ಬೆಂಗಳೂರು: ಮಾರ್ಚ್ 29ರಂದು ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇದುವರೆಗೆ ರಾಜ್ಯದಲ್ಲಿ ₹ 305 ಕೋಟಿ ಮೌಲ್ಯದ ನಗದು ಮತ್ತು ಮತದಾರರಿಗೆ ಹಂಚಲೆಂದು ಸಂಗ್ರಹಿಸಿದ್ದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2018ರ ರಾಜ್ಯ ಚುನಾವಣೆಯ ಸಮಯದಲ್ಲಿ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹ 83 ಕೋಟಿಗಳಷ್ಟಿತ್ತು. ಈ ಬಾರಿ ವಶಪಡಿಸಿಕೊಂಡ ಪ್ರಕರಣಗಳಲ್ಲಿ ನಗದು (₹ 110 ಕೋಟಿ), ಮದ್ಯ (₹ 74 ಕೋಟಿ), ಚಿನ್ನ ಮತ್ತು ಬೆಳ್ಳಿ (₹ 81 ಕೋಟಿ), ಉಚಿತ ಗಿಫ್ಟ್ (₹ 22 ಕೋಟಿ) ಮತ್ತು ಡ್ರಗ್ಸ್/ ಮಾದಕ ದ್ರವ್ಯಗಳು (₹ 18 ಕೋಟಿ) ಸೇರಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿ ತಿಳಿಸಿದೆ.
ಇವುಗಳಿಗೆ ಸಂಬಂಧಿಸಿದಂತೆ ಒಟ್ಟು 2,346 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಚುನಾವಣೆ ಘೋಷಣೆಗೂ ಮುನ್ನ ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ಸುಮಾರು ₹ 58 ಕೋಟಿ ಎಂದಿದ್ದಾರೆ.
ಅಕ್ರಮ ಹಣಕಾಸಿನ ಹರಿವನ್ನು ಸ್ಥಳೀಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ನಿಯಂತ್ರಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತಾಕೀತು ಮಾಡಿದ್ದಾರೆ. ವಿಡಿಯೋ ಕರೆ ಮೂಲಕ ರಾಜ್ಯದ ಚುನಾವಣಾ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಅವರು ಪರಿಶೀಲಿಸಿದ್ದಾರೆ. ಗಡಿ ರಾಜ್ಯಗಳ ಬೆಂಬಲದೊಂದಿಗೆ ಅಕ್ರಮ ವಶಪಡಿಸಿಕೊಳ್ಳುವಿಕೆ ಹೆಚ್ಚಿಸಬೇಕು. ಕರಾವಳಿ ಕಾವಲು ಮತ್ತು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿಗಾ ಇರಿಸಲು ಮತ್ತು ಡ್ರಗ್ಸ್ ಹಾವಳಿಯನ್ನು ಕಡಿಮೆ ಮಾಡಲು ಸೂಚಿಸಿದರು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಪರಿಶೀಲನಾ ಸಭೆಯಲ್ಲಿ ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರು ಭಾಗವಹಿಸಿದ್ದರು. ರಾಜ್ಯ ಗಡಿಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ರಾಜ್ಯ ತಂಡಗಳಿಗೆ ನಿರ್ದೇಶನ ನೀಡಿದರು. ಅಕ್ರಮ ನಗದು, ಮದ್ಯ, ಮಾದಕ ದ್ರವ್ಯ ಅಥವಾ ಉಚಿತ ಆಮಿಷಗಳ ಗಡಿಪ್ರದೇಶದ ಹರಿವನ್ನು ತಡೆಯಲು ನೆರೆಯ ರಾಜ್ಯಗಳ ಗಡಿಯಲ್ಲಿ 185 ಅಂತಾರಾಜ್ಯ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯ ಅಗತ್ಯವನ್ನು ನಿರ್ದಿಷ್ಟವಾಗಿ ಒತ್ತಿ ಹೇಳಿದರು.
ಇದನ್ನೂ ಓದಿ: Karnataka Election 2023: ಚುನಾವಣಾ ಅಕ್ರಮ; ಸಕ್ಕರೆ ಕಾರ್ಖಾನೆಯಲ್ಲಿ ಪತ್ತೆಯಾದವು ಫಳಫಳ ಹೊಳೆಯುವ ಬೆಳ್ಳಿ ದೀಪಗಳು