Site icon Vistara News

Karnataka Election : ಶೆಟ್ಟರ್‌ ಕೋ ಕಭೀ ಮಾಫ್‌ ನಹೀ ಕರನಾ: ಅಮಿತ್‌ ಶಾ ಕಠಿಣ ಸಂದೇಶ

Amit Shah held a Press Conference in Hubbali

ಹುಬ್ಬಳ್ಳಿ: ʻʻಶೆಟ್ಟರ್ ಕೋ ಕಭೀ ಮಾಫ್‌ ನಹೀ ಕರನಾ- ಇದು ಕೇಂದ್ರ ಗೃಹ ಸಚಿವ, ಬಿಜೆಪಿಯ ಸರ್ವೋಚ್ಚ ನಾಯಕರಲ್ಲಿ ಒಬ್ಬರಾದ ಅಮಿತ್‌ ಶಾ ಅವರು ನೀಡಿದ ಕಠಿಣ ಸಂದೇಶ. ರಾಜ್ಯ ವಿಧಾನಸಭಾ ಚುನಾವಣಾ (Karnataka Election 2023) ನಿಮಿತ್ತ ಪ್ರವಾಸದಲ್ಲಿರುವ ಅಮಿತ್‌ ಶಾ ಅವರು ಸೋಮವಾರ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಅಕ್ಷರಶಃ ಗುಡುಗಿದ್ದಾರೆ. ಯಾವ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗಿ ಕಾಂಗ್ರೆಸ್‌ ಸೇರಿಕೊಂಡ ಜಗದೀಶ್‌ ಶೆಟ್ಟರ್‌ ಅವರು ಗೆಲ್ಲಲೇಬಾರದು, ಅವರನ್ನು ಸೋಲಿಸಲೇಬೇಕು ಎನ್ನುವ ಫರ್ಮಾನು ಹೊರಡಿಸಿದ್ದಾರೆ.

ʻʻಯಾವುದೇ ಕಾರಣಕ್ಕೂ ಶೆಟ್ಟರ್‌ರನ್ನು ಕ್ಷಮಿಸಬಾರದು, ಒಂದು ವೇಳೆ ಅವರು ಪಕ್ಷೇತರವಾಗಿ ನಿಂತಿದ್ದರೂ ಕ್ಷಮಿಸಬಹುದಿತ್ತು. ಆದರೆ, ಸೈದ್ಧಾಂತಿಕವಾಗಿ ವಿರೋಧವಿರುವ ಕಾಂಗ್ರೆಸ್‌ಗೆ ಹೋಗಿದ್ದಾರೆ. ಅವರನ್ನು ಯಾವ ಕಾರಣಕ್ಕೂ ಕ್ಷಮಿಸಲಾಗದುʼʼ ಎಂದು ಶಾ ಹೇಳಿದ್ದಾರೆ ಎನ್ನುವುದು ಸಭೆಯಲ್ಲಿ ಭಾಗವಹಿಸಿದವರಿಂದ ತಿಳಿದುಬಂದ ಮಾಹಿತಿ.

ʻʻಜಗದೀಶ್ ಶೆಟ್ಟರ್ ಅವರಿಗೆ ನಾವು ಎಲ್ಲವನ್ನೂ ಕೊಟ್ಟಿದ್ದೇವೆ. ಆದರೂ ಅವರು ಕಾಂಗ್ರೆಸ್ ಸೇರಿದ್ದಾರೆ. ಇದನ್ನು ನಾವು ಸಹಿಸಲಾಗದು. ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ‌ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲʼʼ ಎಂದಿರುವ ಶಾ, ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸಲು ಮಾಡಬೇಕಾದ ಕಾರ್ಯತಂತ್ರಗಳ ಬಗ್ಗೆ ಕೂಡಾ ಚರ್ಚೆ ನಡೆಸಿದರು.

ʻʻಜಗದೀಶ್‌ ಶೆಟ್ಟರ್‌ಗೆ ನಾವು ಅನ್ಯಾಯ ಮಾಡಿಲ್ಲ. ಅವರೇ ನಮಗೆ ಅನ್ಯಾಯ ಮಾಡಿದ್ದು. ಅವರ ಜಾಗಕ್ಕೆ ಲಿಂಗಾಯತ ಯುವ ನಾಯಕನಿಗೆ ಸ್ಥಾನ ನೀಡಲಾಗಿದೆ ಎನ್ನುವುದನ್ನು ಎಲ್ಲ ಕಡೆ ಪ್ರಚಾರ ಮಾಡಬೇಕುʼʼ ಎಂದು ಅಮಿತ್‌ ಶಾ ಸೂಚನೆ ನೀಡಿದ್ದಾರೆ.

ʻʻಮೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಚರ್ಚೆಯಾಗಿರುವುದೇ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ. ಈಗ ಸೈದ್ಧಾಂತಿಕವಾಗಿ ವಿರೋಧಿಯಾಗಿರುವ ಶೆಟ್ಟರ್ ಗೆಲ್ಲಲೇಬಾರದುʼʼ ಎಂದು ಅಮಿತ್‌ ಶಪಥ ಮಾಡಿದ್ದಾರೆ.

ಇದೆ ವೇಳೆ, ಜಗದೀಶ್‌ ಶೆಟ್ಟರ್ ಅವರಿಗೆ ಟಿಕೆಟ್ ಕೊಡಲು ವಿಳಂಬ ಮಾಡಿರುವುದನ್ನು ಪ್ರತಿಭಟಿಸಿ ರಾಜೀನಾಮೆ ಕೊಡಲು ಮುಂದಾಗಿದ್ದ ಪಾಲಿಕೆ ಸದಸ್ಯರಿಗೂ ಎಚ್ಚರಿಕೆ ನೀಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲು ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಸದಸ್ಯರು ತಾವು ನೀಡಿದ ರಾಜೀನಾಮೆಯನ್ನು ವಾಪಸ್‌ ಪಡೆದಿದ್ದರು. ಹೀಗೆ ರಾಜೀನಾಮೆ ವಾಪಸ್‌ ಪಡೆದ ಸದಸ್ಯರನ್ನು ಅಮಿತ್‌ ಶಾ ಅಭಿನಂದಿಸಿದರು. ಈ 16ಮಂದಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಪ್ರತಿಪಾದಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಧಾರವಾಡ, ಹಾವೇರಿ, ಗದಗ ಜಿಲ್ಲೆಯ ‌ಪ್ರತಿಯೊಂದು ಕ್ಷೇತ್ರದ ಮಾಹಿತಿ‌ ಪಡೆದುಕೊಂಡ ಅಮಿತ್ ಶಾ ಅವರು ಮೂರು ಜಿಲ್ಲೆಯ ವೀಕ್ಷಕರಿಂದ ವಿವರ ಕೇಳಿದರು. ಮೂರು‌ ಜಿಲ್ಲೆಯ ಯಾವ ಕ್ಷೇತ್ರಗಳಲ್ಲಿ ನೇರ ಫೈಟ್‌ ಇದೆ, ಎಲ್ಲಿ ತ್ರಿಕೋನ ಸ್ಪರ್ಧೆ ಇದೆ ಎನ್ನುವುದನ್ನು ತಿಳಿದುಕೊಂಡರು. ಮೂರೂ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಹೆಸರು ಹೇಳಿದ ಶಾ ಅವರು ಉತ್ತರ ಕರ್ನಾಟಕದಲ್ಲಿ ನಾವೇ ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂದರು ಎನ್ನಲಾಗಿದೆ.

ಜಗದೀಶ್‌ ಶೆಟ್ಟರ್‌ ಅವರನ್ನು ಕಟ್ಟಿ ಹಾಕಲು ಶಾ ಮಾಸ್ಟರ್‌ ಪ್ಲ್ಯಾನ್‌ ಏನು?

ಸಭೆಯಲ್ಲಿ ಅಮಿತ್‌ ಶಾ ಅವರ ಜತೆಗೆ ಪ್ರಲ್ಹಾದ್‌ ಜೋಶಿ ಮತ್ತು ಶಾಸಕ ಅರವಿಂದ ಬೆಲ್ಲದ್‌ ಇದ್ದರು.

ಇದನ್ನೂ ಓದಿ : Amit Shah: ಜಗದೀಶ್‌ ಶೆಟ್ಟರ್‌ ಹೋಗಿದ್ದರಿಂದ ಪಕ್ಷಕ್ಕೆ ನಷ್ಟವಿಲ್ಲ; ಅವರ ಸೋಲು ಖಚಿತ: ಹುಬ್ಬಳ್ಳಿಯಲ್ಲಿ ಅಮಿತ್‌ ಶಾ


Exit mobile version