ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿರುವ ಸ್ವಾಮೀಜಿಗಳು ಆಶೀರ್ವಾದ ನೀಡಿದ್ದಲ್ಲದೆ, ಮುಂದೆ ರಾಜಕೀಯದಲ್ಲಿ ಭವಿಷ್ಯ ಉಜ್ವಲವಾಗಿದೆ ಎಂದು ಹರಸಿದ್ದಾರೆ. ಅಲ್ಲದೆ, ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಕೆ.ಎಸ್. ಈಶ್ವರಪ್ಪ ಅವರೇ ಸ್ಪರ್ಧೆ ಮಾಡಲಿ, 2028ಕ್ಕೆ ಕಾಂತೇಶ್ ರಾಜಕೀಯ ಪ್ರವೇಶ ಮಾಡುವಂತೆ ಸಲಹೆಯನ್ನೂ ನೀಡಿದ್ದಾರೆ. ಹೊಸದುರ್ಗದ ಈಶ್ವರಾನಂದ ಪುರಿ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ಜಡೆ ಹಿರೇಮಠದ ಮಹಾಂತ ಸ್ವಾಮೀಜಿಯವರು ಈಶ್ವರಪ್ಪ ಮನೆಗೆ ಭೇಟಿ ನೀಡಿ ಹಾರೈಸಿದ್ದಾರೆ.
ಹೊಸದುರ್ಗದ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ಕಾಂತೇಶ್ ಅವರಿಗೆ ಜನರ ಸೇವೆ ಮಾಡುವ ಅವಕಾಶ ಸಿಗಲಿ. ಈ ಬಾರಿ ಈಶ್ವರಪ್ಪ ಅವರು ಚುನಾವಣೆಗೆ ನಿಂತು ಶಾಸಕರಾಗಲಿ. 2028ಕ್ಕೆ ಕಾಂತೇಶ್ ರಾಜಕಾರಣಕ್ಕೆ ಬರಲಿ. ಈ ಮಾತನ್ನು ನಾನು, ಮಾದಾರ ಚನ್ನಯ್ಯ ಶ್ರೀಗಳು ಈಶ್ವರಪ್ಪ ಅವರಿಗೆ ಹೇಳಿದ್ದೇವೆ. ಕಾಂತೇಶ್ ಅವರನ್ನೂ ಒಪ್ಪಿಸಿದ್ದೇವೆ. ಶ್ರೀ ಮಠದ ಶ್ರೀರಕ್ಷೆ ಕಾಂತೇಶ್ ಅವರಿಗಿದೆ. ನೀನು ಮುನ್ನುಗ್ಗಬೇಕು, ಯಾವುದಕ್ಕೂ ಹಿಂಜರಿಯುವುದು ಬೇಡ ಎಂಬುದಾಗಿ ಹೇಳಿದ್ದೇವೆ. ಕಾಂತೇಶ್ ಅವರನ್ನು ಶಾಸಕರಾಗಿ ನೋಡುವುದು ನಮ್ಮದೂ ಇಚ್ಛೆಯಾಗಿದೆ. ತಂದೆ ಪಕ್ಷ ಕಟ್ಟಿ, ನಾಡಿನ ಅಭಿವೃದ್ಧಿ ಮಾಡಿದಂತೆ ಕಾಂತೇಶ್ ಕೂಡ ಬೆಳೆಯಲಿ ಎಂದು ಹೇಳಿದರು.
ಇದನ್ನೂ ಓದಿ: Karnataka Elections : ಹೆಂಡ್ತಿ, ಮಗನ ಜತೆ ಕೇಳಿ ಹೇಳ್ತೇನೆ; ಕೋಲಾರದ ಜನರಿಗೆ ಸಿದ್ದರಾಮಯ್ಯ ಸಮಾಧಾನ!
ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಈಶ್ವರಪ್ಪ ಕುಟುಂಬದವರು ನಮ್ಮ ಮಠಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಅವರಿಂದ ನಾಡಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಅವರ ಪ್ರೀತಿಗೆ ನಾವಿಂದು ಇಲ್ಲಿ ಬಂದಿದ್ದೇವೆ. ಸೇವಾ ಕಾರ್ಯಕ್ರಮದ ಮೂಲಕ ಜನ್ಮದಿನ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಕಾಂತೇಶ್ ಭವಿಷ್ಯದ ನಾಯಕನಾಗಿ ಬೆಳೆಯಲಿ ಎಂದು ಹಾರೈಸಿದರು.
ಜಡೆ ಹಿರೇಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಹುಟ್ಟುಹಬ್ಬ ಎಂಬುದು ನೆಪ ಅಷ್ಟೇ. ಆ ನೆಪದಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿಕೊಂಡಿದ್ದಾರೆ. ಕಾಂತೇಶ್ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ನನ್ನ ಮಗ ಕಾಂತೇಶ್ ಹುಟ್ಟುಹಬ್ಬಕ್ಕೆ ಶ್ರೀಗಳು, ತಾಯಂದಿರು ಬಂದಿರುವುದು ನನ್ನ ಪುಣ್ಯ. ನಿಮ್ಮೆಲ್ಲರ ಆಶೀರ್ವಾದ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಸದಾ ಇರಲಿ. ಕಾಂತೇಶ್ ಸಹ ನಾಡಿನ ಸೇವೆಯನ್ನು ಮಾಡುವಂತಾಗಲಿ. ಇದಕ್ಕೆ ಎಲ್ಲರ ಆಶೀರ್ವಾದವನ್ನು ಕೇಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Mehul Choksi : ವಂಚಕ ಮೆಹುಲ್ ಚೋಕ್ಸಿ ವಿರುದ್ಧದ ರೆಡ್ ಕಾರ್ನರ್ ನೋಟಿಸ್ ರದ್ದು, ಸಿಬಿಐಗೆ ಹಿನ್ನಡೆ
ಭಗವಂತನ ರೂಪದಲ್ಲಿ ಮೂವರು ಶ್ರೀಗಳು ಆಶೀರ್ವದಿಸಿದ್ದಾರೆ. ಅನೇಕ ವರ್ಷಗಳಿಂದ ಯುಗಾದಿಯನ್ನು ನಮ್ಮ ಮನೆಯಲ್ಲಿ ಆಚರಣೆ ಮಾಡುತ್ತಿಲ್ಲ. ತಾತನ ಕಾಲದಿಂದಲೂ ಅದು ನಡೆದುಕೊಂಡು ಬಂದಿದೆ ಎಂದು ಕೆ.ಇ. ಕಾಂತೇಶ್ ಹೇಳಿದರು.
ಹಿಂದೆ ಎಂಎಲ್‌ಸಿ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಾಯ ಕೇಳಿಬಂದಿತ್ತು. ರಾಣೆಬೆನ್ನೂರು ಕ್ಷೇತ್ರದಲ್ಲಿ ಉಪ ಚುನಾವಣೆಗೂ ಸ್ಪರ್ಧೆ ಮಾಡುವಂತೆ ಒತ್ತಾಯವಿತ್ತು. ಎರಡೂ ಬಾರಿ ತಂದೆ ಈಶ್ವರಪ್ಪ ಬೇಡ ಎಂದು ಹೇಳಿದರು. ಎಲ್ಲಿಯವರೆಗೆ ನಾನು ರಾಜಕಾರಣದಲ್ಲಿ ಇರುತ್ತೇನೆಯೋ ಅಲ್ಲಿಯವರೆಗೆ ನೀನು ರಾಜಕಾರಣಕ್ಕೆ ಬರಬಾರದು ಎಂದು ಹೇಳಿದ್ದಾಗಿ ಕಾಂತೇಶ್ ತಿಳಿಸಿದರು.
ಈಶ್ವರಪ್ಪ ಅವರಿಗೆ 74 ವರ್ಷ ಆಗಿದೆ. ಟಿಕೆಟ್ ಕೊಡಲ್ಲ ಎಂಬ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂತೇಶ್, ನನಗೆ ವಿಶ್ವಾಸವಿದೆ, ಹೈಕಮಾಂಡ್ ಈಶ್ವರಪ್ಪ ಕೈ ಬಿಡಲ್ಲ. 43ರ ಹೊಸ್ತಿಲಲ್ಲಿ ಇದ್ದೇನೆ. ಮುಂದೇನಾಗುತ್ತೋ ಗೊತ್ತಿಲ್ಲ. ಆದರೆ ನಿಮ್ಮೆಲ್ಲರ ಆಶೀರ್ವಾದದಿಂದ ರಾಜಕೀಯ ಭವಿಷ್ಯ ಇದೆ ಎಂಬ ಭರವಸೆ ಇದೆ ಎಂದು ಹೇಳಿದರು.
ಇದನ್ನೂ ಓದಿ: Karnataka Congress: ಅಮಾವಾಸ್ಯೆ ಕಾರಣಕ್ಕೆ ಚಿಂಚನಸೂರು ಕೈ ಸೇರ್ಪಡೆ ಮುಂದೂಡಿಕೆ: ಇತರೆ ದಲಿತ ಮುಖಂಡರು ಸೇರ್ಪಡೆ
ಈಶ್ವರಪ್ಪ ಅವರು ಆಜಾನ್ ಕುರಿತಾಗಿ ನೀಡಿರುವ ಹೇಳಿಕೆಗೆ ವಿರೋಧ ಆಗಿತ್ತು. ಅವರು ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಮಾತನಾಡಿದ್ದರು. ಆಜಾನ್, ಭಜನೆಯನ್ನು ಎಲ್ಲಿ ಮಾಡಬೇಕು ಎಂಬುದನ್ನು ನಾವು ತಿಳಿದುಕೊಂಡಿರಬೇಕು ಎಂದು ಹೇಳಿದರು.