ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಈಗ ನಾಮಪತ್ರ ಪರಿಶೀಲನೆಯ ಭರಾಟೆ ಜೋರಾಗಿದೆ. ಇನ್ನು ಶುಕ್ರವಾರ ನಡೆದ ನಾಮಪತ್ರ ಪರಿಶೀಲನೆ ವೇಳೆ ಬಿಜೆಪಿಯ ಮುರುಗೇಶ್ ನಿರಾಣಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನಾಮಪತ್ರ ತಿರಸ್ಕಾರಗೊಳ್ಳುವ ಭೀತಿ ಇತ್ತು. ಆದರೆ, ನಿರಾಣಿ, ಡಿಕೆಶಿ ಹಾಗೂ ಜಮೀರ್ ಅಹ್ಮದ್ ಸೇರಿ ಹಲವು ನಾಯಕರ ನಾಮಪತ್ರ ಪುರಸ್ಕಾರಗೊಂಡಿದ್ದು, ಇವರು ನಿರಾಳರಾಗಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಅಕ್ರಮವಾಗಿ ಆಸ್ತಿ ಗಳಿಸಿದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ನಾಮಪತ್ರ ತಿರಸ್ಕಾರಗೊಳ್ಳುವ ಭೀತಿ ಇತ್ತು. ಇದೇ ಕಾರಣಕ್ಕಾಗಿ ಅವರ ಸಹೋದರ ಡಿ.ಕೆ.ಸುರೇಶ್ ಕೂಡ ನಾಮಪತ್ರ ಸಲ್ಲಿಸಿದ್ದರು. ಇನ್ನು ಸಚಿವ ಮುರುಗೇಶ್ ನಿರಾಣಿ ಅವರಿಗೂ ನಾಮಪತ್ರ ತಿರಸ್ಕಾರಗೊಳ್ಳುವ ಭೀತಿ ಇತ್ತು. ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆತಂಕ ಎದುರಾಗಿತ್ತು.
ತಪ್ಪು ಮಾಹಿತಿಯ ಕಾರಣಕ್ಕಾಗಿಯೇ ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಅವರಿಗೂ ಆತಂಕ ಇತ್ತು. ಆದರೆ, ಇವರೆಲ್ಲ ನಾಯಕರ ನಾಮಪತ್ರಗಳು ಅಂಗೀಕಾರಗೊಂಡಿವೆ. ಹಾಗಾಗಿ ಇವರು ನಿರಾಳರಾಗಿದ್ದಾರೆ. ಗಂಗಾವತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ನಾಮಪತ್ರದಲ್ಲಿ ಮಾಹಿತಿ ಮರೆಮಾಚಿದ್ದಾರೆ ಎಂದು ಆಪ್ ಅಭ್ಯರ್ಥಿ ಆಕ್ಷೇಪ ಸಲ್ಲಿಸಿದ್ದರು. ಆದರೆ, ಚುನಾವಣಾಧಿಕಾರಿಯು ಪರಿಶೀಲನೆ ನಡೆಸಿ ಜನಾರ್ದನ ರೆಡ್ಡಿ ನಾಮಪತ್ರವನ್ನು ಅಂಗೀಕರಿಸಿದರು.
ಜವರಾಯಿಗೌಡ ಅವರಿಂದ ಸ್ಪಷ್ಟನೆ ಪಡೆದ ಆಯೋಗ
ಯಶವಂತಪುರ ಜವರಾಯಿಗೌಡ ಅವರಿಗೂ ನಾಮಪತ್ರಕ್ಕೆ ಸಂಬಂಧಿಸಿದಂತೆ ಭೀತಿ ಎದುರಾಗಿತ್ತು. ಜವರಾಯಿಗೌಡ ಅವರು ಆಸ್ತಿಯ ವಿವರ ಮುಚ್ಚಿಟ್ಟಿದ್ದಾರೆ ಎಂದು ಬಿಜೆಪಿ ದೂರು ನೀಡಿದ ಕಾರಣ ಚುನಾವಣಾಧಿಕಾರಿಯು ಜವರಾಯಿಗೌಡರನ್ನು ಕರೆಸಿ ಸ್ಪಷ್ಟೀಕರಣ ಪಡೆದರು. ಬಳಿಕ ನಾಮಪತ್ರವನ್ನು ಅಂಗೀಕರಿಸಿದರು. ಹಾಗೆಯೇ, ಕಾಂಗ್ರೆಸ್ ಹಾಗೂ ಜೆಡಿಎಸ್ ದೂರಿನ ಬಳಿಕ ಯಲಹಂಕ ಬಿಜೆಪಿ ಅಭ್ಯರ್ಥಿ ಎಸ್.ಆರ್. ವಿಶ್ವನಾಥ್ ಅವರಿಂದ ಮಾಹಿತಿ ಪಡೆದ ನಂತರ ಚುನಾವಣಾಧಿಕಾರಿ ಅಂಗೀಕಾರ ನೀಡಿದರು.
ಸಹಿ ಹಾಕುವುದನ್ನೇ ಮರೆತ ಅಭ್ಯರ್ಥಿ, ನಾಮಪತ್ರ ತಿರಸ್ಕೃತ
ಗಂಗಾವತಿಯಲ್ಲಿ ಅಭ್ಯರ್ಥಿಯೊಬ್ಬರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ನಾಮಪತ್ರಕ್ಕೆ ಸಹಿ ಮಾಡುವುದನ್ನೇ ಅಭ್ಯರ್ಥಿ ಮರೆತ ಕಾರಣ ತಿರಸ್ಕರಿಸಲಾಗಿದೆ. ದೇವಪ್ಪ ಎಂಬ ವ್ಯಕ್ತಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರಗಳ ಪರಿಶೀಲಿಸುವ ಸಂದರ್ಭದಲ್ಲಿ ನಾಮಪತ್ರಕ್ಕೆ ಈ ವ್ಯಕ್ತಿ ಸಹಿ ಮಾಡದಿರುವುದು ಗೊತ್ತಾಗಿದೆ. ಹೀಗಾಗಿ ನಾಮಪತ್ರ ಕ್ರಮಬದ್ಧವಾಗಿಲ್ಲ ಎಂದು ಅಧಿಕಾರಿಗಳು ನಾಮಪತ್ರ ಅಸಿಂಧುಗೊಳಿಸಿದ್ದಾರೆ.
ಹಾಗೆಯೇ, ಗದಗ ವಿಧಾನಸಭೆ ಕ್ಷೇತ್ರದಲ್ಲಿ ಮೂವರ ನಾಮಪತ್ರಗಳನ್ನು ಅಸಿಂಧುಗೊಳಿಸಿದ್ದಾರೆ. ನಾಗೇಶ ತಿರಕಪ್ಪ ಹುಬ್ಬಳ್ಳಿ ಅವರು ಬಿಫಾರಂ ಇಲ್ಲದೆಯೇ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದರು. ಬಿ ಫಾರಂನಲ್ಲಿ ಹೆಸರು ಇಲ್ಲದ ಕಾರಣ ಕವಿತಾ ಬಡಿಗೇರ, ನಾಮಪತ್ರ ಕ್ರಮಬದ್ಧವಾಗಿರದ ಕಾರಣ ಶಮ್ಶುದ್ದೀನ್ ಎಂಬುವರ ಉಮೇದುವಾರಿಕೆಯನ್ನು ಅಸಿಂಧುಗೊಳಿಸಲಾಗಿದೆ.
ಇದನ್ನೂ ಓದಿ: Karnataka elections 2023: ಮಾಹಿತಿ ಮರೆಮಾಚಿದ ಆರೋಪ; ರೆಡ್ಡಿ ನಾಮಪತ್ರ ತಿರಸ್ಕರಿಸಲು ಆಪ್ ಪಟ್ಟು, ಒಪ್ಪದ ಅಧಿಕಾರಿಗಳು
ಅಷ್ಟೇ ಅಲ್ಲ, ಹಾಸನದ ಅರಕಲಗೂಡು ಕ್ಷೇತ್ರದಿಂದ ಬಿಜೆಪಿ ಅಥವಾ ಪಕ್ಷೇತರ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದ ಕೃಷ್ಣೇಗೌಡ ನಾಮಪತ್ರ ತಿರಸ್ಕೃತಗೊಂಡಿದೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರ ಮತ್ತು ಬಿಜೆಪಿ ಅಭ್ಯರ್ಥಿ ಎಂದು ಕೃಷ್ಣೇಗೌಡ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಬಿ ಫಾರಂ ಸಿಗದ ಕಾರಣ ನಾಮಪತ್ರವನ್ನು ತಿರಸ್ಕರಿಸಲಾಯಿತು. ಬಿಜೆಪಿಯಿಂದ ಯೋಗಾ ರಮೇಶ್ ನಾಮಪತ್ರ ಸಲ್ಲಿಸಿದ್ದಾರೆ.