ಬೆಂಗಳೂರು: ಕನಕಪುರ ಮತ್ತು ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಹಿರಿಯ ನಾಯಕರನ್ನು ಕಣಕ್ಕಿಳಿಸಿದ ಬಿಜೆಪಿಯ ವರಿಷ್ಠರನ್ನು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು (Karnataka Election 2023), ʻʻಪಕ್ಷದ ಉನ್ನತ ನಾಯಕರಾದ ಬಿ. ಎಲ್ ಸಂತೋಷ್ ಮತ್ತು ಪ್ರಹ್ಲಾದ್ ಜೋಷಿ ಅವರನ್ನು ಈ ಎರಡೂ ಕ್ಷೇತ್ರಗಳ ಸ್ಪರ್ಧೆಗೆ ಆಹ್ವಾನಿಸುತ್ತೇವೆ. ಪಂಥಾಹ್ವಾನ ಸ್ವೀಕರಿಸುವರೇ?ʼʼ ಎಂದು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ʻʻನಾಗಪುರದ ವಂಶದವರು ಇತರರನ್ನ ಹೊಂಡಕ್ಕೆ ತಳ್ಳಿ ಆಳ ನೋಡುವ ಬದಲು ತಾವೇ ಮುಂದೆ ನಿಂತು ಸಾಮರ್ಥ್ಯ ತೋರಲಿ. ಬಿ.ಎಲ್ ಸಂತೋಷ್ ತೆರೆಮರೆಯಿಂದ ಹೊರಬಂದು ಚುನಾವಣೆಗೆ ಸ್ಪರ್ಧಿಸಿ ಸಾಮರ್ಥ್ಯ ನಿರೂಪಿಸಲಿʼʼ ಎಂದು ಸವಾಲು ಹಾಕಿದೆ.
ಕಾಂಗ್ರೆಸ್‌ನಿಂದ ಪಂಥಾಹ್ವಾನ
ಕನಕಪುರದಿಂದ ಕಣಕ್ಕಿಳಿಯುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮತ್ತು ವರುಣದಿಂದ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ಉದ್ದೇಶದಿಂದ ಬಿಜೆಪಿಯು ಪಕ್ಷದ ಹಿರಿಯ ನಾಯಕರಾದ ಸಚಿವ ಆರ್. ಅಶೋಕ್ ಅವರನ್ನು ಕನಕಪುರದಲ್ಲಿ ಹಾಗೂ ಸೋಮಣ್ಣ ಅವರನ್ನು ವರುಣ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಬಿಜೆಪಿಯ ಈ ನಡೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಬಳಸಲಾಗಿರುವ ʻಬ್ರಹ್ಮಾಸ್ತ್ರʼ ಎಂದೇ ವಿಶ್ಲೇಷಿಸಲಾಗುತ್ತಿದೆ.
ವಿಪಕ್ಷದ ಪ್ರಬಲ ನಾಯಕರ ವಿರುದ್ಧ ಪಕ್ಷದ ನಾಯಕರನ್ನು ಕಣಕ್ಕಿಳಿಸಿ, ಅವರು ಪ್ರಚಾರಕ್ಕೆ ಹೆಚ್ಚು ಕ್ಷೇತ್ರಗಳಿಗೆ ಹೋಗದಂತೆ ನೋಡಿಕೊಳ್ಳುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಆದರೆ ಬಿಜೆಪಿಯ ಈ ಇಬ್ಬರು ನಾಯಕರೂ ತಮ್ಮೊಂದಿಗೆ ಚರ್ಚಿಸದೇ ಪಕ್ಷ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಿದ್ದು, ಪಕ್ಷದ ವರಿಷ್ಠರ ಈ ತೀರ್ಮಾನದಂತೆ ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಈ ಟ್ವೀಟ್ ಮಹತ್ವ ಪಡೆದಿದೆ.
ಮಂಗಳವಾರ ಸಂಜೆ ಬಿಜೆಪಿಯ ಹಿರಿಯ ನಾಯಕರಾದ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿರುವ ಕುರಿತೂ ಕರ್ನಾಟಕ ಕಾಂಗ್ರೆಸ್ ಇದೇ ರೀತಿಯಾಗಿ ಟ್ವೀಟ್ ಮಾಡಿ ಟೀಕಿಸಿತ್ತು.
ʻʻಸಂತೋಷ್ ಆಟಕ್ಕೆ ಯಡಿಯೂರಪ್ಪ ಬಲಿ. ಪ್ರಹ್ಲಾದ್ ಜೋಷಿ ಆಟಕ್ಕೆ ಜಗದೀಶ್ ಶೆಟ್ಟರ್ ಬಲಿ. ನಾಗಪುರದ ಕರುಳುಬಳ್ಳಿಯ ಸಂಬಂಧವನ್ನೇ ಬಳಸಿ ಬಿಜೆಪಿಯಲ್ಲಿ ಪ್ರಾಭಲ್ಯ ಸಾಧಿಸಿರುವ ಪ್ರಹ್ಲಾದ್ ಜೋಶಿ ಲಿಂಗಾಯತ ನಾಯಕರನ್ನು ಹೊಂಡಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಒಬ್ಬರಿಗೆ ಟಿಕೆಟ್ ನಿರಾಕರಿಸುವಂತಹ ಅವಮಾನ ಇನ್ನೊಂದಿಲ್ಲʼʼ ಎಂದು ಟ್ವೀಟ್‌ನಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ : Karnataka ELection: ಸಾವಿರಾರು ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ: ಪದ್ಮರಾಜ್ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್