Site icon Vistara News

ವಿಜಯನಗರ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕೈ-ಕಮಲ ಮಧ್ಯೆ ಜೋರು ಫೈಟ್, ಯಾರಿಗೆ ಗೆಲುವಿನ ಸ್ವೀಟ್?

Karnataka Election 2023: Tough Competition between congress and BJP in Vijayanagara district

ಪಾಂಡುರಂಗ ಜಂತ್ಲಿ, ವಿಸ್ತಾರನ್ಯೂಸ್, ಹೊಸಪೇಟೆ
ಹೊಸ ಜಿಲ್ಲೆ ವಿಜಯನಗರದಲ್ಲಿ ಈಗ ಚುನಾವಣೆ ಭರಾಟೆ ಜೋರಾಗಿದೆ. ನೆತ್ತಿ ಸುಡುವ ಸೂರ್ಯನ ಬಿಸಿಲಿಗೆ ಸವಾಲೊಡ್ಡುವ ರೀತಿ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಅಭ್ಯರ್ಥಿಗಳು ಮತಬೇಟೆಗೆ ಇಳಿದಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 3, ಬಿಜೆಪಿ 2 ಕ್ಷೇತ್ರಗಳಲ್ಲಿ ಗೆದ್ದಿತ್ತು. ವಿಜಯನಗರದಲ್ಲಿ ಆನಂದ್ ಸಿಂಗ್ ರಾಜಿನಾಮೆ ನೀಡಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ಬಳಿಕ ದಾವಣಗೆರೆಯಿಂದ ಮರಳಿ ತವರು ಜಿಲ್ಲೆ ಸೇರಿರುವ ಹರಪನಹಳ್ಳಿ ಕ್ಷೇತ್ರ ಸೇರಿ ಮೂರರಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ(Karnataka Election 2023).

ವಿಜಯನಗರ ಜಿಲ್ಲೆ ಮೊದಲು ಅಖಂಡ ಬಳ್ಳಾರಿ ಜಿಲ್ಲೆಯ ಭಾಗವಾಗಿತ್ತು. ಜಿಲ್ಲೆ ವಿಭಜನೆ ಬಳಿಕ ಹೊಸ ಜಿಲ್ಲೆಯಲ್ಲಿ ಮೊದಲ ಸಲ ಚುನಾವಣೆ ನಡೆಯುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಾಗಿ ಕಾಂಗ್ರೆಸ್ ಜಯದ ಇತಿಹಾಸವನ್ನು ಹೊಂದಿದೆ. 1994ರಲ್ಲಿ ಬಿಜೆಪಿ ಅಖಂಡ ಜಿಲ್ಲೆಯಲ್ಲಿ ಹೊಸಪೇಟೆ ಕ್ಷೇತ್ರದಲ್ಲಿ ಮೊದಲ ಬಾರಿ ಜಯದ ನಗೆ ಬೀರಿತ್ತು.

ಹೂವಿನಹಡಗಲಿ ಕ್ಷೇತ್ರವನ್ನು ಪ್ರಜ್ಞಾವಂತ ಮತದಾರರ ಕ್ಷೇತ್ರ ಎಂದೇ ಕರೆಯಲಾಗುತ್ತದೆ. ಒಮ್ಮೆ ಗೆದ್ದವರಿಗೆ ಮರಳಿ ಅಧಿಕಾರವನ್ನು ಇಲ್ಲಿನ ಮತದಾರರ ಕೊಟ್ಟಿಲ್ಲ. ಆದರೆ, 1983, 1985ರಲ್ಲಿ ಎಂ.ಪಿ.ಪ್ರಕಾಶ ಮತ್ತು 2013, 2018ರಲ್ಲಿ ಪಿ.ಟಿ.ಪರಮೇಶ್ವರ ನಾಯ್ಕ ಅವರಿಗೆ ಮಾತ್ರ ಹೂವಿನ ಹಡಗಲಿ ಮತದಾರರು ಎರಡೆರಡು ಬಾರಿ ಆಯ್ಕೆ ಮಾಡಿದ್ದಾರೆ. ಇನ್ನೂ ಇಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತ ನಡೆಸುತ್ತದೆ ಎಂಬ ಮಾತು ಈಗಲೂ ಪ್ರಚಲಿತದಲ್ಲಿದೆ. 2008ರಲ್ಲಿ ಬಿಜೆಪಿ ಗೆದ್ದಾಗ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬಳಿಕ 2013ರಲ್ಲಿ ಕಾಂಗ್ರೆಸ್ ಹಾಗೂ 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಬಂದಿತ್ತು.

ಹೂವಿನಹಡಗಲಿ: ಕಾಂಗ್ರೆಸ್‌ ಹ್ಯಾಟ್ರಿಕ್‌ಗೆ ಬಿಜೆಪಿ ತಡೆಯೊಡ್ಡಬಲ್ಲದೇ?

ಸ್ಸಿ ಮೀಸಲು ಕ್ಷೇತ್ರವಾಗಿರುವ ಮಲ್ಲಿಗೆ ನಾಡಿನಲ್ಲಿ ಹಾಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರು 2008ರಲ್ಲಿ ಸೋತು, 2013, 2018ರಲ್ಲಿ ಗೆದ್ದು ಈಗ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ ಮಾಜಿ ಶಾಸಕ ಚಂದ್ರಾನಾಯ್ಕ ಸೇರಿ ಹತ್ತಾರು ಆಕಾಂಕ್ಷಿಗಳನ್ನು ಬಿಟ್ಟು ಅಚ್ಚರಿಯ ಅಭ್ಯರ್ಥಿ ಕೃಷ್ಣಾನಾಯ್ಕ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇದೇ ಕಾರಣಕ್ಕೆ ಕೆಲ ಆಕಾಂಕ್ಷಿಗಳು, ಮುಖಂಡರು, ಸಾವಿರಾರು ಕಾರ್ಯಕರ್ತರು ಪಕ್ಷ ತೊರೆದು ಪಿಟಿಪಿ ಕೈ ಹಿಡಿದಿದ್ದಾರೆ. ಜೆಡಿಎಸ್‌ನಿಂದ ಪುತ್ರೇಶ್ ಕಣದಲ್ಲಿದ್ದು, ಬಿಜೆಪಿ ಅಂತರಿಕ ಸಮಸ್ಯೆಗಳಿದ್ದರೂ ಕಾಂಗ್ರೆಸ್‌ನೊಂದಿಗೆ ನೇರ ಜಿದ್ದಾಜಿದ್ದಿ ನಡೆಯುವ ಸಾಧ್ಯತೆಗಳಿವೆ.

ಕಳೆದ ಬಾರಿ ಚುನಾವಣೆ ಫಲಿತಾಂಶ: ಪಿ.ಟಿ.ಪರಮೇಶ್ವರನಾಯ್ಕ(ಕಾಂಗ್ರೆಸ್) 54,097 ಓದೋ ಗಂಗಪ್ಪ (ಬಿಜೆಪಿ)- 44,919. ಗೆಲುವಿನ ಅಂತರ – 9178 ಮತಗಳು

ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ

ಸ್ಸಿ ಕ್ಷೇತ್ರದಲ್ಲಿ ಹಾಲಿ ಶಾಸಕ ಎಲ್.ಬಿ.ಪಿ.ಭೀಮಾನಾಯ್ಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 2013ರಲ್ಲಿ ಜೆಡಿಎಸ್‌ನಿಂದ ಬಿಜೆಪಿ ವಿರುದ್ಧ ಕೇವಲ 125 ಮತಗಳ ಅಂತರದಲ್ಲಿ ಜಯಗಳಿಸಿದ್ದ ಅವರು 2018ರಲ್ಲಿ ಕಾಂಗ್ರೆಸ್ ಸೇರಿ ಗೆದ್ದಿದ್ದರು. ಈ ಸಲ ಮತ್ತೆ ಕಣದಲ್ಲಿದ್ದು, ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣ ಕಣ್ಣೀರು ಹಾಕಿದ್ದ ಮಾಜಿ ಶಾಸಕ ನೇಮರಾಜ ನಾಯ್ಕ ಪಕ್ಷಾಂತರ ಮಾಡಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಬಂಡಾಯ ಎದುರಿಸುತ್ತಿರುವ ಬಿಜೆಪಿ ಇಲ್ಲಿ ಕೂಡ ಅಚ್ಚರಿಯ ರೀತಿ ಬಲ್ಲಹುಣ್ಸಿ ರಾಮಣ್ಣ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಭದ್ರಕೋಟೆಯನ್ನು ಚಿದ್ರಗೊಳಿಸಿ ಹತ್ತು ವರ್ಷಗಳ ಬಳಿಕ ಕಮಲ ಅರಳಿಸಲು ಪ್ರತಿಷ್ಠೆಗೆ ಬಿಜೆಪಿ ಬಿದ್ದಿದೆ. ಹೀಗಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಕಳೆದ ಚುನಾವಣೆ ಫಲಿತಾಂಶ: ಭೀಮಾನಾಯ್ಕ(ಕಾಂಗ್ರೆಸ್) : 77,564 – ಕೆ.ನೇಮರಾಜ ನಾಯ್ಕ(ಬಿಜೆಪಿ)-71,105 ಅಂತರ : 7,232 ಮತಗಳು

ವಿಜಯನಗರ: ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ

ಚಿವ ಆನಂದ್ ಸಿಂಗ್ ಈ ಕ್ಷೇತ್ರದಲ್ಲಿ 2008ರಿಂದ ನಾಲ್ಕು ಬಾರಿ ಎದುರಿಸಿ ಸೋಲಿಲ್ಲದ ಸರದಾರ ಆಗಿದ್ದಾರೆ. ಆದರೆ, ಈ ಬಾರಿ ಕ್ಷೇತ್ರ ತ್ಯಾಗ ಮಾಡಿ ಪುತ್ರ ಸಿದ್ಧಾರ್ಥ ಸಿಂಗ್ ಠಾಕೂರ್ ನನ್ನು ಕಣಕ್ಕಿಳಿಸಿದ್ದಾರೆ. 2004ರಲ್ಲಿ ಪಕ್ಷೇತರ ಶಾಸಕರಾಗಿದ್ದ ಎಚ್.ಆರ್.ಗವಿಯಪ್ಪ ಈಗ ಕಾಂಗ್ರೆಸ್ ಅಭ್ಯರ್ಥಿ. ಇಬ್ಬರ ನಡುವೆ ನೇರ ಪೈಪೋಟಿ ನಡೆದಿದ್ದು, 1999ರ ಬಳಿಕ ಇಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಬಿಜೆಪಿ ರಾಷ್ಟ್ರೀಯ ಮಹಿಳಾ ಕಾರ್ಯಕಾರಿಣಿ ಸದಸ್ಯೆಯಾಗಿದ್ದ ಆನಂದ್ ಸಿಂಗ್ ಸೋದರಿ ರಾಣಿಸಂಯುಕ್ತ ಟಿಕೆಟ್ ಘೋಷಣೆ ಬಳಿಕ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದಾರೆ. ಈ ನಡುವೆ ಯುವಕ ಮತ್ತು ಅನುಭವಿ ಮಧ್ಯೆ ತೀವ್ರ ಪೈಪೋಟಿಗೆ ವಿಜಯನಗರ ಸಜ್ಜಾಗಿದೆ. ವಿಜಯನಗರ ಕ್ಷೇತ್ರದಲ್ಲಿ ಘಟಾನುಘಟಿಗಳಾದ ಕಾಂಗ್ರೆಸ್ – ಬಿಜೆಪಿ ಅಭ್ಯರ್ಥಿ ವರ್ಚಸ್ಸಿನ ಮಧ್ಯೆ ಜೆಡಿಎಸ್ ಅಸ್ತಿತ್ವವನ್ನೇ ಕಳೆದುಕೊಂಡಿದೆ.

ಕಳೆದ ಚುನಾವಣೆ ಫಲಿತಾಂಶ: ಆನಂದ್ ಸಿಂಗ್(ಕಾಂಗ್ರೆಸ್) 83,214 ಮತ್ತು ಎಚ್. ಆರ್. ಗವಿಯಪ್ಪ(ಬಿಜೆಪಿ) 74,986 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ : 8,228 ಮತಗಳು.
2019ರ ಬೈ ಎಲೆಕ್ಷನ್ ರಿಸಲ್ಟ್: ಬಿಜೆಪಿಯ ಆನಂದ್ ಸಿಂಗ್ 85,477 ಮತ್ತು ಕಾಂಗ್ರೆಸಿನ ವೆಂಕಟರಾವ್ ಘೋರ್ಪಡೆ 55,352 ಮತಪಡೆದಿದ್ದರು. ಗೆಲುವಿನ ಅಂತರ: 30125 ಮತಗಳು.

ಕೂಡ್ಲಿಗಿ: ಕಾಂಗ್ರೆಸ್-ಬಿಜೆಪಿ ಪೈಪೋಟಿ, ಯಾರಿಗೆ ಜೆಡಿಎಸ್ ಏಟು?

ಸ್ಟಿ ಮೀಸಲು ಕ್ಷೇತ್ರ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ರಾಜಿನಾಮೆ ನೀಡಿ ಮೊಳಕಾಲ್ಮೂರಿನಲ್ಲಿ ಕೈ ಹಿಡಿದಿದ್ದಾರೆ. ಹಾಗಾಗಿ ಬಿಜೆಪಿ ಟಿಕೆಟ್‌ನಲ್ಲಿ ಪೈಪೋಟಿ ನಡೆದಿತ್ತು. ಕಳೆದ ಬಾರಿ ಜೆಡಿಎಸ್‌ನಿಂದ ಕಣದಲ್ಲಿದ್ದ ಮಾಜಿ ಶಾಸಕರಾಗಿದ್ದ ಎನ್.ಟಿ.ಬೊಮ್ಮಣ್ಣ ಅವರ ಪುತ್ರ ಡಾ.ಎನ್.ಟಿ.ಶ್ರೀನಿವಾಸ್ ಈಗ ಕಾಂಗ್ರೆಸ್‌ನಿಂದ ಮತ್ತು ಲೋಕೇಶ್ ವಿ.ನಾಯಕ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಕೋಡಿಹಳ್ಳಿ ಭೀಮಣ್ಣ ಅವರು ಟಕೆಟ್ ಕೈ ತಪ್ಪಿದ್ದರಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಬಂಡಾಯ ಎದುರಿಸುತ್ತಿದ್ದು, ಕ್ಷೇತ್ರದಲ್ಲಿ ಹೊರಗಿನವರಿಗೆ ಇಲ್ಲಿ ಮಣೆ ಹಾಕಲಾಗುತ್ತದೆ ಎಂಬ ಅಸಮಾಧಾನವಿದೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ್ಲಿಗಿಗೆ ಕೋಡಿಹಳ್ಳಿ ಭೀಮಣ್ಣ ಪರ ಭರ್ಜರಿ ಪ್ರಚಾರ‌ ಮಾಡಲಿದ್ದಾರೆ. ಹೀಗಾಗಿ ಪಕ್ಷದ‌ ಜೊತೆಗೆ ಅಭ್ಯರ್ಥಿಯೂ ಮತದಾರರ ಆಯ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕೂಡ್ಲಿಗಿ ಕ್ಷೇತ್ರದಲ್ಲೂ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಕಳೆದ ಚುನಾವಣೆ ಫಲಿತಾಂಶ: ಬಿಜೆಪಿಯ ಎನ್.ವೈ ಗೋಪಾಲಕೃಷ್ಣ 50,085 ಮತ್ತು ಎನ್ ಟಿ ಬೊಮ್ಮಣ್ಣ (ಜೆಡಿಎಸ್) 39272 ಮತ ಪಡೆದಿದ್ದರು. ಗೆಲುವಿನ ಅಂತರ 10,813 ಮತಗಳು

ಹರಪನಹಳ್ಳಿ: ಇತಿಹಾಸ ಬದಲಿಸುತ್ತಾರಾ ಬಿಜೆಪಿ ಅಭ್ಯರ್ಥಿ?

ನೂರ್ ಅಹಮದ್ JDS

ದಾವಣಗೆರೆ ಜಿಲ್ಲೆಯ ಭಾಗವಾಗಿದ್ದ ಈ ಕ್ಷೇತ್ರ ನೂತನ ಜಿಲ್ಲೆಯಲ್ಲಿ ಮೊದಲ ಚುನಾವಣೆಗೆ ಸಿದ್ದವಾಗಿದೆ. ಹಡಗಲಿಯ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರ ಬಳಿಕ ಇಲ್ಲಿ ಸತತ ಎರಡು ಬಾರಿ ಯಾರೂ ಗೆದ್ದಿಲ್ಲ. ಹಾಲಿ ಶಾಸಕ ಜಿ.ಕರುಣಾಕರ ರೆಡ್ಡಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದಿದ್ದು, 2008ರಲ್ಲಿ ಮಾಜಿ ಉಪ ಮುಖ್ಯಮಂತ್ರಿಯಾಗಿದ್ದ ಎಂ.ಪಿ.ಪ್ರಕಾಶ ಅವರ ವಿರುದ್ಧ ಗೆದ್ದಿದ್ರು. ಎಂ.ಪಿ ಪ್ರಕಾಶ್ ನಿಧನರಾದ ಬಳಿಕ 2013ರಲ್ಲಿ ಅವರ ಪುತ್ರ ಎಂ.ಪಿ.ರವೀಂದ್ರ ಅವರ ವಿರುದ್ಧ ಸೋತು 2018ರಲ್ಲಿ ಮತ್ತೆ ಗೆದ್ದಿದ್ದರು. ಈ ಬಾರಿ ಎಂ.ಪಿ.ಪಕಾಶ್ ಅವರ ಪುತ್ರಿ ಎಂ.ಪಿ ಲತಾ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕೆಜೆಪಿ, ಜೆಡಿಎಸ್‌ನಿಂದ ಸ್ಪರ್ಧಿಸಿ ಮತಗಳಿಕೆಯಲ್ಲಿ ಗಮನ ಸೆಳೆದಿದ್ದ ಎನ್.ಕೊಟ್ರೇಶ್ ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಜನರಲ್ ಕ್ಷೇತ್ರ ಆಗಿದ್ರಿಂದ ಹರಪನಹಳ್ಳಿಯಲ್ಲಿ ತ್ರಿಕೋನ ಸ್ಪರ್ಧೆಯಂತೂ ಪಕ್ಕಾ ಇದೆ. ಹರಪನಹಳ್ಳಿಯಲ್ಲಿ ಬಂಡಾಯದ ಬಿಸಿಯನ್ನು ಎದುರಿಸುತ್ತಿದ್ದು, ಜೆಡಿಎಸ್‌ನಿಂದ ಮಾಜಿ ಸಚಿವ ಎನ್.ಎಂ.ನಬಿ ಪುತ್ರ ನೂರ್ ಅಹಮದ್ ಕಣದಲ್ಲಿದ್ದಾರೆ. ಕೆ.ಆರ್.ಎಸ್ ಮತ್ತು ಆಪ್ ಅಭ್ಯರ್ಥಿಗಳು ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧೆಯಲ್ಲಿದ್ದು, ಮತಗಳನ್ನು ವಿಭಜಿಸುವ ಸಾಧ್ಯತೆಯಿದೆ.

ಕಳೆದ ಚುನಾವಣೆ ಫಲಿತಾಂಶ: ಬಿಜೆಪಿಯ ಜಿ.ಕರುಣಾಕರ ರೆಡ್ಡಿ 67,603 ಮತ್ತು ಕಾಂಗ್ರೆಸ್‌ನ ಎಂ.ಪಿ.ರವೀಂದ್ರ 57956 ಮತ ಪಡೆದಿದ್ದರು. ಗೆಲುವಿನ ಅಂತರ: 9,647 ಮತಗಳು.

ಇದನ್ನೂ ಓದಿ: ಕೊಪ್ಪಳ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕಾಂಗ್ರೆಸ್- ಬಿಜೆಪಿ ಮಧ್ಯೆ ಫೈಟ್, ಇದೆಯಾ ಗಾಲಿ ಜನಾರ್ದನ್ ರೆಡ್ಡಿ ಎಫೆಕ್ಟ್?

ಕ್ಷೇತ್ರದಲ್ಲಿ ಎಷ್ಟು ಮತದಾರು ಇದ್ದಾರೆ?: ಒಟ್ಟು ಮತದಾರರು-10,92,011 ಮಹಿಳೆಯರು-5,45,610. ಪುರುಷರು- 5,46,255. 141 ಇತರರು.

Exit mobile version