ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್‌ಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಟಿಕೆಟ್ ಕೈತಪ್ಪಿದೆ. ಈ ಬಗ್ಗೆ ಹಲವು ದಿನಗಳಿಂದ ಅವರು ನಡೆಸುತ್ತಿದ್ದ ಪ್ರಯತ್ನ ವಿಫಲಗೊಂಡಿದೆ. ಕೊನೆಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಬಿಗಿಪಟ್ಟಿಗೆ ಜಯ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ಅವರ ಆಪ್ತ ಟಿ.ಎಸ್. ಶ್ರೀವತ್ಸ ಅವರಿಗೆ ಬಿಜೆಪಿ ಟಿಕೆಟ್ ಒಲಿದಿದೆ.
ಖುದ್ದು ಪ್ರಧಾನಿ ನರೇಂದ್ರ ಮೋದಿ ಪರಿಚಯವಿದ್ದರೂ ಟಿಕೆಟ್ ಪಡೆಯುವಲ್ಲಿ ರಾಮದಾಸ್ ವಿಫಲವಾಗಿದ್ದಾರೆ. ಕೃಷ್ಣರಾಜ ಕ್ಷೇತ್ರದಲ್ಲಿ 4 ಬಾರಿ ಗೆಲುವು, 2 ಬಾರಿ ಸೋಲು ಕಂಡಿರುವ ರಾಮದಾಸ್ ಅವರು ಈ ಬಾರಿ ಶಾಸಕರಾಗಿದ್ದರೂ ಟಿಕೆಟ್ ಕೈತಪ್ಪಿರುವುದು ಭಾರಿ ಹತಾಶೆಯನ್ನುಂಟು ಮಾಡಿದೆ.
1994, 1999, 2008, 2018ರ ಚುನಾವಣೆಯಲ್ಲಿ ಗೆಲುವು ರಾಮದಾಸ್ ಗೆಲುವು ದಾಖಲಿಸಿದ್ದರೆ, 2004, 2013ರಲ್ಲಿ ಸೋಲು ಕಂಡಿದ್ದರು.
ರಾಮದಾಸ್‌ಗೆ ಟಿಕೆಟ್ ಮಿಸ್ ಆಗಲು ಕಾರಣ
- ಬರೋಬ್ಬರಿ ಆರು ಚುನಾವಣೆಯಲ್ಲಿ ಅವಕಾಶ ನೀಡಿರುವುದು
- ಹಳೇ ಮೈಸೂರು ಭಾಗದ ಹಿರಿಯ ಶಾಸಕ, ವೈದ್ಯಕೀಯ ಶಿಕ್ಷಣ ಸಚಿವರಾದರೂ ಕೆ.ಆರ್.ಕ್ಷೇತ್ರ ಬಿಟ್ಟು ಜಿಲ್ಲೆ, ಪ್ರಾದೇಶಿಕ ನಾಯಕತ್ವ ವಹಿಸಿಕೊಳ್ಳದೆ ಇರುವುದು
- ವೈಯುಕ್ತಿಕ ಕಾರಣಕ್ಕಾಗಿ ಕಾರ್ಯಕರ್ತರೊಂದಿಗೆ ನಿಷ್ಠುರ ಆಗಿರುವುದು, ಖಾಸಗಿ ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೈಕಮಾಂಡ್ ಹಂತಕ್ಕೆ ಯಶಸ್ವಿಯಾಗಿ ತಲುಪಿಸಿದ ವಿರೋಧಿ ಪಡೆ
- ಪ್ರಧಾನಿ ನರೇಂದ್ರ ಮೋದಿ ಕುಟುಂಬದ ಆತ್ಮೀಯತೆ ಕಾರಣಕ್ಕೆ ಇತರೆ ರಾಜ್ಯ, ರಾಷ್ಟ್ರದ ಹೈಕಮಾಂಡ್ ನಾಯಕರ ಕಡೆಗಣನೆ
ಇದನ್ನೂ ಓದಿ: Karnataka Election 2023: ಕೊಪ್ಪಳದಲ್ಲಿ ಕರಡಿ ಸೊಸೆಗೆ ಬಿಜೆಪಿ ಟಿಕೆಟ್; ಬಂಡಾಯವೆದ್ದ ಸಿ.ವಿ. ಚಂದ್ರಶೇಖರ್
ಟಿ.ಎಸ್.ಶ್ರೀವತ್ಸಗೆ ಟಿಕೆಟ್ ಸಿಗಲು ಕಾರಣ
- 1988ರಿಂದಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ
- ಇದುವರೆಗೂ ಪಕ್ಷದ ಜವಾಬ್ದಾರಿ ನಿರ್ವಹಿಸಿದ್ದಾರೆ, ಯಾವುದೇ ಚುನಾವಣೆಯನ್ನು ಎದುರಿಸಿಲ್ಲ
- ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಪ್ತತೆ
- ಕೃಷ್ಣರಾಜ ಕ್ಷೇತ್ರದಲ್ಲಿ ಇರೋದು ಪಕ್ಷದ ಮತ, ವ್ಯಕ್ತಿ ಗೌಣ ಎನ್ನುವ ಟ್ರೆಂಡ್