ಬಳ್ಳಾರಿ, ಕರ್ನಾಟಕ: ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯ ಮಾಡಿಕೊಂಡು ಬಂದಿದೆ. ಪರಿಣಾಮ ಭಯೋತ್ಪಾದನೆಯ ಹೆಚ್ಚಾಯಿತು. ಕಳೆದ ಕೆಲವು ವರ್ಷಗಳಲ್ಲಿ ಭಯೋತ್ಪಾದನೆಯ ಸ್ವರೂಪವೂ ಬದಲಾಗಿದೆ. ಈಗ ಬಾಂಬ್, ಬಂದೂಕು, ಪಿಸ್ತೂಲ್‌ಗಳಿಂದ ಮಾತ್ರವೇ ಉಗ್ರ ಕೃತ್ಯ ನಡೆಯುವುದಿಲ್ಲ. ಸಮಾಜದ ಮಧ್ಯೆ ಇರುವ ಕೆಲವರು ಯಾವುದೇ ಸದ್ದಿಲ್ಲದೇ ಹೊಸ ಸ್ವರೂಪದ ಆತಂಕವಾದವನ್ನು ಸೃಷ್ಟಿಸುತ್ತಿದ್ದಾರೆ. ಇಂಥದ್ದೇ ಆತಂಕವಾದ ಸ್ವರೂಪದ ಕಥಾ ಹಂದರವನ್ನು ಹೊಂದಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು(Karnataka Election 2023).
ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಲವ್ ಜಿಹಾದ್ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ”ಹೊಸ ಸ್ವರೂಪದ ಭಯೋತ್ಪಾದನೆಯ ಸಿನಿಮಾ ಕೇರಳದಲ್ಲಿ ನಡೆದ ಘಟನೆಗಳನ್ನಾಧರಿಸಿ ನಿರ್ಮಿಸಲಾಗಿದೆ. ದೇಶದ ಸುಂದರ ನಾಡು ಕೇರಳದಲ್ಲಿನ ಜನರು ಪರಿಶ್ರಮಿಗಳು, ಪ್ರತಿಭಾನ್ವಿತರು. ಅಂಥ ನಾಡಿನಲ್ಲಿ ಹೊಸ ರೀತಿಯ ಭಯೋತ್ಪಾದನೆ ನಡೆಯುತ್ತಿದೆ. ಕಾಂಗ್ರೆಸ್ ಈ ಭಯೋತ್ಪಾದನೆಯ ಸಂಚುಕೋರರ ಪರವಾಗಿ ನಿಂತಿದೆ. ಇಷ್ಟು ಮಾತ್ರವಲ್ಲದೇ, ಈ ಸಂಚುಕೋರರ ಜತೆಗೆ ಹಿಂಬಾಗಿಲು ರಾಜಕೀಯ ಒಪ್ಪಂದ ಮಾಡಿಕೊಳ್ಳುತ್ತಿದೆ. ಹಾಗಾಗಿ, ಕರ್ನಾಟಕ ಜನರು ಈ ಕಾಂಗ್ರೆಸ್ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಸುಡಾನ್ ಸಂಘರ್ಷದಲ್ಲೂ ರಾಜಕೀಯ
ನಾನೊಂದು ಗಂಭೀರ ವಿಷಯ ಹೇಳುತ್ತೇನೆ. ಇದು ಗಂಭೀರ ವಿಷಯವಾಗಿದೆ. ಸುಡಾನ್‌ನಲ್ಲಿ ಯುದ್ಧ ನಡೆದಿದೆ. ಸಾವಿರಾರು ಭಾರತೀಯರು ಸುಡಾನ್‌ನಲ್ಲಿ ಸಿಲುಕಿದ್ದರು. ಬಹು ದೊಡ್ಡ ದೊಡ್ಡ ದೇಶಗಳ ತಮ್ಮ ನಾಗರಿಕರನ್ನು ವಾಪಸ್ ಕರೆ ತರಲು ಮುಂದಾಗಲಿಲ್ಲ. ಆದರೆ, ಭಾರತವು ಆಪರೇಷನ್ ಕಾವೇರಿ ಮೂಲಕ ಭಾರತೀಯರನ್ನು ರಕ್ಷಣೆ ಮಾಡಿದೆ. ಇದರಲ್ಲಿ ಕರ್ನಾಟಕದ ಹಕ್ಕಿ ಪಿಕ್ಕಿ, ಆದಿವಾಸಿ ಸಮುದಾಯವರಿದ್ದಾರೆ. ಕಾಂಗ್ರೆಸ್ ಈ ವಿಷಯದಲ್ಲೂ ರಾಜಕೀಯ ಮಾಡಿತು. ಸುಡಾನ್‌ನಲ್ಲಿ ಯಾವೆಲ್ಲ ಭಾರತೀಯರಿದ್ದಾರೆಂಬುದನ್ನು ಬಹಿರಂಗಪಡಿಸಿತು. ಹೀಗೆ ಮಾಡುವುದರಿಂದ ಏನಾದರೂ ಅವಘಡ ಸಂಭವಿಸಿದರೆ, ಅದರಿಂದ ಕರ್ನಾಟಕದಲ್ಲಿ ರಾಜಕಾರಣ ಮಾಡಲು ಮುಂದಾಗಿತ್ತು ಎಂದು ಸಿದರಾಮಯ್ಯ ಅವರು ಟ್ವೀಟ್ ಹೆಸರಿಸದೇ ಮೋದಿ ಅವರು ಟೀಕಿಸಿದರು.
ಆದಿವಾಸಿ ಮಹಿಳಾ ಅಭ್ಯರ್ಥಿಗೆ ಕಾಂಗ್ರೆಸ್ ವಿರೋಧ
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆದಿವಾಸಿಗಳ ಕೊಡುಗೆ ಬಹಳ ದೊಡ್ಡಿದಿದೆ. ಆದರೆ, ಆ ವಿಷಯವು ಜನರ ಮುಂದೆ ಬರದಂತೆ ನೋಡಿಕೊಳ್ಳಲು ಕಾಂಗ್ರೆಸ್ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ಆದಿವಾಸಿಗಳ ಉನ್ನತಿ ಕಾಂಗ್ರೆಸ್‌ಗೆ ಬೇಕಾಗಿಲ್ಲ. ಬಿಜೆಪಿಯ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಿತು. ಕಾಂಗ್ರೆಸ್ ಇದಕ್ಕೂ ವಿರೋಧ ಮಾಡಿತು. ಕಾಂಗ್ರೆಸ್ ಎಂದಿಗೂ ಆದಿವಾಸಿಗಳ ಪರವಾಗಿ ಇರಲಿಲ್ಲ. ಅಂಥ ಕಾಂಗ್ರೆಸ್ ಪಕ್ಷವನ್ನು ನೀವು ಕರ್ನಾಟಕದ ಚುನಾವಣೆಯಲ್ಲಿ ಶಿಕ್ಷಿಸಬೇಕು ಎಂದು ನರೇಂದ್ರ ಮೋದಿ ಅವರು ಹೇಳಿದರು.
ನಮ್ಮವರ ರಕ್ಷಣೆಗೆ ನಾನು ಸಿದ್ಧ
ಸುಡಾನ್‌ನಲ್ಲಿ ಕನ್ನಡಿಗರಿದ್ದಾರೆಂಬುದನ್ನು ಬಹಿರಂಗಪಡಿಸುವ ಮೂಲಕ ಬಿಕ್ಕಟ್ಟನ್ನು ಸೃಷ್ಟಿಸಲು ಹೊರಟ್ಟಿತ್ತು ಎಂದು ಆರೋಪಿಸಿದ ನರೇಂದ್ರ ಮೋದಿ ಅವರು, ಭಾರತೀಯ ಸಂಕಟ ದೂರ ಮಾಡಲು ಈ ಮೋದಿ ಯಾವ ಹಂತಕ್ಕಾದರೂ ಹೋಗುತ್ತಾರೆಂದು ಹೇಳಿಕೊಂಡರು. ಆಪರೇಷನ್ ಕಾವೇರಿ ಮೂಲಕ ಭಾರತೀಯರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಅದೇ ರೀತಿ, ಈ ಹಿಂದೆ ಯೆಮೆನ್, ಆಫ್ಘಾನಿಸ್ತಾನ್, ಉಕ್ರೇನ್, ಇರಾಕ್‌ನಲ್ಲೂ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದಾಗ, ಸಾವಿರಾರು ಭಾರತೀಯರನ್ನು ಬಿಜೆಪಿ ಸರಕಾರ ರಕ್ಷಣೆ ಮಾಡಿದೆ. ಪಾಕಿಸ್ತಾನದಲ್ಲಿ ನಮ್ಮ ಯೋಧ ಅಭಿನಂದನ್ ಸಿಲುಕಿದಾಗ ಒಂದೇ ಗಂಟೆಯಲ್ಲಿ ಅವರನ್ನು ಭಾರತಕ್ಕೆ ವಾಪಸ್ ಕರೆಯಿಸಿಕೊಳ್ಳಲಾಯಿತು ಎಂದು ಮೋದಿ ತಮ್ಮ ಸಾಧನೆಯ ಬೆನ್ನಚಪ್ಪರಿಸಿಕೊಂಡರು.