ಶಿವಮೊಗ್ಗ / ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ, ಜಿಲ್ಲಾ ಕಾಂಗ್ರೆಸ್‌ನ ನಾಯಕಿ ಡಾ. ರಾಜನಂದಿನಿ ಮಾಜಿ ಮುಖ್ಯಮಂತ್ರಿ , ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಬುಧವಾರ ಭೇಟಿಯಾಗಿದ್ದು (Karnataka Election 2023) ತೀವ್ರ ಕುತೂಹಲ ಮೂಡಿಸಿದೆ.
ಸಾಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ರಾಜನಂದಿನಿಗೆ ಬದಲಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆಯೇ ಎಂಬ ಪ್ರಶ್ನೆಯನ್ನು ಈ ಭೇಟಿಯು ಹುಟ್ಟು ಹಾಕಿದೆ.
ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರವೂ ಕಾಗೋಡು ತಿಮ್ಮಪ್ಪ ಮಗಳಿಗೆ ಟಿಕೇಟ್ ನೀಡುವಂತೆ ಪಕ್ಷದ ವರಿಷ್ಠರನ್ನು ಕೇಳಿಕೊಂಡಿದ್ದಾರೆ. ಆದರೆ ಪಕ್ಷ ಒಪ್ಪದೇ ಇದ್ದುದ್ದರಿಂದ ಅವರಿಗೆ ನಿರಾಶರಾಗಿದ್ದರು. ಆದರೆ ಅದನ್ನು ಬಹಿರಂಗವಾಗಿ ತೋರ್ಪಡಿಸದೇ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಬೇಳೂರು ಗೋಪಾಲಕೃಷ್ಣರನ್ನು ಬೆಂಬಲಿಸುವುದಾಗಿ ಪ್ರಕಟಿಸಿದ್ದರು.
ಈ ಹೊತ್ತಿನಲ್ಲಿಯೇ ಡಾ. ರಾಜನಂದಿನಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರು ಬಿಜೆಪಿ ಸೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಸಾಗರದ ಬಿಜೆಪಿ ಅಭ್ಯರ್ಥಿಯಾಗಿರುವ ಹರತಾಳು ಹಾಲಪ್ಪ ನಿರಂತರವಾಗಿ ರಾಜನಂದಿನಿಯವರೊಂದಿಗೆ ಸಂಪರ್ಕದಲ್ಲಿದ್ದು, ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರಿಂದಾಗಿಯೇ ಬುಧವಾರ ರಾಜನಂದಿನಿ ಮತ್ತು ಯಡಿಯೂರಪ್ಪ ಅವರ ಭೇಟಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಮಗಳು ಬಿಜೆಪಿ ಸೇರಿದರೆ ಸಮಾಜವಾದಿ ಹೋರಾಟಗಾರ, ಕಾಂಗ್ರೆಸ್‌ನ ಹಿರಿಯ ನಾಯಕ ಕಾಗೋಡ ತಿಮ್ಮಪ್ಪರ ನಡೆ ಏನಾಗಿರುತ್ತದೆ? ಅವರೂ ಬಿಜೆಪಿಯನ್ನು ಬೆಂಬಲಿಸಲಿದ್ದಾರೆಯೇ ಎಂಬ ಕುರಿತು ಈಗ ತೀವ್ರ ಕುತೂಹಲ ಮೂಡಿದ್ದು, ಈ ರಾಜಕೀಯ ಬೆಳವಣಿಗೆ ಸಾಗರ ಮತ್ತು ಜಿಲ್ಲೆಯ ಇತರ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆ.
ಮಗಳಿಗೆ ಟಿಕೇಟ್ ನೀಡುವಂತೆ ಕಾಗೋಡು ತಿಮ್ಮಪ್ಪ ಮೊದಲಿನಿಂದಲೂ ಪಕ್ಷದ ನಾಯಕರಿಗೆ ಮನವಿ ಮಾಡಿದ್ದರು. ಮಗಳೊಂದಿಗೆ ಪಕ್ಷದ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಹೀಗಾಗಿಯೇ ಪಕ್ಷದ ಟಿಕೆಟ್‌ನ ನಿರೀಕ್ಷೆಯಲ್ಲಿದ್ದರು. ಆದರೆ ಪಕ್ಷ ಗೋಪಾಲಕೃಷ್ಣರಿಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡಿದ್ದರು.
ಆದರೆ ಪಕ್ಷದ ಯಾವ ವರಿಷ್ಠ ನಾಯಕರ್ಯಾರೂ ಅವರನ್ನು ಸಂಪರ್ಕಿಸಿ, ಸಮಾಧಾನ ಹೇಳಿಲ್ಲವೆನ್ನಲಾಗಿದ್ದು, ಈ ಅವಕಾಶವನ್ನು ಈಗ ಬಿಜೆಪಿ ನಾಯಕರು ಬಳಸಿಕೊಳ್ಳಲು ಮುಂದಾಗಿದ್ದಾರೆ. ಮಗಳಿಗೆ ಬಿಜೆಪಿ ಸೇರಲು ಕಾಗೋಡು ತಿಮ್ಮಪ್ಪ ಒಪ್ಪಿಗೆ ನೀಡುತ್ತಾರೆಯೇ ಎಂಬುದರ ಕುರಿತು ಶಿವಮೊಗ್ಗ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : Karnataka Election 2023: ಈಶ್ವರಪ್ಪ ನಿರ್ಧಾರಕ್ಕೆ ಭುಗಿಲೆದ್ದ ಆಕ್ರೋಶ: ಮೇಯರ್ ಸೇರಿ 19 ಪಾಲಿಕೆ ಸದಸ್ಯರ ರಾಜೀನಾಮೆ ನಿರ್ಧಾರ