ದಾವಣಗೆರೆ: ತನಗೆ ಮತ ನೀಡುವಂತೆ ದಾವಣಗೆರೆ ಬಿಜೆಪಿ ಅಭ್ಯರ್ಥಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವರ ಮೇಲೆ ಆಣೆ ಮಾಡಿಸಿಕೊಂಡು ಗಿಫ್ಟ್ ಹಂಚಿಕೆ (gift politics) ಮಾಡುತ್ತಿದ್ದಾರೆ ಎಂದು ದೂರು ದಾಖಲಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಜಿ.ಅಜಯ್ ಕುಮಾರ್ ಪರ ಗಿಫ್ಟ್ ಹಂಚಿಕೆ ನಡೆಯುತ್ತಿದ್ದುದನ್ನು ಚುನಾವಣಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಧರ್ಮಸ್ಥಳ ಮಂಜುನಾಥ ದೇವರ ಮೇಲೆ ಆಣೆ ಮಾಡಿಸಿ, ನೀಡಲು ಗಣೇಶನ ಬೆಳ್ಳಿ ವಿಗ್ರಹ ಕೊಂಡೊಯ್ಯಲಾಗುತ್ತಿತ್ತು. ಅಜಯ್ ಕುಮಾರ್ ಆಪ್ತ ಬಳಗದವರು ಗಣೇಶ ಬೆಳ್ಳಿ ವಿಗ್ರಹ ಹಂಚಲು ಮತದಾರರ ಮನೆ ಮನೆಗೆ ತೆರಳುತ್ತಿದ್ದರು. ಹೀಗೆ ತೆರಳುತ್ತಿದ್ದಾಗ ಅಜಯ ಕುಮಾರ್ ಬೆಂಬಲಿಗರು ಚುನಾವಣಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಬೆಳ್ಳಿ ಗಣೇಶ ವಿಗ್ರಹ ಹಾಗೂ ಪೋಟೋ ಹಂಚಿಕೆ ಮಾಡುತ್ತಿದ್ದ ತೇಜಸ್ ಎಂಬ 22 ವರ್ಷದ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಗಾಂಧಿನಗರ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿಬ್ಬಂದಿ ಗಿರೀಶ್ ಎಂಬವರು ದೂರು ದಾಖಲಿಸಿದ್ದಾರೆ.
ರೆಸಾರ್ಟ್‌ನಲ್ಲಿ 2.54 ಕೋಟಿ ರೂ. ಪತ್ತೆ, ಕೇಸು
ಕೋಲಾರ: ರೆಸಾರ್ಟ್‌ನಲ್ಲಿ 2.54 ಕೋಟಿ ಹಣ ಪತ್ತೆಯಾದ ವಿಚಾರದಲ್ಲಿ ಕಾರಣ ಕೇಳಿ ಬಂಗಾರಪೇಟೆ ಶಾಸಕನಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.
ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ 279 ನಂಬರ್ ವಿಲ್ಲಾದಲ್ಲಿ ಹಣ ಪತ್ತೆಯಾಗಿತ್ತು. ಇದು ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಹಣ ಎಂದು ಕಂಡುಬಂದಿತ್ತು. ಬಂಗಾರಪೇಟೆ ಪಂಚಾಯತಿ, ವಾರ, ಹೆಸರು ಬರೆದು ಬಂಡಲ್ ಮಾಡಿಡಲಾಗಿದ್ದ ಹಣವನ್ನು ಕೆಜಿಎಫ್ ಎಸ್‌ಪಿ ಧರಣಿದೇವಿ ಅವರು ದಾಳಿ ಮಾಡಿ ವಶಪಡಿಸಿಕೊಂಡಿದ್ದರು. ದಾಳಿ ವಿಚಾರ ತಿಳಿಯುತ್ತಿದ್ದಂತೆ ಕಾರು ಬಿಟ್ಟು ಮಾಲೀಕ ರಮೇಶ್ ಪರಾರಿಯಾಗಿದ್ದರು. ಕಾರಿನ ಬೀಗ ಒಡೆದು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತ್ತು. ಬಂಗಾರಪೇಟೆ ಚುನಾವಣಾಧಿಕಾರಿ ಶೃತಿ ಅವರು ಈ ವಿಚಾರದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಅಮಿತ್ ಶಾ ಸೇಬಿನ ಹಾರಕ್ಕೆ ಮುಗಿಬಿದ್ದು ಕೈ ಮುರಿದುಕೊಂಡ ಕಾರ್ಯಕರ್ತ