ಚಿತ್ರದುರ್ಗ: ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ (Karnataka Election 2023) ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಮಾಜಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಜೆಡಿಎಸ್ ಸೇರುವುದು ಖಚಿತ ಪಟ್ಟಿದೆ. ತಮಗೆ ಟಿಕೆಟ್ ನೀಡದೆ ವಂಚಿಸಿರುವ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಸೋಲಿಸಲು ಅವರೀಗ ಪಣತೊಟ್ಟಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿ ತಾವು ಮಾತ್ರ ಕಣಕ್ಕಿಳಿಯುವುದಲ್ಲದೆ, ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಿಂದಲೂ ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿಯುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಇದು ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸೋಮವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅವರು ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ರವಾನಿಸಿದ್ದಾರೆ. ಸಣ್ಣ ಸಮುದಾಯದ ನಾಯಕನೆಂದು ಪಕ್ಷ ತಮ್ಮನ್ನು ಕಡೆಗಣಿಸಿದೆ, ಇದರಿಂದ ಮನನೊಂದು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಮೂಲಗಳ ಪ್ರಕಾರ ಕಾಂಗ್ರೆಸ್ ತೊರೆದಿರುವ ರಘು ಆಚಾರ್ ಏಪ್ರಿಲ್ 14 ರಂದು ಜೆಡಿಎಸ್ ಸೇರಲಿದ್ದು, ಅಧಿಕೃತವಾಗಿ ಪ್ರಚಾರ ಆರಂಭಿಸಲಿದ್ದಾರೆ. ಈ ನಡುವೆ ತಮ್ಮೊಂದಿಗೆ ಜಿಲ್ಲೆಯ ಹಲವು ಕಾಂಗ್ರೆಸ್ ನಾಯಕರನ್ನೂ ಜಿಡಿಎಸ್‌ಗೆ ಕರೆದುಕೊಂಡು ಹೋಗಲು ಅವರು ತೀರ್ಮಾನಿಸಿದ್ದು, ಅನೇಕರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.
ಯೋಗೀಶ್ ಬಾಬು ಸೇರ್ಪಡೆ ಖಚಿತ
ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಮುಖಂಡ ಯೋಗೀಶ್ ಬಾಬು ಅವರೊಂದಿಗೆ ಈಗಾಗಲೇ ರಘು ಆಚಾರ್ ಮಾತುಕತೆ ನಡೆಸಿದ್ದು, ಅವರನ್ನು ಜೆಡಿಎಸ್‌ಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ.
ಮಂಗಳವಾರ ಮೊಳಕಾಲ್ಮೂರಿನಲ್ಲಿಯೇ ಯೋಗೀಶ್ ಬಾಬು ಅವರನ್ನು ಭೇಟಿ ಮಾಡಲಿರುವ ರಘು ಆಚಾರ್ ಅವರ ಪಕ್ಷ ಸೇರ್ಪಡೆಯನ್ನೂ ಅಂತಿಮಗೊಳಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : Karnataka Election 2023 : ಪ್ರಚಾರಕ್ಕೆ ಬಂದ ನಿಖಿಲ್‌ಗೆ ಮಹಿಳೆಯರ ತರಾಟೆ; ವಿಡಿಯೋ ವೈರಲ್