Site icon Vistara News

Karnataka Election 2023: 1 ಗಂಟೆಗೆ 37.25% ಮತದಾನ; ಕಳೆದ ಸಾರಿಗಿಂತ ಹೆಚ್ಚಾ, ಕಡಿಮೇನಾ?

voting

ಬೆಂಗಳೂರು: ಮಧ್ಯಾಹ್ನ 1 ಗಂಟೆಯ ವೇಳೆಗೆ ಚುನಾವಣಾ ಆಯೋಗ ನೀಡಿದ ಲೆಕ್ಕಾಚಾರದ ಪ್ರಕಾರ ಮತದಾನ ಪ್ರಮಾಣ ರಾಜ್ಯಾದ್ಯಂತ 37.25% ತಲುಪಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election 2023) ನಿಂತ ನಾನಾ ಅಭ್ಯರ್ಥಿಗಳ ಬಿಡುವಿಲ್ಲದ ಪ್ರಚಾರ, ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗದ ನಿರಂತರ ಉತ್ತೇಜನ, ಮಾಧ್ಯಮಗಳ ಸತತ ಒತ್ತಾಸೆಯ ನಡುವೆಯೂ ಈ ಬಾರಿ ದಾಖಲೆ ಅನ್ನಿಸುವಂಥ ಮತದಾನ (voting) ಪ್ರಮಾಣ ಕಂಡುಬಂದಿಲ್ಲ.

ಮಧ್ಯಾಹ್ನ 1 ಗಂಟೆಯ ವೇಳೆಗೆ ಮತದಾನ ಪ್ರಮಾಣ ರಾಜ್ಯಾದ್ಯಂತ 37.25% ತಲುಪಿದೆ. ಕಳೆದ ಸಲದ ವಿಧಾನಸಭೆ ಚುನಾವಣೆಯಲ್ಲಿ (2018) ಇದೇ ಹೊತ್ತಿಗೆ ನಡೆದ ಮತದಾನದ ಪ್ರಮಾಣ 38.88%. ಅಂದರೆ 1 ಗಂಟೆ ವೇಳೆಗೆ ಕಳೆದ ಸಲಕ್ಕಿಂತ 1.63% ಕಡಿಮೆಯಿದೆ. ಆದರೆ ಇದು ನಿಖರ ಲೆಕ್ಕಾಚಾರವಲ್ಲ. ಸಂಜೆಯ ನಂತರವಷ್ಟೇ ಇದರ ಸಂಪೂರ್ಣ ಚಿತ್ರಣ ಸಿಗಲಿದೆ.

ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟಾರೆ ಶೇ. 71.91 ಮತದಾನ ಆಗಿತ್ತು. ನಗರ ಪ್ರದೇಶವಾದ ಬೆಂಗಳೂರಿನಲ್ಲಿ ಅತೀ ಕಡಿಮೆ ಮತದಾನ (55%) ಆಗಿತ್ತು. ಈ ಬಾರಿ ಎಷ್ಟಾಗಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ಈ ಬಾರಿ ನಗರದ ಮತದಾರರನ್ನು ಉತ್ತೇಜಿಸಲು ಚುನಾವಣಾ ಆಯೋಗ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ವಾರದ ಮಧ್ಯಭಾಗದಲ್ಲಿ ಮತದಾನದ ದಿನವನ್ನು ಇಟ್ಟಿದೆ. ಸರ್ಕಾರಿ ಸಿಬ್ಬಂದಿಗೆ ಸಂಬಳ ಸಹಿತ ರಜೆ ಒದಗಿಸಿದೆ. ಇದೆಲ್ಲದರ ಪರಿಣಾಮವಾಗಿ ನಗರ ಪ್ರದೇಶದಲ್ಲಿ ತುಸು ಉತ್ತಮವಾದ ಮತದಾನ ಪ್ರಮಾಣ ಮಧ್ಯಾಹ್ನ 1 ಗಂಟೆಯವರೆಗೆ ಕಂಡುಬಂದಿದೆ.

ಇಷ್ಟೆಲ್ಲಾ ಪ್ರಯತ್ನದ ಬಳಿಕವೂ ದಾಖಲೆ ಅನ್ನಿಸುವ ಮತದಾನವೇನೂ ಕಂಡುಬಂದಿಲ್ಲ. ಬಹುತೇಕ ಕಳೆದ ಸಲದಷ್ಟೇ ಮತದಾನವಾಗಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ, ಮತದಾನ ಮಾಡಿ ಎಂದು ಜನನಾಯಕರು, ಚುನಾವಣಾ ಆಯೋಗ ಮನವಿ ಮಾಡಿಕೊಂಡಿದೆ. ಇದರ ಪರಿಣಾಮದ ನಿಖರ ಚಿತ್ರಣ ಸಂಜೆ 6 ಗಂಟೆಗೆ ಮತದಾನ ಮುಗಿದ ಬಳಿಕವಷ್ಟೇ ಸಿಗಲಿದೆ.

Exit mobile version