ಚಿತ್ರದುರ್ಗ: ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಬುಧವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಿಯಾಂಕಾ ವಾದ್ರಾ ಭಾರಿ ಪ್ರಚಾರ ಕೈಗೊಂಡರು. ಚಿತ್ರದುರ್ಗದಲ್ಲಿ ರೋಡ್ ಶೋ ನಡೆಸಿದ ಬಳಿಕ ಹಿರಿಯೂರಿಗೆ ತೆರಳಿದ ಅವರು ಕಾಡುಗೊಲ್ಲ ಸಮುದಾಯದ ಮುಖಂಡರು, ನಾಗರಿಕರ ಜತೆ ಸಂವಾದ ನಡೆಸಿದರು. ಇದಕ್ಕೂ ಮೊದಲು ಚಿತ್ರದುರ್ಗದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ್ದು ಗಮನ ಸೆಳೆಯಿತು.
ಎಲ್ಲರಿಗೂ ನಮಸ್ಕಾರ ಎನ್ನುತ್ತಲೇ ಕಾಂಗ್ರೆಸ್ ಕಾರ್ಯಕರ್ತರು ಜೋರಾಗಿ ಘೋಷಣೆ ಕೂಗಿದರು. ಭಾಷಣ ಆರಂಭಿಸಿದ ಪ್ರಿಯಾಂಕಾ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. “ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಧಿಕಾರ ಕೊಡಿ. ಮೂರುವರೆ ವರ್ಷದಲ್ಲಿ ಸರ್ಕಾರ ರಾಜ್ಯದ ಜನರಿಗೆ ಏನು ಕೊಟ್ಟಿದೆ? ಈ ಸರ್ಕಾರದಿಂದ ಬೆಲೆ ಏರಿಕೆಯಾಗಿದೆ, ಉದ್ಯೋಗ ಸಿಕ್ಕಿ. ನಿಮ್ಮ ಜೀವನದಲ್ಲಿ ಕಷ್ಟಗಳೇ ತುಂಬಿವೆ. 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುವ ಸರ್ಕಾರ ಯಾವುದು ಅಂದರೆ ಅದು ಬಿಜೆಪಿ. ಹಾಗಾಗಿ, ಈ ಬಾರಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್‌ಅನ್ನು ಗೆಲ್ಲಿಸಿ” ಎಂದು ಕರೆ ನೀಡಿದರು. ಹಾಗೆಯೇ, ಜೈ ಕರ್ನಾಟಕ, ಜೈ ಕರ್ನಾಟಕ ಎಂದು ಭಾಷಣ ಮುಗಿಸಿದರು.
ಕಾಡುಗೊಲ್ಲರಿಂದ ಸ್ವಾಗತ, ಕುರಿ ಉಡುಗೊರೆ
ಚಿತ್ರದುರ್ಗದ ಹಿರಿಯೂರಿನಲ್ಲಿ ಕಾಡುಗೊಲ್ಲರೊಂದಿಗೆ ಸಂವಾದ ನಡೆಸಲು ಆಗಮಿಸಿದ ಪ್ರಿಯಾಂಕಾ ವಾದ್ರಾ ಅವರಿಗೆ ಕಾಡುಗೊಲ್ಲರಿಂದ ಅದ್ಧೂರಿಯಾಗಿ ಸ್ವಾಗತ ದೊರೆಯಿತು. ಪ್ರಿಯಾಂಕಾ ವಾದ್ರಾ ಅವರಿಗೆ ಕುರಿ ಉಡುಗೊರೆ ನೀಡಿ, ಕರಿಕಂಬಳಿ ಹಾಕಿ, ಕಾಡುಗೊಲ್ಲರ ಹಾಡಿನೊಂದಿಗೆ ಅವರನ್ನು ಸ್ವಾಗತಿಸಲಾಯಿತು.
ಜನರ ಮಧ್ಯೆ ಬಂದು ವಾದ್ರಾ ಸಂವಾದ
ಕಾಡುಗೊಲ್ಲರೊಂದಿಗೆ ಸಂವಾದ ನಡೆಸುವ ವೇಳೆ ಪ್ರಿಯಾಂಕಾ ವಾದ್ರಾ, ವೇದಿಕೆ ಮೇಲಿನಿಂದ ಇಳಿದು, ಜನರ ಮಧ್ಯೆ ಬಂದು ಸಂವಾದ ನಡೆಸಿದರು. ಅವರು ಕೆಳಗೆ ಇಳಿದು ಜನರತ್ತ ತೆರಳುವಾಗ ಭದ್ರತಾ ಸಿಬ್ಬಂದಿಯು ಅವರನ್ನು ತಡೆದರು.
ಆದರೂ ಪ್ರಿಯಾಂಕಾ ವಾದ್ರಾ ಅವರು ಜನರ ಬಳಿ ತೆರಳಿದರು. ನಾನು ಜನರ ಬಳಿ ಇರಬೇಕು, ಕಾಡುಗೊಲ್ಲರು ಕೂಡ ನಮ್ಮವರೇ. ನಾನು ಜನರ ಮಧ್ಯೆ ಇರಲು ಬಯಸುತ್ತೇನೆ ಎಂದು ಭದ್ರತಾ ಸಿಬ್ಬಂದಿಗೆ ಹೇಳಿ, ಅವರು ಜನರ ಮಧ್ಯೆ ತೆರಳಿ ಸಂವಾದ ನಡೆಸಿದರು.
ಇದನ್ನೂ ಓದಿ: Karnataka Election 2023: ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ, ಪ್ರಿಯಾಂಕಾ ವಾದ್ರಾ ಭರವಸೆ