2004ರ ನಂತರದ ಚಿತ್ರಣ ಬದಲಾಗಿದೆ. ಕಾಂಗ್ರೆಸ್‌ಗೆ ಬಿಜೆಪಿ ಪ್ರಬಲ ಪೈಪೋಟಿ ಕೊಡುತ್ತಲೇ ಬಂದಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಹಾಗೂ ಹಿಂದೂ ಫೈಯರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳರ ತವರು ಜಿಲ್ಲೆಯಾಗಿದ್ದರಿಂದ ರಾಜ್ಯ, ರಾಷ್ಟ್ರ ರಾಜಕಾರಣದ ಗಮನ ಸೆಳೆದಿದೆ. 2018ರ ಚುನಾವಣೆಯಲ್ಲಿ ಒಟ್ಟು 8 ಕ್ಷೇತ್ರಗಳ ಪೈಕಿ ಬಿಜೆಪಿ (BJP) 3, ಕಾಂಗ್ರೆಸ್ (Congress) 3, ಜೆಡಿಎಸ್ (JDS) 2 ಸ್ಥಾನ ಗೆದ್ದಿತ್ತು. ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೂಳಿ ನಿಧನದಿಂದಾಗಿ ನಡೆದ ಸಿಂದಗಿ ಉಪಚುನಾವಣೆಯಲ್ಲಿ ಕಮಲ ಅರಳಿದ್ದರಿಂದ ಬಿಜೆಪಿ ಸ್ಥಾನ 4ಕ್ಕೆ ಏರಿದೆ. ಒಟ್ಟು 95 ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದು ನಾಗಠಾಣ ಮೀಸಲು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಪಾಟೀಲರ ಪ್ರಾಬಲ್ಯದ ಹೋರಾಟ ನಡೆದಿದೆ(Karnataka Election 2023).
ಮುದ್ದೇಬಿಹಾಳ: ನಡಹಳ್ಳಿ ವರ್ಸಸ್ ನಾಡಗೌಡ; ಗೆಲುವು ಯಾರಿಗೆ?
ಗುರಡ್ಡಿ, ದೇಶಮುಖ, ನಾಡಗೌಡ ಮನೆತನಗಳೇ ಹೆಚ್ಚು ಅಧಿಕಾರ ಅನುಭವಿಸಿದ ಕ್ಷೇತ್ರದಲ್ಲಿ ಕಳೆದ ಬಾರಿಯ ೨೦೧೮ರ ಚುನಾವಣೆಯಲ್ಲಿ ಎ.ಎಸ್.ಪಾಟೀಲ್‌ನಡಹಳ್ಳಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಕಮಲ ಅರಳಿಸಿದ್ದಾರೆ. ಬಿಜೆಪಿಯಿಂದ ಮತ್ತೆ ಕಣಕ್ಕಿಳಿದಿರುವ ಶಾಸಕ ಎ.ಎಸ್.ಪಾಟೀಲ್‌ರಿಗೆ ಕಾಂಗ್ರೆಸ್‌ನಿಂದ ಸಿ.ಎಸ್.ನಾಡಗೌಡ (ಅಪ್ಪಾಜಿ) ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಇಬ್ಬರೂ ಪ್ರಮುಖ ಅಭ್ಯರ್ಥಿಗಳ ಸಹೋದರರೇ ಎದುರಾಳಿಗಳ ಬಳಿ ಪ್ರಚಾರದ ಅಖಾಡಕ್ಕಿಳಿದಿರುವುದು ಗಮನಾರ್ಹ ಸಂಗತಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಹ ಇವರಿಬ್ಬರ ಬೆಂಬಲಿಗರ ಚುನಾವಣಾ ಸಮರ ಮೇರೆ ಮೀರಿದೆ. ದಿನದಿಂದ ದಿನಕ್ಕೆ ಈ ಮತಕ್ಷೇತ್ರದಲ್ಲಿ ಟ್ರೆಂಡ್ ಬದಲಾಗುತ್ತಲೇ ಇದೆ.
ಕಳೆದ ಬಾರಿಯ ಫಲಿತಾಂಶ : ಎ.ಎಸ್.ಪಾಟೀಲ್(ನಡಹಳ್ಳಿ) (ಬಿಜೆಪಿ) : ೬೩೫೧೨, ಸಿ.ಎಸ್.ನಾಡಗೌಡ (ಅಪ್ಪಾಜಿ ನಾಡಗೌಡ) (ಕಾಂಗ್ರೆಸ್): ೫೪೮೭೯, ಗೆಲುವಿನ ಅಂತರ : ೮೬೩೩
ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ಸೋಮನಗೌಡ.ಬಿ.ಪಾಟೀಲ್(ಸಾಸನೂರ) ಕ್ಷೇತ್ರದ ಹಾಲಿ ಬಿಜೆಪಿ ಶಾಸಕರು. ಕಳೆದ ಸಲ ಸೋಮನಗೌಡರಿಗೆ ಟಕ್ಕರ್‌ನೀಡಿದ್ದ ಭೀಮನಗೌಡ ಪಾಟೀಲ (ರಾಜೂಗೌಡ, ಕುದರಿ ಸಾಲವಾಡಗಿ) ಮತ್ತೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಈವರೆಗಿನ ಚುನಾವಣೆಯಲ್ಲಿ ಲಿಂಗಾಯತ ರೆಡ್ಡಿ ಸಮುದಾಯದವರೇ ಆಯ್ಕೆಯಾಗಿದ್ದಾರೆ. ಹಲವರು ಆಕಾಂಕ್ಷಿಗಳ ಜೊತೆಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದ ಎಸ್.ಆರ್.ಪಾಟೀಲ್ ಈ ಕ್ಷೇತ್ರದ ಕಾಂಗ್ರೆಸ್‌ಅಭ್ಯರ್ಥಿಯಾಗಲು ಯತ್ನಿಸಿದರಾದರೂ ಪಕ್ಷ ಈ ಸಲ ಜಾತಿ ಪ್ಲೇ ಕಾರ್ಡ್ ಬದಲಾಯಿಸಿ ಅಹಿಂದ ಕೋಟಾದಡಿ ಶರಣಪ್ಪ ಸುಣಗಾರ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲೀಗ ತ್ರಿಕೋನ ಸ್ಪರ್ಧೆ ಇದೆ.
ಕಳೆದ ಬಾರಿಯ ಫಲಿತಾಂಶ : ಸೋಮನಗೌಡ.ಬಿ.ಪಾಟೀಲ್(ಸಾಸನೂರ) (ಬಿಜೆಪಿ) : 48245, ಭೀಮನಗೌಡ ಪಾಟೀಲ್(ರಾಜೂಗೌಡ, ಕುದರಿಸಾಲವಾಡಗಿ) (ಜೆಡಿಎಸ್): 44892, ಗೆಲುವಿನ ಅಂತರ : 3353
ಬಸವನ ಬಾಗೇವಾಡಿ: ಕಾಂಗ್ರೆಸ್ ಗೆಲುವಿಗೆ ಕಡಿವಾಣ ಹಾಕಬಹುದೆ ಬಿಜೆಪಿ?
ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬಸವಣ್ಣನವರ ಜನ್ಮಸ್ಥಳವಾದ ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಶಾಸಕರು. ಮತ್ತೆ ಅಖಾಡಾದಲ್ಲಿರುವ ಅವರಿಗೆ ಬಿಜೆಪಿಯಿಂದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹಾಗೂ ಜೆಡಿಎಸ್‌ನಿಂದ ಸೋಮನಗೌಡ ಪಾಟೀಲ್(ಅಪ್ಪುಗೌಡ) ಮನಗೂಳಿ ಎದುರಾಳಿಗಳು. ಕಳೆದ ಚುನಾವಣೆಯಲ್ಲಿ ಶಿವಾನಂದ ಪಾಟೀಲರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಸೋಮನಗೌಡರು ಬಿಜೆಪಿ ಸೇರಿದ್ದರು. ಅಲ್ಲಿ ಎಸ್.ಕೆ.ಬೆಳ್ಳುಬ್ಬಿಗೆ ಟಿಕೆಟ್ ನೀಡಿದ್ದರಿಂದ ಅನಿವಾರ್ಯವಾಗಿ ಜೆಡಿಎಸ್ ಘೋಷಿತ ಅಭ್ಯರ್ಥಿಯನ್ನು ಬದಲಿಸಿ ತಾವೇ ಕಣಕ್ಕಿಳಿದಿದ್ದಾರೆ. ಹೀಗಾಗಿ ಮತಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ
ಕಳೆದ ಬಾರಿಯ ಫಲಿತಾಂಶ : ಶಿವಾನಂದ ಪಾಟೀಲ್ (ಕಾಂಗ್ರೆಸ್) : 58647, ಸೋಮನಗೌಡ ಬಿ ಪಾಟೀಲ್(ಅಪ್ಪುಗೌಡ, ಮನಗೂಳಿ) (ಜೆಡಿಎಸ್): 55461, ಗೆಲುವಿನ ಅಂತರ : 3186
ಬಬಲೇಶ್ವರ: ಎಂ ಬಿ ಪಾಟೀಲರನ್ನು ಈ ಬಾರಿ ಕಟ್ಟಿ ಹಾಕುತ್ತಾರಾ ವಿಜುಜಗೌ?
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಕ್ಷೇತ್ರದ ಶಾಸಕ. ಇವರಿಗೆ ಬಿಜೆಪಿ ಅಭ್ಯರ್ಥಿ ವಿಜಯಕುಮಾರ ಪಾಟೀಲ್(ವಿಜುಗೌಡ) ಎದುರಾಳಿ. ಇಬ್ಬರ ನಡುವೆ ಮಾಡು ಇಲ್ಲವೆ ಮಡಿ ಎನ್ನುವಂತೆ ಜಿದ್ದಾಜಿದ್ದಿಯ ಹೋರಾಟ ನಡೆದಿದೆ. ಎಂ.ಬಿ. ಪಾಟೀಲರು ಇದೀಗ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿದ್ದು ಗೆಲುವಿನ ಪ್ರತಿಷ್ಠೆಯಾಗಿದೆ. ಸತತವಾಗಿ 3 ಚುನಾವಣೆಗಳಲ್ಲಿ ಎಂ.ಬಿ. ಪಾಟೀಲರಿಗೆ ಪ್ರಬಲ ಪೈಪೋಟಿ ಒಡ್ಡಿದ ವಿಜುಗೌಡರಿಗೂ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಬಸಪ್ಪ ಹೊನವಾಡ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ಕಳೆದ ಬಾರಿಯ ಫಲಿತಾಂಶ : ಎಂ.ಬಿ.ಪಾಟೀಲ್ (ಕಾಂಗ್ರೆಸ್) : 98339, ವಿಜಯಕುಮಾರ ಎಸ್ ಪಾಟೀಲ್(ವಿಜುಗೌಡ ಪಾಟೀಲ್) (ಬಿಜೆಪಿ) : 68624, ಗೆಲುವಿನ ಅಂತರ : 29715
ವಿಜಯಪುರ ನಗರ: ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಹಣಾಹಣಿ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಯತ್ನಾಳರಿಗೆ ಕಳೆದ ಚುನಾವಣೆಯಲ್ಲಿ ತೀರ್ವ ಪೈಪೋಟಿ ಒಡ್ಡಿದ್ದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುರ್ಷೀಫ್ ಮತ್ತೆ ಅಖಾಡಕ್ಕಿಳಿದಿದ್ದಾರೆ. ಧರ್ಮಾಧಾರಿತ ರಾಜಕಾರಣದ ಅಖಾಡವಾಗಿರುವ ಈ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಮಬಲದ ಜಯ ಸಿಕ್ಕಿದೆ. ಜೆಡಿಎಸ್‌ನಿಂದ ಬಂದೇ ನವಾಜ್‌ಮಹಾಬರಿ ಕಣದಲ್ಲಿದ್ದು (ಈಗ ಕಣದಿಂದ ನಿವೃತ್ತಿ) ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡರೂ ಬಿಜೆಪಿ-ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟಿದೆ.
ಕಳೆದ ಬಾರಿಯ ಫಲಿತಾಂಶ : ಬಸನಗೌಡ ಪಾಟೀಲ್‌ಯತ್ನಾಳ (ಬಿಜೆಪಿ) : 76308, ಅಬ್ದುಲ್ ಹಮೀದ್ ಮುರ್ಷೀಫ್ (ಕಾಂಗ್ರೆಸ್) : 69859, ಗೆಲುವಿನ ಅಂತರ : 6412
ನಾಗಠಾಣ: ಜೆಡಿಎಸ್‌ಗೆ ಏಟು ಕೊಡುತ್ತಾ ಬಿಜೆಪಿ, ಕಾಂಗ್ರೆಸ್?
ಎಸ್ಸಿ ಮೀಸಲು ಕ್ಷೇತ್ರವಾಗಿರುವ ಇಲ್ಲೀಗ ಜೆಡಿಎಸ್‌ನ ದೇವಾನಂದ ಚವ್ಹಾಣ ಶಾಸಕರು. ಮತ್ತೆ ಜೆಡಿಎಸ್ ಪಕ್ಷದಿಂದ ಅಖಾಡದಲ್ಲಿರುವ ಅವರಿಗೆ ಕಾಂಗ್ರೆಸ್‌ನಿಂದ ವಿಠ್ಠಲ ಕಟಕದೊಂಡ ಹಾಗೂ ಬಿಜೆಪಿಯಿಂದ ಸಂಜೀವ ಐಹೊಳೆ ಪ್ರತಿಸ್ಪರ್ಧಿಗಳು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ. ಗೋಪಾಲ ಕಾರಜೋಳ ಈ ಸಲವೂ ಸ್ಪರ್ಧೆಗೆ ಅಣಿಯಾಗಿದ್ದರು. ಪಕ್ಷವು ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡುವ ಮೂಲಕ ಹೊಸಮುಖ ಸಂಜೀವ ಐಹೊಳೆ ಅವರನ್ನು ಕಣಕ್ಕಿಳಿಸಿದೆ. ಪರಿಶಿಷ್ಟರಲ್ಲೇ ಮೂರು ಸಮಾಜದವರ ನಡುವೆ ಪೈಪೋಟಿ ನಡೆದಿದೆ.
ಕಳೆದ ಬಾರಿಯ ಫಲಿತಾಂಶ: ದೇವಾನಂದ ಫೂಲಸಿಂಗ್‌ಚವ್ಹಾಣ (ಜೆಡಿಎಸ್) : 59709, ವಿಠ್ಠಲ ದೋಂಡಿಬಾ ಕಟಕದೊಂಡ (ಕಾಂಗ್ರೆಸ್) : 54108, ಗೆಲುವಿನ ಅಂತರ : 5601
ಇಂಡಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ, ಗೆಲುವು ಯಾರಿಗೆ?
ನಿಂಬೆ ಕಣಜ ಇಂಡಿ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಮತ್ತೆ ಅಖಾಡದಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಬಿ.ಡಿ.ಪಾಟೀಲ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿ ಹೊಸ ಪ್ರಯೋಗದ ಆಟದಲ್ಲಿ ಕಾಸೂಗೌಡ ಬಿರಾದಾರ ಅವರನ್ನು ಕಣಕ್ಕಿಳಿಸಿದೆ. ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಈ ಕ್ಷೇತ್ರಕ್ಕೆ ಈವರೆಗೂ ಮಂತ್ರಿ ಸ್ಥಾನ ಸಿಕ್ಕಿಲ್ಲದಿರುವುದೇ ಚರ್ಚೆಯ ವಿಷಯವಾಗಿದೆ.
ಕಳೆದ ಬಾರಿಯ ಫಲಿತಾಂಶ : ಯಶವಂತರಾಯಗೌಡ.ವಿ.ಪಾಟೀಲ್ (ಕಾಂಗ್ರೆಸ್) : 50401, ಬಿ.ಡಿ. ಪಾಟೀಲ್(ಹಂಜಗಿ) (ಜೆಡಿಎಸ್ ) : 40463, ಗೆಲುವಿನ ಅಂತರ : 9938
ಸಿಂದಗಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅದೃಷ್ಟ ಖುಲಾಯಿಸುತ್ತಾ?
ಕಳೆದ ಬಾರಿ ಗೆದ್ದಿದ್ದ ಜೆಡಿಎಸ್‌ನ ಎಂ.ಸಿ.ಮನಗೂಳಿ ನಿಧನದಿಂದಾಗಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ರಮೇಶ ಭೂಸನೂರ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ. ಈಗಲೂ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ದಿ. ಎಂ.ಸಿ.ಮನಗೂಳಿಯವರ ಪುತ್ರ ಅಶೋಕ ಮನಗೂಳಿ ಉಪಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಮತ್ತೆ ಕಾಂಗ್ರೆಸ್ ಪಕ್ಷದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಜೆಡಿಎಸ್‌ನ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ ಅಕಾಲಿಕ ನಿಧನದಿಂದಾಗಿ ಅವರ ಪತ್ನಿ ವಿಶಾಲಾಕ್ಷಿಯವರನ್ನ ಕಣಕ್ಕಿಳಿಸಲಾಗಿದೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡರೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ.
ಕಳೆದ ಬಾರಿಯ ಫಲಿತಾಂಶ : ರಮೇಶ ಭೂಸನೂರ (ಬಿಜೆಪಿ) : 93865 , ಅಶೋಕ ಮನಗೂಳಿ (ಕಾಂಗ್ರೆಸ್) : 62680, ಗೆಲುವಿನ ಅಂತರ : 31185
ವಿಜಯಪುರ ಜಿಲ್ಲೆ ಮತದಾರರ ಸಂಖ್ಯೆ
ಒಟ್ಟು ಮತದಾರರು : 1878303 ಪುರುಷರು : 959132 ಮಹಿಳೆಯರು : 918953 ಇತರೆ : 218
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಬದಲಾದ ಹವಾ, ಕಾಂಗ್ರೆಸ್‌ಗೆ ಲಾಭ? ಬಜರಂಗದಳ ಎಫೆಕ್ಟ್ ಸಸ್ಪೆನ್ಸ್
ಎಲೆಕ್ಷನ್ ವಿಷಯಗಳು
ಆಲಮಟ್ಟಿ ಡ್ಯಾಂ ಎತ್ತರ. ಯುಕೆಪಿ-೩ ನೀರಾವರಿ ಯೋಜನೆಗಳ ಅನುಷ್ಠಾನ. ಮೂಲಸೌಕರ್ಯ. ಬೃಹತ್‌ಕೈಗಾರಿಕೆಪ್ರವಾಸೋದ್ಯಮ. ದ್ರಾಕ್ಷಿ, ನಿಂಬೆ, ಈರುಳ್ಳಿ ಬೆಳೆಗಾರರ ಸಮಸ್ಯೆ.