Site icon Vistara News

ಕೊಪ್ಪಳ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕಾಂಗ್ರೆಸ್- ಬಿಜೆಪಿ ಮಧ್ಯೆ ಫೈಟ್, ಇದೆಯಾ ಗಾಲಿ ಜನಾರ್ದನ್ ರೆಡ್ಡಿ ಎಫೆಕ್ಟ್?

Karnataka Election 2023: Fight between Congress-BJP, is there Reddy effect?

-ಮೌನೇಶ್ ಎಸ್. ಬಡಿಗೇರ್, ವಿಸ್ತಾರ ನ್ಯೂಸ್, ಕೊಪ್ಪಳ
ಬಿಸಿಲ ನಾಡು ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಭಿನ್ನತೆಗೆ ಸಾಕ್ಷಿಯಾಗುವ ಎಲ್ಲ ಲಕ್ಷಣಗಳಿವೆ. ಐದೂ ಕ್ಷೇತ್ರಗಳಲ್ಲಿನ ಶಾಸಕರು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ವರ್ಣರಂಜಿತ ರಾಜಕಾರಣಿ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಎಂಟ್ರಿ ಕೊಟ್ಟಿದ್ದು, ಕೆಆರ್‌ಪಿಪಿ ಪಕ್ಷದ ಮೂಲಕ ಕಣದಲ್ಲಿದ್ದಾರೆ. ಬಿಜೆಪಿಯಲ್ಲಿನ ಟಿಕೆಟ್ ಹಂಚಿಕೆಯಿಂದ ಆದ ಭಿನ್ನಮತ ಪರಿಣಾಮಗಳು, ಅಸಮಾಧಾನಗಳು, ಸ್ವಪಕ್ಷೀಯರ ವಿರುದ್ಧದ ಟೀಕಾಸ್ತ್ರಗಳು ವಿಭಿನ್ನ ಫಲಿತಾಂಶಕ್ಕೆ ನಾಂದಿ ಹಾಡಲಿದೆ(Karnataka Election 2023) ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಳೆದ ಬಾರಿಯೂ ಬಿಜೆಪಿ ಟಿಕೆಟ್ ವಂಚಿತವಾಗಿದ್ದ ಸಿ ವಿ ಚಂದ್ರಶೇಖರ್ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಸಿಗದ ಕಾರಣದಿಂದ ಜೆಡಿಎಸ್‌ನಿಂದ ಅಭ್ಯರ್ಥಿಯಾಗಿ ಚುನಾವಣಾ ಅಖಾಡದಲ್ಲಿ ತೊಡೆತಟ್ಟಿದ್ದಾರೆ. ಇದನ್ನು ಹೊರತುಪಡಿಸಿದರೆ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಎದುರಿಸುತ್ತಿದೆ. ಎಚ್ ಆರ್ ಶ್ರೀನಾಥ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ದೊರೆಯಲಿಲ್ಲ. ಹಾಗಾಗಿ ಅವರ ವಿರುದ್ಧ ಬಹಿರಂಗ ಸಮರ ಸಾರಿರುವ ಅವರು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಅನ್ಸಾರಿಗೆ ತಲೆನೋವು ತಂದಿದ್ದಾರೆ. ಇವು ಕೊಪ್ಪಳ ಜಿಲ್ಲೆಯ ರಾಜಕಾರಣದ ಅಂಗಳದಲ್ಲಿ ಕಂಡು ಬರುತ್ತಿರುವ ಪ್ರಮುಖ ಹೈಲೆಟ್‌ಗಳಾಗಿವೆ.

ಕೊಪ್ಪಳ: ಹಿಟ್ನಾಳ್ – ಕರಡಿ ಕದನದಲ್ಲಿ ಜೆಡಿಎಸ್‌ನಿಂದ ಯಾರಿಗೆ ಹೊಡೆತ?

ಪ್ರತಿ ಚುನಾವಣೆಯಲ್ಲಿಯೂ ಕೊಪ್ಪಳ ಕ್ಷೇತ್ರದಲ್ಲಿ ಕರಡಿ ವರ್ಸಸ್ ಹಿಟ್ನಾಳ್ ಕುಟುಂಬದ ನಡುವೆ ನಡೆಯುವ ಚುನಾವಣೆ ಎಂದೇ ಹೇಳಲಾಗುತ್ತಿತ್ತು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ. 2018ರ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿ ಬಿ ಫಾರ್ಮ್‍ನಿಂದ ವಂಚಿತಗೊಂಡಿದ್ದ ಸಿ.ವಿ. ಚಂದ್ರಶೇಖರ್ ಅವರು ಈ ಬಾರಿಯೂ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಈ ಬಾರಿಯೂ ಬಿಜೆಪಿ ಟಿಕೆಟ್ ಸಂಸದ ಸಂಗಣ್ಣ ಕರಡಿ ಕುಟುಂಬದ ಪಾಲಾಗಿದೆ. ಸಂಗಣ್ಣ ಕರಡಿ ಸೊಸೆ ಮಂಜುಳಾ ಅಮರೇಶ್ ಕರಡಿ ಕಣದಲ್ಲಿದ್ದಾರೆ. ಹೀಗಾಗಿ ಬಿಜೆಪಿ ವಿರುದ್ಧ ಸಿಡಿದೆದ್ದ ಸಿ ವಿ ಚಂದ್ರಶೇಖರ್ ಕೊನೆ ಗಳಿಗೆಯಲ್ಲಿ ಜೆಡಿಎಸ್ ಸೇರಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಅತ್ತ ಕಾಂಗ್ರೆಸ್‍ನಿಂದ ಹಾಲಿ ಕೈ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಕಾಂಗ್ರೆಸ್ ಕಣದಲ್ಲಿದ್ದಾರೆ. ಹಿಟ್ನಾಳ್ ಹಾಗೂ ಕರಡಿ ಕುಟುಂಬಗಳ ರಾಜಕಾರಣ ಜನರಲ್ಲಿ ಬೇಸರ ಮೂಡಿಸಿದೆ. ಈಗ ಜೆಡಿಎಸ್ ಅಭ್ಯರ್ಥಿಯಾಗಿ ಸಿ ವಿ ಚಂದ್ರಶೇಖರ್ ಅಖಾಡದಲ್ಲಿರುವುದರಿಂದ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಿ ವಿ ಚಂದ್ರಶೇಖರ್ ಸ್ಪರ್ಧೆಯಿಂದ ಸದ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅಲ್ಪಸಂಖ್ಯಾತ ಸಮುದಾಯದ ಮುನಿಸು ಕಾಂಗ್ರೆಸ್‌ಗೆ ಬಿಸಿತುಪ್ಪವಾಗಬಹುದು.

2018ರ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ನ ಕೆ. ರಾಘವೇಂದ್ರ ಹಿಟ್ನಾಳ್ ಅವರು 98783 ಹಾಗೂ ಬಿಜೆಪಿಯ ಅಮರೇಶ್ ಸಂಗಣ್ಣ ಕರಡಿ 72432 ಮತಗಳನ್ನು ಪಡೆದುಕೊಡಿದ್ದರು. ಗೆಲುವಿನ ಅಂತರ-26351 ಮತಗಳು.

ಗಂಗಾವತಿ: ಬಿಜೆಪಿ ವಿರುದ್ಧ ಕದನದಲ್ಲಿ ಕಾಂಗ್ರೆಸ್‌ಗೆ ರೆಡ್ಡಿ ಮತ್ತು ಬಂಡಾಯದ ಕಾಟ

2018ರ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಸಾಧಿಸಿದ್ದ ಪರಣ್ಣ ಮುನವಳ್ಳಿಯ ಗೆಲುವು ಈ ಬಾರಿ ಚುನಾವಣೆಯಲ್ಲಿ ಅಷ್ಟೊಂದು ಸುಲಭವಾಗಿಲ್ಲ. ಏಕೆಂದರೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ತಮ್ಮ ಕೆಆರ್‌ಪಿಪಿ ಮೂಲಕ ರಾಜಕೀಯ ಜೀವನದ ಎರಡನೇ ಇನಿಂಗ್ಸ್ ಗಂಗಾವತಿಯಿಂದ ಆರಂಭಿಸಿದ್ದಾರೆ. ಇದರ ಜೊತೆಗೆ ಸೋಲಿನ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‍ನಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಣದಲ್ಲಿದ್ದಾರೆ. ಆದರೆ ಯಾರಿಗೂ ಗೆಲುವು ಅಷ್ಟು ಸುಲಭವಾಗಿಲ್ಲ. ರೆಡ್ಡಿ ಆಗಮನದಿಂದ ಗಂಗಾವತಿ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಗಂಗಾವತಿಯಲ್ಲಿ ಧರ್ಮಾಧಾರಿತ ಮತಗಳನ್ನು ಭದ್ರಪಡಿಸಿಕೊಳ್ಳುವ ಯತ್ನಗಳು ನಡೆದಿವೆ. ಅತ್ತ ಮುಸ್ಲಿಂ ಸಮುದಾಯದ ಮತಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ಇಕ್ಬಾಲ್ ಅನ್ಸಾರಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೆ, ಇತ್ತ ಅದೇ ಮುಸ್ಲಿಂ ಸಮುದಾಯದ ಮತಗಳನ್ನು ಕಸಿದುಕೊಳ್ಳಲು ಜನಾರ್ದನರೆಡ್ಡಿ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಎಚ್.ಆರ್. ಚನ್ನಕೇಶವ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಅನ್ಸಾರಿಗೆ ತಲೆನೋವು ತಂದಿದೆ. ರೆಡ್ಡಿ ಎಂಟ್ರಿಯಿಂದ ಗಂಗಾವತಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿ ಗೆಲುವು ಪ್ರಯಾಸದಾಯಕವಾಗಲಿದೆ.

2018ರ ಚುನಾವಣೆ ಫಲಿತಾಂಶ: ಬಿಜೆಪಿಯ ಪರಣ್ಣ ಮುನವಳ್ಳಿ 67617 ಮತ್ತು ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ 59644 ಮತಗಳನ್ನು ಪಡೆದಿದ್ದರೆ ಗೆಲುವಿನ 7973 ಮತಗಳಾಗಿವೆ.

ಕನಕಗಿರಿ: ಬಿಜೆಪಿ-ಕಾಂಗ್ರೆಸ್ ಮಧ್ಯೆ ಬಿಗ್ ಫೈಟ್

ಸ್ಸಿ ಮೀಸಲು ಕ್ಷೇತ್ರವಾಗಿರುವ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಬಿಜೆಪಿಯಿಂದ ಹಾಲಿ ಶಾಸಕ ಬಸವರಾಜ ದಡೇಸೂಗೂರು ಬಿಜೆಪಿ ಕ್ಯಾಂಡಿಡೇಟ್. ಕಾಂಗ್ರೆಸ್‍ನಿಂದ ಮಾಜಿ ಸಚಿವ ಶಿವರಾಜ ತಂಗಡಗಿ ಕಣದಲ್ಲಿದ್ದಾರೆ. ಕೆಆರ್‍ಪಿಪಿಯಿಂದ ಡಾ. ಚಾರೂಲ್ ದಾಸರಿ ಸ್ಪರ್ಧಿಸಿದ್ದಾರೆ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾನೇರ ಹಣಾಹಣಿ ಇದೆ. ಬಿಜೆಪಿ ಅಭ್ಯರ್ಥಿ ಮಾಡಿಕೊಂಡ ಕೆಲ ಯಡವಟ್ಟುಗಳು, ಕಾರ್ಯಕರ್ತರ ಕಡೆಗಣನೆಯ ಆರೋಪಗಳು ಮೈನಸ್ ಆಗುವ ಸಾಧ್ಯತೆ ಇದೆ. ಶಾಸಕ ಬಸವರಾಜ ದಡೇಸೂಗೂರು ಯಡವಟ್ಟುಗಳು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಬಹುದು. ಅಲ್ಲದೆ, ಕ್ಷೇತ್ರದಲ್ಲಿ ಎಡ ಮತ್ತು ಬಲ ಎಂಬ ವಿಷಯದಲ್ಲಿ ಈ ಬಾರಿ ಬಲಗೈ ಇರಲಿ ಎಂಬ ಮನಸ್ಥಿತಿ ಇದೆ. ಹೀಗಾಗಿ ಇದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ.

2018 ಚುನಾವಣೆ ಫಲಿತಾಂಶ: ಬಿಜೆಪಿಯ ದಡೇಸೂಗೊರು 87735 ಮತ್ತು ಕಾಂಗ್ರೆಸ್ ಶಿವರಾಜ ಸಂಪ್ಪ ತಂಗಡಗಿ 73510 ಮತಗಳನ್ನು ಪಡದುಕೊಂಡಿದ್ದರು. ಗೆಲವಿನ ಅಂತರ-14225 ಮತಗಳು.

ಯಲಬುರ್ಗಾ: ರಾಯರೆಡ್ಡಿ ಮತ್ತು ಆಚಾರ್ ಮಧ್ಯೆ ನೇರ ಹಣಾಹಣಿ

ವಿಧಾನಸಭೆಯನ್ನು ಮೊದಲ ಬಾರಿಗೆ ಪ್ರವೇಶ ಮಾಡಿದರೂ ಮೂರು ಪ್ರಮುಖ ಖಾತೆಗಳನ್ನು ಹೊಂದುವ ಮೂಲಕ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಅದೃಷ್ಟ ರಾಜಕಾರಣಿ ಎಂದು ಕರೆಸಿಕೊಳ್ಳುವ ಹಾಲಪ್ಪ ಆಚಾರ್, ಈಗ ಮತ್ತೆ ಕಣದಲ್ಲಿದ್ದಾರೆ. ಬಸವರಾಜ ರಾಯರೆಡ್ಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಜೆಡಿಎಸ್ ಸೇರಿದಂತೆ ವಿವಿಧ ಪಕ್ಷದ ಅಭ್ಯರ್ಥಿಗಳು ಯಲಬುರ್ಗಾ ಚುನಾವಣಾ ಕಣದಲ್ಲಿದ್ದರೂ ಈ ಬಾರಿ ಕದನ ಮಾತ್ರ ಕಾಂಗ್ರೆಸ್ ವರ್ಸಸ್ ಬಿಜೆಪಿ ನಡುವೆ ಇದೆ. ಇಬ್ಬರೂ ಲಿಂಗಾಯತ ರಡ್ಡಿ ಸಮುದಾಯಕ್ಕೆ ಸೇರಿದ್ದಾರೆ. ಸ್ಥಳೀಯ ಬಿಜೆಪಿಯ ಕೆಲ ನಾಯಕರಲ್ಲಿ ಒಳಗೊಳಗೆ ಇರುವ ಅಸಮಧಾನ ಬಿಜೆಪಿ ಅಭ್ಯರ್ಥಿಗೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಎನ್ನಲಾಗಿದೆ. ಅಲ್ಲದೆ, ಸಚಿವರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲಿಲ್ಲ ಎಂಬ ಆರೋಪ ಅಲ್ಲಲ್ಲಿ ಕೇಳಿ ಬರುತ್ತಿದೆ. ರಾಯರೆಡ್ಡಿ ತಾವು ಹಿಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದೆ ಮಾಡುತ್ತಿದ್ದಾರೆ. ಹೀಗಾಗಿ ಈ ಇಬ್ಬರ ನಡುವೆ ನೇರಾನೇರ ಹಣಾಹಣಿ ಇದ್ದು, ಯಾರಿಗೂ ಗೆಲುವು ಒಲಿಯಲಿದೆ ಕಾದು ನೋಡಬೇಕು.

ಕಳೆದ ಚುನಾವಣೆ ಫಲಿತಾಂಶ: ಬಿಜೆಪಿಯ ಹಾಲಪ್ಪ ಬಸಪ್ಪ ಆಚಾರ್ 79072 ಮತ್ತು ಕಾಂಗ್ರೆಸ್ ಬಸವರಾಜ ರಾಯರೆಡ್ಡಿ 65754 ಮತಗಳನ್ನು ಪಡೆದಿದ್ದರು. ಗೆಲವಿನ ಅಂತರ- 13358 ಮತಗಳು.

ಕುಷ್ಟಗಿ: ಈ ಬಾರಿ ಕ್ಷೇತ್ರದ ಇತಿಹಾಸ ಬದಲಿಸುತ್ತಾರೆಯೇ ಬಯ್ಯಾಪುರ?

ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರ ಅತ್ಯಂತ ವಿಶೇಷ ಕ್ಷೇತ್ರ. ಒಂದು ಬಾರಿ ಗೆದ್ದವರು ಮರುಚುನಾವಣೆಯಲ್ಲಿ ಎರಡನೇ ಬಾರಿ ಗೆಲುವು ಸಾಧಿಸಿದ ಉದಾಹರಣೆ ಇಲ್ಲ. ಹೀಗಾಗಿ ಪ್ರತಿ ಚುನಾವಣೆಯಲ್ಲಿಯೂ ಈ ಕ್ಷೇತ್ರದ ಮತದಾರರು ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗುತ್ತಾರೆ. ಹಾಲಿ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್‌ ಬಯ್ಯಾಪುರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ್ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೆಕ್‍ಟುನೆಕ್ ಫೈಟ್ ಇದೆ. ಬಯ್ಯಾಪುರ ವಿರುದ್ದ ಆರೋಪ ಮತ್ತು ಹೊಗಳಿಕೆ ಸಮಪ್ರಮಾಣದಲ್ಲಿದೆ. ಬಿಜೆಪಿ ಅಭ್ಯರ್ಥಿಗೆ ಕಳೆದ ಬಾರಿ ಸೋಲಿನ ಅನುಕಂಪ ದೊರೆತಿದೆ. ಹೀಗಾಗಿ ಕ್ಷೇತ್ರದಲ್ಲಿ ಈ ಇಬ್ಬರ ಅಭ್ಯರ್ಥಿಗಳಿಗೆ ಫಿಫ್ಟಿ ಫಿಫ್ಟಿ ಅವಕಾಶವಿದೆ. ಕೊನೆ ಕ್ಷಣದಲ್ಲಿ ಮತದಾರನ ಮನವೊಲಿಸುವ ಪ್ರಯತ್ನ ಗೆಲುವಿಗೆ ಕಾರಣವಾಗಲಿದೆ.

2018 ಚುನಾವಣೆ ಫಲಿತಾಂಶ: ಕಾಂಗ್ರೆಸ್‌ನ ಬಯ್ಯಾಪುರ ಅವರು 86683 ಮತ್ತು ಬಿಜೆಪಿಯ ದೊಡ್ಡನಗೌಡ ಪಾಟೀಲ್ 68948 ಮತಗಳನ್ನು ಪಡೆದುಕೊಂಡಿದ್ದರು. ಗೆಲುವಿನ ಅಂತರ- 17735 ಮತ

ಇದನ್ನೂ ಓದಿ: ಮಂಡ್ಯ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಜೆಡಿಎಸ್ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ಕಾಳಗ; ಬಿಜೆಪಿಗೂ ಇದೆ ಅಪಾರ ನಿರೀಕ್ಷೆ

ಕೊಪ್ಪಳ ಜಿಲ್ಲೆಯ ಒಟ್ಟು ಕ್ಷೇತ್ರಗಳು 5, ಈ ಪೈಕಿ 1 ಎಸ್‌ಸಿ ಮೀಸಲು ಕ್ಷೇತ್ರವಿದೆ
1) ಕೊಪ್ಪಳ. 2) ಗಂಗಾವತಿ. 4) ಕುಷ್ಟಗಿ. 4) ಯಲಬುರ್ಗಾ. 5) ಕನಕಗಿರಿ (ಎಸ್ಸಿ ಮೀಸಲು)

Exit mobile version