ಚಾಮರಾಜನಗರ/ಮೈಸೂರು: ಚಾಮರಾಜನಗರದ ಹನೂರಿನ ವಿವೇಕಾನಂದ ಶಾಲೆಯಲ್ಲಿ ಆಯೋಜಿಸಿದ್ದ ಚುನಾವಣಾ ತರಬೇತಿಯಲ್ಲಿ ಪಾಲ್ಗೊಂಡಿದ್ದ ನೌಕರನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಜಗದೀಶ್ (40) ಮೃತ ನೌಕರರಾಗಿದ್ದಾರೆ.
ಹನೂರಿನ ಖಜಾನೆ ಇಲಾಖೆಯಲ್ಲಿ ಜಗದೀಶ್ ಕೆಲಸ ನಿರ್ವಹಿಸುತ್ತಿದ್ದರು. ವಿಧಾನಸಭೆ ಚುನಾವಣೆ ನಿಮಿತ್ತ ಅವರನ್ನು ಚುನಾವಣಾ ಕರ್ತವ್ಯಕ್ಕೆ ತೊಡಗಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವೇಕಾನಂದ ಶಾಲೆಯಲ್ಲಿ ಚುನಾವಣಾ ತರಬೇತಿ ನಡೆಯುತ್ತಿತ್ತು. ತರಬೇತಿ ಆರಂಭವಾಗುತ್ತಿದ್ದಂತೆ ಜಗದೀಶ್ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ.
ಕೂಡಲೇ ಅಲ್ಲಿದ್ದವರು ಅವರನ್ನು ಆಸ್ಪತ್ರೆಗೆ ಸೇರಿಸಲು ಮುಂದಾದರು. ಆದರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಜಗದೀಶ್ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜಗದೀಶ್ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ರಸ್ತೆ ಅಪಘಾತದಲ್ಲಿ ಸವಾರ ಮೃತ್ಯು
ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ರಸ್ತೆ ಅಪಘಾತ ನಡೆದಿದ್ದು, ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ. ಮೈಸೂರು ತಾಲೂಕಿನ ಕಡಕೊಳ ಬಳಿ ಸವಾರರೊಬ್ಬರು ತಮ್ಮ ಸ್ಕೂಟರ್ ಬಳಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಒಮಿನಿಯೊಂದು ಮೊದಲು ಬ್ಯಾರಿಕೇಡ್‌ಗೆ ಗುದ್ದಿ, ನಂತರ ಸ್ಕೂಟರ್, ಕಾರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಗುರುತು ಪತ್ತೆ ಆಗಿಲ್ಲ. ಇತ್ತ ಒಮಿನಿ ಚಾಲಕ ಗಾಯಗೊಂಡಿದ್ದು, ಒಳಗೆ ಸಿಲುಕಿ ನರಳಾಡುತ್ತಿದ್ದವನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಇದನ್ನೂ ಓದಿ: Puttenahalli Police: ಪುಟ್ಟೇನಹಳ್ಳಿಯಲ್ಲಿ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಜಿಗಿದು ಗೃಹಿಣಿ ಆತ್ಮಹತ್ಯೆ
1.56 ಕೋಟಿ ರೂ. ಮೌಲ್ಯದ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ
ಅಕ್ರಮವಾಗಿ ಗಾಂಜಾ ಮಾರಾಟ (Ganja Seized) ಮಾಡುತ್ತಿದ್ದವರನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ. 1 ಕೋಟಿ 56 ಲಕ್ಷ ರೂ. ಮೌಲ್ಯದ 156 ಕಿ.ಲೊ ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಅಕ್ರಮ ಗಾಂಜಾ ಸಾಗಣೆ ಮಾಡುತ್ತಿದ್ದ ಕಿಂಗ್‌ಪಿನ್‌ನನ್ನು ಬಂಧಿಸಲಾಗಿದೆ. ಈತ ವಿಶಾಖಪಟ್ಟಣ ಮೂಲದವನು ಎಂದು ತಿಳಿದು ಬಂದಿದೆ. ಜತೆಗೆ ಹೈದ್ರಾಬಾದ್ ಮುಂಬೈ ರಾಷ್ಟ್ರೀಯ ಹೆದ್ದಾರಿ ಬಂಗೂರ ಚೆಕ್‌ಪೋಸ್ಟ್ ಸೇರಿ ಮೂರು ಕಡೆ ಪೊಲೀಸರು ದಾಳಿ ಮಾಡಿ, ಮೂರು ಪ್ರತ್ಯೇಕ ಪ್ರಕರಣದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.