ಮೈಸೂರು, ಕರ್ನಾಟಕ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚಾಳಿ ನಿಮಗೆ ಅಂಟೋದು ಬೇಡ. ನೀವು ಮತ್ತೊಬ್ಬ ಸಿದ್ದರಾಮಯ್ಯ ಆಗಬೇಡಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಖರ್ಗೆ ಅವರ ಮೋದಿ ವಿಷ ಸರ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಂಹ, ಮಲ್ಲಿಕಾರ್ಜುನ ಖರ್ಗೆ ಅವರು ಒಳ್ಳೆಯವರು. ಅವರು ಸಿದ್ದರಾಮಯ್ಯ ಅವರ ರೀತಿ ಮಾತನಾಡುವುದು ಬೇಡ ಎಂದು ಹೇಳಿದರು(Karnataka Election 2023).
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಮತ್ತು ದೇಶದ ರಾಜಕೀಯ ದೊಡ್ಡ ವ್ಯಕ್ತಿ. ಆದರೆ ಹಲವು ಬಾರಿ ನಾಲಿಗೆ ಜಾರಿ ಮಾತನಾಡುತ್ತಾರೆ. ಈ ಹಿಂದೆ ಲೋಕಸಭೆಯಲ್ಲೂ ಸ್ವಾತಂತ್ರ್ಯಕ್ಕೆ ಬಿಜೆಪಿಯ ಒಂದು ನಾಯಿ ಕೂಡ ಸತ್ತಿಲ್ಲ ಅಂತ ಹೇಳಿದ್ರು.ಈಗ ಮೋದಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಪದವಿಯಲ್ಲಿರುವಂಥವರಿಂದ ಇಂಥ ಕುಬ್ಜ ಮಾತುಗಳನ್ನು ಸಹಿಸೋದಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯದಲ್ಲಿ ಏಳೆಂಟು ಎಸ್ಸಿ ಮತ್ತು ಎಸ್ಟಿ ಸೀಟುಗಳಿವೆ. ಅಷ್ಟುನ್ನೂ ಬಿಜೆಪಿಗೆ ಕೊಟ್ಟಿದ್ದೀರಾ? ಇಡೀ ದೇಶದಾದ್ಯಂತ 87 ಎಸ್ಸಿ, ಎಸ್ಟಿ ಸಂಸದರು ನಮ್ಮಲ್ಲಿದ್ದಾರೆ. ಇಡೀ ಹಿಂದುಳಿದ ಜಾತಿ ಜನಾಂಗ ನಮ್ಮ ಪರವಾಗಿದೆ. ಆದರೆ ನೀವು ಆ ಜಾತಿ ಜನಾಂಗಕ್ಕೆ ಸೇರಿ ಆ ಜನರ ವಿಶ್ವಾಸವನ್ನೇ ಗಳಿಸಿಲ್ಲ ಎಂದರು
2019ರ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೀರಿ. ನಿಮ್ಮ ಸಮಾಜವೇ ನಿಮ್ಮನ್ನು ಒಪ್ಪುತ್ತಿಲ್ಲ. ಈ ರೀತಿ ಹತಾಶೆಯಿಂದ ಅಪ್ರಬುದ್ದವಾಗಿ ಮಾತನಾಡೋದು ಸರಿಯಿಲ್ಲ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ನಿಮ್ಮ ಹಿನ್ನೆಲೆ ಅನುಭವಕ್ಕೆ ಇದು ಶೋಭೆಯಲ್ಲ. ಇದನ್ನ ನಾವು ಖಂಡಿಸುತ್ತೇವೆ. ನಿಮ್ಮ ಬಗ್ಗೆ ಗೌರವ ಇದೆ. ಆದರೆ, ನಿಮ್ಮ ಮಟ್ಟಕ್ಕೆ ಇಳಿದು ಮಾತನಾಡುತ್ತಿಲ್ಲ ಎಂದರು.
ಕರ್ನಾಟಕ ನಾಚಿಕೆ ಪಡುವಂಥ ಹೇಳಿಕೆ ಕೊಡಬೇಡಿ. ನೀವು ಇನ್ನೊಂದು ಸಿದ್ದರಾಮಯ್ಯ ಆಗಬೇಡಿ. ಸಿದ್ದರಾಮಯ್ಯ ಚಾಳಿ ನಿಮಗೆ ಅಂಟೋದು ಬೇಡ. ಅವರು ಮಾತ್ರ ಇನ್ನೊಬ್ಬರ ಬಗ್ಗೆ ಹೀಗೆ ತುಚ್ಚವಾಗಿ ಮಾತನಾಡೋದು. ದಯಮಾಡಿ ನೀವು ಮತ್ತೊಬ್ಬ ಸಿದ್ದರಾಮಯ್ಯ ಆಗಬೇಡಿ ಎಂದು ಪ್ರತಾಪ್ ಸಿಂಹ ಹೇಳಿದರು.
ಸಿದ್ದರಾಮನಹುಂಡಿ ಗಲಾಟೆಗೆ ಸಿದ್ದು ಮತ್ತು ಅವರ ಬೆಂಬಲಿಗರೇ ಕಾರಣ
ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ವಿಚಾರ ಕುರಿತು ಮಾತನಾಡಿದ ಪ್ರತಾಪ್ ಸಿಂಹ, ಈ ಘಟನೆಗೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಕಾರಣ. ಸಿದ್ದರಾಮಯ್ಯ ಸೋಲಿನ ಹತಾಶೆ, ಭೀತಿಯಿಂದಾಗಿ ಈ ರೀತಿ ಮಾಡಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿದ್ದರಾಮಯ್ಯ ಪಾಳಯದಲ್ಲಿ ಹತಾಶೆ ಮತ್ತು ಸೋಲಿನ ಭಯ ಶುರುವಾಗಿದೆ.ಹೀಗಾಗಿ ಬಿಜೆಪಿ ಅವರು ಪ್ರಚಾರಕ್ಕೆ ಹೋದ ಕಡೆಯಲೆಲ್ಲ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸಿದ್ದರಾಮಯ್ಯ ಈ ರೀತಿ ಸಣ್ಣತನ ಯಾಕೆ ಮಾಡುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ನಿನ್ನೆ ನಮ್ಮ ಚುನಾವಣಾ ಪ್ರಚಾರದ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಬಕೆಟ್‌ಗಳಲ್ಲಿ ಕಲ್ಲು ಇಟ್ಟು ಕೊಂಡಿದ್ದರು. ಗಲಾಟೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡು ಬಂದಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ: Karnataka Election 2023: ಮೊಮ್ಮಗನನ್ನು ಪ್ರಚಾರಕ್ಕೆ ಕರೆ ತಂದ ಸಿದ್ದರಾಮಯ್ಯಗೆ ಪುಕ್ಕಲುತನ ಕಾಡುತ್ತಿದೆ: ಪ್ರತಾಪ್ ಸಿಂಹ
ಸಿದ್ಧರಾಮಯ್ಯ ಅವರ ಸಹೋದರರ ಮನೆಯ ಬಳಿಯೇ ಈ ಘಟನೆ ನಡೆದಿದೆ. ಸೋಲಿನ ಭಯದಿಂದ ಈ ರೀತಿ ಸಿದ್ದರಾಮಯ್ಯರ ತಂಡ ಮಾಡುತ್ತಿದೆ. ಸಿದ್ದರಾಮಯ್ಯ ಅವರು ತಮ್ಮ ಸ್ವಜಾತಿಯವರಿಗೆ ಚಿತಾವಣೆ ಕೊಟ್ಟು ಈ ರೀತಿಯೆಲ್ಲ ತೊಂದರೆ ಕೊಡಿಸುತ್ತಿದ್ದಾರೆ. ಸಿದ್ದರಾಮಯ್ಯ ಒಬ್ಬ ಜಾತಿವಾದಿ, ಸಿದ್ದರಾಮಯ್ಯ ಅವರಿಗೆ ಸ್ವಜಾತಿ ಮಾತ್ರ ಮುಖ್ಯ ಅನ್ನೋದು ವರುಣ ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ ಜಾತಿವಾದಿಯಾಗಿರುವ ಕಾರಣ ವರುಣ ಕ್ಷೇತ್ರದಲ್ಲಿ ಎಲ್ಲಾ ವರ್ಗದ ಜನ ಸೋಮಣ್ಣನವರ ಪರವಾಗಿ ನಿಂತಿದ್ದಾರೆ ಎಂದು ತಿಳಿಸಿದರು.