ಬೆಂಗಳೂರು, ಕರ್ನಾಟಕ: ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಲಿಂಗಾಯತರೇ ಆಗುತ್ತಾರೆಂದು ಇತ್ತೀಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಆದರೆ, ಈಗ ಚರ್ಚೆ ಬೇರೆಯ ದಿಕ್ಕಿನೆಡೆಗೆ ಸಾಗುತ್ತಿದೆ. ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ (KS Eshwarappa) ಅವರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ (CT Ravi) ಮುಖ್ಯಮಂತ್ರಿಯಾಗಲಿ ಎಂದು ಬಹಿರಂಗವಾಗಿಯೇ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ. ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿ ಟಿ ರವಿ, ”ರಾಜ್ಯದ ಜನರು ಯಾವತ್ತು ಸಿ ಟಿ ರವಿ ಮುಖ್ಯಮಂತ್ರಿಯಾಗಲಿ ಎಂದು ಅಪೇಕ್ಷಿಸುತ್ತಾರೋ ಅಂದು ಸಿಎಂ ಆಗುತ್ತೇನೆ,” ಎಂದು ಒಗಟಾಗಿ ಹೇಳಿದ್ದಾರೆ(Karnataka election 2023).
ಸದ್ಯಕ್ಕೆ ಬಸವರಾಜ ಬೊಮ್ಮಾಯಿ ಅವರೇ ನಮ್ಮ ನಾಯಕ. ಅವರ ನೇತೃತ್ವದಲ್ಲೇ ನಾವು ಚುನಾವಣೆ ಎದುರಿಸುತ್ತೇವೆ. ಅವರ ನಮ್ಮ ಮುಖ್ಯಮಂತ್ರಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸಿ ಟಿ ರವಿ ಹೇಳಿದ್ದಾರೆ.
Karnataka Election 2023: ಸಿ ಟಿ ರವಿ ಸಿಎಂ ಆಗಲಿ ಎಂದ ಈಶ್ವರಪ್ಪ
ಒಕ್ಕಲಿಗರು ನನ್ನ ಬೆನ್ನ ಹಿಂದೆ ನಿಲ್ಲಬೇಕು. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳುತ್ತಾರೆ. ಸಿದ್ದರಾಮಯ್ಯ ಅವರು ಎಲ್ಲ ಕುರುಬರು ನನ್ನ ಹಿಂದೆ ಬನ್ನಿ, ನಾನು ಸಿಎಂ ಆಗುತ್ತೇನೆ ಎನ್ನುತ್ತಾರೆ. ಈ ರೀತಿಯ ಜಾತಿವಾದಿಗಳು ಮುಖ್ಯಮಂತ್ರಿಯಾಗಬೇಕೋ, ರಾಷ್ಟ್ರೀಯವಾದಿ ಸಿ.ಟಿ. ರವಿಯಂಥವರು ಮುಖ್ಯಮಂತ್ರಿಯಾಗಬೇಕೋ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿ ಅವರು, ಸಿ ಟಿ ರವಿ ಅವರು ಎಂದೂ ಜಾತಿವಾದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಷ್ಟ್ರೀಯವಾದಿ, ಹಿಂದುತ್ವವಾದಿ ಹೋರಾಟ ಮಾಡಿದ್ದಾರೆ. ಅವರ ಜಿಲ್ಲೆಯಲ್ಲೇ ದತ್ತಮಾಲಾ ಹೋರಾಟ ಮಾಡಿ, ಸುಪ್ರೀಂ ಕೋರ್ಟ್‌ನಲ್ಲೂ ಯಶಸ್ವಿಯಾಗಿ ಬಂದರು. ಅವರು ತಮ್ಮನ್ನು ತಾವು ಹಿಂದುತ್ವದ ನಾಯಕ ಎಂದು ತೋರಿಸಿಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಆ ಭಾಗದ ಎಲ್ಲರ ಅಭಿಪ್ರಾಯ ಸಿ ಟಿ ರವಿಯಂಥ ಯುವಕ ಮುಖ್ಯಮಂತ್ರಿಯಾದರೆ ಒಳ್ಳೆಯದು ಅಂತಿದೆ. ನನಗೂ ಹಾಗೆ ಅನಿಸ್ತು. ಅದಕ್ಕೆ ಸಿ ಟಿ ರವಿ ಮುಖ್ಯಮಂತ್ರಿ ಆದರೆ ಒಳ್ಳೆಯದು ಅನಿಸ್ತು. ಅದಕ್ಕೆ ಹೇಳಿದ್ದೇನೆ ಎಂದು ಈಶ್ವರಪ್ಪ ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: Karnataka Elections 2023 : ಕೆ.ಎಸ್. ಈಶ್ವರಪ್ಪಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದ ನರೇಂದ್ರ ಮೋದಿ, ಕುಟುಂಬ ಫುಲ್ ಖುಷ್
ಅಂತಿಮವಾಗಿ ಮುಖ್ಯಮಂತ್ರಿಯು ಯಾರು ಆಗಬೇಕು ಎಂಬುದನ್ನು ಕೇಂದ್ರ ನಾಯಕರು ಮತ್ತು ಶಾಸಕರು ತೀರ್ಮಾನ ಮಾಡುತ್ತಾರೆ ಎಂದು ಈಶ್ವರಪ್ಪ ಹೇಳಿದರು. ಚುನಾವಣೆ ಮುಗಿಯುವ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಮುಖ್ಯಮಂತ್ರಿಗಳ ಹುದ್ದೆಯ ಆಕಾಂಕ್ಷಿಗಳ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ.