Site icon Vistara News

Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?

BJP oppoints new Presidents to Delhi Rajasthan Bihar and Odisha

#image_title

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ (Karnataka Elections 2023) ಘೋಷಣೆಗೆ ವೇದಿಕೆ ಸಿದ್ಧವಾಗಿರುವ ನಡುವೆಯೇ ಬಿಜೆಪಿ ಪಾಲಿಗೆ ಶಾಕಿಂಗ್‌ ನ್ಯೂಸ್‌ ಎದುರಾಗಿದೆ. ಎಂಟು ಮಂದಿ ಹಾಲಿ ಸಚಿವರು ಸೇರಿದಂತೆ 35 ಬಿಜೆಪಿ ಶಾಸಕರಿಗೆ ಸೋಲಿನ ಭೀತಿ ಇದೆ ಎಂದು ಪಕ್ಷದ ಆಂತರಿಕ ವರದಿ ತಿಳಿಸಿದೆ. ಹೀಗಾಗಿ ಇವರೆಲ್ಲರನ್ನೂ ಬದಲಾಯಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಈ ನಡುವೆ ರಾಜ್ಯ ಚುನಾವಣೆಯಲ್ಲಿ 50 ಹೊಸ ಮುಖಗಳಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂಬ ವರದಿಗಳು ಹರಡಿದ್ದು, ಒಂದಕ್ಕೊಂದು ಹೋಲಿಕೆಯಾಗುತ್ತಿದೆ.

ಬಿಜೆಪಿ ನಾಲ್ಕು ಹಂತಗಳಲ್ಲಿ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕಗಳಿಂದ ಆಂತರಿಕ ಸರ್ವೇ ವರದಿಯನ್ನು ತರಿಸಿಕೊಂಡಿದೆ. ಕೇಂದ್ರ ನಾಯಕತ್ವ ಒಂದು ವರದಿಯನ್ನು ಪಡೆದುಕೊಂಡರೆ, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್‌ ಅವರು ಪ್ರತ್ಯೇಕ ವರದಿಗಳನ್ನು ತರಿಸಿಕೊಂಡಿದ್ದಾರೆ. ಇವರೆಲ್ಲರ ವರದಿಯಲ್ಲಿರುವ ಕಾಮನ್‌ ಪಾಯಿಂಟ್‌ ಎಂದರೆ 35 ಶಾಸಕರು ಸೋಲಿನ ಭೀತಿಯಲ್ಲಿದ್ದಾರೆ ಎನ್ನುವುದು. ಇದನ್ನು ಕೇಂದ್ರ ನಾಯಕತ್ವ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ.

ಈ ಹಿಂದೆಯೇ ನಡೆಸಿದ ಒಂದು ಸಮೀಕ್ಷೆಯಲ್ಲಿ ಬಹುತೇಕ ಇಷ್ಟೇ ಸಂಖ್ಯೆಯ ಶಾಸಕರಿಗೆ ಸೋಲಿನ ಭೀತಿ ಇದೆ ಎಂಬ ವರದಿ ಬಂದಿತ್ತು. ಆಗ ಅವರಿಗೆ ನಿಮ್ಮ ಭಾಗದಲ್ಲಿ ಎಲ್ಲವನ್ನೂ ಸರಿ ಮಾಡಿಕೊಳ್ಳಿ ಎಂದು ಸೂಚಿಸಲಾಗಿತ್ತು. ಆದರೆ, ಮುಂದಿನ ಹಂತದ ವರದಿ ಬರುವವರೆಗೂ ಇವರಲ್ಲಿ ಹೆಚ್ಚಿನವರ ವಿಚಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುವುದನ್ನು ಬಿಜೆಪಿ ಪರಿಗಣಿಸಿದೆ.

ಗುಜರಾತ್‌ ಮಾದರಿಗೆ ಕಾಲ ಸನ್ನಿಹಿತ

ರಾಜ್ಯದ ಬಿಜೆಪಿ ಪರಿಸ್ಥಿತಿ ಎಲ್ಲ ಕಡೆಗಿಂತ ಭಿನ್ನ. ಇಲ್ಲಿ ಯಾವುದೇ ಬೇರೆ ಮಾದರಿಗಳನ್ನು ಅನುಸರಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಆದರೆ, ಕಳೆದ ಕೆಲವು ದಿನಗಳಿಂದ ಬಿಜೆಪಿಯ ಚುನಾವಣೆ ಉಸ್ತುವಾರಿಯನ್ನು ನೇರವಾಗಿ ಹೈಕಮಾಂಡೇ ಕೈಗೆ ತೆಗೆದುಕೊಂಡಿರುವಂತೆ ಕಂಡುಬರುತ್ತಿದ್ದು, ಅವರು ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಅದರಲ್ಲೂ ಮುಖ್ಯವಾಗಿ ಗುಜರಾತ್‌ ಮಾದರಿಯಲ್ಲಿ ಈ ಬಾರಿ ಸುಮಾರು 35 ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿ ಅವರ ಜಾಗಕ್ಕೆ ಹೊಸಬರಿಗೆ ಟಿಕೆಟ್‌ ನೀಡುವ ಸಾಧ್ಯತೆ ಕಂಡುಬಂದಿದೆ. ಗುಜರಾತ್‌ನಲಿ 37 ಹಾಲಿ ಶಾಸಕರಿಗೆ ಟಿಕಟ್‌ ನಿರಾಕರಿಸಲಾಗಿತ್ತು. ಮತ್ತು ಇದು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿ ದೊಡ್ಡ ದೊಡ್ಡ ಗೆಲುವು ಲಭ್ಯವಾಗಿತ್ತು. ಹೀಗಾಗಿ ಕರ್ನಾಟಕದಲ್ಲೂ ಅದನ್ನೇ ಬಳಸುವ ಸಾಧ್ಯತೆ ಕಂಡುಬಂದಿದೆ.

ಈ ಮೂವತ್ತೈದು ಮಂದಿ ಟಿಕೆಟ್‌ ನಿರಾಕರಣೆಯಾಗುವ ಕ್ಷೇತ್ರಗಳು ಯಾವುದು ಎನ್ನುವುದು ಆಂತರಿಕ ವಲಯದಲ್ಲಿ ಸ್ಪಷ್ಟವಾಗಿ ಗೊತ್ತಿದೆ ಮತ್ತು ಅಲ್ಲಿ ಹೊಸ ಮುಖಗಳನ್ನು ಈಗಾಗಲೇ ಗುರುತಿಸಲಾಗಿದೆ ಎನ್ನಲಾಗಿದೆ. ಕೆಲವು ಕಡೆಗಳಲ್ಲಿ ಎರಡನೇ ಹಂತದ ನಾಯಕರನ್ನು ಮೇಲ್ದರ್ಜೆಗೇರಿಸುವ ಸಾಧ್ಯತೆ ಇದ್ದರೆ ಇನ್ನು ಕೆಲವು ಕಡೆ ಸಂಘ ಪರಿವಾರದ ಅಭ್ಯರ್ಥಿಗಳನ್ನು ಹಾಕುವ ಸಾಧ್ಯತೆ ಇದೆ.

ಸೋಲಿನ ಭೀತಿ ಇರುವ ಹಾಲಿ ಶಾಸಕರ ಕ್ಷೇತ್ರಗಳಲ್ಲಿ ಈಗಿರುವ ಶಾಸಕರ ವಿರುದ್ಧ ಆಕ್ರೋಶವೇ ಹೊರತು ಪಕ್ಷದ ವಿರುದ್ಧ ಅಲ್ಲ. ಅಲ್ಲೆಲ್ಲ ಸಂಘ ಪರಿವಾರ ಗಟ್ಟಿಯಾಗಿದೆ ಎಂಬ ಅಭಿಪ್ರಾಯವಿದ್ದು, ಹಾಗಾಗಿ ಪರಿವಾರದ ಹೊಸ ಅಭ್ಯರ್ಥಿಗಳನ್ನು ಹಾಕುವ ಸಾಧ್ಯತೆ ಇದೆ.

ಇದನ್ನೂ ಓದಿ : BJP Karnataka: ಸಿಎಂ ಶಕುನಿ ಎಂದರೆ ನಿಮ್ಮನ್ನು ಶಿಖಂಡಿ ಎನ್ನಬಹುದೆ?: ಕಾಂಗ್ರೆಸ್‌ನ ಸುರ್ಜೆವಾಲಾಗೆ ಬಿಜೆಪಿ ಪ್ರಶ್ನೆ, ದೂರು ದಾಖಲು

Exit mobile version