ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದ (Karnataka Elections 2023) ಟಿಕೆಟ್ ಆಕಾಂಕ್ಷಿಯಾಗಿದ್ದು, ಸ್ಪರ್ಧೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಕೆರಳಿ ನಿಂತಿರುವ ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇದರ ಜತೆಗೆ ಮೇಲ್ಮನೆ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ.
ಅಥಣಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು, ಎಂಎಲ್‌ಸಿ ಸ್ಥಾನ ತ್ಯಜಿಸಲು ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು. ʻʻಬಿಜೆಪಿ ಪಕ್ಷದ ಎಲ್ಲ ಮುಖಂಡರು ಹಾಗೂ ಸ್ನೇಹಿತರಿಗೆ ಮತ್ತೊಮ್ಮೆ ಅಭಿನಂದನೆ. ನಾನು ತಪ್ಪು ಮಾಡಿದ್ದರೆ, ನನ್ನಿಂದ ತಪ್ಪಾಗಿದ್ದರೆ ಮಗನೆಂದು ಕ್ಷಮಿಸಿʼʼ ಎಂದು ಮನವಿ ಮಾಡಿದ್ದಾರೆ.
ಸೌಜನ್ಯಕ್ಕಾದರೂ ಚರ್ಚೆ ಮಾಡಿಲ್ಲ
ʻʻನನ್ನನ್ನು ಮೊದಲೇ ಕರೆದು ನಿನಗೆ ಟಿಕೆಟ್ ಇಲ್ಲ ಅಂತ ಹೇಳಿದ್ದರೆ ನಾನು ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ, ಸೌಜನ್ಯಕ್ಕಾದರೂ ಮೊದಲು ನನ್ನ ಜತೆಗೆ ಚರ್ಚೆ ಮಾಡಬೇಕಿತ್ತುʼʼ ಎಂದು ಹೇಳಿದ ಲಕ್ಷ್ಮಣ ಸವದಿ, ಸವದಿ ಎಂದರೆ ತೊಪ್ಪಲು ಎನ್ನುವದು ಹೈ ಕಮಾಂಡ್‌ಗೆ ಮನವರಿಕೆಯಾಗಿದೆ ಎಂದರು.
ಬೊಮ್ಮಾಯಿ ಮತ್ತೆ ಸಿಎಂ ಆಗಲ್ಲ, ಪ್ರಧಾನಿ ಆಗಬಹುದು!
ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕೆಂಡ ಕಾರಿರುವ ಸವದಿ, ನೀವು ಇನ್ನೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದರು. ಅದರ ಜತೆಗೇ ನೀವು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಚಾನ್ಸ್ ಕಡಿಮೆ. ಆದರೆ, ಪ್ರಧಾನಿ ಆಗಬಹುದು ಎಂದು ಗೇಲಿ ಮಾಡಿದರು. ಅಥಣಿ ಟಿಕೆಟ್‌ನ್ನು ಮಹೇಶ್ ಕುಮಟಳ್ಳಿ ಅವರಿಗೇ ನೀಡಬೇಕು ಎಂದು ಹಠ ಹಿಡಿದು ಗೆಲುವು ಸಾಧಿಸಿದ ರಮೇಶ್ ಜಾರಕಿಹೊಳಿ ವಿರುದ್ಧವೂ ತಿರುಗಿಬಿದ್ದ ಲಕ್ಷ್ಮಣ ಸವದಿ, ಬಹುತೇಕ ರಮೇಶ ಜಾರಕಿಹೊಳಿ ಸಿಎಂ ಆದರೂ ಆಗಬಹುದು ಎಂದರು.
ʻʻಭಿಕ್ಷೆ ಪಾತ್ರೆ ಇಟ್ಟುಕೊಂಡು ತಿರುಗುವವನು ನಾನಲ್ಲ. ನಾನು ಸ್ವಾಭಿಮಾನಿ ರಾಜಕಾರಣಿ. ಲಜ್ಜೆಗೆಟ್ಟ ರಾಜಕಾರಣಿ ಅಲ್ಲ. ಅಧಿಕಾರಿದ ಅಮಲಿನಲ್ಲಿ ನಾನಿಲ್ಲ. ಜಿಲ್ಲೆಯಲ್ಲಿ ಯಾರೂ ಬೆನ್ನಿಗೆ ಚೂರಿ ಹಾಕಿಲ್ಲʼʼ ಎಂದು ಹೇಳಿದ ಬಳಿಕ ರಮೇಶ್ ಜಾರಕಿಹೊಳಿ ಹೆಸರೆತ್ತಿಕೊಂಡು ಕಿಡಿ ಕಾರಿದರು.
ನಾನು ಮಾತು ಕೇಳೋದು ನನ್ನು ಹೈಕಮಾಂಡ್‌ನದ್ದು
ʻʻಬಿಜೆಪಿಯ ಅನೇಕ ಮುಖಂಡರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಅವರಿಗೆ ನನ್ನ ಹೈ ಕಮಾಂಡ್ ಹೇಳಿದ ಹಾಗೆ ಕೇಳುತ್ತೇನೆ ಎಂದು ಹೇಳಿದ್ದೇನೆ. ಜನರ ತೀರ್ಮಾನಕ್ಕೆ ನಾನು ತಲೆ ಬಾಗಲೇಬೇಕಾಗಿದೆ. ನನ್ನ ಹೈಕಮಾಂಡನ್ನು ನಾನು ಕಳೆದುಕೊಳ್ಳುವದಿಲ್ಲ. ಕ್ಷೇತ್ರದ ಜನ ನನ್ನ ಹೈಕಮಾಂಡ್. ನನ್ನ ಜನರು ವಿಧಾನ ಪರಿಷತ್ ಸ್ಥಾನ ಧಿಕ್ಕರಿಸುವಂತೆ ಸಲಹೆ ನೀಡಿದ್ದಾರೆ. ಬಿಜೆಪಿಯ ಪ್ರಾಥಮಿಕ ಸದಸ್ವತ್ವಕ್ಕೆ ರಾಜೀನಾಮೆ ನೀಡುವಂತೆ ಸಲಹೆ ನೀಡಿದ್ದಾರೆ. ಅದನ್ನು ಪಾಲಿಸುತ್ತೇನೆ. ಗುರುವಾರ ಇದರ ಬಗ್ಗೆ ಅಂತಿಮ ತೀರ್ಮಾನ ಪ್ರಕಟಿಸುತ್ತೇನೆʼʼ ಎಂದು ಹೇಳಿದರು.
ಲಕ್ಷ್ಮಣ ಸವದಿ ಮುಂದೇನು?
ಬಿಜೆಪಿಯಿಂದ ಹೊರಗೆ ಕಾಲಿಟ್ಟಿರುವ ಲಕ್ಷ್ಮಣ ಸವದಿ ಅವರು ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ಜೋರಾಗಿದೆ. ಅವರು ಕಾಂಗ್ರೆಸ್ ಜತೆಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜತೆಗೆ ಈಗಾಗಲೇ ಮಾತುಕತೆ ನಡೆದಿದ್ದು, ರಾಜ್ಯದ ಹಿರಿಯ ನಾಯಕರು ಕೂಡಾ ಉತ್ಸಾಹದಲ್ಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : BJP Ticket: ಬಿಜೆಪಿಗೆ ಹಲವು ಕಡೆ ಬಂಡಾಯದ ಬಿಸಿ, ಸವದಿಗೆ ಕಾಂಗ್ರೆಸ್ ಗಾಳ, ಶೆಟ್ಟರ್ ನಡೆ ಏನು?