ರಾಮಸ್ವಾಮಿ ಹುಲಕೋಡು, ವಿಸ್ತಾರ ನ್ಯೂಸ್, ಬೆಂಗಳೂರು
ಪಕ್ಷದ ಸೂಚನೆಯಂತೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿ, ಚುನಾವಣಾ ರಾಜಕಾರಣದಿಂದ ನಿವೃತ್ತಿಯ ಘೋಷಣೆ ಮಾಡುತ್ತಿದ್ದಂತೆಯೇ ಅವರ ʻಸ್ನೇಹಿತʼ ಕೆ.ಎಸ್ ಈಶ್ವರಪ್ಪಗೂ ಎದೆಯಲ್ಲಿ ಢವಢವ ಶುರುವಾಗಿತ್ತು. ʻಇದೊಂದು ಬಾರಿಗೆ ತಮಗೆ ಚುನಾವಣೆ ಎದುರಿಸಲು ಅವಕಾಶ ಮಾಡಿಕೊಟ್ಟರೆ ಸಾಕಪ್ಪಾ…ʼ ಎಂದು ತಮ್ಮ ಆತ್ಮೀಯರಲ್ಲಿ ಹೇಳಿಕೊಂಡಿದ್ದರು. ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಅವರಿಗೆ ಮುನ್ಸೂಚನೆಗಳನ್ನಂತೂ ನೀಡಿತ್ತು.
ಅವರಿಗಿದ್ದ ಅನುಮಾನಗಳು ಈಗ ನಿಜವಾಗಿದೆ! ಕೊನೆಯ ಬಾರಿ ಚುನಾವಣೆ ಎದುರಿಸಬೇಕೆಂಬ ಅವರ ಆಸೆ ಈಡೇರುತ್ತಿಲ್ಲ, ಅವರೇ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸುವಂತಹ ವಾತಾವರಣವನ್ನು ಅವರ ಪಕ್ಷವೇ ನಿರ್ಮಾಣ ಮಾಡಿದೆ. ಹೀಗಾಗಿ ಮರು ಮಾತನಾಡದೆ ಈಶ್ವರಪ್ಪ ಎದ್ದು ಹೊರಟಿದ್ದಾರೆ. ಈ ಹಂತದಲ್ಲಿಯೂ ಪಕ್ಷ ನಿಷ್ಠೆಯನ್ನು ಅವರು ಮರೆಯಲಿಲ್ಲ, ಅವರು ಪಕ್ಷದ ಸೂಚನೆಗೆ ಮರು ಮಾತನಾಡುತ್ತಿಲ್ಲ!
ಗಣಿ ನೆಲ ಬಳ್ಳಾರಿಯಲ್ಲಿ ಜನಿಸಿದ ಈಶ್ವರಪ್ಪ ಶಿವಮೊಗ್ಗದ ಬಿ.ಬಿ ರಸ್ತೆಯಲ್ಲಿ ಬೆಳೆದು ದೊಡ್ಡವರಾದವರು. ಬಿ.ಎಚ್.ರಸ್ತೆ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್, ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದವರು. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ನಾಯಕರಾಗಿ ನಾಯಕತ್ವ ಗುಣ ಪ್ರದರ್ಶಿಸಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ವಿಶ್ವ ಹಿಂದೂ ಪರಿಷತ್‌ನ ಮುಖಂಡ ನರಸಿಂಹ ಮೂರ್ತಿ ಐಯ್ಯಂಗಾರ್ ಪ್ರೇರಣೆಯಿಂದ ಆರ್‌ಎಸ್‌ಎಸ್ ಸೇರಿದ್ದ ಅವರು ನಂತರ ಎಬಿವಿಪಿಯನ್ನು ಶಿವಮೊಗ್ಗದಲ್ಲಿ ಕಟ್ಟಿದ್ದರು. 1975ರಲ್ಲಿ ತುರ್ತುಪರಿಸ್ಥಿತಿಯಲ್ಲಿ ಹೋರಾಟಕ್ಕೆ ಧುಮುಕಿ ಸೆರೆಮನೆ ವಾಸ ಸಹ ಅನುಭವಿಸಿದ್ದರು.
ರಾಜಕಾರಣದ ರಾಖಿ ಭಾಯ್!
ಕೆಜಿಎಫ್ ಸಿನಿಮಾದ ರಾಖಿಭಾಯ್ ಅಂತೆಯೇ ಈಶ್ವರಪ್ಪ ಕೂಡ ತಾಯಿಯ ಆಸೆಯಂತೆಯೇ ದೊಡ್ಡ ರಾಜಕೀಯ ನಾಯಕರಾಗಿ ಬೆಳೆದವರು. ಶಿವಮೊಗ್ಗದ ಭೂಪಾಳಂ ಅಡಿಕೆ ಮಂಡಿಯಲ್ಲಿ ಅಡಿಕೆ ಆರಿಸುವ ಕೆಲಸ ಮಾಡಿ ಅವರನ್ನು ತಾಯಿ ಬಸಮ್ಮ ಬೆಳೆಸಿದ್ದರು. ʻʻನೀನು ಓದಿ ಕಲಿತು ದೊಡ್ಡ ವ್ಯಕ್ತಿಯಾಗುʼʼ ಎಂದು ಅವರು ಸದಾ ಹೇಳುತ್ತಿದ್ದರಂತೆ. ಹೀಗಾಗಿಯೇ ಕಷ್ಟಪಟ್ಟು ಓದಿದ್ದರು. ಬಡತನದ ಕಷ್ಟ ಗೊತ್ತಿದ್ದ ಈಶ್ವರಪ್ಪ ವಿವಿಧ ಕಂಪನಿಯ ಚಾಕಲೇಟ್, ʻವಿವೇಕ್ ಸುಪಾರಿʼಗಳನ್ನು ಮಾರಿ ಜೀವನ ಕಟ್ಟಿಕೊಳ್ಳಲು ಹವಣಿಸುತ್ತಿದ್ದರು. ಜತೆ ಜತೆಗೆ ಬಿಜೆಪಿಯನ್ನು ಸಂಘಟಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಗರ ಘಟಕದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷರಾಗಿದ್ದರು. ಆಗಕೇ ಅವರ ಅಣ್ಣ ಗಂಗಾಧರ್ ಕೂಡ ಬಿಜೆಪಿಯಲ್ಲಿ ಹೆಸರು ಮಾಡಿದ್ದರು.
ಅಣ್ಣ ಬೇಡ ಎಂದಿದ್ದಕ್ಕೆ ತಮ್ಮನಿಗೊಲಿದ ಅದೃಷ್ಟ!
1989ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅವರ ಅಣ್ಣ ಗಂಗಾಧರ್ ಅವರನ್ನು ಪಕ್ಷದಿಂದ ಕಣಕ್ಕಿಳಿಸಲು ನಿರ್ಧಿಸಿತ್ತು. ಆದರೆ ಸೋಲು ಖಚಿತ ಎಂದುಕೊಂಡ ಅವರ ಅಣ್ಣ ಪಕ್ಷದ ಟಿಕೆಟ್ ಅನ್ನು ನಿರಾಕರಿಸಿದ್ದರು. ಮತ್ತೆ ಅಭ್ಯರ್ಥಿಯ ಹುಡುಕಾಟ ನಡೆಸಿದ ಪಕ್ಷದ ನಾಯಕರಿಗೆ ಕಣ್ಣಿಗೆ ಬಿದ್ದಿದ್ದೇ ಗಂಗಾಧರ್ ಅವರ ತಮ್ಮ ಕೆ.ಎಸ್. ಈಶ್ವರಪ್ಪ. ಅಣ್ಣ ಬೇಡ ಎಂದ ಟಿಕೆಟ್ ಅನ್ನು ಒಪ್ಪಿಕೊಂಡ ಈಶ್ವರಪ್ಪ ಚುನಾವಣಾ ರಾಜಕಾರಣಕ್ಕೆ ಧುಮುಕಿದ್ದರು. ಅವರಿಗೆ ಅದೃಷ್ಟ ಕೈಹಿಡಿದಿತ್ತು. ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಕೆ.ಎಚ್ ಶ್ರೀನಿವಾಸ್ ಅವರನ್ನು ಸೋಲಿಸಿ, ವಿಧಾನಸಭೆ ಪ್ರವೇಶಿಸಿದ್ದರು. ಆ ನಂತರ ಅವರೆಂದೂ ಹಿಂದಿರುಗಿ ನೋಡಲೇ ಇಲ್ಲ. ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲನ್ನು ಮೇಲೇರುತ್ತಲೇ ಬಂದಿದ್ದರು.
ಪಕ್ಷ ಸೇವೆ, ಸಂಘ ಪರಿವಾರದ ಮೇಲಿನ ನಿಷ್ಠೆ, ನಾಯಕತ್ವ ಗುಣ, ಹೋರಾಟ ಮನೋಭಾವ, ಬಿರುಸು ನುಡಿ, ವಿವಾದ ಸೃಷ್ಟಿ ಹೀಗೆ ಹಲವಾರು ಕಾರಣಗಳಿದ ಕೆ.ಎಸ್ ಈಶ್ವರಪ್ಪ ರಾಜ್ಯ ರಾಜಕಾರಣದಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತಲೇ ಬಂದವರು. ಬಿಜೆಪಿ ಕಷ್ಟದಲ್ಲಿದ್ದಾಗಲೆಲ್ಲ ನೇತೃತ್ವ ವಹಿಸಿಕೊಂಡವರು. ಜತೆಗಾರರಾಗಿದ್ದ ಯಡಿಯೂರಪ್ಪ ಬಿಜೆಪಿಯಿಂದ ಸಿಡಿದು ಹೊರ ಹೋದಾಗಲೂ ಇವರು ಕಮಲ ಕೈ ಬಿಡಲಿಲ್ಲ. ಪಕ್ಷದ ನಾಯಕತ್ವವನ್ನು ವಹಿಸಿಕೊಂಡು, ಕಾರ್ಯಕರ್ತರನ್ನು ಹುರಿದುಂಬಿಸಿದ್ದರು.
ಮಾತಿನಿಂದಲೇ ಸದಾ ಸುದ್ದಿ
ಯಡಿಯೂರಪ್ಪ ತಮ್ಮ ರಾಜಕೀಯ ನಡೆಗಳಿಂದಾಗಿ ರಾಜ್ಯದಲ್ಲಿ ಹೆಸರು ಮಾಡುತ್ತಿದ್ದರೆ, ಈಶ್ವರಪ್ಪ ತಮ್ಮ ಹರಿತವಾದ ನಾಲಿಗೆಯನ್ನು ಅಡ್ಡಾದಿಡ್ಡಿಯಾಗಿ ಹರಿಯ ಬಿಟ್ಟು ಸದಾ ಸುದ್ದಿಯಲ್ಲಿರುತ್ತಿದ್ದರು. ಸಚಿವರಾದಾಗಲೂ ಕೂಡ ತಮ್ಮ ಸ್ಥಾನದ ಘನತೆಯನ್ನು ಮರೆತು ಮತನಾಡಿದ್ದು ಹಲವಾರು ಬಾರಿ ವಿವಾದಕ್ಕೆ, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಕಡಿ, ಬಡಿ, ಹೊಡಿ ಮಾತುಗಳಲ್ಲದೆ, ದ್ವೇಷ ಕಾರುವ ಮಾತುಗಳನ್ನು ಆಡುತ್ತಿದ್ದ ಈಶ್ವರಪ್ಪ ಇದರಿಂದ ಪಕ್ಷದ ನಾಯಕತ್ವಕ್ಕೂ ಹಲವಾರು ಬಾರಿ ಮುಜುಗರ ಉಂಟುಮಾಡಿದ್ದರು. ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂಬಂತಹ ಮಾತುಗಳನ್ನು ಆಡಿಯೂ ಈಶ್ವರಪ್ಪ ಅರಗಿಸಿಕೊಳ್ಳಬಲ್ಲವರಾಗಿದ್ದರು!
ಸ್ನೇಹದ ಕಡಲಲ್ಲಿ…. ನೆನಪಿನ ದೋಣಿಯಲ್ಲಿ…
ಮಂಡ್ಯ ಮೂಲದ ಬಿ ಎಸ್ ಯಡಿಯೂರಪ್ಪ, ಬಳ್ಳಾರಿ ಮೂಲದ ಕೆ.ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಸ್ನೇಹಿತರಾಗಿ, ಬಿಜೆಪಿಯಲ್ಲಿ ನಾಯಕರಾಗಿ ಬೆಳೆದಿದ್ದೇ ರೋಚಕ ಕತೆ.
ಹೆಚ್ಚು ಕಡಿಮೆ ಇಬ್ಬರ ಕುಟುಂಬದ ಆರ್ಥಿಕ ಸ್ಥಿತಿಯೂ ಒಂದೇ ರೀತಿಯಾಗಿತ್ತು. ಸಂಘ ಪರಿವಾರದ ನಂಟಿನಿಂದಾಗಿ ಇಬ್ಬರಿಗೂ ದಾರಿ ಸ್ಪಷ್ಟವಾಗಿತ್ತು. ಇವರಿಬ್ಬರು ಒಂದೇ ಸ್ಕೂಟರ್‌ನಲ್ಲಿ ಸುತ್ತಾಡಿ ಪಕ್ಷವನ್ನು ಸಂಘಟಿಸುತ್ತಿದ್ದರು. ಶಿಕಾರಿಪುರದಲ್ಲಿ ಯಡಿಯೂರಪ್ಪ ರೈತರ ಸಮಸ್ಯೆ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಬೆಳೆದರೆ, ಇತ್ತ ಶಿವಮೊಗ್ಗದಲ್ಲಿ ಈಶ್ವರಪ್ಪ ಹಿಂದುತ್ವವನ್ನು ಅಸ್ತ್ರವನ್ನಾಗಿ ಬಳಸಿ ರಾಜಕೀಯವಾಗಿ ಬೇರೂರಿದರು.
ಯಡಿಯೂರಪ್ಪ ಹಾಗೂ ಈಶ್ವರಪ್ಪ ಒಂದು ಕಾಲದಲ್ಲಿ ಜೊತೆಗೂಡಿ ಶಿವಮೊಗ್ಗದಲ್ಲಿ ವ್ಯಾಪಾರ ಕೂಡ ನಡೆಸಿದ್ದರು. ಇಬ್ಬರೂ ತಮ್ಮ ಪತ್ನಿಯರ ಹೆಸರಿನಲ್ಲಿ ಒಂದು ಕಂಪನಿಯನ್ನು ತೆರೆದಿದ್ದರು. ಜೆಎಎಂ ಎಂಬ ಸಿಮೆಂಟ್ ಪೈಪ್ ತಯಾರಿಸುವ ಕಾರ್ಖಾನೆಯನ್ನು 1994 ರಲ್ಲಿ ಆರಂಭಿಸಿದ್ದರು ಕೂಡ. ಹೀಗೆ ವ್ಯವಹಾರಿಕ ಜೋಡಿಗಳಾಗಿದ್ದ ಇವರು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ್ದರು.
ಈ ಜೋಡಿಯ ಮೇಲೆ ಯಾರ ಕಣ್ಣು ಬಿದ್ದಿತ್ತೋ, ರಾಜಕೀಯವಾಗಿ ಮೇಲೇರುತ್ತಿದ್ದಂತೆಯೇ ಇವರಿಬ್ಬರ ನಡುವಿನ ಬಿರುಕೂ ಅಗಲವಾಗುತ್ತಾ ಬಂದಿತ್ತು. 2008ರ ಲೋಕ ಸಭಾ ಚುನಾವಣೆಯಲ್ಲಿ ಮಗ ಬಿ.ಎಸ್. ರಾಘವೇಂದ್ರ ಅವರನ್ನು ಕಣಕ್ಕಿಳಿಸಲು ಯಡಿಯೂರಪ್ಪ ಮುಂದಾದಾಗ ಈಶ್ವರಪ್ಪ ಬಹಿರಂಗವಾಗಿಯೇ ವಿರೋಧಿಸಿದ್ದರು. ಇವರಿಬ್ಬರ ಸ್ನೇಹ ಹಳಸಿದ್ದು, ಆಗಲೇ ಎಲ್ಲರಿಗೂ ಗೊತ್ತಾಗಿದ್ದು.
ಮುಂದೆ ಹಲವಾರು ಬಾರಿ ಇವರಿಬ್ಬರೂ ಕಚ್ಚಾಡಿಕೊಂಡಿದ್ದಾರೆ. ಮಾತಿನ ಮೂಲಕ ತಿವಿದುಕೊಂಡಿದ್ದಾರೆ. ಯಡಿಯೂರಪ್ಪ ಲಿಂಗಾಯಿತರ ನಾಯಕರಾಗಿ ಗುರುತಿಸಿಕೊಂಡ ಹಾಗೇ ಈಶ್ವರಪ್ಪ ಕುರುಬರ ನಾಯಕರಾಗಿ ಬೆಳೆಯಬೇಕೆಂದು ರಾಯಣ್ಣ ಬ್ರಿಗೇಡ್ ಕಟ್ಟಿದ್ದರು. ಆದರೆ ಪಕ್ಷದ ವಿಷಯಕ್ಕೆ ಬಂದಾಗ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದೂ ಉಂಟು!
ಒಬ್ಬರು ಮುಖ್ಯಮಂತ್ರಿಯಾಗಿದ್ದರೆ… ಮತ್ತೊಬ್ಬರು ಉಪ ಮುಖ್ಯಮಂತ್ರಿಯಾಗಿದ್ದರು…ಈಗ ಒಂದೇ ಚುನಾವಣೆಯಲ್ಲಿ ಇವರಿಬ್ಬರೂ ಚುನಾವಣಾ ರಾಜಕೀಯದಿಂದ ನಿವೃತ್ತರಾಗುತ್ತಿದ್ದಾರೆ.
ಕಮಿಷನ್ ಆರೋಪ; ಸಚಿವ ಸ್ಥಾನಕ್ಕೆ ರಾಜೀನಾಮೆ
ಈಶ್ವರಪ್ಪ 2019ರಲ್ಲಿ ಯಡಿಯೂರಪ್ಪ ಸರ್ಕಾರ ರಚನೆಗೊಂಡಾಗ ಮತ್ತೆ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಅಧಿಕಾರ ನಡೆಸಲು ಬಿಡುತ್ತಿಲ್ಲ ಎಂದು ಯಡಿಯೂರಪ್ಪರ ಪುತ್ರ ವಿಜಯೇಂದ್ರರ ವಿರುದ್ಧ ಪಕ್ಷದ ವರಿಷ್ಠರಿಗೆ, ರಾಜ್ಯಪಾಲರಿಗೆ ದೂರು ನೀಡಿ ಸುದ್ದಿಮಾಡಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗಲೂ ತಮ್ಮ ಹಿರಿತನವನ್ನು ಮರೆತು ಅವರ ಸಚಿವ ಸಂಪುಟದಲ್ಲಿ ಮುಂದುವರಿದಿದ್ದರು.
ಸಚಿವರು ಗುತ್ತಿಗೆದಾರರಿಂದ ಶೇ.40 ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದಾಗ ಸಚಿವ ಈಶ್ವರಪ್ಪರ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಆಗಲೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಈಶ್ವರಪ್ಪರ ವಿರುದ್ಧ ಆರೋಪ ಮಾಡಿ, ದಾಖಲೆ ಒದಗಿಸಿದ್ದರು. ಆರೋಪ ತಳ್ಳಿ ಹಾಕಿದ್ದ ಈಶ್ವರಪ್ಪ ರಾಜೀನಾಮೆ ನೀಡಲಿಲ್ಲ. ಕಾಂಗ್ರೆಸ್ ಆಗ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ನಂತರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ಇದರ ತನಿಖೆ ನಡೆದು ಈಶ್ವರಪ್ಪರ ಆರೋಪ ಮುಕ್ತರಾದರೂ ಮತ್ತೆ ಸಚಿವ ಸ್ಥಾನ ದೊರಕಿರಲಿಲ್ಲ. ಈ ಬಗ್ಗೆ ಪಕ್ಷದ ನಾಯಕರೊಂದಿಗೆ, ಮುಖ್ಯಮಂತ್ರಿಗಳೊಂದಿಗೆ ಮುನಿಸಿಕೊಂಡಿದ್ದ ಈಶ್ವರಪ್ಪ ಒಂದು ರೀತಿಯಲ್ಲಿ ಮೂಲೆಗುಂಪಾಗಿದ್ದರು. ತಮ್ಮ ಮತ್ತು ಮಗ ಕಾಂತೇಶ್ ಅವರ ರಾಜಕೀಯ ಭವಿಷ್ಯದ ಕುರಿತು ಸದಾ ಚಿಂತಿಸುವಂತಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ನಿಂತು ಗೆದ್ದು, ಮುಂದೆ ಹೊಸ ಸರ್ಕಾರದಲ್ಲಿಯಾದರೂ ಮತ್ತೆ ಸಚಿವರಾಗುವ ಇರಾದೆ ಹೊಂದಿದ್ದರು.
ಶ್ರಮಜೀವಿಯಾಗಿದ್ದ ಈಶ್ವರಪ್ಪ ಅವರು ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಹಿಡಿದ ಕೆಲಸವನ್ನು ಮಾಡಿಯೆ ತೀರುವ ಛಲ ಮತ್ತು ಹೋರಾಟದ ಮನೋಭಾವದಿಂದಾಗಿ ಪಕ್ಷವನ್ನು ಬಹಳಷ್ಟು ಸಂದರ್ಭಗಳಲ್ಲಿ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಈಗ ಪಕ್ಷದ ನಿಲುವಿನಂತೆ ವಯಸ್ಸಿನ ಕಾರಣದಿಂದ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ.
ಏನೇನು ಆಗಿದ್ದರು ಈಶ್ವರಪ್ಪ?
- ವಿದ್ಯಾರ್ಥಿ ದೆಸೆಯಲ್ಲೇ ಆರ್‌ಎಸ್‌ಎಸ್, ಎಬಿವಿಪಿ ಕಾರ್ಯಕರ್ತರಾಗ್ಗಿದ್ದರು.
- 1975ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿದ್ದರು.
- ಬಿಜೆಪಿ ಶಿವಮೊಗ್ಗ ತಾಲೂಕು ಅಧ್ಯಕ್ಷರಾಗಿ ಪಕ್ಷ ಕಟ್ಟುವ ಕೆಲಸ ಮಾಡಿದ್ದರು. ಯಡಿಯೂರಪ್ಪರೊಂದಿಗೆ ರಾಜ್ಯ ಸುತ್ತುತ್ತಿದ್ದರು.
- 1989ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರು. ಇದು ಅವರ ಜೀವನಕ್ಕೆ ಮಹತ್ವದ ತಿರುವು ನೀಡಿತು.
- 1991ರಲ್ಲಿ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದರು.
- 1993ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು.
- 1994ರಲ್ಲಿ 2ನೇ ಬಾರಿ ವಿಧಾನಸಭೆಗೆ ಆಯ್ಕೆಯಾದರು. ಪ್ರತಿಪಕ್ಷದ ನಾಯಕರೂ ಆಗಿದ್ದರು.
- 1995ರಲ್ಲಿ 2ನೇ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.
- 1999ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಇದಕ್ಕೆ ದಿವಂತ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪರ ರಾಜಕೀಯ ತಂತ್ರಗಾರಿಕೆ ಕಾರಣವಾಗಿತ್ತು.
- 2000 (ಎನ್ಡಿಎ ಸರ್ಕಾರದ ಅವಧಿಯಲ್ಲಿ) ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
- 2002 ರಲ್ಲಿ ಕನಕಪುರ ಲೋಕಸಭೆ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
- 2004ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾಗಿದ್ದರು.
- 2006ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.
- 2008ರಲ್ಲಿ ವಿಧಾನಸಭೆಗೆ 4ನೇ ಬಾರಿ ಆಯ್ಕೆ, ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
- 2010ರಲ್ಲಿ 3ನೇ ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.
- 2012ರಲ್ಲಿ ಉಪಮುಖ್ಯಮಂತ್ರಿಯಾಗಿದ್ದರು, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.
- 2013ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.
- 2014ರಲ್ಲಿ ವಿಧಾನ ಪರಿಷತ್ಗೆ ಆಯ್ಕೆ, ಪ್ರತಿಪಕ್ಷ ನಾಯಕನಾಗಿದ್ದರು.
- 2018ರಲ್ಲಿ 5ನೇ ಬಾರಿ ವಿಧಾನಸಭೆ ಆಗಿ ಆಯ್ಕೆ, ಪಂಚಾಯತ್ ರಾಜ್ ಸಚಿವ.
- 2023ರ ಏಪ್ರಿಲ್ 11ರಂದು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ.