ಹುಬ್ಬಳ್ಳಿ: ಕಾಂಗ್ರೆಸ್ ತನ್ನ ವಿಧಾನಸಭಾ ಚುನಾವಣಾ (Karnataka Election) ಪ್ರಣಾಳಿಕೆಯಲ್ಲಿ (Congress Manifesto) ಉಲ್ಲೇಖಿಸಿರುವ ಮೀಸಲಾತಿ ಹೆಚ್ಚಳ ಮತ್ತು ಬಜರಂಗ ದಳ ನಿಷೇಧದ ಎರಡೂ ಪ್ರಸ್ತಾಪಗಳು ಬರೀ ಬೋಗಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಹೇಳಿದ್ದಾರೆ. ಅವರು ಬುಧವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ಕಟುವಾಗಿ ಟೀಕಿಸಿದರು.
ʻʻಇದೊಂದು ಮೋಸದ ಪ್ರಣಾಳಿಕೆ, ಜನರನ್ನು ಮರಳು ಮಾಡುವ ಪ್ರಣಾಳಿಕೆ. ಜನರು ಇದನ್ನು ಧಿಕ್ಕರಿಸಲಿದ್ದಾರೆ. ನಾವು ಈಗಾಗಲೇ ಮಾಡಿದ ಕೆಲಸಗಳನ್ನೇ ತಾವು ಮಾಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬರೀ ಸುಳ್ಳು ಹೇಳಿದ್ದಾರೆʼʼ ಎಂದು ಬೊಮ್ಮಾಯಿ ಹೇಳಿದ್ದಾರೆ.
ʻʻಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಅನುಷ್ಠಾನ ಮಾಡಲು ಆರು ಲಕ್ಷ ಕೋಟಿ ರೂ. ಅನುದಾನ ಬೇಕು. ಇಷ್ಟು ಹಣ ಒಟ್ಟು ಬಜೆಟ್‌ನಲ್ಲೇ ಇಲ್ಲ. ಹಾಗಾಗಿ ಇದು ಹಾಸ್ಯಾಸ್ಪದ ಭರವಸೆʼʼ ಎಂದು ಬೊಮ್ಮಾಯಿ ಹೇಳಿದರು.
ʻʻಈಗಾಗಲೇ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು, ಪುನಃ ಜಾರಿ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಈಗಾಗಲೇ ಜಲಜೀವನ್ ಮಿಷನ್ ಮೂಲಕ ಮನೆ ಮನೆಗೆ ನಲ್ಲಿ ನೀರು ಕೊಡುವ ಕೆಲಸ ಆರಂಭಿಸಲಾಗಿದೆ. ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡುವುದಾಗಿ ನಮ್ಮ ಸರ್ಕಾರವೇ ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇವೆʼʼ ಎಂದು ನೆನಪಿಸಿದರು.
ʻʻಮೀಸಲಾತಿ ಪ್ರಮಾಣ ಶೇಕಡಾ 75% ಹೆಚ್ಚಳ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಇದನ್ನು ಹೇಗೆ ಮಾಡುತ್ತಾರೆ? ಮೀಸಲಾತಿ ಪ್ರಮಾಣ ಶೇಕಡಾ 50ಕ್ಕಿಂತ ಹೆಚ್ಚು ಮಾಡಬೇಕು ಎಂದರೆ ಕೇಂದ್ರ ಸರ್ಕಾರ ತಿದ್ದುಪಡಿ ತರಬೇಕು. ಕೇಂದ್ರದಲ್ಲಿ ಇವರ ಸರ್ಕಾರ ಇದೆಯಾ?ʼʼ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ʻʻಹಿಂದುಳಿದ ಜನಾಂಗ ನಿಗಮಗಳನ್ನು ಸ್ಥಾಪಿಸುವುದಾಗಿ ಕಾಂಗ್ರೆಸ್ ಹೇಳಿದೆ. ನಾನು ಈಗಾಗಲೇ ಘೋಷಣೆ ಮಾಡಿ, ಅದೇಶ ಮಾಡಿದ್ದೇನೆ. ಕಾಂಗ್ರೆಸ್ ಅದನ್ನೇ ಪ್ರಣಾಳಿಕೆಯಲ್ಲಿ ಹೇಳಿದೆ. ಹೀಗಾಗಿ ಪ್ರಣಾಳಿಕೆ ಹಾಸ್ಯಾಸ್ಪದವಾಗಿದೆʼʼ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಜರಂಗ ದಳ ನಿಷೇಧಿಸಲು ಸಾಧ್ಯವೇ ಇಲ್ಲ ಎಂದ ಬೊಮ್ಮಾಯಿ
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ಮಾಡುವುದಾಗಿ ಹೇಳಿರುವುದನ್ನು ಗೇಲಿ ಮಾಡಿರುವ ಬಸವರಾಜ ಬೊಮ್ಮಾಯಿ ಅವರು, ಬಜರಂಗ ದಳ ನಿಷೇಧಿಸಲು ಸಾಧ್ಯವೇ ಇಲ್ಲ. ಅದನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಬಜರಂಗ ದಳ ಇಡೀ ದೇಶದಲ್ಲಿ ಇರುವ ಸಂಘಟನೆ. ಇವರಿಗೆ ದೇಶದಲ್ಲಿ ಅಧಿಕಾರವೇ ಇಲ್ಲ, ಅದನ್ನು ಹೇಗೆ ನಿಷೇಧಿಸಲು ಸಾಧ್ಯ?ʼʼ ಎಂದು ಪ್ರಶ್ನಿಸಿದ್ದಾರೆ.
ನಾವು ಹೇಳಿದ್ದನ್ನೇ ಅವರೂ ಹೇಳಿದ್ದಾರೆ ವಿಶೇಷವೇನೂ ಇಲ್ಲ!
ಮಂಗಳವಾರ ಸಂಜೆ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರ ಪರವಾಗಿ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಪ್ರಣಾಳಿಕೆ ಬಿಜೆಪಿಯ ಕಾಪಿ ಎಂದಿದ್ದರು.
ʻʻಕಾಂಗ್ರೆಸ್ ನಾಯಕರು ಸಾಮಾಜಿಕ ನ್ಯಾಯ ಅಂತ ಹೇಳುತ್ತ ಜನರನ್ನು ಬಾವಿಯಲ್ಲಿ ಇಟ್ಟಿದ್ದಾರೆ. ಚುನಾವಣೆ ಬಂದಾಗಷ್ಟೇ ಅವರನ್ನು ಬಾವಿಯಿಂದ ಮೇಲೆತ್ತಿ ಮತ ಹಾಕಿಸಿಕೊಂಡು ಮತ್ತೆ ಬಾವಿಗೆ ಹಾಕುತ್ತಾರೆ. ನಿಮ್ಮ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಜೇನುಗೂಡಿಗೆ ಕೈ ಹಾಕಬೇಡಿ ಅಂತ ಹೇಳಿದ್ದರು. ನಾನು ಜೇನು ಗೂಡಿಗೆ ಕೈ ಹಾಕಿ ಅವರಿಗೆ ಜೇನು ತಿನ್ನಿಸಿದ್ದೇನೆ. ಕಾಂಗ್ರೆಸ್ ನವರು ಈಗ ಮೀಸಲಾತಿ ವಿಚಾರವನ್ನು ಪ್ರಣಾಳಿಕೆಯಲ್ಲಿ ಹಾಕಿದ್ದಾರೆ. ಮನೆಮನೆಗೂ ನೀರು ಕೊಡುತ್ತೇವೆ ಎಂದು ಈಗ ಹೇಳುತ್ತಿದ್ದಾರೆ. 3 ವರ್ಷದಲ್ಲಿ ಈಗಾಗಲೇ 40 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸೌಲಭ್ಯ ನಾವು ಕೊಟ್ಟಿದ್ದೇವೆʼʼ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ʻʻಭಾರತ ಈಗ ಸುರಕ್ಷಿತ ದೇಶ ಆಗಿದೆ. ಯುಪಿಎ ಅವಧಿಯಲ್ಲಿ ಪ್ರತಿ ದಿನ ಬಾಂಬ್ ದಾಳಿ ಆಗುತ್ತಿತ್ತು. ಸಿದ್ದರಾಮಯ್ಯ ಕಾಲದಲ್ಲಿ ಅತಿ ಹೆಚ್ಚು ಕೋಮುಗಲಭೆ, ರೈತರ ಆತ್ಮಹತ್ಯೆ, ರೇಪ್ ಕೇಸ್ ಗಳು ಹೆಚ್ಚಾಗಿದ್ದವು. ನಮ್ಮ ಪ್ರಧಾನಿ ದೇಶವನ್ನು ಸುರಕ್ಷಿತವಾಗಿ ಇಟ್ಟಿದ್ದಾರೆʼʼ ಎಂದು ನೆನಪಿಸಿದರು.
ʻʻಅಮೆರಿಕದಲ್ಲಿ ಈಗಲೂ ಕೊರೋನಾ ಭಯದಲ್ಲಿ ಮಾಸ್ಕ್ ಹಾಕುತ್ತಿದ್ದಾರೆ. ಆದರೆ, ನಮ್ಮ ಪ್ರಧಾನಿಗಳು ಸಂಪೂರ್ಣವಾಗಿ ಕೋವಿಡ್ ನಿಯಂತ್ರಿಸಿ ಎಲ್ಲರಿಗೂ ಲಸಿಕೆ ಹಾಕಿಸಿದ್ದಾರೆʼʼ ಎಂದು ಹೇಳಿದರು ಸಿಎಂ ಬೊಮ್ಮಾಯಿ.
ʻʻಈಗ ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಅವರ ಬಗ್ಗೆ ಜನರಿಗೆ ಗ್ಯಾರಂಟಿ ಇಲ್ಲದ ಕಾರಣ ಅವರು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಮೇ 10ರ ವರೆಗೂ ಮಾತ್ರ ಗ್ಯಾರಂಟಿ. ಆ ಮೇಲೆ ಗಳಗಂಟಿʼʼ ಎಂದು ಲೇವಡಿ ಮಾಡಿದರು ಬಸವರಾಜ ಬೊಮ್ಮಾಯಿ.
ಇದನ್ನೂ ಓದಿ : Karnataka Election : ಬಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸಿಗರ ನವರಂಗಿ ಆಟ ಜನರಿಗೆ ಗೊತ್ತು ಎಂದ ಪ್ರತಾಪಸಿಂಹ