ಕಲಬುರಗಿ: ನಿನ್ನೆ ಇಲ್ಲಿ ನಡೆದ ಚುನಾವಣೆ ಪ್ರಚಾರದ (Karnataka election 2023) ಮೆಗಾ ರೋಡ್ ಶೋ ನಡುವೆಯೇ ತುಸು ಬಿಡುವು ಮಾಡಿಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ಮಕ್ಕಳ ಕಡೆ ಧಾವಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), ಅವರೊಂದಿಗೆ ಕೆಲವು ಸೆಕೆಂಡ್‌ಗಳ ಕಾಲ ಚಿಟ್‌ಚಾಟ್ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರಿನಲ್ಲಿ ಬಿಜೆಪಿ ಹವಾ ಎಬ್ಬಿಸಲು ಆಗಮಿಸಿದ್ದ ಮೋದಿ, ಇದರ ನಡುವೆಯೇ ಬಿಡುವು ಮಾಡಿಕೊಂಡರು. ಅವರ ಹಾಗೂ ಮಕ್ಕಳ ನಡುವಿನ ಮಾತುಕತೆ ಹೀಗಿತ್ತು:
ಮೋದಿ: ಸ್ಕೂಲಿಗೆ ಹೋಗ್ತೀರಾ ಎಲ್ಲರೂ?
ಮಕ್ಕಳು: ಯೆಸ್ ಸರ್!
ಇದರ ಬಳಿಕ ಅವರು ಮಕ್ಕಳ ಬಳಿ ಕೈಬೆರಳುಗಳನ್ನು ಬಿಡಿಸಿ ಮಡಿಸುವ ಆಟವಾಡಿಸಿದರು. ನಂತರ ಮಕ್ಕಳ ಬಳಿ ಓದಿ ದೊಡ್ಡವರಾದ ಬಳಿಕ ಏನು ಮಾಡಬೇಕೆಂದಿದ್ದೀರಿ ಎಂದು ಪ್ರಶ್ನಿಸಿದರು.
ಮಕ್ಕಳಲ್ಲಿ ಒಬ್ಬ ಡಾಕ್ಟರ್ ಆಗಬೇಕೆಂದಿದ್ದೇನೆ ಎಂದರೆ, ಇನ್ನೊಬ್ಬ ʼನಿಮ್ಮ ಸೆಕ್ರೆಟರಿʼ ಎಂದು ಉತ್ತರಿಸಿದ. ನಂತರ ಮೋದಿ ಲಘುವಾಗಿ, ʼʼಯಾರಿಗೂ ಪ್ರಧಾನ ಮಂತ್ರಿ ಆಗೂವ ಇಷ್ಟ ಇಲ್ವಾ?ʼʼ ಎಂದು ಪ್ರಶ್ನಸಿದರು. ಈ ಪ್ರಶ್ನೆಗೆ ಅಲ್ಲಿ ಸೇರಿದ ಮಕ್ಕಳು ಹಾಗೂ ದೊಡ್ಡವರು ಜೋರಾಗಿ ನಕ್ಕರು. ಇದರ ಬಳಿಕ ಮೋದಿ ಅಲ್ಲಿಂದ ನಿರ್ಗಮಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಇದೀಗ ವೈರಲ್ ಆಗುತ್ತಿದೆ.
ಕಲಬುರಗಿಯಲ್ಲಿ ನಂತರ ರೋಡ್ ಶೋ ನಡೆಸಿದ ಪ್ರಧಾನಿಗೆ ಬೀದಿಗಳಲ್ಲಿ ʼಮೋದಿ, ಮೋದಿʼ ಎಂಬ ಅಬ್ಬರದ ಜೈಕಾರದ ಸ್ವಾಗತ ದೊರೆಯಿತು. ʼಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರʼ ಎಂಬ ಘೋಷಣೆಯನ್ನು ಮೋದಿ ಮೊಳಗಿಸಿದರು. ವಿಶೇಷ ವಾಹನದಲ್ಲಿ ಆಗಮಿಸಿದ ಮೋದಿ, ಕೇಸರಿ ಟೊಪ್ಪಿ ಹಾಗೂ ಹಳದಿ ಶಾಲು ಧರಿಸಿದ್ದರು. ಕಲಬುರಗಿಯ ಬಿಜೆಪಿ ಸಂಸದ ಉಮೇಶ್ ಜಾಧವ್ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಜತೆಗಿದ್ದರು.
ಇದಕ್ಕೂ ಮುನ್ನಾದಿನ ಅವರು ಚಿತ್ರದುರ್ಗ, ಹೊಸಪೇಟೆ, ಸಿಂಧನೂರುಗಳಲ್ಲಿ ಪ್ರಚಾರ ನಡೆಸಿದ್ದರು. ಇಂದು ಉಡುಪಿ ಬಳಿಯ ಮುಲ್ಕಿಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Modi in Karnataka: ಕರಾವಳಿಯಲ್ಲಿ ಇಂದು ನರೇಂದ್ರ ಮೋದಿ ಮೇನಿಯಾ, ಮುಲ್ಕಿಯಲ್ಲಿ ಸಮಾವೇಶ