Site icon Vistara News

‌Karnataka Election 2023: ಮೊದಲ ಸಲದ ಮತದಾರರ ಉತ್ಸಾಹದ ಪ್ರತಿಕ್ರಿಯೆ, ಸೆಲ್ಫಿ ಕ್ರೇಜ್‌! ಮಕ್ಕಳನ್ನು ಕರೆತಂದ ನಾಯಕರು

first time voter

ಬೆಂಗಳೂರು: ಮೊದಲ ಮತದಾರರನ್ನು ಪ್ರೋತ್ಸಾಹಿಸುವ ಚುನಾವಣಾ ಆಯೋಗದ ಉತ್ತೇಜನ ಕ್ರಮಗಳಿಗೆ ಪ್ರತಿಕ್ರಿಯೆಯೋ ಎಂಬಂತೆ, ಹೊಸ ಮತದಾರರು ಈ ಸಲದ ಚುನಾವಣೆಯಲ್ಲಿ (‌Karnataka Election 2023) ಗಣನೀಯ ಪ್ರಮಾಣದಲ್ಲಿ ಮತಗಟ್ಟೆಗಳಲ್ಲಿ ಕಾಣಿಸಿಕೊಂಡರು.

ಮತದಾನ ಆರಂಭವಾದ ಮುಂಜಾನೆ 7 ಗಂಟೆಯಿಂದಲೇ ಹಲವು ಮೊದಲ ಸಲದ ಮತದಾರರು ಸಾಲಿನಲ್ಲಿ ನಿಂತು ಮತ (voting) ಚಲಾಯಿಸಿದರು. ನಂತರ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದರು. ʼʼಮತದಾನ ನಮ್ಮ ಹಕ್ಕು, ಸೂಕ್ತ ಅಭ್ಯರ್ಥಿಗೆ ಮತ ನೀಡೋಣ. ಎಲ್ಲರೂ ಮತ ಹಾಕೋಣʼʼ ಎಂಬ ಸಂದೇಶ ಪ್ರತಿಪಾದಿಸಿದರು. ಮಸಿ ಹಾಕಿದ ಬೆರಳನ್ನು ಪ್ರದರ್ಶಿಸಿಕೊಂಡು ಸೆಲ್ಫಿ ಕ್ಲಿಕ್ಕಿಸುತ್ತಿದ್ದುದು ಹಾಗೂ ಇತರರೊಂದಿಗೆ ಹಂಚಿಕೊಂಡುದು ಕಂಡುಬಂತು.

ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗೀದಾರಿಕೆ (Systematic Voters’ Education and Electoral Participation (SVEEP) ಕಾರ್ಯಕ್ರಮದ ಅಂಗವಾಗಿ ಹಲವಾರು ಉಪಕ್ರಮಗಳನ್ನು ಚುನಾವಣಾ ಆಯೋಗ ಈ ಬಾರಿ ಏರ್ಪಡಿಸಿದೆ. ಯುವ ಮತದಾರರಿಗೆ ಪ್ರೇರಣೆ ನೀಡಲು ಹಲವಾರು ಸೆಲೆಬ್ರಿಟಿಗಳನ್ನು ರಾಯಭಾರಿಗಳಾಗಿ ಕರೆತರಲಾಗಿತ್ತು. ರಾಹುಲ್‌ ದ್ರಾವಿಡ್‌, ಮಂಜಮ್ಮ ಜೋಗತಿ, ವಾಸು ದೀಕ್ಷಿತ್‌ ಮಂತಾದ ಕಲಾವಿದರು, ಸೆಲೆಬ್ರಿಟಿಗಳು ಈ ಬಗ್ಗೆ ಪ್ರಚಾರದಲ್ಲಿ ಆಯೋಗದ ಜತೆ ಕೈ ಜೋಡಿಸಿದ್ದರು.

ಈ ಬಾರಿ ಕೆಲವು ರಾಜಕೀಯ ನಾಯಕರು ಮೊದಲ ಸಲ ಮತ ಹಾಕಲಿದ್ದ ತಮ್ಮ ಮಕ್ಕಳನ್ನು ಕರೆತಂದುದು ವಿಶೇಷವಾಗಿ ಕಂಡುಬಂತು. ಮಲ್ಲೇಶ್ವರಂ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಅವರ ಪುತ್ರ ಅಮೋಘ ಹಾಗೂ ಪುತ್ರಿ ಆಕಾಂಕ್ಷ ತಂದೆಯ ಜತೆಗೆ ಬಂದು ಮೊದಲ ಬಾರಿಗೆ ಮತ ಹಾಕಿದರು. ವಿಧಾನ ಪರಿಷತ್ ಚೀಫ್ ವಿಪ್ ವೈ.ಎ ನಾರಾಯಣ ಸ್ವಾಮಿ ಅವರ ಪುತ್ರಿ ಪ್ರಜ್ಞಾ ನಾರಾಯಣ ಕೂಡ ಮೊದಲ ಬಾರಿಗೆ ಮತದಾನ ಮಾಡಿದರು. ಧಾರವಾಡ ಗ್ರಾಮೀಣ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಪುತ್ರ ಹೇಮಂತ್‌, ತಾಯಿಯ ಜತೆ ಬಂದು ಮತ ಹಾಕಿದರು.

ಮತದಾರರ ಪಟ್ಟಿಯಲ್ಲಿ ಈ ಬಾರಿ ಮತ ಚಲಾಯಿಸಲು ಹೊಸದಾಗಿ 42,48,028 ಮತದಾರರ ನೋಂದಣಿ ಆಗಿತ್ತು. ಇದರಲ್ಲಿ ಬಹು ಮಂದಿ ಯುವ ಮತದಾರರು. 286 ಯುವಸ್ನೇಹಿ ಮತಗಟ್ಟೆಗಳು, 996 ಸಖಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: Karnataka Election: ಮತದಾನ ಮಾಡಿದ ರಾಜ್ಯದ ಪ್ರಮುಖ ಸ್ವಾಮೀಜಿಗಳು, ಇಲ್ಲಿವೆ ಫೋಟೊಗಳು

Exit mobile version