ಬೆಂಗಳೂರು: ಕಾಂಗ್ರೆಸ್ ನಾಯಕರು ನಿನ್ನೆ ತಡರಾತ್ರಿವರೆಗೂ ದಿಡೀರ್ ರಹಸ್ಯ ಸಭೆ ನಡೆಸಿದ್ದು ಕುತೂಹಲ ಮೂಡಿಸಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಚರ್ಚೆ ನಡೆಸಿದ್ದಾರೆ.
ಮುಂಜಾನೆ ಮೂರು ಗಂಟೆಯವರೆಗೂ ಸುದೀರ್ಘವಾಗಿ ಸಭೆ ನಡೆದಿದೆ. ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಲಿಂಗಾಯತ ವಿರೋಧಿ ಅಸ್ತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದೆ. ಇದಕ್ಕೆ ಯಾವ ರೀತಿ ಕೌಂಟರ್ ಕೊಡಬೇಕು ಎಂಬುದನ್ನು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿಯಿಂದ ಲಿಂಗಾಯತ ನಾಯಕರಿಗೆ ಅವಮಾನ ಆಗಿದೆ ಎಂಬುದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರ ಮುಂದಿಡಬೇಕು. ಕಾಂಗ್ರೆಸ್ ನಾಯಕರೆಲ್ಲರೂ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವುದರಿಂದ ಬಿಜೆಪಿ ವಿರುದ್ಧ ಕೌಂಟರ್ ಕೊಡುವುದು ಕಷ್ಟಸಾಧ್ಯವಾಗುತ್ತಿದೆ. ಅದರಲ್ಲೂ ಕೇಂದ್ರಸ್ಥಾನ ಬೆಂಗಳೂರಿನಲ್ಲಿ ಪರಿಣಾಮಕಾರಿಯಾಗಿ ತಿರುಗೇಟು ನೀಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಏನು ಮಾಡಬೇಕೆಂಬ ಕುರಿತು ಚರ್ಚೆ ನಡೆಯಿತು.
ಕ್ಷೇತ್ರಕ್ಕೆ ಸೀಮಿತರಾದ ನಾಯಕರು
ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಆಕ್ಟಿವ್ ಆಗಿದ್ದರೂ, ಹಲವು ಹಿರಿಯ ನಾಯಕರು ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ. ಕ್ಷೇತ್ರವಾರು ಪ್ರಚಾರಕ್ಕಿಳಿದಿರುವ ಕೆಪಿಸಿಸಿ ಹಾಗೂ ಎಐಸಿಸಿ ನಾಯಕರು ಸ್ವ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಜಿಲ್ಲೆಗಳ ಜವಾಬ್ದಾರಿ ಸದ್ಯ ಪಕ್ಕಕ್ಕಿಟ್ಟು ಸ್ವ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ.
ಮೊದಲು ತಾವು ಗೆಲ್ಲಬೇಕು, ನಂತರ ಇನ್ನೊಬ್ಬರ ಚಿಂತೆ, ಶಾಸಕರಾದರೆ ಮಾತ್ರ ಪಕ್ಷ ಅಧಿಕಾರಕ್ಕೆ ಬಂದಾಗ ಸ್ಥಾನಮಾನಕ್ಕೆ ಕ್ಲೇಮ್ ಮಾಡಬಹುದು ಎಂಬ ಲೆಕ್ಕಾಚಾರ ನಾಯಕರದಾಗಿದ್ದು, ಹೀಗಾಗಿ ಮೊದಲು ತಾವು ಗೆಲ್ಲುವ ಲೆಕ್ಕಾಚಾರದಲ್ಲಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ. ಡಾ.ಜಿ ಪರಮೇಶ್ವರ, ಎಚ್. ಕೆ ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಕೆ.ಎಚ್ ಮುನಿಯಪ್ಪ, ರಮೇಶ್ ಕುಮಾರ್, ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ ಸೇರಿದಂತೆ ಇನ್ನೂ ಕೆಲ ನಾಯಕರು ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ.
ಆದರೆ ಕಾಂಗ್ರೆಸ್ ವರಿಷ್ಠರು ಕ್ಷೇತ್ರವಾರು ಹಂಚಿಕೆ ಮಾಡಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಡಿ.ಕೆ ಶಿವಕುಮಾರ್ 65-70, ಸಿದ್ದರಾಮಯ್ಯ 60-65, ರಾಹುಲ್ ಗಾಂಧಿ 30, ಪ್ರಿಯಾಂಕಾ ಗಾಂಧಿ 30, ಮಲ್ಲಿಕಾರ್ಜುನ ಖರ್ಗೆ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಕ್ಯಾನ್ವಾಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Karnataka Election 2023: ಸ್ಪರ್ಧೆಯಿಂದ ಹಿಂದೆ ಸರಿಯದಿದ್ದರೆ ಕ್ರಮ; ಬಂಡಾಯ ಅಭ್ಯರ್ಥಿಗಳಿಗೆ ಡಿಕೆಶಿ ಎಚ್ಚರಿಕೆ