ಮಂಡ್ಯ: ಸ್ಯಾಂಡಲ್‌ವುಡ್ ಕ್ವೀನ್, ಮಾಜಿ ಸಂಸದೆ, ಚಿತ್ರನಟಿ ರಮ್ಯಾ (Actress Ramya) ಅವರು ವಿಧಾನಸಭಾ ಚುನಾವಣಾ (Karnataka Election 2023) ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ. ಯಾವಾಗದಿಂದ ಪ್ರಚಾರ ಆರಂಭ, ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎನ್ನುವುದು ಇನ್ನಷ್ಟೇ ಫೈನಲ್ ಆಗಬೇಕಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಸಮಾನ ಬೇಡಿಕೆಯನ್ನು ಹೊಂದಿದ್ದರೆನ್ನಲಾದ ರಮ್ಯಾ ಅವರು ಫೈನಲಿ ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ಇಳಿಯಲಿದ್ದಾರೆ. ಅವರು ಪ್ರಧಾನವಾಗಿ ಮಂಡ್ಯ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಪಿ. ಗಣಿಗ ರವಿಕುಮಾರ್ ಅವರ ಪರ ರೋಡ್ ಶೋ ಮಾಡುವ ಮೂಲಕ ಅವರ ರಾಜಕೀಯ ರಿಎಂಟ್ರಿ ನಡೆಯಲಿದೆ ಎನ್ನಲಾಗಿದೆ.
ರಮ್ಯ ಅವರು ಈ ಹಿಂದೆ ಮಂಡ್ಯ ಲೋಕಸಭಾ ಸಂಸದೆಯಾಗಿ ಇಡೀ ಕ್ಷೇತ್ರದ ಒಳಸುಳಿಗಳನ್ನು ಅರಿತಿದ್ದಾರೆ ಮತ್ತು ಸಾಕಷ್ಟು ಜನಪ್ರೀತಿಯನ್ನು ಗಳಿಸಿದ್ದಾರೆ. ಅಲ್ಲಿ ಸೋತ ಬಳಿಕ ಕಾಂಗ್ರೆಸ್‌ನ ಕೇಂದ್ರೀಯ ಮೀಡಿಯಾ ಸೆಲ್‌ನಲ್ಲಿ ಕೆಲಸ ಮಾಡಿದ್ದ ರಮ್ಯ ಮುಂದೆ ಅಲ್ಲಿಂದಲೂ ದೂರ ಸರಿದಿದ್ದರು. ಕೆಲವು ವರ್ಷಗಳ ರಾಜಕೀಯದಿಂದ ದೂರವೇ ಉಳಿದಿದ್ದ ಆಕೆ ಈಗ ಮತ್ತೆ ಅಖಾಡ ಪ್ರವೇಶ ಮಾಡಲಿದ್ದಾರೆ.
ರಮ್ಯ ಅವರನ್ನು ಪ್ರಚಾರಕ್ಕೆ ಮಾತ್ರವಲ್ಲ, ಸ್ಪರ್ಧೆಗೇ ಇಳಿಸಬೇಕು ಎಂದು ಕಾಂಗ್ರೆಸ್ ಬಯಸಿತ್ತು. ಮಂಡ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ತನಗೆ ಮುಕ್ತ ಆಫರ್ ಕೊಟ್ಟಿತ್ತು ಎಂದು ರಮ್ಯಾ ಅವರು ಇತ್ತೀಚೆಗೆ ನಡೆದ ಚುನಾವಣಾ ಕಾಂಕ್ಲೇವ್ ಒಂದರಲ್ಲಿ ಹೇಳಿದ್ದರು. ಅದೇ ವೇಳೆ, ಬಿಜೆಪಿ ತನಗೆ ಮಂತ್ರಿ ಸ್ಥಾನದ ಆಫರ್ ಕೂಡಾ ಕೊಟ್ಟಿತ್ತು ಎಂದಿದ್ದರು. ಆದರೆ, ಸಚಿವ ಅಶೋಕ್ ಅವರು ಬಳಿಕ ಇಂಥ ಆಫರನ್ನು ನಿರಾಕರಿಸಿದ್ದರು.
ಇದರ ನಡುವೆ ಒಂದೊಮ್ಮೆ ಎಚ್.ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಕಣಕ್ಕಿಳಿದರೆ, ಬಿಜೆಪಿ ಸುಮಲತಾ ಅವರನ್ನು ಸ್ಪರ್ಧೆಗೆ ಇಳಿಸುತ್ತದೆ ಎಂಬ ಸುದ್ದಿ ಹರಡಿತ್ತು. ಆಗ ರಮ್ಯಾ ಅವರ ಹೆಸರು ಕಾಂಗ್ರೆಸ್‌ನಿಂದ ಕೇಳಿಬಂದಿತ್ತು. ಮಾತ್ರವಲ್ಲ, ಚನ್ನಪಟ್ಟಣದಲ್ಲೂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವರ ಹೆಸರು ಬಂದಿತ್ತು. ಬಳಿಕ ಅವೆಲ್ಲವೂ ಠುಸ್ ಆಗಿತ್ತು.
ಮೇ 3ರಂದು ಪ್ರಚಾರದ ಕಣಕ್ಕೆ ಇಳೀತಾರಾ ರಮ್ಯ?
ಇದೀಗ ಅವರು ಪ್ರಚಾರಕ್ಕಾಗಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಅವರು ಬಹುತೇಕ ಮೇ 3ರಂದು ಪ್ರಚಾರ ಆರಂಭಿಸಬಹುದು ಎನ್ನಲಾಗಿದೆ. ಅಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ಕೂಡಾ ಮಂಡ್ಯಕ್ಕೆ ಬರಲಿದ್ದು ಆವತ್ತೇ ರಮ್ಯಾ ಎಂಟ್ರಿ ಕೂಡಾ ನಡೆಯಲಿದೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಪರವಾಗಿ ರಮ್ಯ ಜೊತೆ ನಟಿ ಮಾಲಾಶ್ರೀ, ಸಾಧು ಕೋಕಿಲ ಸೇರಿ ಹಲವು ಸ್ಟಾರ್ ಗಳು ಪ್ರಚಾರ ನಡೆಸಲಿದ್ದಾರೆ.
ಸುಮಲತಾ ಮತ್ತು ರಮ್ಯಾ ಮುಖಾಮುಖಿ
ಮಂಡ್ಯದಲ್ಲಿ ಈಗಾಗಲೇ ಸುಮಲತಾ ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಸಂಸದೆಯಾಗಿರುವ ಅವರು ಸ್ವತಃ ಪಕ್ಷ ಸೇರದೆ ಇದ್ದರೂ ಬೆಂಬಲಿಸುತ್ತಿದ್ದಾರೆ. ಇದೀಗ ರಮ್ಯಾ ಎಂಟ್ರಿಯಾದ ಬಳಿಕ ಮಂಡ್ಯ ಜಿಲ್ಲೆಯ ಕಣಗಳ ತಾರಾ ಸಮರವೂ ಹೊಸ ರೂಪ ಪಡೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ : BJP Karnataka: ಅತಂತ್ರ ಫಲಿತಾಂಶ ಬರಲಿ, ಸಿಎಂ ಆಗ್ತೇನೆ ಎಂದು ಒಬ್ಬರು ಕಾದು ಕುಳಿತಿದ್ದಾರೆ: ಎಚ್‌ಡಿಕೆ ಕಾಲೆಳೆದ ಸುಮಲತಾ ಅಂಬರೀಶ್