Site icon Vistara News

Karnataka Election 2023 : ಗ್ಯಾರಂಟಿ ಎಲ್ಲರಿಗೂ ಸಿಗಲ್ಲ, Conditions Apply ಅಂದ ಪರಮೇಶ್ವರ್‌

Dr. G parameshwar

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಗೆದ್ದು ಬೀಗಿದ ಕಾಂಗ್ರೆಸ್‌ ಸರ್ಕಾರ ರಚನೆಯ ಸರ್ಕಸ್‌ನಲ್ಲಿ ನಿರತವಾಗಿದೆ. ಇದರ ನಡುವೆಯೇ ಅದು ಚುನಾವಣೆಗೆ ಮುನ್ನ ನೀಡಿದ ಐದು ಪ್ರಮುಖ ಗ್ಯಾರಂಟಿಗಳ (Congress Guarantee card) ಜಾರಿಯ ಬಗ್ಗೆ ಎಲ್ಲೆಡೆ ಕುತೂಹಲ ಮೂಡಿದೆ. ಕೆಲವರಂತೂ ಈಗಿನಿಂದಲೇ ಕರೆಂಟ್‌ ಬಿಲ್‌ ಕಟ್ಟುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಹಾಗಿದ್ದರೆ ಗ್ಯಾರಂಟಿ ನಿಜಕ್ಕೂ ನಿಜವಾಗುತ್ತಾ? ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್‌ (G Parameshwar).

ಕಾಂಗ್ರೆಸ್‌ ನೀಡಿದ ಐದು ಪ್ರಮುಖ ಗ್ಯಾರಂಟಿಗಳು ಎಲ್ಲರಿಗೂ ಸಿಗುವುದಿಲ್ಲ ಎಂದು ಜಿ. ಪರಮೇಶ್ವರ್‌ ಸ್ಪಷ್ಟವಾಗಿ ಹೇಳಿದರು. ಎಲ್ಲ ಗ್ಯಾರಂಟಿಗಳ ಜಾರಿಗೂ ಷರತ್ತುಗಳು ಅನ್ವಯಿಸುತ್ತವೆ. ಯೋಜನೆ ಜಾರಿಗೆ ಏನೇನು ನೀತಿ ನಿಯಮಗಳು ಎನ್ನುವುದನ್ನು ಪ್ರಕಟಿಸಲಾಗುವುದು ಎಂದು ಅವರು ಮಂಗಳವಾರ ತಿಳಿಸಿದರು.

ʻʻʻಮೊದಲ ಕ್ಯಾಬಿನೆಟ್ ಸಭೆಯಲ್ಲೇ ಐದು ಗ್ಯಾರಂಟಿ ಈಡೇರಿಸೋ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ನಾವು ಬದ್ದರಾಗಿ ಇರುತ್ತೇವೆ. ಮೊದಲ ಕ್ಯಾಬಿನೆಟ್ ನಲ್ಲಿ ಜಾರಿ ಮಾಡುತ್ತೇನೆ. ಗ್ಯಾರಂಟಿಗಳನ್ನು ಪ್ರಾಕ್ಟಿಕಲ್ ಆಗಿ ವರ್ಕ್ ಮಾಡಿ ಜಾರಿ ಮಾಡುತ್ತೇವೆ. ಆಯಾ ಇಲಾಖೆ ಸಚಿವರು ಕೂತು ಇದರ ಬಗ್ಗೆ ಲೆಕ್ಕಾಚಾರ ಮಾಡಿ ಜಾರಿ ಮಾಡುತ್ತೇವೆ. ಗ್ಯಾರಂಟಿಗಳಿಗೆ ಕಂಡಿಷನ್ ಇರುತ್ತದೆ. ಹಾಗೇ ಕೊಟ್ಟರೆ ಸುಮ್ಮನೆ ಕೊಟ್ಟರೆ ಎಲ್ಲರೂ ತಗೋತಾರೆ. ಗ್ಯಾರಂಟಿಗಳಿಗೆ ಮಾನದಂಡ ಇರುತ್ತೆ. ಕಂಡಿಷನ್ ಅಪ್ಲೈʼʼ ಎಂದು ಸೂಚನೆ ಕೊಟ್ಟಿದ್ದಾರೆ ಪರಮೇಶ್ವರ್.

ಕಾಂಗ್ರೆಸ್‌ ನೀಡಿದ್ದ ಭರವಸೆಗಳೇನು?

ಕಾಂಗ್ರೆಸ್‌ ತನ್ನ ಪ್ರಣಾಳಿಕೆ ಬಿಡುಗಡೆಯ ಪೂರ್ವದಲ್ಲೇ ಐದು ಪ್ರಮುಖ ಭರವಸೆಗಳನ್ನು ನೀಡಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ಗಳನ್ನು ತಲುಪಿಸಿತ್ತು. ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ, ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವ ಗೃಹಜ್ಯೋತಿ, ಪದವಿ ವಿದ್ಯಾಭ್ಯಾಸ ಪಡೆದು ಉದ್ಯೋಗ ಸಿಗದೆ ಇರುವವರಿಗೆ 3000 ರೂ, ಡಿಪ್ಲೊಮಾ ಪದವೀಧರರಿಗೆ 1500 ರೂ. ಮಾಸಿಕ ಸಹಾಯಧನ ನೀಡುವ ಯುವ ನಿಧಿ, ಬಡವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆ, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಗಳನ್ನು ಪ್ರಕಟಿಸಿತ್ತು. ಘೋಷಣೆಯ ಸಂದರ್ಭದಲ್ಲಿ ಈ ಕೊಡುಗೆಗಳು ಯಾರಿಗೆ ಅನ್ವಯ ಎನ್ನುವ ಬಗ್ಗೆ ಸ್ಪಷ್ಟತೆ ನೀಡಿರಲಿಲ್ಲ. ಈಗ ಷರತ್ತುಗಳು ಅನ್ವಯಿಸುತ್ತವೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷರೇ ಹೇಳಿದ್ದಾರೆ.

ಸಿಎಂ ಆಯ್ಕೆಗೆ ನೀವಂದುಕೊಂಡಂತೆ ಹೋರಾಟ ನಡೆಯಲ್ಲ ಎಂದ ಪರಮ್‌!

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಿದ್ದರೂ ಸಿಎಂ ಆಯ್ಕೆ ಕಗ್ಗಂಟಾಗಿರುವ ಬಗ್ಗೆ ಮಾತನಾಡಿದ ಅವರು, ಸಿಎಂ ಆಯ್ಕೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಹೈಕಮಾಂಡ್‌ ಪ್ರಕ್ರಿಯೆಗಳನ್ನು ನಡೆಸುತ್ತಿದೆ. ಈಗಾಗಲೇ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡುತ್ತಾರೆ. ನೀವು ಅಂದುಕೊಂಡ ಹಾಗೆ ದೊಡ್ಡ ಹೋರಾಟ ಆಗೊಲ್ಲʼʼ ಎಂದು ಹೇಳಿದರು.

ʻʻಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧ್ಯಕ್ಷರಿಗೆ ಸ್ಥಾನ‌ ಕೊಡಬೇಕು. ಇದು ಇರುವ ಪದ್ಧತಿ. ಸಿದ್ದರಾಮಯ್ಯ ಶಾಸಕಾಂಗ ಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ನಾವು ಸಾಮೂಹಿಕ ನಾಯಕತ್ವ ಅಂತ ಹೋಗಿದ್ದೆವು. ಈಗ ಪಕ್ಷ ಅಧಿಕಾರಕ್ಕೆ ಬಂದಿದೆ. ಹೈಕಮಾಂಡ್ ಯಾರು ಸಿಎಂ ಅಂತ ತೀರ್ಮಾನ ಮಾಡುತ್ತದೆʼʼ ಎಂದರು ಪರಮೇಶ್ವರ್‌.

ಸಿದ್ದರಾಮಯ್ಯ ಅವರ ಜೊತೆ ಕೆಲವು ಶಾಸಕರು ಹೋಗಿ ಶಕ್ತಿ ಪ್ರದರ್ಶನ ಮಾಡುತ್ತಿರುವ ಬಗ್ಗೆ ಕೇಳಿದಾಗ, ʻʻಅದು ಶಕ್ತಿ ಪ್ರದರ್ಶನ ಅಲ್ಲ. ಕೆಲವು ಶಾಸಕರು ಅವರ ನಾಯಕರ ಜೊತೆ ಅಂತ ಹೋಗಿರುತ್ತಾರೆ. ಅದನ್ನು ಶಕ್ತಿ ಪ್ರದರ್ಶನ ಅನ್ನೋದು ಸರಿಯಲ್ಲ. ನಾವು ಬೇಕಾದರೂ ಶಾಸಕರನ್ನು ಕಡೆದುಕೊಂಡು ಹೋಗಬಹುದು‌. ಆದರೆ ನಾವು ಹೋಗೊಲ್ಲʼʼʼ ಎಂದರು ಮಾಜಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌.

ನಾನು ಲಾಬಿ ಮಾಡಿಲ್ಲ ಅಂದ ಮಾತ್ರಕ್ಕೆ ಅಸಮರ್ಥ ಎಂದಲ್ಲ!

2013ರಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದರೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ್‌ ಸೋತಿದ್ದರು. ಹಾಗಾಗಿ ಪರಮೇಶ್ವರ್‌ಗೆ ಹುದ್ದೆ ಸಿಗದೆ ಅನ್ಯಾಯ ಆಯಿತು, ಈ ಬಾರಿ ಹೈಕಮಾಂಡ್‌ ಅದನ್ನು ಸರಿ ಮಾಡುತ್ತದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʻʻನಾನು ಪಕ್ಷದ ವರಿಷ್ಠರನ್ನು ನಂಬಿದ್ದೇನೆ. ನಾನು ಕೂಡಾ 50 ಶಾಸಕರ ಗುಂಪು ಕಟ್ಟಿಕೊಂಡು ಹೋಗಬಹುದು. ಆದರೆ ನಾನು ಹಾಗೆ ಮಾಡೊಲ್ಲ. ನನಗೆ ಪ್ರಿನ್ಸಿಪಲ್ ಇದೆ. ನನಗೆ ಶಿಸ್ತು ಮುಖ್ಯ. ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ಖಂಡಿತ ಮಾಡ್ತೀನಿ. ಅವಕಾಶ ಕೊಟ್ಟರೆ ಮಾಡೊಲ್ಲ ಅಂತ ಹೇಳೊಲ್ಲ. ಹೈಕಮಾಂಡ್‌ಗೆ ನನ್ನ ಬಗ್ಗೆ, ನನ್ನ ಕೆಲಸದ ಬಗ್ಗೆ ಎಲ್ಲವೂ ಗೊತ್ತಿದೆ. ಲಾಬಿ ಮಾಡಬಾರದು ಅಂತ ಸುಮ್ಮನೆ ಇದ್ದೇನೆ. ಸುಮ್ಮನೆ ಇದ್ದೇನೆ ಅಂದರೆ ಅಸಮರ್ಥ ಅಂತ ಅಲ್ಲ. ನಾನು ಸಮರ್ಥನೆʼʼ ಎಂದರು ಪರಮೇಶ್ವರ್‌.

ಇದನ್ನೂ ಓದಿ : Karnataka Election : ಪಕ್ಷ ನನಗೆ ದೇವರು, ಹೇಳಿದಂತೆ ಕೇಳುವೆ; ಸಿಎಂ ಪಟ್ಟು ಬಿಟ್ಟು ಕೊಟ್ಟರಾ ಡಿಕೆಶಿ?

Exit mobile version