Site icon Vistara News

Modi in Karnataka : ಮೋದಿ ರೋಡ್‌ ಶೋ ತಡೆ ಕೋರಿ ಹೈಕೋರ್ಟ್‌ಗೆ ಮನವಿ, ತಕ್ಷಣ ವಿಚಾರಣೆ

Karnataka High court gives green signal to Modi Road show in Bangalore

Karnataka High court gives green signal to Modi Road show in Bangalore

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ಬೆಂಗಳೂರಿನಲ್ಲಿ ಮೇ 6 ಮತ್ತು 7ರಂದು ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋಗೆ ತಡೆ ಕೋರಿ ರಾಜ್ಯ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯನ್ನು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾವೆಯಾಗಿ ಪರಿಗಣಿಸಿ ತಡೆ ಕೊಡಬೇಕು ಎಂದು ಕೇಳಲಾಗಿದೆ.

ನಗರದಲ್ಲಿ ಎರಡು ದಿನ 36 ಕಿ. ಮೀ ರೋಡ್ ಶೋ ನಡೆಸಲು ಸಿದ್ಧತೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ, ನೀಟ್‌ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇದನ್ನು ಪರಿಗಣಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಬೇಕು ಎಂದು ಹಿರಿಯ ವಕೀಲ ಜಿ ಆರ್ ಮೋಹನ್ ಅವರು ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದಾರೆ.

ಸಾರ್ವಜನಿಕರಿಗೆ ತೊಂದರೆ ನೀಡುವಂತೆ ಯಾವುದೇ ಪ್ರತಿಭಟನೆ, ರ‍್ಯಾಲಿಗಳನ್ನು ನಡೆಸದಂತೆ ಹೈಕೋರ್ಟ್‌ನ ನಿರ್ಬಂಧವಿದೆ. ಫ್ರೀಡಂ ಪಾರ್ಕ್ ಬಿಟ್ಟು ಎಲ್ಲಿಯೂ ಪ್ರತಿಭಟನೆ ಮಾಡದಂತೆ ಹೈಕೋರ್ಟೇ ಆದೇಶ ನೀಡಿದೆ. ಆದರೂ ನರೇಂದ್ರ ಮೋದಿಯರವರ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಇದು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ʻʻಮೋದಿ ಅವರ ರೋಡ್‌ ಶೋನಿಂದ ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ನಾನಾ ಕಾರಣ ನೀಡಿ ಈಗಾಗಲೇ ಮೂರು ಬಾರಿ ಸಮಯ ಬದಲಾವಣೆ ಮಾಡಲಾಗಿದೆ. ಇದರಿಂದ ಜನರಿಗೆ ತುಂಬಾ ಗೊಂದಲವಾಗಿದೆ. ಇದರ ಜತೆಗೆ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ನೀಟ್‌ ಪರೀಕ್ಷೆ ಇದೆ. ಪ್ರಧಾನಿಯವರ ರ‍್ಯಾಲಿಯಿಂದ ಪರೀಕ್ಷೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗಲಿದೆ. ಹೀಗಾಗಿ ಮೋದಿ ರೋಡ್‌ ಶೋಗೆ ಅವಕಾಶ ನಿರ್ಬಂಧಿಸಬೇಕುʼʼ ಎಂದು ಜಿ.ಆರ್ ಮೋಹನ್ ಮನವಿ ಮಾಡಿದ್ದಾರೆ.

ನಾಗರಿಕರ ಹಕ್ಕು ಮೊಟಕು ಎಂದು ಇನ್ನೊಂದು ಅರ್ಜಿ

ಹಿರಿಯ ವಕೀಲ ಅಮೃತೇಶ್ ಅವರು ಕೂಡಾ ಹೈಕೋರ್ಟ್‌ಗೆ ಇನ್ನೊಂದು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ರೋಡ್ ಶೋ ನಿಂದ ಆಗುವ ಟ್ರಾಫಿಕ್ ಜಾಮ್ ಮತ್ತು ಅದರಿಂದಾಗುವ ತೊಂದರೆಗಳ ಬಗ್ಗೆ ವಿವರಿಸಲಾಗಿದೆ.

ʻʻಈಗಾಗಲೇ ಬಿಜೆಪಿ ಹೇಳಿರುವಂತೆ 10 ಲಕ್ಷ ಸೇರಲಿದ್ದಾರೆ. ಸಾವಿರಾರು ಮಂದಿ ಜನ ಸೇರುವುದರಿಂದ ಪರಿಸರ ನಾಶವಾಗಲಿದೆ. ಬೆಂಗಳೂರಿನ ಹಿರಿಯ ನಾಗರಿಕರಿಗೆ ತೊಂದರೆಯಾಗಲಿದೆ. ಚುನಾವಣಾ ಆಯೋಗವೂ ಅವೈಜ್ಞಾನಿಕ ರೀತಿಯಲ್ಲಿ ಅನುಮತಿ ನೀಡಿದೆ. ಇದರಿಂದ ನಾಗರಿಕರ ನಡೆದಾಡುವ ಹಕ್ಕು ಕಸಿದುಕೊಂಡಂತೆ ಆಗಲಿದೆ. ಆದ್ದರಿಂದ ಮೋದಿ ರೋಡ್ ಶೋಗೆ ತಡೆ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಹೈಕೋರ್ಟ್‌ನಲ್ಲಿ ವಿಚಾರಣೆಗೆ ಸ್ವೀಕಾರ ಸಾಧ್ಯತೆ

ಮೋದಿ ರೋಡ್‌ ಶೋಗೆ ತಡೆ ಕೋರಿ ಸಲ್ಲಿಸಿರುವ ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಮಧ್ಯಾಹ್ನ 2.30ರ ಹೊತ್ತಿಗೆ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಬಳಿಕ ಕೋರ್ಟ್‌ ಅನುಮತಿ ನೀಡುತ್ತದೋ, ತಡೆಯುತ್ತದೋ, ಷರತ್ತುಬದ್ಧವಾಗಿ ನಡೆಸುವಂತೆ ಸೂಚಿಸುತ್ತದೆಯೋ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : Karnataka Election 2023: ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್‌ ಶೋ: ಮನೆ ಬಾಲ್ಕನಿ, ಟೆರೇಸ್‌ ಮೇಲೆ ನಿಂತು ನೋಡುವಂತಿಲ್ಲ!

Exit mobile version