ಶಿವಮೊಗ್ಗ / ಬೆಂಗಳೂರು : ನಿರೀಕ್ಷೆಯಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ನಾಯಕಿ ಡಾ. ರಾಜನಂದಿನಿ ಬಿಜೆಪಿ ಸೇರಿದ್ದಾರೆ. ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತವರು ಜಿಲ್ಲೆಯ ಈ ಮಹಿಳಾ ನಾಯಕಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಸಾಗರದ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ, ಉಪಸ್ಥಿತರಿದ್ದರು. ಬುಧವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ಡಾ. ರಾಜನಂದಿನಿ ಪಕ್ಷ ಸೇರ್ಪಡೆಯನ್ನು ಖಚಿತ ಪಡಿಸಿದ್ದರು.
ಈ ಬೆಳವಣಿಗೆ ಕುರಿತು ಸಾಗರದಲ್ಲಿ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ, ತಮ್ಮ ಮಗಳು ಡಾ. ರಾಜನಂದಿನಿ ಬಿಜೆಪಿ ಸೇರ್ಪಡೆಯಿಂದ ʻʻನನ್ನ ಎದೆಗೆ ಚೂರಿ ಹಾಕಿದಂತಾಗಿದೆ. ನನಗೆ ತಿಳಿಸದೇ ಆಕೆ ಬಿಜೆಪಿ ಸೇರಿದ್ದಾಳೆʼʼ ಎಂದು ನೊಂದು ನುಡಿದಿದ್ದಾರೆ. ಆದರೆ ʻವಿಸ್ತಾರ ನ್ಯೂಸ್ʼ ನೊಂದಿಗೆ ಮಾತನಾಡಿರುವ ಡಾ. ರಾಜನಂದಿನಿ ತಂದೆಯ ಒಪ್ಪಿಗೆ ಪಡೆದೇ ತಾವು ಬಿಜೆಪಿ ಸೇರಿರುವುದಾಗಿ ಹೇಳಿದ್ದಾರೆ.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ. ಎಸ್. ಯಡಿಯೂರಪ್ಪ, ʻʻಈ ನಾಡು ಕಂಡ ಅತ್ಯಂತ ಶ್ರೇಷ್ಠ ರಾಜಕಾರಣಿ ಕಾಗೋಡು ತಿಮ್ಮಪ್ಪ. ಅವರ ಮಗಳು ಡಾ.ರಾಜನಂದಿನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಿಂದುಳಿದ ವರ್ಗದಿಂದ ಬಂದಿರುವ ಅವರ ಸೇರ್ಪಡೆಯಿಂದ ಶಿವಮೊಗ್ಗ ಜಿಲ್ಲೆಯ ಬಿಜೆಪಿಗೆ ಹೆಚ್ಚು ಶಕ್ತಿ ಬಂದಂತಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನಂದಿನಿ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲಾಗುವುದುʼʼ ಎಂದು ತಿಳಿಸಿದ್ದಾರೆ.
ಚುನಾವಣೆಯ ಗಾಳಿ ಬೀಸಿದೆ…
ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಬಿಜೆಪಿ ಸೇರ್ಪಡೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ರಾಷ್ಟ್ರೀಯ ಮಾಧ್ಯಮಗಳು ಹಿರಿಯ ಕಾಂಗ್ರೆಸ್ ನಾಯಕನ ಪುತ್ರಿಯ ಈ ಸೇರ್ಪಡೆಯನ್ನು ಬಹಳ ಮಹತ್ವದ ಬೆಳವಣಿಗೆ ಎಂದು ಬಣ್ಣಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ʻʻಚುನಾವಣಾ ಗಾಳಿ ಬೀಸಿದೆ. ನಾಯಕರು ಬರ್ತಾರೆ, ಹೋಗ್ತಾರೆʼʼ ಎಂದಷ್ಟೇ ಹೇಳಿದ್ದಾರೆ.
ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಪಕ್ಷದ ಹಿರಿಯ ನಾಯಕರನ್ನು, ಹಿಂದುಳಿದ ವರ್ಗಗಳ ನಾಯಕರನ್ನು ಹೇಗೆ ನಡೆಸಿಕೊಳ್ಳುತ್ತಿವೆ ಎಂಬುದಕ್ಕೆ ಡಾ. ರಾಜನಂದಿನಿ ಅವರೇ ಸಾಕ್ಷಿ. ಪಕ್ಷದ ವರ್ತನೆಯಿಂದ ಬೇಸೆತ್ತು ಅವರಿಂದು ಬಿಜೆಪಿಗೆ ಸೆರ್ಪಡೆ ಆಗಿದ್ದಾರೆ. ಬಿಜೆಪಿಯು ಪಕ್ಷ ಸಂಘಟನೆಯ ಕಾರ್ಯದಲ್ಲಿ ಅವರನ್ನು ಬಳಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ನನಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ನನ್ನ ತಂದೆ ಪ್ರಯತ್ನ ಪಟ್ಟಿದ್ದರು. ಆದರೆ ಪಕ್ಷ ಟಿಕೆಟ್ ನೀಡಲಿಲ್ಲ. ಹಾಲಿ ಅಭ್ಯರ್ಥಿ ನಮ್ಮನ್ನು ಪರಿಗಣಿಸುತ್ತಿಲ್ಲ. ಪಕ್ಷ ಸರಿಯಾಗಿ ನಡೆಸಿಕೊಳ್ಳದೇ ಇರುವುದರಿಂದ ಬಿಜೆಪಿಗೆ ಸೇರಿದ್ದೇನೆ. ಬಿಜೆಪಿಯ ಸಿದ್ಧಾಂತಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ಪಕ್ಷಕ್ಕೆ ಸೇರ್ಪಡೆಯಾಗುವಾಗ ಯಾವುದೇ ಷರತ್ತು ವಿಧಿಸಿಲ್ಲ ಎಂದು ಬಿಜೆಪಿ ಸೇರಿದ ಡಾ. ರಾಜನಂದಿನಿ ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ಗೆ ಹೇಳಿದರು.
ಟೆನ್ನಿಸ್ ಆಟಗಾರ್ತಿಯಾದ ತೀರ್ಥ ಇಸ್ಕಾ, ಕಾಂಗ್ರೆಸ್ ಮುಖಂಡ ರತ್ನಾಕರ ಹೊನಗೋಡು, ಭೈರಪ್ಪ, ರಮೇಶ್ ಮತ್ತು ಅವರ ಬೆಂಬಲಿಗರು ಬಿಜೆಪಿಗೆ ಸೇರಿದ್ದಾರೆ.
ಕಾಂಗ್ರೆಸ್ ಬಿಡೆನು ಎಂದ ಕಾಗೋಡು
ಮಗಳು ರಾಜನಂದಿನಿ ಈ ರೀತಿ ಮಾಡುತ್ತಾಳೆ ಎಂಬುದನ್ನು ಕನಸಲೂ ಯೋಚಿಸಿರಲಿಲ್ಲ. ಇದೆಲ್ಲಾ ಶಾಸಕ ಹರತಾಳು ಹಾಲಪ್ಪ ಅವರ ತಂತ್ರ ಇರಬಹುದು ಎಂದು ಸಾಗರದಲ್ಲಿ ಹೇಳಿರುವ ಕಾಗೋಡು ತಿಮ್ಮಪ್ಪ ತಾವು ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕಾರಣದಲ್ಲಿ ಬದ್ಧತೆ, ಸ್ಥಿರತೆ ಇಟ್ಟುಕೊಂಡು ಬೆಳೆದು ಬಂದವರು ನಾವು. ಈ ಬಗ್ಗೆ ನನಗೆ ಸಂತೋಷವಿದೆ. ಏನೇ ಆದರೂ ನಾನು ಕಾಂಗ್ರೆಸ್ ಅನ್ನು ಬಿಟ್ಟು ಹೋಗುವುದಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವೆ ಎಂದು ತಿಳಿಸಿದ್ದಾರೆ. ರಾಜಕೀಯ ಸ್ಥಾನಮಾನಕ್ಕಾಗಿ ನನ್ನ ಮಗಳು ಹೀಗೆ ಮಾಡಿದ್ದರೆ, ಕಾಂಗ್ರೆಸ್‌ನಲ್ಲಿಯೇ ಇದ್ದು, ಅದನ್ನೆಲ್ಲಾ ಪಡೆದುಕೊಳ್ಳಬಹುದಿತ್ತು ಎಂದು ಹೇಳಿದ ಅವರು, ನಾನು ನನ್ನ ಮಗಳಿಗಾಗಿ ಟಿಕೆಟ್ ಕೇಳಿದ್ದು ನಿಜ, ಆದರೆ ಪಕ್ಷ ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ ಎಂದರು.
ಇದನ್ನೂ ಓದಿ : Karnataka Election 2023 : ಕನಕಪುರ, ವರುಣದಲ್ಲಿ ಸಂತೋಷ್, ಜೋಷಿಯವರನ್ನು ಕಣಕ್ಕಿಳಿಸಿ; ಕಾಂಗ್ರೆಸ್ ಪಂಥಾಹ್ವಾನ