ಹರಿಶ್ಚಂದ್ರ ನಾಯ್ಕ, ವಿಸ್ತಾರ ನ್ಯೂಸ್, ತುಮಕೂರು
ಬೆಂಗಳೂರು ಮತ್ತು ಬೆಳಗಾವಿಯನ್ನ ಹೊರತು ಪಡಿಸಿದರೆ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರುವ ಜಿಲ್ಲೆ ತುಮಕೂರು. ಹೀಗಾಗಿಯೇ ಪ್ರಮುಖ ಮೂರೂ ಪಕ್ಷಗಳು ತುಮಕೂರು ಜಿಲ್ಲೆಯ ಮೇಲೆ ಕಣ್ಣಿಟ್ಟಿವೆ. ಕಲ್ಪತರು ನಾಡು ಎಂದೇ ಕರೆಸಿಕೊಳ್ಳುವ ತುಮಕೂರು ಜಿಲ್ಲೆ ಒಂದು ಕಾಲದಲ್ಲಿ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. 1994ರ ವಿಧಾನಸಭಾ ಚುನಾವಣೆಯಲ್ಲಂತೂ ಬರೋಬ್ಬರಿ 9 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಮೂಲಕ ದೇವೇಗೌಡರು ಮುಖ್ಯಮಂತ್ರಿ ಪಟ್ಟಕ್ಕೇರುವಲ್ಲಿ ತುಮಕೂರು ಜಿಲ್ಲೆಯ ಮತದಾರರು ಪ್ರಮುಖ ಪಾತ್ರ ವಹಿಸಿದ್ದರು.
ಕಾಂಗ್ರೆಸ್ ಕೂಡ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿಕೊಂಡು ಬಂದಿತ್ತು. ಎರಡು ದಶಕಗಳ ಹಿಂದೆ ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇದ್ದ ಪೈಪೋಟಿ ಈಗ ಬಿಜೆಪಿಯ ಸಂಘಟನೆಯ ಬಲದಿಂದಾಗಿ ತ್ರಿಕೋನ ಕಣವಾಗಿ ಬದಲಾಗಿದೆ. ಸದ್ಯದ ಬಲಾಬಲವನ್ನ ಗಮನಿಸುವುದಾದರೆ ಬಿಜೆಪಿ ಉಳಿದ ಎರಡೂ ಪ್ರಮುಖ ಪಕ್ಷಗಳಿಗಂತ ಹೆಚ್ಚು (ಉಪಚುನಾವಣೆ ಸೇರಿ ಒಟ್ಟು 5) ಸ್ಥಾನವನ್ನ ಹೊಂದಿದೆ. ಇದೇ ಹುಮ್ಮಸ್ಸಿನಲ್ಲಿ ಈ ಬಾರಿಯ (Karnataka Election 2023) ಈ ಬಾರಿಯ ಚುನಾವಣೆಯಲ್ಲಿಯೂ ಪ್ರಚಾರ ನಡೆಸುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜಿಲ್ಲೆಯ ಮೇಲಿನ ತಮ್ಮ ಹಿಡಿತವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿವೆ.
ಬಂಡಾಯ ಮತ್ತು ಪಕ್ಷಾಂತರ: ತುಮಕೂರು ನಗರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸತತ ನಾಲ್ಕು ಬಾರಿ ಗುಬ್ಬಿ ಕ್ಷೇತ್ರದಿಂದ ವಿಧಾನಸಭಾ ಪ್ರವೇಶಿಸಿದ್ದ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ ತೊರೆದು ಈ ಬಾರಿ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಸಚಿವ ಮಾಧುಸ್ವಾಮಿ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್‌ಎಸ್‌ಎಸ್ ಕಟ್ಟಾಳು, ಮಾಜಿ ಶಾಸಕ ಕಿರಣ್ ಕುಮಾರ್ ತಮಗೆ ಟಿಕೆಟ್ ಸಿಗಲ್ಲಿಲಲ್ಲ ಎನ್ನುವುದು ಖಚಿತವಾಗುತ್ತಿದ್ದಂಥೆಯೇ ಕಾಂಗ್ರೆಸ್ ಸೇರ್ಪಡೆಗೊಂಡು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಈ ಬಾರಿಯ ಚುನಾವಣೆಯಲ್ಲಿ ಗಮನಸೆಳೆಯುತ್ತಿವೆ.
ತುಮಕೂರು ನಗರ: ಇಬ್ಬರ
ಜಗಳ ಮೂರನೇಯವನಿಗೆ ಲಾಭ?
ಶೈಕ್ಷಣಿಕ ನಗರಿ ಎಂದೇ ಹೆಸರಾಗಿರುವ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಮುಸ್ಲಿಂ ಮತಗಳೇ ನಿರ್ಣಾಯಕ. ಈ ಕ್ಷೇತ್ರದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಎರಡು ದಶಕಗಳ ಕಾಲ ಹಿಡಿತ ಸಾಧಿಸಿದ್ದರು. ಅವರು ಬಿಜೆಪಿ ಅಭ್ಯರ್ಥಿಯಾಗಿ 1994ರಿಂದ 2008ರವರೆಗೆ ನಾಲ್ಕು ಬಾರಿ ಗೆಲುವು ಸಾಧಿಸಿ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದರು. ಆದರೆ 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಜಿ.ಬಿ.ಜ್ಯೋತಿ ಗಣೇಶ್ ಸ್ಪರ್ಧಿಸಿದ್ದ ಪರಿಣಾಮ ಲಿಂಗಾಯತ ವೀರಶೈವ ಮತಗಳು ವಿಭಜನೆಗೊಂಡು ಶಿವಣ್ಣ ಮತ್ತು ಜಿ.ಬಿ.ಜ್ಯೋತಿ ಗಣೇಶ್ ಇಬ್ಬರೂ ಸೋಲು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಫೀಕ್ ಅಹಮದ್ ಜಯಗಳಿಸಿದ್ದರು.
2018ರ ಚುನಾವಣೆಯಲ್ಲಿ ಜಿ. ಬಿ. ಜ್ಯೋತಿ ಗಣೇಶ್ ಗೆಲ್ಲುವ ಮೂಲಕ ಕ್ಷೇತ್ರ ಮತ್ತೆ ಬಿಜೆಪಿ ಪಾಲಾಗಿತ್ತು. ಈ ಬಾರಿ ಬಿಜೆಪಿ ಮತ್ತೆ ಹಾಲಿ ಶಾಸಕ ಜ್ಯೋತಿ ಗಣೇಶ್‌ಗೆ ಮಣೆ ಹಾಕಿದೆ. ಹೀಗಾಗಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದ್ದಾರೆ. ಕ್ಷೇತ್ರದಲ್ಲಿ ತನ್ನದೇ ಅಭಿಮಾನಿಗಳನ್ನು ಹೊಂದಿರುವ ಸೊಗಡು ಶಿವಣ್ಣ ಬಿಜೆಪಿಯನ್ನ ಸೋಲಿಸುವ ಪಣ ತೊಟ್ಟಿದ್ದಾರೆ. ಇದು ಬಿಜೆಪಿಗೆ ತಲೆನೋವು ತಂದಿಟ್ಟಿದೆ.
ಇತ್ತ ಕಾಂಗ್ರೆಸ್ ವಾಡಿಕೆಯಂತೆಯೇ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿದ. ಕಳೆದ 40 ವರ್ಷಗಳಿಂದ ಮಾಜಿ ಶಾಸಕ ಷಫೀ ಅಹಮದ್ ಕುಟುಂಬಕ್ಕೆ ಕಾಂಗ್ರೆಸ್ 11 ಬಾರಿ ಟಿಕೆಟ್ ನೀಡಿತ್ತು. ಅದರಲ್ಲಿ ಮೂರು ಬಾರಿ ಕಾಂಗ್ರೆಸ್ ಗೆದ್ದಿತ್ತು. ಆದರೆ ಈ ಬಾರಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲಾಗಿದೆ. ಇಕ್ಬಾಲ್ ಅಹಮದ್ ಎಂಬ ಸಾಮಾನ್ಯ ಕಾರ್ಯಕರ್ತನಿಗೆ ಕಾಂಗ್ರೆಸ್ ಮಣೆಹಾಕಿದೆ. ತಮ್ಮ ಕುಟುಂಕ್ಕೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರಗೊಂಡು ಮಾಜಿ ಶಾಸಕ ಷಫೀ ಅಹಮದ್ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಇನ್ನು ಕಳೆದ ಎರಡು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಎನ್.ಗೋವಿಂದರಾಜು ಈ ಬಾರಿ ಮತ್ತೊಮ್ಮೆ ಕಣದಲ್ಲಿದ್ದಾರೆ. ಅನುಕಂಪದ ಆಧಾರದ ಮೇಲೆ ಚುನಾವಣೆಯನ್ನ ಎದುರಿಸಲು ಮುಂದಾಗಿರುವ ಅವರು ಎರಡು ಪಕ್ಷಗಳಲ್ಲಿನ ಅಸಮಾಧಾನದ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ಆಡಿಯೋ ಮತ್ತು ವಿಡಿಯೋ ತುಣುಕುಗಳಿಂದ ಗೋವಿಂದರಾಜುಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಜಿ.ಬಿ.ಜ್ಯೋತಿ ಗಣೇಶ್ (ಬಿಜೆಪಿ): 60,421 – ಎನ್.ಗೋವಿಂದರಾಜು (ಜೆಡಿಎಸ್): 55, 128 -ಗೆಲುವಿನ ಅಂತರ: 5,293
ತುಮಕೂರು ಗ್ರಾಮಾಂತರ
ಮದಗಜಗಳ ಕಾಳಗದಲ್ಲಿ
ಗೆಲ್ಲುವವರು ಯಾರು?
ತುಮಕೂರು ನಗರವನ್ನ ಸುತ್ತುವರೆದಿರುವ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕ. ಈ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿಯಿದೆ. ಜೆಡಿಎಸ್ ಅಭ್ಯರ್ಥಿ, ಚನ್ನಿಗಪ್ಪ ಪುತ್ರ ಡಿ.ಸಿ.ಗೌರಿಶಂಕರ್ ಮತ್ತು ಬಿಜೆಪಿಯ ಸುರೇಶ್ ಗೌಡ ನಡುವಿನ ಜಿದ್ದಾಜಿದ್ದಿಗೆ ಹೆಸರುವಾಸಿಯಾರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ.
2008ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಧುಗಿರಿಯಿಂದ ಗೆದ್ದು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದ ಚನ್ನಿಗಪ್ಪ ಪುತ್ರ ಡಿ.ಸಿ.ಗೌರಿಶಂಕರ್ ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಎದುರು ಸೋಲು ಕಂಡಿದ್ದ ಅವರು, ನೇರವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ರಾಜಕಾರಣ ಪ್ರವೇಶಿಸಿದ್ದರು. ಅಲ್ಲಿಂದ ಶುರುವಾಯ್ತು ನೋಡಿ ಮದಗಜಗಳ ಕಾಳಗ. ಸುರೇಶ್ ಗೌಡ ಎದುರು 2013ರ ಚುನಾವಣೆಯಲ್ಲಿ ಸೋತಿದ್ದ ಗೌರಿಶಂಕರ್, 2018ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು.
ಆದರೆ, ಚುನಾವಣೆ ವೇಳೆ ಗೌರಿಶಂಕರ್ ಜನರಿಗೆ ನಕಲಿ ವಿಮಾ ಬಾಂಡ್‌ಗಳನ್ನು ವಿತರಿಸಿದ್ದಾರೆ. ಈ ಮೂಲಕ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ, ಅವರ ಶಾಸಕತ್ವವನ್ನು ಅಸಿಂಧುಗೊಳಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಅದರಂತೆ ಹೈಕೋರ್ಟ್ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆ. ಇದರಿಂದ ಗೌರಿಶಂಕರ್ ರಾಜಕೀಯ ಜೀವನಕ್ಕೇ ಕುತ್ತು ಬರುವ ಸಾಧ್ಯತೆ ಇತ್ತು. ಆದರೆ ಈಗ ಸುಪ್ರೀಂ ಕೋರ್ಟ್ ಗೌರಿಶಂಕರ್ 2023ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವ ಆದೇಶ ನೀಡಿದೆ. ಇದರಿಂದ ಗೌರಿಶಂಕರ್ ಸ್ವಲ್ಪ ನಿರಾಳರಾಗಿದ್ದಾರೆ.
ಇನ್ನು ಇದೇ ಕ್ಷೇತ್ರದಿಂದ ಸತತವಾಗಿ ಎರಡು ಬಾರಿ ಶಾಸಕರಾಗಿರುವ ಬಿಜೆಪಿ ಸುರೇಶ್ ಗೌಡ ಕ್ಷೇತ್ರದ ತುಂಬಾ ಸಾಕಷ್ಟು ಓಡಾಟ ನಡೆಸಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದ ಸುರೇಶ್ ಗೌಡ ಈ ಬಾರಿ ಗೆಲ್ಲಲೇಬೇಕು ಎಂದು ವಿವಿಧ ಕಸರತ್ತು ನಡೆಸಿದ್ದಾರೆ. ಸಮಾವೇಶಗಳ ಮೇಲೆ ಸಮಾವೇಶಗಳನ್ನ ಮಾಡುತ್ತಾ, ರಾಜ್ಯ, ರಾಷ್ಟ್ರೀಯ ನಾಯಕರ ಮೂಲಕ ಪ್ರಚಾರ ನಡೆಸುತ್ತಾ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.
ಹೈ ಕೋರ್ಟ್ ತೀರ್ಪಿನ ಬಳಿಕ ಕೊಂಚ ಹಿನ್ನಡೆ ಅನುಭವಿಸಿರುವ ಗೌರಿಶಂಕರ್ ಕೂಡ ಕ್ಷೇತ್ರದಲ್ಲಿ ತಮ್ಮದೇ ಆದ ಕಾರ್ಯಪಡೆ ಹೊಂದಿದ್ದಾರೆ. ಕೊರೊನಾ ಸಂದರ್ಭದ ಸೇವೆ ಹಾಗೂ ಅಭಿವೃದ್ಧಿ ಆಧಾರದ ಮೇಲೆ ಮತಯಾಚನೆಗೆ ಮುಂದಾಗಿದ್ದಾರೆ. ಈ ಮದಗಜಗಳ ಕಾಳಗದಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಕಾದುನೋಡಬೇಕಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಡಿ.ಸಿ.ಗೌರಿಶಂಕರ್ (ಜೆಡಿಎಸ್): 82,740- ಸುರೇಶ್ ಗೌಡ (ಬಿಜೆಪಿ): 77, 100- ಗೆಲುವಿನ ಅಂತರ: 5,640
ಚಿಕ್ಕನಾಯಕನಹಳ್ಳಿ:
ತ್ರಿಕೋನ ಸ್ಪರ್ಧೆ
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಲಿಂಗಾಯತ, ಕುರುಬ ಹಾಗೂ ಎಸ್ಸಿ, ಎಸ್ಟಿ ಮತಗಳೇ ಹೆಚ್ಚು ನಿರ್ಣಾಯಕ. ಈ ಕ್ಷೇತ್ರದ ರಾಜಕೀಯ ಇತಿಹಾಸವನ್ನ ನೋಡುವುದಾದರೆ, ಎರಡು ಚುನಾವಣೆಗಳನ್ನ ಹೊರತುಪಡಿಸಿದರೆ, ಒಬ್ಬ ಅಭ್ಯರ್ಥಿ ನಿರಂತರವಾಗಿ ಎರಡು ಅವಧಿಗೆ ಗೆದ್ದ ಉದಾಹರಣೆ ಇಲ್ಲ. ಸಚಿವ ಮಾಧುಸ್ವಾಮಿ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ಪಕ್ಷ ಯಾವುದು ಅನ್ನೋದಕ್ಕಿಂತ ಹೆಚ್ಚಾಗಿ ವ್ಯಕ್ತಿಯ ವರ್ಚಸ್ಸಿನ ಆಧಾರದ ಮೇಲೆ ರಾಜಕೀಯ ನಡೆಯಲಿದೆ.
ಜೆಡಿಎಸ್ ನಿಂದ ಸ್ಪರ್ಧಿಸಿರುವ ಸುರೇಶ್ ಬಾಬು ಕುರುಬ ಸಮುದಾಯಕ್ಕೆ ಸೇರಿದವರಾದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮಾಧುಸ್ವಾಮಿ ಮತ್ತು ಕಿರಣ್ ಕುಮಾರ್ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಆದರೆ ಲಿಂಗಾಯತ ಸಮುದಾಯದ ಮಾಧುಸ್ವಾಮಿ ವಿರುದ್ಧ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಲಿಂಗಾಯತರಷ್ಟೇ ಪ್ರಬಲರಾಗಿರುವ ಕುರುಬರು ಮತ್ತು ಮುಸ್ಲಿಮರು ಮಾಧುಸ್ವಾಮಿಗೆ ತಿರುಗೇಟು ನೀಡಲು ರೆಡಿಯಾಗಿದ್ದಾರೆ. ಇವೆಲ್ಲ ಈ ಬಾರಿಯ ಚುನಾವಣಾ ಕಣದಲ್ಲಿ ಪ್ರತಿಫಲನಗೊಳ್ಳಲಿವೆ ಎನ್ನಲಾಗುತ್ತಿದೆ.
ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಕಿರಣ್ ಕುಮಾರ್ ಮೂಲತಃ ಬಿಜೆಪಿಯವರು. ಆರ್‌ಎಸ್‌ಎಸ್ ಕಟ್ಟಾಳು. ಬಿಜೆಪಿಯಿಂದಲೇ ಒಂದು ಬಾರಿ ಪಕ್ಕದ ಕಳ್ಳಂಬೆಳ್ಳ ಕ್ಷೇತ್ರದಿಂದ ಶಾಸಕರಾಗಿದ್ದವರು. ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕಿರಣ್ ಕುಮಾರ್, ತಮಗೆ ಟಿಕೆಟ್ ಸಿಗುವುದಿಲ್ಲ ಅನ್ನುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಸೇರ್ಪಡೆಗೊಂಡು ಪಕ್ಷದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಮೂಲ ಬಿಜೆಪಿ ಕಾರ್ಯಕರ್ತರು ಕಿರಣ್ ಕುಮಾರ್‌ಗೆ ಬೆಂಬಲ ನೀಡುವ ಸಾಧ್ಯೆತೆಗಳಿವೆ. ಮಾಧುಸ್ವಾಮಿ ಮತ್ತು ಕಿರಣ್‌ಕುಮಾರ್ ನಡುವಿನ ಪೈಪೋಟಿ ಜೆಡಿಎಸ್ ಸುರೇಶ್ ಬಾಬುಗೆ ಲಾಭ ತಂದುಕೊಡುವ ಸಾಧ್ಯತೆಯೂ ಇದೆ.
ಕಳೆದ ಬಾರಿಯ ಫಲಿತಾಂಶ ಏನು?
ಜೆ.ಸಿ.ಮಾಧುಸ್ವಾಮಿ (ಬಿಜೆಪಿ) : 69,612 – ಸಿ.ಬಿ.ಸುರೇಶ್ ಬಾಬು (ಜೆಡಿಎಸ್): 59,335- ಗೆಲುವಿನ ಅಂತರ: 10,227
ತುರುವೇಕೆರೆ: ಬಿಜೆಪಿ
ಜೆಡಿಎಸ್ ನಡುವೆ ಪೈಪೋಟಿ
ತೆಂಗು ಮತ್ತು ಅಡಿಕೆ ಬೆಳೆಗಾರರೇ ಹೆಚ್ಚಿರುವ ತುರುವೇಕೆರೆ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ. ಹೀಗಾಗಿ ಮೂರೂ ಪ್ರಮುಖ ಪಕ್ಷಗಳು ಒಕ್ಕಲಿಗ ಅಭ್ಯರ್ಥಿಯನ್ನೇ ಕಣಕ್ಕಿಳಿಸಿವೆ. ಜೆಡಿಎಸ್‌ನಿಂದ ಹ್ಯಾಟ್ರಿಕ್ ಹೀರೋ ಎಂದೇ ಖ್ಯಾತಿ ಪಡೆದಿರುವ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಕಣದಲ್ಲಿದ್ದರೆ, ಬಿಜೆಪಿಯಿಂದ ಹಾಲಿ ಶಾಸಕ ಮಸಾಲೆ ಜಯರಾಂ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ವಿಧಾನ ಪರಿಷತ್ ಸದಸ್ಯ, ನೆಲಮಂಗಲ ಮೂಲದ ಬೆಮೆಲ್ ಕಾಂತರಾಜು ಸ್ಪರ್ಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ಇದು ತಮ್ಮ ಕೊನೆಯ ಚುನಾವಣೆ ಎನ್ನುವ ಅನುಕಂಪದ ಅಸ್ತ್ರ ಪ್ರಯೋಗಿಸಿ ಮತದಾರರನ್ನ ಸೆಳೆಯುವ ಪ್ರಯತ್ನಸುತ್ತಿದ್ದಾರೆ.
ಬಿಜೆಪಿಯ ಮಸಾಲೆ ಜಯರಾಂ ತಾವು ಮಾಡಿರುವ ಅಭಿವೃದ್ಧಿ ಕೆಲಸ ಮತ್ತು ಸಜ್ಜನ ರಾಜಕಾರಣಿ ಅನ್ನುವ ಹಣೆಪಟ್ಟಿ ತಮಗೆ ನೆರವಾಗುತ್ತೆ ಅನ್ನೋ ಆಲೋಚನೆಯಲ್ಲಿದ್ದಾರೆ. ಇನ್ನು ಇವರಿಬ್ಬರಿಗೆ ಪ್ರಬಲ ಸ್ಪರ್ಧೆಯೊಡ್ಡಲು ಕಾಂಗ್ರೆಸ್‌ನ ಬೆಮೆಲ್ ಕಾಂತರಾಜು ಕಸರತ್ತು ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಭಾರತ್ ಜೋಡೋ ಯಾತ್ರೆಯನ್ನ ಯಶಸ್ವಿಗೊಳಿಸಿರೋ ಹುಮ್ಮಸ್ಸಿನಲ್ಲಿ ಕಾಂತರಾಜು ಕಾರ್ಯಪ್ರವೃತ್ತರಾಗಿದ್ದಾರೆ.
ಕ್ಷೇತ್ರದ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ವಿಚಾರವೂ ಕೂಡ ಚುನಾವಣೆ ಪ್ರಚಾರದ ಪ್ರಮುಖ ವಿಷಯವಾಗಿದೆ. ಸದ್ಯದ ಚಿತ್ರಣವನ್ನ ನೋಡಿದ್ರೆ ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇರೋದು ಸ್ಪಷ್ಟವಾಗುತ್ತಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಮಸಾಲೆ ಜಯರಾಂ (ಬಿಜೆಪಿ): 60,710- ಎಂ.ಟಿ. ಕೃಷ್ಣಪ್ಪ (ಜೆಡಿಎಸ್): 58,661- ಗೆಲುವಿನ ಅಂತರ: 2,049
ತಿಪಟೂರು : ಇತಿಹಾಸ
ಬದಲಿಸಿಯಾರೇ ನಾಗೇಶ್?
ಕೊಬ್ಬರಿ ಬೆಳೆಗೆ ಹೆಸರುವಾಸಿಯಾಗಿರುವ ತಿಪಟೂರು ಪ್ರಜ್ಞಾವಂತ ಮತದಾರರನ್ನ ಹೊಂದಿರುವ ಕ್ಷೇತ್ರ. ಏಕೆಂದರೆ 1962ರಿಂದೀಚೆಗೆ ಈ ಕ್ಷೇತ್ರದಲ್ಲಿ ಒಮ್ಮೆ ಶಾಸಕರಾಗಿದ್ದವರು ಸತತ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಉದಾಹರಣೆಯೇ ಇಲ್ಲ. 2018ರಲ್ಲಿ ಗೆಲುವು ಸಾಧಿಸಿ, ಹಾಲಿ ಸಚಿವರೂ ಆಗಿರುವ ಬಿ.ಸಿ.ನಾಗೇಶ್ ಈ ಸಂಪ್ರದಾಯವನ್ನ ಮುರಿಯುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ.
ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ ಬಿ.ಸಿ.ನಾಗೇಶ್ ಈ ಬಾರಿ ಮತ್ತೊಮ್ಮೆ ಬಿಜೆಪಿಯ ಹುರಿಯಾಳಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ, ಲಿಂಗಾಯತ ಸಮುದಾಯದ ಷಡಕ್ಷರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದ ಒಕ್ಕಲಿಗ ಸಮುದಾಯದ ಕೆ.ಟಿ.ಶಾಂತಕುಮಾರ್, ಬಿಜೆಪಿ, ಕಾಂಗ್ರೆಸ್‌ನಲ್ಲಿ ಓಡಾಡಿ ಕೊನೆಗೆ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.
ಮೇಲ್ನೋಟಕ್ಕೆ ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಕಂಡುಬರುತ್ತಿದೆ. ಆದರೆ ಬಿ. ಸಿ. ನಾಗೇಶ್‌ಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ತಿಪಟೂರು ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಕಳೆದ ಚುನಾವಣೆಯಲ್ಲಿ ತಮ್ಮ ಸಮುದಾಯದ ಸರ್ವೋಚ್ಛ ನಾಯಕ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿ ಅನ್ನುವ ಉದ್ದೇಶದಿಂದ ಬಿಜೆಪಿ ಅಭ್ಯರ್ಥಿ, ಬ್ರಾಹ್ಮಣ ಸಮುದಾಯದ ಬಿ. ಸಿ. ನಾಗೇಶ್ ಅವರನ್ನು ಈ ಸಮುದಾಯ ಬೆಂಬಲಿಸಿತ್ತು. ಆದರೆ ಈ ಬಾರಿ ಈ ಸಾಧ್ಯತೆ ಕಡಿಮೆ. ಯಾಕೆಂದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಷಡಕ್ಷರಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಇದು ತಮ್ಮ ಕೊನೆಯ ಚುನಾವಣೆ ಎಂದೇ ಷಡಕ್ಷರಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಈ ಬಾರಿ ಲಿಂಗಾಯತರು ತಮ್ಮ ಸಮುದಾಯದ ಷಡಕ್ಷರಿಯ ಕೈ ಹಿಡಿಯುವ ಸಾಧ್ಯತೆಯಿದೆ. ಜೆಡಿಎಸ್ ಅಭ್ಯರ್ಥಿ ಕೆ.ಟಿ.ಶಾಂತಕುಮಾರ್ ಕೂಡ ಈ ಇಬ್ಬರು ಘಟಾನುಘಟಿಗಳಿಗೆ ಟಫ್ ಫೈಟ್ ಕೊಡುವ ಪ್ರಯತ್ನದಲ್ಲಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಬಿ.ಸಿ.ನಾಗೇಶ್ (ಬಿಜೆಪಿ): 61,383- ಷಡಕ್ಷರಿ (ಕಾಂಗ್ರೆಸ್): 35,820- ಗೆಲುವಿನ ಅಂತರ: 25,563
ಕುಣಿಗಲ್: ಬಿಜೆಪಿ ಗೆಲುವಿನ
ಓಟಕ್ಕೆ ಕಾಂಗ್ರೆಸ್, ಜೆಡಿಎಸ್
ಅಡ್ಡಗಾಲು
ತುಮಕೂರು ಜಿಲ್ಲೆಗೆ ಸೇರಿರುವ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕುಣಿಗಲ್, ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಕಳೆದ ಮೂರೂ ಚುನಾವಣೆಗಳಲ್ಲಿ ಇಲ್ಲಿ ರನ್ನರ್ ಅಪ್ ಸ್ಥಾನದಲ್ಲಿದ್ದ ಬಿಜೆಪಿ, ಈ ಬಾರಿ ಗೆದ್ದು ಇತಿಹಾಸ ಬರೆಯುವ ತವಕದಲ್ಲಿದೆ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಬಿಜೆಪಿ ಆಸೆಗೆ ತಣ್ಣೀರೆರಚುವ ಪ್ರಯತ್ನದಲ್ಲಿವೆ.
ಕಳೆದ ಮೂರೂ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲುಂಡಿದ್ದ, ರಾಜ್ಯ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್ ಸತತ ನಾಲ್ಕನೇ ಬಾರಿಗೆ ಬಿಜೆಪಿ ಟಿಕೆಟ್ ಪಡೆದು ಕಣದಲ್ಲಿದ್ದಾರೆ. ಬಿಜೆಪಿ ಟಿಕೆಟ್‌ಗೆ ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ಮತ್ತು ರಾಜೇಶ್ ಗೌಡ ಅವರಿಂದ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಕೊನೆಯ ಪ್ರಯತ್ನ ಅನ್ನೋ ನೆಪದಲ್ಲಿ ಕೃಷ್ಣಕುಮಾರ್‌ಗೆ ಟಿಕೆಟ್ ಲಭಿಸಿದೆ.
ಕಾಂಗ್ರೆಸ್‌ನಿಂದ ಹಾಲಿ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಬಂಧಿ ಡಾ.ರಂಗನಾಥ್ ಮತ್ತೆ ಅಭ್ಯರ್ಥಿಯಾಗಿದ್ದಾರೆ. ಇನ್ನು ಜೆಡಿಎಸ್‌ನಿಂದ ಮಾಜಿ ಸಚಿವ ಡಿ. ನಾಗರಾಜಯ್ಯ ಪುತ್ರ, ಡಾ.ರವಿಬಾಬು ಕಣಕ್ಕಿಳಿದಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯಿಂದ ಕಳೆದ ಮೂರು ಚುನಾವಣೆಗಳಲ್ಲಿ ಸಹೋದರರಾದ ಡಿ.ನಾಗರಾಜಯ್ಯ ಮತ್ತು ಡಿ.ಕೃಷ್ಣಕುಮಾರ್ ಕಣಕ್ಕಿಳಿಯುತ್ತಿದ್ದರು. ಇದರಿಂದ ಮತವಿಭಜನೆಯಾಗುತ್ತಿತ್ತು. ಎರಡು ಬಾರಿ ಕಾಂಗ್ರೆಸ್ ಇದರ ಲಾಭ ಪಡೆದಿತ್ತು. ಆದರೆ ಈ ಬಾರಿ ಬಿಜೆಪಿಯಿಂದ ಚಿಕ್ಕಪ್ಪ ಡಿ.ಕೃಷ್ಣಕುಮಾರ್ ಮತ್ತು ಜೆಡಿಎಸ್‌ನಿಂದ ಅವರ ಅಣ್ಣನ ಮಗ ಡಾ.ರವಿಬಾಬು ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಡಿ. ಕೃಷ್ಣಕುಮಾರ್‌ಗೆ ಮೂರು ಬಾರಿ ಸೋತಿರುವ ಅನುಕಂಪವಿದೆ. ಬಿಜೆಪಿಯಿಂದ ಬಂಡಾಯವೆದ್ದಿದ್ದ ರಾಜೇಶ್ ಗೌಡ ಕೂಡ ಕಣದಿಂದ ಹಿಂದೆ ಸರಿದಿದ್ದಾರೆ. ಅಸಮಾಧಾನಗೊಂಡಿದ್ದ ಮುದ್ದಹನುಮೇಗೌಡ ಕೂಡ ಕೃಷ್ಣಕುಮಾರ್ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಶಾಸಕ ಬಿ. ಬಿ. ರಾಮಸ್ವಾಮಿಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದು ಪಕ್ಷಕ್ಕೆ ತಲೆನೋವು ತಂದಿದೆ. ಇತ್ತ ಜೆಡಿಎಸ್ ಗೆ ನಾಗರಾಜಯ್ಯ ಬದಲು ಅವರ ಪುತ್ರ ಕಣಕ್ಕಿಳಿದಿರುವುದರಿಂದ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಡಾ.ರಂಗನಾಥ್ (ಕಾಂಗ್ರೆಸ್) : 58, 697- ಡಿ.ನಾಗರಾಜಯ್ಯ (ಜೆಡಿಎಸ್): 53,097 -ಗೆಲುವಿನ ಅಂತರ: 5,600
ಗುಬ್ಬಿಯಲ್ಲೂ
ತ್ರಿಕೋನ ಸ್ಪರ್ಧೆ
ಗುಬ್ಬಿ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯವಿದೆ. ನಂತರದ ಸ್ಥಾನದಲ್ಲಿ ಒಕ್ಕಲಿಗ, ಗೊಲ್ಲ, ತಿಗಳ ಸಮುದಾಯ ದವರಿದ್ದಾರೆ. ಈವರೆಗೂ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯದವರೇ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಯಾರೇ ಸ್ಪರ್ಧಿಸಿದರೂ ಪ್ರಬಲ ಸಮುದಾಯಗಳ ಜತೆಗೆ ಹಿಂದುಳಿದ, ಪರಿಶಿಷ್ಟರ ಮತಗಳನ್ನು ಪಡೆದುಕೊಂಡವರಿಗೆ ಗೆಲುವಿನ ಬಾಗಿಲು ತೆರೆಯಲಿದೆ.
ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ ಜೆಡಿಎಸ್‌ಗೆ ಸೆಡ್ಡು ಹೊಡೆದು ಪಕ್ಷದಿಂದ ಉಚ್ಛಾಟನೆಯಾಗಿರುವ ಎಸ್.ಆರ್.ಶ್ರೀನಿವಾಸ್ ಅವರಿಂದಾಗಿ ಗುಬ್ಬಿ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಎಸ್.ಆರ್.ಶ್ರೀನಿವಾಸ್, ಬಳಿಕ ಹಿಂದಿರುಗಿ ನೋಡಿಲ್ಲ. 2008, 2013, 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಸತತ 4 ಗೆಲುವು ಕಂಡಿರುವ ಶ್ರೀನಿವಾಸ್, ಕಾಂಗ್ರೆಸ್ ಭದ್ರಕೋಟೆಯಂತಿದ್ದ ಗುಬ್ಬಿ ಕ್ಷೇತ್ರವನ್ನು ಜೆಡಿಎಸ್ ಅಭೇದ್ಯ ಕೋಟೆ ಮಾಡಿದ್ದರು. ಆದರೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರು ಜೆಡಿಎಸ್ ಗೂಡು ತೊರೆದು ಕಾಂಗ್ರೆಸ್ ಸೇರಿ ಸ್ಪರ್ಧಿಸುತ್ತಿದ್ದಾರೆ.
ಸತತ ನಾಲ್ಕು ಬಾರಿಯ ಶಾಸಕ ಎಸ್.ಆರ್.ಶ್ರೀನಿವಾಸ್ ಒಕ್ಕಲಿಗರು. ಇಲ್ಲಿಯವರೆಗೆ ಲಿಂಗಾಯತ ಸಮುದಾಯದ ಮುಖಂಡರು ಇವರಿಗೆ ಸರಿಯಾದ ಪೈಪೋಟಿ ನೀಡಿಲ್ಲ. 2004ರಲ್ಲಿ ಎಸ್.ಆರ್.ಶ್ರೀನಿವಾಸ್ ಪಕ್ಷೇತರ ಅಭ್ಯರ್ಥಿಯಾಗಿ ಲಿಂಗಾಯತ ಸಮುದಾಯದ ಜೆಡಿಎಸ್ ಅಭ್ಯರ್ಥಿ ಜಿ.ಎಸ್.ಶಿವನಂಜಪ್ಪ ವಿರುದ್ಧವೇ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲಿಂದ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಈಗ 5ನೇ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿರುವ ಬಿ.ಎಸ್. ನಾಗರಾಜು ಒಕ್ಕಲಿಗರು. ಬಿಜೆಪಿ ಪರ ಕಣಕ್ಕಿಳಿಯುತ್ತಿರುವ ದಿಲೀಪ್ ಕುಮಾರ್ ಲಿಂಗಾಯತ ಸಮುದಾಯಕ್ಕೆ ಸೇರಿದವರು.
ಇನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹೊನ್ನಗಿರಿ ಗೌಡ ಕೈ ತೊರೆದು ಜೆಡಿಎಸ್ ಸೇರಿದ್ದಾರೆ. ಬಿಜೆಪಿ ಟಿಕೆಟ್ ವಂಚಿತ ಬೆಟ್ಟಸ್ವಾಮಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಪ್ರಬಲ ಗೊಲ್ಲ ಸಮುದಾಯದ ಮುಖಂಡ ಬೆಟ್ಟಸ್ವಾಮಿ ಜೆಡಿಎಸ್ ಸೇರ್ಪಡೆಯಾಗಿರುವುದು ಬಿಜೆಪಿಗೆ ನುಂಗಲಾರದ ತುತ್ತಾದ್ರೆ, ಜೆಡಿಎಸ್‌ಗೆ ಈ ಇಬ್ಬರು ನಾಯಕರ ಸೇರ್ಪಡೆಯಿಂದ ದೊಡ್ಡ ಬಲ ಬಂದಂತಾಗಿದೆ.
ಕಳೆದ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದ ದಿಲೀಪ್ ಕುಮಾರ್ ಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿದ್ದ ದಿಲೀಪ್ ಕುಮಾರ್ 30 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದ ದಿಲೀಪ್ ಕುಮಾರ್ ಈ ಬಾರಿ ಗೆಲುವು ಸಾಧಿಸಬಹುದು ಅನ್ನುವುದು ಬಿಜೆಪಿ ಲೆಕ್ಕಚಾರ. ಒಟ್ಟಾರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಎಸ್.ಆರ್.ಶ್ರೀನಿವಾಸ್ (ಜೆಡಿಎಸ್)- 55572 ಜಿ.ಎನ್.ಬೆಟ್ಟಸ್ವಾಮಿ (ಬಿಜೆಪಿ)- 46491 ಗೆಲುವಿನ ಅಂತರ- 9081
ಇದನ್ನೂ ಓದಿ: ಹಾಸನ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಏಳು ಸುತ್ತಿನ ಕೋಟೆ ಭೇದಿಸುವವರು ಯಾರು?
ಕೊರಟಗೆರೆ : ತ್ರಿಕೋನ
ಸ್ಪರ್ಧೆಯಿಂದ ಕುತೂಹಲ
ತುಮಕೂರು ಜಿಲ್ಲೆಯಲ್ಲೇ ಅತೀ ಚಿಕ್ಕ ತಾಲ್ಲೂಕು ಕೊರಟಗೆರೆ. ಆದರೆ ಇದು ಮೊದಲಿನಿಂದಲೂ ವಿಧಾನಸಭಾ ಕ್ಷೇತ್ರವಾಗಿಯೇ ಉಳಿದುಕೊಂಡು ಬಂದಿದೆ. ಎರಡು ಬಾರಿ ಕ್ಷೇತ್ರವನ್ನು ಮೀಸಲು ಕ್ಷೇತ್ರವನ್ನಾಗಿ ಮಾಡಿದ್ದು, ಇಲ್ಲಿಂದ ಆಯ್ಕೆ ಆಗಿದ್ದ ಇಬ್ಬರು ಸಚಿವರಾಗಿದ್ದರು. ಕ್ಷೇತ್ರ ಚಿಕ್ಕದಾದರೂ ರಾಜ್ಯದ ಗಮನ ಸೆಳೆಯುತ್ತಲೇ ಬಂದಿದೆ.
ಕೊರಟಗೆರೆ ಸದ್ಯ ಎಸ್‌ಸಿ ಮೀಸಲು ಕ್ಷೇತ್ರ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಎಸ್‌ಸಿ ಮತಗಳಲ್ಲಿ ಮಾದಿಗ ಸಮುದಾಯದ ಮತಗಳೇ ಅಧಿಕ. ನಂತರದ ಸ್ಥಾನದಲ್ಲಿ ಲಿಂಗಾಯತರಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಮಾಜಿ ಡಿಸಿಎಂ, ಡಾ.ಜಿ.ಪರಮೇಶ್ವರ ಛಲವಾದಿ ಸಮುದಾಯಕ್ಕೆ ಸೇರಿದವರು. ಇನ್ನು ಜೆಡಿಎಸ್ ನ ಅಭ್ಯರ್ಥಿ ಪಿ. ಆರ್. ಸುಧಾಕರ್‌ಲಾಲ್ ಲಂಬಾಣಿ ಸಮುದಾಯದವರು. ಬಿಜೆಪಿಯಿಂದ ಕಣಕ್ಕಿಳಿದಿರುವ ಅನಿಲ್ ಕುಮಾರ್ ಪ್ರಬಲ ಮಾದಿಗ ಸಮುದಾಯದವರು. ಹೀಗಾಗಿ ಈ ಬಾರಿ ಮಾದಿಗರು ಅನಿಲ್ ಕುಮಾರ್‌ಗೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ.
ಮಾದಿಗ ಸಮುದಾಯದ ಅನಿಲ್ ಕುಮಾರ್ ಒಕ್ಕಲಿಗ, ಲಿಂಗಾಯತ ಮತ ಬ್ಯಾಂಕ್‌ನ ಲಾಭವನ್ನೂ ಪಡೆದು ಕಾಂಗ್ರೆಸ್- ಜೆಡಿಎಸ್‌ಗೆ ಟಕ್ಕರ್ ಕೊಡುವ ಲೆಕ್ಕಾಚಾರದಲ್ಲಿದ್ದಾರೆ. ಕಳೆದ ಎರಡು ಬಾರಿ ಕಾಂಗ್ರೆಸ್- ಜೆಡಿಎಸ್ ನಡುವೆ ಮಾತ್ರ ಇದ್ದ ಜಿದ್ದಾಜಿದ್ದಿ ಈ ಬಾರಿ ಅನಿಲ್ ಕುಮಾರ್ ಎಂಟ್ರಿಯಿಂದ ತ್ರಿಕೋನ ಕದನವಾಗಿ ಬದಲಾಗಿದೆ.
2013ರ ಚುನಾವಣೆ ವೇಳೆ ಸಿಎಂ ರೇಸ್‌ನಲ್ಲಿದ್ದ ಜಿ. ಪರಮೇಶ್ವರ್‌ಗೆ ಕ್ಷೇತ್ರದ ಮತದಾರರು ಶಾಕ್ ಕೊಟ್ಟಿದ್ದರು. ಪರಮೇಶ್ವರ್ ಸೋಲುಣ್ಣುವ ಮೂಲಕ ಸಿಎಂ ಸ್ಥಾನ ಕೈತಪ್ಪಿತ್ತು. ಆದರೆ ಈ ಬಾರಿ ಮತ್ತೆ ಡಾ.ಜಿ.ಪರಮೇಶ್ವರ್ ಸದ್ದಿಲ್ಲದೇ ಸಿಎಂ ರೇಸ್‌ನಲ್ಲಿದ್ದಾರೆ. ಹಿಂದೆ ಈ ಅವಕಾಶ ಕೈತಪ್ಪಿದ್ದರ ಬಗ್ಗೆ ಮತ್ತು ಮುಂದಿನ ಬಾರಿ ಸಿಎಂ ಆಗುವ ಆಸೆಯ ಬಗ್ಗೆ ಪರಂ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವಿನ ಜಟಾಪಟಿಯಿಂದ ಪರಮೇಶ್ವರ್ ಅವರಿಗೆ ಅದೃಷ್ಟ ಒಲಿದರೆ ಅಚ್ಚರಿಯಿಲ್ಲ ಎಂಬ ಲೆಕ್ಕಾಚಾರದ ಮಾತು ಕೂಡ ಕ್ಷೇತ್ರದಲ್ಲಿ ಓಡಾಡುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣಾಗಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಡಾ.ಜಿ.ಪರಮೇಶ್ವರ್ (ಕಾಂಗ್ರೆಸ್): 81,598 – ಪಿ.ಆರ್.ಸುಧಾಕರ್ ಲಾಲ್ (ಜೆಡಿಎಸ್): 73,979 – ಗೆಲುವಿನ ಅಂತರ: 7,619
ಮಧುಗಿರಿ: ಮೂರು
ಪಕ್ಷಗಳ ನಡುವೆ
ಹಣಾಹಣಿ
ಏಷ್ಯಾದ ಅತಿ ದೊಡ್ಡ ಏಕಶಿಲಾ ಬೆಟ್ಟವನ್ನು ಹೊಂದಿರುವ ಮಧುಗಿರಿ ಕ್ಷೇತ್ರದಲ್ಲಿ ಒಕ್ಕಲಿಗ, ಎಸ್ಟಿ, ಎಸ್ಸಿ ಸಮುದಾಯಗಳ ಮತಗಳೇ ನಿರ್ಣಾಯಕ. ಈ ಕ್ಷೇತ್ರದಲ್ಲಿ ರಾಜವರ್ಧನ್ ಮತ್ತು ಡಾ.ಜಿ.ಪರಮೇಶ್ವರ್ ಸತತವಾಗಿ ಎರಡು ಬಾರಿ ಶಾಸಕರಾಗಿ, ಸಚಿವರಾಗಿರುವುದನ್ನು ಹೊರತುಪಡಿಸಿದರೆ, ಉಳಿದ ಯಾರೊಬ್ಬರೂ ಇಲ್ಲಿ ಎರಡನೇ ಅವಧಿಗೆ ಗೆದ್ದು ಬಂದಿಲ್ಲ. ಜತೆಗೆ ಸಚಿವರೂ ಆಗಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಅಭ್ಯರ್ಥಿಗಳ ನಡುವೆ ಪ್ರತಿ ಚುನಾವಣೆಯಲ್ಲೂ ಜಿದ್ದಾಜಿದ್ದಿ ನಡೆಯುತ್ತಾ ಬಂದಿದೆ.
ಭಾರತೀಯ ಜನತಾ ಪಕ್ಷ ಈ ಕ್ಷೇತ್ರದಲ್ಲಿ ಇದುವರೆಗೂ ಖಾತೆಯನ್ನೇ ತೆರೆದಿಲ್ಲ. ಆದರೆ ಈ ಬಾರಿ ನಿವೃತ್ತ ಕೆಎಎಸ್ ಅಧಿಕಾರಿಯನ್ನ ಕಣಕ್ಕಿಳಿಸಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸವಾಲೊಡ್ಡಲು ಸಜ್ಜಾಗಿದೆ. ಜೆಡಿಎಸ್ ನಿಂದ ಸ್ಪರ್ಧಿಸಿರುವ ಎಂ.ವಿ.ವೀರಭದ್ರಯ್ಯ ಒಕ್ಕಲಿಗ ಸಮುದಾಯದವರಾದರೆ, ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ಬಿ.ಜೆ.ಪಿಯ ಎಲ್.ಸಿ.ನಾಗರಾಜು ಇಬ್ಬರು ಕೂಡ ನಾಯಕ ಸಮುದಾಯಕ್ಕೆ ಸೇರಿದವರು.
ಇದುವರೆಗೂ ಕೆ.ಎನ್.ರಾಜಣ್ಣ ಮತ್ತು ವೀರಭದ್ರಯ್ಯ ನಡುವೆ ನೇರಾನೇರ ಪೈಪೋಟಿಯಿತ್ತು. ಅದರೊಟ್ಟಿಗೆ ಈಗ ಬಿಜೆಪಿ ಎಲ್.ಸಿ.ನಾಗರಾಜುಗೆ ಟಿಕೆಟ್ ಕೊಟ್ಟಿರುವುದರಿಂದ ಮೂರೂ ಪಕ್ಷಗಳ ನಡುವೆ ಹಣಾಹಣಿ ನಡೆಯಲಿದೆ.
ಹಾಲಿ ಶಾಸಕ ವೀರಭದ್ರಯ್ಯ ಅವರಿಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯಿದೆ. ಜೊತೆಗೆ ಹೆಚ್ಚಿನ ಜನಸಂಪರ್ಕವಿಲ್ಲದಿರುವುದು, ಹಿಂದೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದು, ತೊಡಕಾಗುವ ಸಾಧ್ಯತೆಯಿದೆ. ಆದರೂ ಒಕ್ಕಲಿಗ ಮತಗಳು ತನ್ನ ಕೈಹಿಡಿಯುತ್ತವೆ ಎಂದು ಅವರು ನಂಬಿದ್ದಾರೆ.
ಇನ್ನು ದೇವೇಗೌಡರ ಸಾವನ್ನ ಬಯಸಿ ಮಾತನಾಡಿದ್ದ ವಿಚಾರ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣಗೆ ಮುಳುವಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ಮಾಡಿದ್ದ ದೊಡ್ಡಗೌಡರು ರಾಜಣ್ಣ ವಿರುದ್ಧ ಭಾವನಾತ್ಮಕ ಬಾಣವನ್ನ ಬಿಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನ ಸೋಲಿಸಿ ನನ್ನ ಕಣ್ಣಲ್ಲಿ ನೀರು ತರಿಸಿದವರ ಕಣ್ಣಲ್ಲಿ ನೀರು ಬರಿಸಿದಾಗ ಮಾತ್ರ ನನಗೆ ಸಮಾಧಾನ ಎನ್ನುವ ಮೂಲಕ ರಾಜಣ್ಣನನ್ನ ಸೋಲಿಸಿ ಎಂಬ ಸಂದೇಶವನ್ನ ಒಕ್ಕಲಿಗ ಸಮಾಜಕ್ಕೆ ನೀಡಿದ್ದಾರೆ. ಇದರಿಂದ ಒಕ್ಕಲಿಗ ಮತಗಳು ಸಾರಾಸಗಾಟಾಗಿ ವೀರಭದ್ರಯ್ಯನವರಿಗೆ ವರ್ಗಾವಣೆಯಾದಲ್ಲಿ ಅದು ರಾಜಣ್ಣನವರಿಗೆ ಮುಳುವಾಗುವ ಸಾಧ್ಯತೆಯಿದೆ.
ಆದರೂ ತಾನು ಮಾಡಿರುವ ಅಭಿವೃದ್ಧಿ ಹಾಗೂ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ದಲಿತ ಮತ್ತು ಹಿಂದುಳಿದ ವರ್ಗದ ಮತಗಳು ತನ್ನನ್ನು ಗೆಲುವಿನ ದಡ ಸೇರಿಸುತ್ತವೆ ಎಂಬ ನಂಬಿಕೆ ರಾಜಣ್ಣ ಅವರದು. ಬಿಜೆಪಿಯ ಎಲ್.ಸಿ.ನಾಗರಾಜುರವರು ಸಾಕಷ್ಟು ಹಣ ಖರ್ಚು ಮಾಡುತ್ತಾ ಚುನಾವಣೆಗೆ ಧುಮುಕಿದ್ದಾರೆ. ಅವರು ಎಷ್ಟು ಎಸ್‌ಟಿ ಓಟುಗಳನ್ನು ಪಡೆಯುತ್ತಾರೋ ಅಷ್ಟು ರಾಜಣ್ಣನವರಿಗೆ ಡ್ಯಾಮೇಜ್ ಆಗಬಹುದು. ಆದರೆ ಅವರ ಮೇಲಿನ ಭ್ರಷ್ಟಾಚಾರದ ಆರೋಪಗಳು ಚುನಾವಣೆಯಲ್ಲಿ ಮುಖ್ಯವಾಗಿ ಚರ್ಚೆಯಾಗುವ ಸಂಭವವಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಎಂ.ವಿ.ವೀರಭದ್ರಯ್ಯ (ಜೆಡಿಎಸ್) : 88,521- ಕೆ.ಎನ್.ರಾಜಣ್ಣ (ಕಾಂಗ್ರೆಸ್): 69,947 -ಗೆಲುವಿನ ಅಂತರ: 18,574
ಶಿರಾ: ಮದಲೂರು
ಕೆರೆಯ ಸುತ್ತವೇ
ರಾಜಕೀಯ
ಹಲವು ಕ್ಷೇತ್ರಗಳಲ್ಲಿ ಜಾತಿ, ಧರ್ಮ, ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆದರೆ, ಶಿರಾದಲ್ಲಿ ನೀರಾವರಿಯ ಹೆಸರಲ್ಲಿ ರಾಜಕಾರಣ ನಡೆಯುತ್ತಾ ಬಂದಿದೆ. ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿಯಿಂದ ನೀರು ತುಂಬಿಸುವುದು ಹಲವು ವರ್ಷಗಳಿಂದ ಚುನಾವಣೆಯ ಪ್ರಮುಖ ವಿಚಾರವಾಗಿದೆ. ಈ ಕೆರೆಗೆ ನೀರು ಬಂದರೆ ಹತ್ತಾರು ಹಳ್ಳಿಗಳ ರೈತರಿಗೆ ಅನುಕೂಲವಾಗುತ್ತದೆ. ಹೀಗಾಗಿ ಇದರ ಸುತ್ತಲೇ ರಾಜಕೀಯ ಪಕ್ಷಗಳ ಪ್ರಚಾರ ಗಿರಕಿ ಹೊಡೆಯುತ್ತಿರುತ್ತದೆ.
ಉಳಿದಂತೆ ಕ್ಷೇತ್ರದಲ್ಲಿರುವ ಯಾವ ಸಮಸ್ಯೆಯ ಬಗೆಗೂ ಯಾರೂ ತಲೆಕೆಡಿಸಿಕೊಳ್ಳದಿರುವುದು ವಿಚಿತ್ರವಾಗಿದೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಮತಗಳು ಹೆಚ್ಚಾಗಿವೆ. ಒಕ್ಕಲಿಗರು 49 ಸಾವಿರ, ಕಾಡುಗೊಲ್ಲರು 26 ಸಾವಿರ, ಮುಸ್ಲಿಂ 30 ಸಾವಿರ, ಕುರುಬರು 13 ಸಾವಿರ, ನಾಯಕ 13 ಸಾವಿರ ಹಾಗೂ ಬಲಿಜ ಸಮುದಾಯದ 7 ಸಾವಿರ ಮತಗಳಿವೆ. ಒಕ್ಕಲಿಗ, ಕಾಡುಗೊಲ್ಲ ಮತ್ತು ಮುಸ್ಲಿಂ ಸಮುದಾಯ ಮತಗಳೇ ಇಲ್ಲಿ ನಿರ್ಣಾಯಕ ಎನಿಸಿವೆ.
ಈ ಬಾರಿ ಶಿರಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಪ್ರಮುಖ ಮೂರೂ ಪಕ್ಷಗಳ ಅಭ್ಯರ್ಥಿಗಳು ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ, ಟಿ.ಬಿ.ಜಯಚಂದ್ರ ಕಣಕ್ಕಿಳಿದಿದ್ದರೆ, ಬಿಜೆಪಿ ಹಾಲಿ ಶಾಸಕ ಡಾ.ರಾಜೇಶ್ ಗೌಡಗೆ ಮತ್ತೊಮ್ಮೆ ಟಿಕೆಟ್ ನೀಡಿದೆ. ಇನ್ನು ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಉಗ್ರೇಶ್ ಎಂಬುವವರನ್ನ ಕಣಕ್ಕಿಳಿಸಿದೆ.
ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿರುವ ಟಿ.ಬಿ ಜಯಚಂದ್ರ ಹಿರಿಯ ರಾಜಕಾರಣಿ. 6 ಬಾರಿ ವಿಧಾನ ಸಭೆ ಪ್ರವೇಶಿಸಿರುವ ಜಯಚಂದ್ರ, ಈ ಬಾರಿ ಕೊನೆಯ ಚುನಾವಣೆ ಎಂದು ಮತದಾರರ ಮುಂದೆ ಪ್ರಚಾರ ಶುರು ಮಾಡಿದ್ದಾರೆ. ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ವಿಚಾರಗಳು- ನೀರಾವರಿ ವಿಚಾರಗಳನ್ನು ಮುಂದಿಟ್ಟುಕೊಂಡು ಜಯಚಂದ್ರ ಪ್ರಚಾರ ನಡೆಸುತ್ತಿದ್ದಾರೆ.
ಜೆಡಿಎಸ್‌ನ ಶಾಸಕ ದಿ.ಸತ್ಯನಾರಾಯಣ್ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭೆಗೆ 2020ರಲ್ಲಿ ಉಪಚುನಾವಣೆ ನಡೆದಿತ್ತು. ಮೊದಲ ಬಾರಿಗೆ ಚುನಾವಣೆ ಎದುರಿಸಿದ ಡಾ.ರಾಜೇಶ್ ಗೌಡ ಗೆಲುವು ಸಾಧಿಸಿದ್ದರು. ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು. ಉಪ ಚುನಾವಣೆಯಲ್ಲಿ ಮದಲೂರು ಕೆರೆ ನೀರು ಹರಿಸುವುದು, ಕಾಡುಗೊಲ್ಲರ ಮೀಸಲಾತಿ ವಿಚಾರ ಹಾಗೂ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಬಿಜೆಪಿ ಗೆಲುವಿಗೆ ಸಹಕಾರಿಯಾಗಿತ್ತು. ಅಂದು ಇಡೀ ಸರ್ಕಾರದ ನೆರವಿನಿಂದ ಗೆಲುವು ಸಾಧಿಸಿದ್ದ ರಾಜೇಶ್ ಗೌಡ ಇದೀಗ ಒಬ್ಬಂಟಿಯಾಗಿ ಚುನಾವಣೆ ಎದುರಿಸಬೇಕಾಗಿದೆ. ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ನೀರು ಹರಿಸಿದ್ದೇವೆ. ಅಭಿವೃದ್ಧಿ ಕೆಲಸ ಮಾಡಿದ್ದೇವೆ ಅಂತ ಡಾ.ರಾಜೇಶ್ ಗೌಡ ಪ್ರಚಾರ ಪ್ರಾರಂಭಿಸಿದ್ದಾರೆ.
ಶಿರಾ ಕ್ಷೇತ್ರದಲ್ಲಿ ಕಟ್ಟಾ ಕಾರ್ಯಕರ್ತರ ಪಡೆಯನ್ನ ಹೊಂದಿರುವ ಜೆಡಿಎಸ್ ಹಲವು ಬಾರಿ ಗೆಲುವು ಸಾಧಿಸಿದೆ. ಇದೀಗ ಒಕ್ಕಲಿಗ ಸಮುದಾಯದ ಉಗ್ರೇಶ್ ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಉಗ್ರೇಶ್ ಮತ ಕೇಳುತ್ತಿದ್ದಾರೆ. ಒಟ್ಟಾರೆ ಬಿಜೆಪಿಯ ಡಾಕ್ಟರ್, ಕಾಂಗ್ರೆಸ್ ವಕೀಲರಿಗೆ ಜೆಡಿಎಸ್‌ನ ರೈತನ ಮಗನ ಸವಾಲು ಹಾಕುತ್ತಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಬಿ.ಸತ್ಯನಾರಾಯಣ (ಜೆಡಿಎಸ್): 74,338 – ಟಿ.ಬಿ.ಜಯಚಂದ್ರ (ಕಾಂಗ್ರೆಸ್): 63,973 – ಗೆಲುವಿನ ಅಂತರ: 10,365
ಪಾವಗಡ : ಕಾಂಗ್ರೆಸ್
ಜೆಡಿಎಸ್ ನಡುವೆ
ಜಿದ್ದಾಜಿದ್ದಿ
ಆಂಧ್ರಪ್ರದೇಶ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಪಾವಗಡ ಭೌಗೋಳಿಕವಾಗಿ ಚಿತ್ರದುರ್ಗ ಜಿಲ್ಲೆಗೆ ಸೇರಿಕೊಂಡಿದ್ದರೂ, ಆಡಳಿತಾತ್ಮಕವಾಗಿ ತುಮಕೂರು ಜಿಲ್ಲೆಗೆ ಸೇರಿದೆ. ಆದರೆ, ಲೋಕಸಭಾ ಕ್ಷೇತ್ರ ಮಾತ್ರ ಚಿತ್ರದುರ್ಗವಾಗಿದೆ.
ಪಾವಗಡ ಕ್ಷೇತ್ರ ಇದುವರೆಗೂ ಒಟ್ಟು 13 ಚುನಾವಣೆಗಳನ್ನ ಎದುರಿಸದ್ದು, ಏಳು ಸಲ ಕಾಂಗ್ರೆಸ್, ಎರಡು ಸಲ ಪಕ್ಷೇತರ, ಎರಡು ಸಲ ಜೆಡಿಎಸ್, ಒಂದು ಸಲ ಜನತಾ ಪಕ್ಷ ಮತ್ತು ಒಂದು ಸಲ ಜನತಾ ದಳ ಜಯ ಗಳಿಸಿವೆ. ಇಲ್ಲಿ ನಡೆದಿರುವ ಯಾವ ಚುನಾವಣೆಯಲ್ಲಿಯೂ ಸತತ ಎರಡನೇ ಬಾರಿ ಯಾರೂ ಆಯ್ಕೆಯಾಗಿಲ್ಲ.
ಎಸ್ಸಿ ಮೀಸಲು ಕ್ಷೇತ್ರವಾಗಿರೋ ಪಾವಗಡ ಕ್ಷೇತ್ರದಲ್ಲಿ ಬರೋಬ್ಬರಿ 72,000 ಎಸ್ಸಿ ಮತದಾರರಿದ್ದಾರೆ. ಇನ್ನು 53,000 ಎಸ್ಟಿ ವರ್ಗಕ್ಕೆ ಸೇರಿದ ಮತದಾರರು ಇದ್ರೆ, 38 ಸಾವಿರ ಗೊಲ್ಲ ಸಮುದಾಯದ ಮತಗಳು, 31 ಸಾವಿರ ಒಕ್ಕಲಿಗರು ಹಾಗೂ 6,397 ಇತರೆ ವರ್ಗಕ್ಕೆ ಸೇರಿದ ಮತದಾರರಿದ್ದಾರೆ. ಎಸ್ಸಿ, ಎಸ್ಟಿ ಹಾಗೂ ಗೊಲ್ಲ ಸಮುದಾಯದ ಮತಗಳೇ ಇಲ್ಲಿ ನಿರ್ಣಾಯಕ.
ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿಯಿದೆ. ಬಿಜೆಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಸ್ಥಿತಿಯಲ್ಲಿದೆ. ಪಕ್ಷವು ಕೃಷ್ಣ ನಾಯಕ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ನಿಂದ ಬೋವಿ ಸಮಯದಾಯಕ್ಕೆ ಸೇರಿದ ಎಚ್.ವಿ ವೆಂಕಟೇಶ್ ಸ್ಪರ್ಧಿಸಿದ್ದಾರೆ. ಹಾಲಿ ಶಾಸಕ ವೆಂಕಟರಮಣಪ್ಪ ಪುತ್ರರಾಗಿರುವ ಎಚ್.ವಿ.ವೆಂಕಟೇಶ್ ಅಪ್ಪನ ಅಭಿವೃದ್ಧಿ ಕೆಲಸ ಹಾಗೂ ರಾಜಕೀಯ ತಂತ್ರಗಾರಿಕೆಯ ಆಧಾರದಲ್ಲಿ ಗೆಲುವಿನ ದಡ ಮುಟ್ಟುವ ತವಕದಲ್ಲಿದ್ದಾರೆ.
ಇನ್ನು ಜೆಡಿಎಸ್ ನಿಂದ ಸ್ಪರ್ಧಿಸಿರುವ ಕೆ.ಎಂ.ತಿಮ್ಮರಾಯಪ್ಪ ಈಗಾಗಲೇ ಎರಡು ಸಲ ಶಾಸಕರಾಗಿದ್ದಾರೆ. ಎಸ್ಸಿ ಸಮುದಾಯದವರಾಗಿರುವ ತಿಮ್ಮರಾಯಪ್ಪ, ಎಸ್‌ಸಿ, ಎಸ್ಟಿ ಮತಗಳ ಜೊತೆಗೆ ಜೆಡಿಎಸ್‌ನ ಮತಬ್ಯಾಂಕ್ ಒಕ್ಕಲಿಗ ಮತಗಳನ್ನ ಪಡೆದು ಗೆಲ್ಲುವ ಆಲೋಚನೆಯಲ್ಲಿದ್ದಾರೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ.
ಕಳೆದ ಬಾರಿಯ ಫಲಿತಾಂಶ ಏನು?
ವೆಂಕಟರಮಣಪ್ಪ (ಕಾಂಗ್ರೆಸ್): 72, 974- ತಿಮ್ಮರಾಯಪ್ಪ (ಜೆಡಿಎಸ್) : 72, 565 – ಗೆಲುವಿನ ಅಂತರ: 409
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕೈ ಮತ್ತು ಕಮಲದ ನಡುವೆ ನೇರ ಪೈಪೋಟಿ