ಚಿಕ್ಕೋಡಿ: ಮುಂದಿನ ವಿಧಾನಸಭಾ ಚುನಾವಣೆ (Karnataka Election 2023) ಕಣ ರಂಗೇರುತ್ತಿದೆ. ಆಕಾಂಕ್ಷಿಗಳು ಟಿಕೆಟ್‌ಗಾಗಿ ನಾನಾ ಕಸರತ್ತು ಮಾಡುತ್ತಿದ್ದಾರೆ. ಈಗ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಶಾಸಕ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡುವ ವಿಚಾರದ ಬಗ್ಗೆ ಪಕ್ಷ ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಅದನ್ನು ತೀರ್ಮಾನ ಮಾಡುವುದು ನಾನೂ ಅಲ್ಲ, ಅವರೂ ಅಲ್ಲ. ಆದರೆ, ನಾನು ಸ್ಪರ್ಧೆ ಮಾಡಬೇಕೋ? ಮಾಡಬೇಡವೋ? ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಅವರೆಲ್ಲರ ಅಭಿಪ್ರಾಯದ ಮೇಲೆ ಟಿಕೆಟ್ ಕೇಳುವ ಬಗ್ಗೆ ಚಿಂತಿಸುತ್ತೇನೆ ಎಂದು ಹೇಳಿದ್ದಾರೆ.
ಅಥಣಿಯಲ್ಲಿ ಮುಸ್ಲಿಂ ಸಮುದಾಯದ ಸಭೆಯ ಬಳಿಕ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡಬೇಕೋ ಬೇಡವೋ ಎಂದು ತಿರ್ಮಾನಿಸಲು ಸಭೆ ನಡೆಸುತ್ತಿದ್ದೇನೆ. ಹೀಗಾಗಿ ಎಲ್ಲ ಸಮುದಾಯಗಳವರ ಬಳಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇನೆ. ಈ ನಿಮಿತ್ತ ಮಾರ್ಚ್ 27ರಂದು ಎಲ್ಲ ಸಮುದಾಯಗಳ ಜತೆಗೆ ಸಭೆ ಮಾಡಿ ನಿರ್ಣಯ ಮಾಡುತ್ತೇನೆ. ಇಲ್ಲಿ ನಾನು ಪಕ್ಷದ ವರಿಷ್ಠರಲ್ಲಿ ಟಿಕೆಟ್ ಕೇಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ. ಎಲ್ಲ ಸಮುದಾಯದವರು ಟಿಕೆಟ್ ಕೇಳು ಎಂದು ಅಭಿಪ್ರಾಯ ಸೂಚಿಸಿದರೆ, ಕೇಳುತ್ತೇನೆ ಎಂದು ಹೇಳಿದರು.
ಮತದಾರರನ್ನು, ಮುಖಂಡರನ್ನು ಕೇಳಿ ಚುನಾವಣೆಗೆ ಹೋಗುವುದು ಸೂಕ್ತ ಎಂದೆನಿಸಿತು. ಹೀಗಾಗಿ ಎಲ್ಲರ ಅಭಿಪ್ರಾಯ ಪಡೆಯಲು ಮುಂದಾಗಿದ್ದೇನೆ. ಇನ್ನು ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಹಾಗೆಯೇ ನಡೆಯುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Rain Alert: ಮುಂದಿನ 3 ದಿನ ದೇಶಾದ್ಯಂತ ಭಾರಿ ಮಳೆ, ಈಗಾಗಲೇ 10 ಜನ ಸಾವು, ಕಟಾವು ಬೇಡ ಎಂದ ಹವಾಮಾನ ಇಲಾಖೆ
ಒಂದು ವೇಳೆ ಮಹೇಶ್ ಕುಮಟಳ್ಳಿಗೆ ಟಿಕೆಟ್ ಖಚಿತಪಡಿಸಿದರೆ, ನೀವು ಎಂಎಲ್‌ಸಿ ಆಗಿಯೇ ಮುಂದುವರಿಯುತ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸವದಿ, ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ. ನಾನೂ ಅಲ್ಲ, ಅವರೂ ಅಲ್ಲ ಎಂದು ಉತ್ತರಿಸಿದರು. ಒಂದು ವೇಳೆ ಪಕ್ಷದ ಮುಖಂಡರು ಸ್ಪರ್ಧೆ ಬೇಡ ಎಂದು ಹೇಳಿದರೆ, ಸ್ವತಂತ್ರ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಈ ವಿಚಾರ ನನ್ನ ಮುಂದೆ ಇಲ್ಲ ಎಂದ ಹೇಳಿದರು.