Site icon Vistara News

Karnataka Election 2023: ಸಿಎಂ ಕುರ್ಚಿಗಾಗಿ ಡಿಕೆಶಿ ಸಿಂಪತಿ ಕಾರ್ಡ್, ಸಿದ್ದು ಪವರ್ ಕಾರ್ಡ್ ಪ್ಲೇ!

siddaramaiah DK Shivakumar power fight

siddaramaiah DK Shivakumar power fight

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯನ್ನು (Karnataka Election 2023) ಭರ್ಜರಿ ಬಹುಮತದೊಂದಿಗೆ ಗೆದ್ದಿರುವ ಕಾಂಗ್ರೆಸ್‌ ಈಗ ಮುಖ್ಯಮಂತ್ರಿ ಆಯ್ಕೆಯ ಬಹುದೊಡ್ಡ ಕಸರತ್ತನ್ನು ನಡೆಸುತ್ತಿದೆ. ತಮ್ಮ ಸಂಘಟನೆ ಮತ್ತು ಕಾರ್ಯತಂತ್ರಗಳ ಮೂಲಕ ಪಕ್ಷಕ್ಕೆ ಬಹುದೊಡ್ಡ ಆಸ್ತಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಹಾಗೂ ತಮ್ಮ ಪ್ರಭಾವ ಮತ್ತು ದಿಟ್ಟತನಗಳಿಂದ ಮತ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನಡುವೆ ಅಂತಿಮ ಜಿದ್ದಾಜಿದ್ದಿ ಏರ್ಪಟ್ಟಿದೆ. ಮುಖ್ಯಮಂತ್ರಿ ಆಯ್ಕೆ ಈಗ ಹೈಕಮಾಂಡ್‌ (Congress High command) ಮುಂದಿದ್ದು, ಇಬ್ಬರು ಕೂಡಾ ತಮ್ಮ ಶಕ್ತಿ, ಸಾಮರ್ಥ್ಯಗಳ ಕಾರ್ಡ್‌ ಪ್ಲೇ ಮಾಡುತ್ತಿದ್ದಾರೆ.

ಸೋಮವಾರವೇ ದಿಲ್ಲಿಗೆ ತೆರಳಿರುವ ಸಿದ್ದರಾಮಯ್ಯ ಮತ್ತು ಮಂಗಳವಾರ ದಿಲ್ಲಿ ತಲುಪಿದ ಡಿ.ಕೆ. ಶಿವಕುಮಾರ್‌ ಇಬ್ಬರೂ ಸಿಎಂ ಕುರ್ಚಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಹೈಕಮಾಂಡ್‌ ನಾಯಕರು ಅವರಿಬ್ಬರ ಜತೆ ಮಾತುಕತೆ ನಡೆಸುತ್ತಿದ್ದಾರೆ. ಇವರಲ್ಲಿ ಡಿ.ಕೆ. ಶಿವಕುಮಾರ್‌ ಅವರು ಸಿಂಪತಿ ಕಾರ್ಡ್‌ ಪ್ಲೇ ಮಾಡುತ್ತಿದ್ದರೆ, ಸಿದ್ದರಾಮಯ್ಯ ಅವರು ಪವರ್‌ ಕಾರ್ಡ್‌ ಹಿಡಿದುಕೊಂಡಿದ್ದಾರೆ.

ಡಿ.ಕೆ. ಶಿವಕುಮಾರ್‌ ಸಿಂಪತಿ ಕಾರ್ಡ್‌ನಲ್ಲಿ ಏನೇನಿದೆ?

ಶಿವಕುಮಾರ್‌ ಅವರು ತಮಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿ ಮಂಡಿಸಿರುವ ಸಿಂಪತಿ ಕಾರ್ಡ್‌ನಲ್ಲಿರುವ ಪ್ರಮುಖ ವಿಚಾರಗಳು.

1. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಪೂಜೆಯನ್ನು ಮಾಡಿದ್ದೇನೆ. ಪಕ್ಷವನ್ನು ದೇವರೆಂದು, ತಾಯಿಯೆಂದು ದೇಗುಲವೆಂದು ಆರಾಧಿಸಿದ್ದೇನೆ.
2. ಅತ್ಯಂತ ಸಂಕಷ್ಟದ ಕಾಲದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವೇ ಅನಾಥವಾದಾಗ ನಾನು ಅದನ್ನು ವಹಿಸಿಕೊಂಡು ಬಲಗೊಳಿಸಿದ್ದೇನೆ.
3. ಬಿಜೆಪಿಯವರು ಎಷ್ಟೇ ಕಾಟ ಕೊಟ್ಟರೂ ಬಗ್ಗಿಲ್ಲ. ವೈಯಕ್ತಿಕ ದಾಳಿ, ತೇಜೋವಧೆ ಮಾಡಿದರೂ ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಕೆಲಸ ಮಾಡಿದ್ದೇನೆ.
4. ಐಟಿ, ಇಡಿ, ಸಿಬಿಐ ಒತ್ತಡದಗಳ ನಡುವೆಯೂ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸ ಮಾಡಿದ್ದೇನೆ. ಎಲ್ಲ ನೋವುಗಳನ್ನು ಸಹಿಸಿಕೊಂಡಿದ್ದೇನೆ.
5. ಈ ಬಾರಿ ಒಕ್ಕಲಿಗ ಸಮುದಾಯ ಸಹ ಕಾಂಗ್ರೆಸ್ ಪರ ನಿಂತಿದೆ. ಒಕ್ಕಲಿಗ ಸಮುದಾಯ ನನ್ನ ನಾಯಕತ್ವವನ್ನು ಒಪ್ಪಿದೆ.

ಸಿದ್ದರಾಮಯ್ಯ ಪ್ಲೇ ಮಾಡುತ್ತಿದ್ದಾರೆ ಪವರ್ ಕಾರ್ಡ್

ಮುಖ್ಯಮಂತ್ರಿ ಹುದ್ದೆಯ ಪ್ರಧಾನ ಹುರಿಯಾಳು ಸಿದ್ದರಾಮಯ್ಯ ತನಗೆ ಶಾಸಕರ ಬೆಂಬಲವಿದೆ ಎಂಬ ಪವರ್‌ ಕಾರ್ಡ್‌ ಪ್ಲೇ ಮಾಡುತ್ತಿದ್ದಾರೆ. ಅವರು ಮಂಡಿಸಿರುವ ಅಂಶಗಳು.

1. ನನ್ನ ಪರ 85ಕ್ಕೂ‌ ಹೆಚ್ಚು ಶಾಸಕರು ಇದ್ದಾರೆ. ಮುಖ್ಯಮಂತ್ರಿ ಆಯ್ಕೆ ಮಾಡುವುದು ಶಾಸಕರ ಬಲದ ಮೇಲೆ ಎಂಬ ವಾದ.
2. ದಕ್ಷ ಆಡಳಿತಗಾರ ಎಂಬ ಹೆಗ್ಗಳಿಕೆ, ಐದು ವರ್ಷ ಆಡಳಿತ ನಡೆಸಿದ್ದ ಅನುಭವ ಸಿದ್ದರಾಮಯ್ಯ ಅವರ ಬೆನ್ನಿಗಿದೆ.
3. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
4. ಹಿಂದೆ ಸಿಎಂ ಆಗಿದ್ದಾಗ ಕ್ಲೀನ್ ಇಮೇಜ್ ಉಳಿಸಿಕೊಂಡಿರುವ ಸಿದ್ದರಾಮಯ್ಯ ಅಹಿಂದ ನಾಯಕರೂ ಹೌದು. ಕುರುಬ ಸಮುದಾಯ ಪೂರ್ಣವಾಗಿ ಅವರ ಬೆನ್ನಿಗಿದೆ.
5. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಾಮ ಬೀರಬಲ್ಲ ನಾಯಕನಾಗಿರುವುದರಿಂದ ಲೋಕಸಭಾ ಎಲೆಕ್ಷನ್‌ನಲ್ಲೂ ಪಕ್ಷಕ್ಕೆ ಲಾಭ ಆಗಲಿದೆ ಎಂಬ ಲೆಕ್ಕಾಚಾರ.

Exit mobile version