ಬೆಂಗಳೂರು, ಕರ್ನಾಟಕ: ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರವು (high voltage campaign) ಸೋಮವಾರ ಸಂಜೆ ಅಂತ್ಯಗೊಳ್ಳುವುದರೊಂದಿಗೆ ಎಲೆಕ್ಷನ್ ಒಂದು ಹಂತಕ್ಕೆ ಬಂದು ನಿಂತಿದೆ. ಎರಡು ವಾರಗಳ ಕಾಲ ಇಡೀ ಕರ್ನಾಟಕವು ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ (Congress), ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮೂರೂ ಪಕ್ಷಗಳು ಮತದಾರರನ್ನು ಸೆಳೆಯಲು ಪ್ರಚಾರದ ಎಲ್ಲ ತಂತ್ರಗಳನ್ನು ಅನುಸರಿಸಿವೆ. ಅತಿರಥ, ಮಹಾರಥರೆಲ್ಲ ‘ಕರ್ನಾಟಕ ಕುರುಕ್ಷೇತ್ರ’ದಲ್ಲಿ ಎದುರು ಬದರಾಗಿ ನಿಂತು ತಮ್ಮ ಪಕ್ಷಗಳ ಪರವಾಗಿ ಹೋರಾಡಿದ್ದಾರೆ. ಮತದಾರರನ್ನು ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಆದರೆ, ಮತದಾರರ ಮನದಾಳವನ್ನು ಅಳೆಯುವ ಪ್ರಯತ್ನಗಳು ಯಾರಿಗೂ ಈವರೆಗೂ ಪೂರ್ತಿ ಕೈಗೊಡಿಲ್ಲ! ಮೂರೂ ಪಕ್ಷಗಳು ತಮ್ಮದೇ ಬಹುಮತ ಎಂಬ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗುತ್ತಿವೆ. ಇದಕ್ಕೆಲ್ಲ ಮೇ 13ರಂದು ಉತ್ತರ ದೊರೆಯಲಿದೆ(Karnataka Election 2023).
ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಇನ್ನೇನಿದ್ದರೂ ‘ಖತಲ್ ರಾತ್’ನ ಚಟುವಟಿಕೆಗಳಷ್ಟೇ ಪ್ರಾಧಾನ್ಯತೆ ಪಡೆಯಲಿವೆ. ಅಬ್ಬರದ ಮೈಕ್, ಡ್ಯಾನ್ಸ್, ಗಲಾಟೆ, ಆರೋಪ, ಪ್ರತ್ಯಾರೋಪಗಳೆಲ್ಲವೂ ಪ್ರಶಾಂತವಾಗಲಿವೆ. ಉಳಿದಿರುವ ಅಲ್ಪ ಸಮಯದಲ್ಲಿ ಕೊನೆಯ ಪ್ರಯತ್ನವಾಗಿ, ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ. ಅಂತಿಮವಾಗಿ ಮೇ 10ಕ್ಕೆ ಮತದಾರ ತನ್ನ ಮನದಾಳವನ್ನು ತಿಳಿಸಲಿದ್ದಾನೆ.
ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿಯೇ ಭರವಸೆ!
ಕಳೆದ ಕೆಲವು ದಿನಗಳಿಂದ ಕರ್ನಾಟಕವು ಅಬ್ಬರ ಪ್ರಚಾರವನ್ನು ಕಂಡಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ದಕ್ಷಿಣ ಭಾರತದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಇದುವರೆಗೆ ಸಾಧ್ಯವಾಗಿಲ್ಲ. ಈ ಕಾರ್ಯಕ್ಕೆ ಕರ್ನಾಟಕವೇ ಹೆಬ್ಬಾಗಿಲು ಎಂದು ಅದು ಹೇಳಿಕೊಂಡಿದೆ. ಹಾಗಾಗಿ, ಹೇಗಾದರೂ ಮಾಡಿ ಕರ್ನಾಟಕದಲ್ಲಿ ಗೆಲ್ಲಲೇಬೇಕು ಎಂಬ ಪಣದೊಂದಿಗೆ ಅಬ್ಬರದ ಪ್ರಚಾರ ನಡೆಸಿದೆ. ಕಳೆದ ಮೂರು ವರ್ಷ ಅಧಿಕಾರದಲ್ಲಿದ್ದ ಬಿಜೆಪಿಗೆ ಆಡಳಿತ ವಿರೋಧಿ ಅಲೆ ತಟ್ಟಿದೆ. ಚುನಾವಣಾ ಪೂರ್ವದ ಪರಿಸ್ಥಿತಿಯ ಲೆಕ್ಕಾಚಾರ ಪ್ರಕಾರ ಸೋಲು ಖಚಿತವಾಗಿತ್ತು. ಇದನ್ನರಿತ ಬಿಜೆಪಿ, ತನ್ನೆಲ್ಲ ಶಕ್ತಿ ಸಾಮರ್ಥ್ಯಗಳನ್ನು ಪ್ರಚಾರಕ್ಕೆ ಬಳಸಿಕೊಂಡಿದೆ. ಬಿಜೆಪಿಗೆ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡಬಲ್ ಎಂಜಿನ್ ಸರಕಾರದ ಸಾಧನೆಗಳೇ ಪ್ರಚಾರದ ಕೇಂದ್ರವಾಗಿತ್ತು. ಜತೆಗೆ ‘ಈ ಬಾರಿ ನಿರ್ಧಾರ; ಬಹುಮತದ ಬಿಜೆಪಿ ಸರ್ಕಾರ’, ‘ಬಿಜೆಪಿಯೇ ಭರವಸೆ’ ಎಂಬ ಚುನಾವಣಾ ಘೋಷಣೆಗಳಾಗಿದ್ದವು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಯುಪಿ ಸಿಎಂ ಯೋಗಿ ಆದಿತ್ಯನಾಥ ಸೇರಿ ಇಡೀ ಕೇಂದ್ರ ಸಂಪುಟವೇ ಕರ್ನಾಟಕದಲ್ಲಿ ಬೀಡು ಬಿಟ್ಟಿತ್ತು. ಹಿನ್ನಡೆಯಲ್ಲಿದ್ದ ಬಿಜೆಪಿ ಪರವಾಗಿ ವಾತಾವರಣ ಮೂಡಿಸುವುದಕ್ಕಾಗಿ ಹೆಚ್ಚು ಕಡಿಮೆ 50 ಕಿ.ಮೀ.ಗೂ ಅಧಿಕ ರೋಡ್ ಶೋ(6 ಕಡೆ) ಹಾಗೂ ರಾಜ್ಯದ ಎಲ್ಲ ಕ್ಷೇತ್ರಗಳನ್ನು ಸಂಪರ್ಕಿಸುವ ಹಾಗೆ, ಆಯಕಟ್ಟಿನ 18 ಸ್ಥಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳನ್ನು ಆಯೋಜಿಸಲಾಗಿತ್ತು. ಪ್ರಧಾನಿ ಮೋದಿ ಅವರ ಭಾಷಣಗಳಿಗೆ ಮೊದ ಮೊದಲಿಗೆ ಜನರ ಪ್ರತಿಕ್ರಿಯೆ ಅಷ್ಟೇನೂ ಇರದಿದ್ದರೂ, ಬಹಿರಂಗ ಪ್ರಚಾರ ಅಂತ್ಯವಾಗುವ ಹೊತ್ತಿಗೆ ಅವರು ‘ಟೇಬಲ್ ಟರ್ನ್’ ಮಾಡಿದ್ದು ಬಹುತೇಕ ಖಚಿತವಾಗಿರುವಂತಿದೆ. ಇನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ, ಜೆಪಿ ನಡ್ಡಾ, ಅಮಿತ್ ಶಾ ಅವರೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕರ್ನಾಟಕವನ್ನು ಸುತ್ತಿ ಪ್ರಚಾರ ಮಾಡಿದ್ದಾರೆ. ಜತೆಗೆ, ಬಸವರಾಜ ಬೊಮ್ಮಾಯಿ, ಬಿ ಎಸ್ ಯಡಿಯೂರಪ್ಪ ಅವರು ಪ್ರಚಾರ ನೇತೃತ್ವವನ್ನು ವಹಿಸಿಕೊಂಡಿದ್ದರು.
ಪ್ರಚಾರದಲ್ಲಿ ಬಜರಂಗಬಲಿ ವಿವಾದ; ಗ್ಯಾರಂಟಿಗಳ ಸ್ವಾದ
ಎಲ್ಲ ಚುನಾವಣೆಗಳಲ್ಲಿ ಕಂಡು ಬರುವಂತೆ ಈ ಚುನಾವಣೆಯಲ್ಲೂ ಹೇಳಿಕೆ, ಪ್ರತಿ ಹೇಳಿಕೆ; ಆರೋಪ, ಪ್ರತ್ಯಾರೋಪಗಳು ಬೇಕಾದಷ್ಟು ಆದವು. ಚುನಾವಣಾ ಪ್ರಣಾಳಿಕೆಗಳ ಆಲಾಪ-ಪ್ರಲಾಗಳು, ವಾದ ವಿವಾದಗಳಿಗೇನೂ ಕಡಿಮೆ ಇರಲಿಲ್ಲ. ಕಾಂಗ್ರೆಸ್, ಬಿಜೆಪಿ ಪರಸ್ಪರ ಸಾಕಷ್ಟು ದೂರುಗಳನ್ನು ಆಯೋಗಕ್ಕೆ ನೀಡಿವೆ. ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಪ್ರಸ್ತಾಪವು ಇಡೀ ಚುನಾವಣಾ ಪ್ರಚಾರ ದಿಕ್ಕನ್ನು ಬದಲಿಸಿತು. ಮೇಲ್ನೋಟಕ್ಕೆ ಬಿಜೆಪಿಗೆ ವರವಾಗಿ ಕಂಡರೂ, ಕಾಂಗ್ರೆಸ್ ಏನೂ ಅದರಿಂದ ತೀರಾ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಅದು ತನ್ನ 40 ಪರ್ಸೆಂಟ್ ಕಮೀಷನ್ ಸರಕಾರವನ್ನೇ ಚುನಾವಣಾ ಅಸ್ತ್ರ ಹಾಗೂ ಐದು ಗ್ಯಾರಂಟಿಗಳ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದು ಪ್ರಚಾರ ವೇಳೆ ಕಂಡು ಬಂತು. ಬಜರಂಗ ಬಲಿ ನಿಷೇಧ ಪ್ರಸ್ತಾಪ, ಲಿಂಗಾಯತರಿಗೆ ಅವಮಾನ ಮತ್ತು ಕರ್ನಾಟಕವನ್ನು ಪ್ರತ್ಯೇಕಿಸುವ ಅಸ್ತ್ರಗಳನ್ನೇ ಬಿಜೆಪಿ ಪ್ರಚಾರದಲ್ಲಿ ಹೆಚ್ಚಾಗಿ ಬಳಸಿಕೊಂಡಿತು.
ಮೋಡಿ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ
ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರವನ್ನು ಗಮನಿಸಿದರೆ, ಕಾಂಗ್ರೆಸ್ ತುಸು ಮುಂದೇ ಇದೆ. ಬಿಜೆಪಿಯ ಎಲ್ಲ ಅಸ್ತ್ರಗಳಿಗೆ ಪ್ರತ್ಯಸ್ತ್ರಗಳನ್ನು ರೆಡಿ ಮಾಡಿಕೊಂಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಚುನಾವಣಾ ಪೂರ್ವವೇ ಗ್ಯಾರಂಟಿಗಳ ಮೂಲಕ ಒಂದು ಹಂತದ ಪ್ರಚಾರವನ್ನು ಅದು ಪೂರ್ತಿ ಮಾಡಿತ್ತು. 40 ಪರ್ಸೆಂಟ್ ಕಮಿಷನ್ ಸರ್ಕಾರ ಆರೋಪ ಹಾಗೂ ಬಿಜೆಪಿ ಲಿಂಗಾಯತರಿಗೆ ಅವಮಾನ ಮಾಡುತ್ತಿದೆ ಎಂಬ ನೆರೇಟಿವ್ ಮೂಲಕ ಮತದಾರರಿಗೆ ಒಂದು ದಿಕ್ಕನ್ನು ತೋರಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಅದೇ ವಿಷಯಗಳನ್ನು ಕಾಂಗ್ರೆಸ್ ಬಹಿರಂಗ ಪ್ರಚಾರದಲ್ಲಿ ಹೆಚ್ಚಾಗಿ ಪ್ರಸ್ತಾಪಿಸಿ, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಪರಿಹಾರ ಎಂಬುದನ್ನು ಬಿಂಬಿಸಲು ಯಶಸ್ವಿಯಾಯಿತು. ಕಾಂಗ್ರೆಸ್ ಕೂಡ ಗ್ಯಾರಂಟಿಗಳನ್ನು ನೆಚ್ಚಿಕೊಂಡಿರುವುದು ಮಾತ್ರವಲ್ಲದೇ, ಕಾಂಗ್ರೆಸ್ ಬರಲಿದೆ; ಪ್ರಗತಿ ತರಲಿದೆ ಎಂಬ ಘೋಷಣೆಯಡಿ ಪ್ರಚಾರವನ್ನು ರಂಗೇರಿಸಿತು.
ಪ್ರಿಯಾಂಕ ಗಾಂಧಿ ರೋಡ್ ಶೋ
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @priyankagandhi ಅವರು ವಿಜಯನಗರದಲ್ಲಿ ನಡೆದ ರೋಡ್ ಶೋ ನಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕರೆ ನೀಡಿದರು.#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ pic.twitter.com/THhJN78Wn1
— Karnataka Congress (@INCKarnataka) May 8, 2023
ಈ ಹಿಂದಿನ ಒಂದೆರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ರಾಹುಲ್ ಮತ್ತು ಸೋನಿಯಾ ಹಾಗೂ ಸಿದ್ದರಾಮಯ್ಯ ಸೇರಿ ಸ್ಥಳೀಯ ನಾಯಕರೇ ಆಧಾರವಾಗಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಪಾಳೆಯಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹುರುಪು ತುಂಬಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಅವರು ಪ್ರಚಾರ ಕೈಗೊಂಡು ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾ, ಮೋದಿ ಹೇಳಿಕೆಗಳಿಗೆ ಟಾಂಗ್ ಕೊಡುತ್ತಾ ಹೋಗಿದ್ದಾರೆ. ಪ್ರಿಯಾಂಕಾ ಅವರ ಪ್ರಚಾರ ಎಷ್ಟು ಫಲ ನೀಡಲಿದೆ ಎಂದು ಕಾದು ನೋಡಬೇಕು. ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೂ ಜಿದ್ದಿಗೆ ಬಿದ್ದಂತೆ ಪ್ರಚಾರ ಮಾಡಿರುವುದನ್ನು ಕಾಣಬಹುದು.
ಪ್ರಚಾರದಲ್ಲಿ ದಳಪತಿಗಳೂ ಹಿಂದೆ ಬಿದ್ದಿಲ್ಲ
ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಕೂಡ ಈ ಬಹಿರಂಗ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಅತಂತ್ರ ವಿಧಾನಸಭೆಯ ಸಾಧ್ಯತೆಯನ್ನು ಮನಗಂಡಿರುವ ಜೆಡಿಎಸ್ ನಾಯಕರು, ಅಧಿಕಾರದ ಕನಸು ಕಾಣುತ್ತಿದ್ದಾರೆ. ಅದಕ್ಕೆ ಬೇಕಿರುವ ಅಂದರೆ ತಮ್ಮ ಮತವರ್ಗವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಜಿ ಸಿಎಂ ಕುಮಾರಸ್ವಾಮಿ ಬಹಳ ದಿನಗಳಿಂದಲೇ ಮಾಡುತ್ತಲೇ ಬಂದಿದ್ದಾರೆ. ಅವರು ಪಂಚರತ್ನ ಯಾತ್ರೆ ಮೂಲಕ ಇಡೀ ಕರ್ನಾಟಕವನ್ನು ಸುತ್ತಿದ್ದಾರೆ. ಜತೆಗೆ 90 ವರ್ಷದ ದೇವೇಗೌಡ ಅವರೂ ಬಹಿರಂಗ ಪ್ರಚಾರದಲ್ಲಿ ಕಾಣಿಸಿಕೊಂಡು, ತನ್ನಲ್ಲಿ ಇನ್ನೂ ರಾಜಕೀಯ ಮಾಡುವ ಶಕ್ತಿ ಇದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ತಮ್ಮ ಪಕ್ಷದ ಮತಗಳನ್ನು ಕ್ರೋಡೀಕರಿಸುವ ಕೆಲಸನ್ನು ಜೆಡಿಎಸ್ ನಾಯಕರ ಬಹಳ ವ್ಯವಸ್ಥಿತವಾಗಿ ಮಾಡಿದ್ದಾರೆಂಬುದು ಪ್ರಚಾರದಲ್ಲಿ ಕಂಡು ಬಂದಿದೆ. ಈ ಭಾಗದಲ್ಲಿ ಬಿಜೆಪಿ ನುಸುಳುವ ಪ್ರಯತ್ನವನ್ನು ಮಾಡಿತ್ತು. ಅದೇ ಫಲ ಕೊಟ್ಟಿದೆಯೇ ಎಂಬುದನ್ನು ಕಾದು ನೋಡಬೇಕು.
ಎಚ್ ಡಿ ಕುಮಾರಸ್ವಾಮಿ ಅವರ ರೋಡ್ ಶೋ
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರದ ಭವ್ಯನೋಟ.#ಪಂಚರತ್ನ #ಇರುವುದೊಂದೇ_ಪರಿಹಾರ_ಪ್ರಾದೇಶಿಕ_ಪಕ್ಷಕ್ಕೆ_ಅಧಿಕಾರ #ಚನ್ನಪಟ್ಟಣ pic.twitter.com/Ww4Wwz5VdP
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) May 8, 2023
ಕೊಲೆ ಬೆದರಿಕೆ, ಅಲ್ಲಲ್ಲಿ ಗಲಾಟೆ
ಬಿಜೆಪಿಯ ಚಿತ್ತಾಪುರ ಅಭ್ಯರ್ಥಿ ಮಣಿಕಂಠ್ ರಾಥೋಡ್ ಮಾತನಾಡಿದ್ದಾರೆನ್ನಲಾದ ಆಡಿಯೋ ಬಹಿರಂಗ ಪ್ರಚಾರದಲ್ಲಿ ಸದ್ದು ಮಾಡಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವನ್ನು ಮುಗಿಸಿತ್ತೇನೆ ಎಂಬ ಮಾತುಗಳ ಸಂಚಲನ ಸೃಷ್ಟಿಸಿದವು. ಈ ವಿಷಯವನ್ನು ಕಾಂಗ್ರೆಸ್ ಪ್ರಚಾರದಲ್ಲಿ ಪ್ರಮುಖವಾಗಿ ಬಳಸಿಕೊಂಡಿತು. ಈ ಮಧ್ಯೆ ಜಿ ಪರಮೇಶ್ವರ್ ಮೇಲಿನ ದಾಳಿ ಕೂಡ ಪ್ರಚಾರ ಸರಕಾಯಿತು. ಅಲ್ಲಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರ ನಡುವೆ ಗಲಾಟೆಗಳು ನಡೆದಿವೆ. ಆದರೆ, ಯಾವುದೂ ಅತಿರೇಕ ಎನ್ನುವಷ್ಟರ ಮಟ್ಟಿಗೆ ಸದ್ಯಕ್ಕೆ ಹೋಗಿಲ್ಲ.