ಮೈಸೂರು: ಭ್ರಷ್ಟಾಚಾರ ಬಿಜೆಪಿಯಲ್ಲೂ ಇದೆ. ಅದರ ವಿರುದ್ಧ ಹೋರಾಟ ಮಾಡಲು ನನ್ನ ಪ್ರಯತ್ನ ಇದಾಗಿದೆ. ನಾವು ಕುಡುಕ ಗಂಡನನ್ನು ಮದುವೆಯಾಗಿದ್ದೇವೆ. ಅವನನ್ನು ಸರಿ ಮಾಡುವುದು ನಮ್ಮ ಕೆಲಸ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಮ್ಮ ನಾಯಕರೇ ತಡೆಯುತ್ತಿದ್ದಾರೆ. ಕೇಂದ್ರದ ನಾಯಕರಿಗೆ ಇದರ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ನಮ್ಮನ್ನು ತಡೆಯುತ್ತಿರುವವರು ನಮ್ಮ ನಾಯಕರುಗಳೇ ಆಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ನನ್ನ ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ಹಾನಿ ಇಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ, ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಹೇಳಿದರು.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಸ್ಪರ್ಧೆಯಿಂದ ಬಿಜೆಪಿಗೆ ತೊಂದರೆ ಇಲ್ಲ. ನಾನು ಬಿಜೆಪಿ ವಿರೋಧಿ ಅಲ್ಲ. ನನಗೆ ಪ್ರಧಾನಿ ನರೇಂದ್ರ ಮೋದಿಯೇ ನಾಯಕ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರೀತಿಯ ಅಧಿಕಾರ ಬೇಕು. ನಮಗೆ ಬಿಜೆಪಿ ಮೂಲ ಪಕ್ಷ. ನನ್ನ ಸ್ಪರ್ಧೆಯಿಂದ ಬಿಜೆಪಿಗೆ ತೊಂದರೆಯಾಗಲ್ಲ. ಹಾಗೆ ಅಂದುಕೊಂಡಿದ್ದರೆ ಅದು ಅವರ ಮೂರ್ಖತನ ಎಂದು ಹೇಳಿದರು.
ಬಿಜೆಪಿಯು ನಿಷ್ಠಾವಂತ ಹಿಂದುಪರ ಕಾರ್ಯಕರ್ತರ ಪಕ್ಷ. ಬಿಜೆಪಿಯನ್ನು ಪ್ರಶ್ನಿಸುವ ಅಧಿಕಾರ ನಮಗೆ ಇದೆ. ಮೋದಿ ಅವರು ನಿಷ್ಠಾವಂತ ನಾಯಕ. ಆದರೆ, ನಮ್ಮ ರಾಜ್ಯದ ನಾಯಕರು ಹಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ 2004ರಲ್ಲಿ ಚುನಾವಣೆ ಸ್ಪರ್ಧೆ ಮಾಡಿದಾಗ ಅವರ ಬಳಿ ಏನೂ ಇರಲಿಲ್ಲ. ಆದರೆ, ಈಗ ಅವರ ಆಸ್ತಿ 1000 ಕೋಟಿ ರೂಪಾಯಿ ದಾಟಿದೆ. ಅದು ಎಲ್ಲಿಂದ ಬಂತು? ನಾನು ಈಗ ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಗೆದ್ದರೆ ಬಿಜೆಪಿ ಸೇರುತ್ತೇನೆ ಎಂದು ಹೇಳಿದರು.
ಎಸ್‌ಡಿಪಿಐ ಒಂದು ದೇಶ ದ್ರೋಹ ಪಕ್ಷ
ಎಸ್‌ಡಿಪಿಐ ಒಂದು ದೇಶ ದ್ರೋಹ ಪಕ್ಷ. ಕರ್ನಾಟಕದಲ್ಲಿ 30ಕ್ಕೂ ಹೆಚ್ಚು ಕೊಲೆಯಾದ ನಿದರ್ಶನವಾಗಿದೆ. ಪ್ರವೀಣ್ ನೆಟ್ಟರ್ ಕೊಲೆಯ ಪ್ರಮುಖ ಆರೋಪಿಯನ್ನು ಎಸ್‌ಡಿಪಿಐ ಅಭ್ಯರ್ಥಿ ಅಂತ ಘೋಷಣೆ ಮಾಡಿದೆ. ಎಸ್‌ಡಿಪಿಐ ಕೊಲೆ ಮಾಡುವವರಿಗೆ ಬೆಂಬಲ ಕೊಡುತ್ತಿದೆ. ಚುನಾವಣಾ ಆಯೋಗ ಈ ವಿಚಾರದ ಕಡೆ ಗಮನ ಕೊಡಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ದೇಗುಲದ ಹಣ ಬಳಕೆ ಸರಿಯಲ್ಲ
ನಂಜನಗೂಡು ಶ್ರೀಕಂಠೇಶ್ವರನ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಸ್ಥಳೀಯ ಶಾಸಕರು ಬಳಕೆ ಮಾಡಿಕೊಂಡಿರುವುದು ಖಂಡನೀಯ. ಶಾದಿ ಮಹಲ್ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಶಾಸಕರ ಈ ನಿಲುವು ಸರಿಯಾದ ಕ್ರಮವಲ್ಲ. ಹೀಗಾಗಿ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು.
ಧಾರ್ಮಿಕ ದತ್ತಿ ಇಲಾಖೆ ನಿಯಮಕ್ಕೆ ವಿರುದ್ಧವಾಗಿ ದೇಗುಲದ ಹುಂಡಿ ಹಣವನ್ನು ಶಾದಿ ಮಹಲ್ ನಿರ್ಮಾಣಕ್ಕೆ ನೀಡಬಾರದು. ದೇಗುಲದ ಹುಂಡಿ ಹಣವನ್ನು ಹಿಂದುಗಳ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೂ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ. ಅಕ್ರಮ ಗೋ ಸಾಗಾಟ ತಡೆಗಟ್ಟಲು ಮುಂದಾದ ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಸರಿಯಾದ ಕ್ರಮವಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷಗಳ ನಾಯಕರು ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದವರ ಪರ ನಿಂತಿರುವುದು ಸರಿಯಲ್ಲ. ಅಕ್ರಮ ಗೋವು ಸಾಗಾಟ ತಡೆಯಲು ಮುಂದಾದವರ ಪರ ನಿಲ್ಲಬೇಕು ಎಂದು ಆಗ್ರಹಿಸಿದರು.
ಹಾಸನ ಜಿಲ್ಲೆ ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ಕುರಾನ್ ಪಠಣ ಮಾಡಿದ್ದು ಅಕ್ಷಮ್ಯ ಅಪರಾಧ. ಅಲ್ಲಿನ ಸ್ಥಳೀಯ ಜೆಡಿಎಸ್ ನಾಯಕರ ಒತ್ತಡಕ್ಕೆ ಮಣಿದು ಕುರಾನ್ ಪಠಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚುನಾವಣೆ ದೃಷ್ಟಿಯಿಂದ ಕುರಾನ್ ಪಠಣಕ್ಕೆ ಜೆಡಿಎಸ್ ನಾಯಕರು ಒತ್ತಡ ಹೇರಿದ್ದಾರೆ. ಈ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲಾಗಿದೆ. ಹಾಗಾಗಿ ಅಲ್ಲಿನ ಜಿಲ್ಲಾಡಳಿತ, ಚುನಾವಣಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.