ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ (Karnataka Election 2023) ಹದ ತಪ್ಪಿದ ಮಾತಿನ ಅಬ್ಬರ ಜೋರಾಗಿದೆ. ಕೆಲವು ದಿನದ ಹಿಂದಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷದ ಹಾವು ಎಂದು ಕರೆದು ವಿವಾದಕ್ಕೆ ಒಳಗಾಗಿದ್ದರೆ, ಸೋಮವಾರ ಮುಂಜಾನೆ ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಅವರು ಮೋದಿ ಅವರನ್ನು ʻನಾಲಾಯಕ್ ಮಗʼ ಎಂದಿದ್ದರು. ಅದಾದ ಬಳಿಕ ಈಗ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ʻರಾಹುಲ್ ಗಾಂಧಿ ಹುಚ್ಚ್ ಅಲ್ಲ ಅರೆಹುಚ್ಚʼ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಈ ರೀತಿ ನಾಲಿಗೆ ಹರಿಬಿಟ್ಟಿದ್ದಾರೆ.
ʻʻರಾಹುಲ್ ಗಾಂಧಿ ಹುಚ್ಚ ಅಲ್ಲಾ ಅರೇ ಹುಚ್ಚ ಅಂತಾನೇ ಕರೆಯಬೇಕುʼʼ ಎಂದಿರುವ ಯತ್ನಾಳ್, ಅವರು ಲೂಗಡ್ಡೆಯಿಂದ ಚಿನ್ನ ತೆಗೆಯತ್ತೇನೆ ಅಂತಾರೆ, ಚೀನಾ ರಾಯಭಾರಿ ಜೊತೆಗೆ ಸಭೆ ಮಾಡುತ್ತಾರೆ, ದೇಶ ವಿರೋಧಿಗಳ ಜೊತೆಗೆ ಕೈಜೋಡಿಸತ್ತಾರೆ. ಹಾಗಿರುವಾಗ ಅವರನ್ನು ಬುದ್ಧಿವಂತ ಅಂತ ಕರೆಯಬೇಕಾʼʼ ಎಂದು ಯತ್ನಾಳ್ ಪ್ರಶ್ನಿಸಿದರು.
ಈ ರೀತಿ ವರ್ತನೆ ಮಾಡುವವರನ್ನು ದೊಡ್ಡ ಬುದ್ಧಿವಂತ ಅಂತ ಕರೆಯಬೇಕಾ ಅಥವಾ ಹುಚ್ಚ ಅಲ್ಲಾ ಅರೇ ಹುಚ್ಚ ಅಂತ ಕರೆಯಬೇಕಾ ಎಂದು ಕೇಳಿದರು ಯತ್ನಾಳ್.
ಕೆಲವು ದಿನಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರನ್ನು ವಿಷದ ಹಾವು ಎಂದು ಸಂಬೋಧಿಸಿದಾಗ, ಹಾಗಿದ್ದರೆ ಸೋನಿಯಾ ಗಾಂಧಿ ಅವರನ್ನು ವಿಷ ಕನ್ಯೆ ಎಂದು ಕರೆಯಬಹುದಾ ಎಂದು ಕೇಳಿದ್ದರು ಬಸನಗೌಡ ಪಾಟೀಲ್ ಯತ್ನಾಳ್. ರಾಹುಲ್ ಗಾಂಧಿಯನ್ನು ಅಂದು ಅವರು ಹುಚ್ಚ ಎಂದಿದ್ದರು. ಈ ಹೇಳಿಕೆಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು. ಇದೀಗ ಅವರು ಮತ್ತೊಮ್ಮೆ ರಾಹುಲ್ ಗಾಂಧಿ ಅವರನ್ನು ಅರೆಹುಚ್ಚ ಎಂದಿದ್ದಾರೆ.
ಪ್ರಿಯಾಂಕ ಖರ್ಗೆ ಹೇಳಿದ್ದೇನು?
ಪ್ರಧಾನಿ ಮೋದಿ ಅವರು ಕಲಬುರಗಿಯಲ್ಲಿ ಪ್ರಚಾರಕ್ಕೆ ಬಂದಾಗ ಬಂಜಾರ ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ನಿಮ್ಮ ಒಬ್ಬ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು ಹೇಳಿದ್ದರು. ಇದನ್ನು ಪ್ರಿಯಾಂಕ ಖರ್ಗೆ ಸೋಮವಾರ ಕಲಬುರಗಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ʻʻಕಲಬುರಗಿಗೆ ಬಂದಾಗ ಬಂಜಾರ ಸಮಾಜಕ್ಕೆ ಧೈರ್ಯ ಹೇಳಿದ್ದೀರಿ.. ಬಂಜಾರ ಸಮುದಾಯದ ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು. ಇಂತಹ ನಾಲಾಯಕ್ ಮಗ ಇದ್ದರೆ ಮನೆ ನಡೆಸೋಕೆ ಆಗುತ್ತಾ?ʼʼ ಎಂದು ಪ್ರಶ್ನಿಸಿದ್ದಾರೆ ಖರ್ಗೆ. ಕೋಲಿ ಕುರುಬ ಸಮುದಾಯಕ್ಕೆ ಯಾವಾಗ ಎಸ್ಟಿ ಮೀಸಲು ಕೊಡುತ್ತೀರಾ ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು. ʻʻನಮ್ಮ ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಮಾಡೊದಕ್ಕೆ ನಿಮಗೆ ಏನು ನೈತಿಕತೆ ಇದೆ? ನೀವು ಏನು ಕೆಲಸ ಮಾಡಿದ್ದೀರಿ ಹೇಳಿʼʼ ಎಂದರು ಪ್ರಿಯಾಂಕ ಖರ್ಗೆ.
ʻʻಗೊಂಡ ಹಾಗೂ ಕೋಲಿ ಸಮಾಜದ ಮೀಸಲಾತಿ ಬೇಡಿಕೆ ಬಗ್ಗೆ ಏನು ಮಾಡಿದಿರಿ? ನಾನು ಖುದ್ದಾಗಿ ನಿಮ್ಮ ಸಚಿವರಿಗೆ ಹೋಗಿ ಮೂರು ಬಾರಿ ಮನವಿ ಕೊಟ್ಟಿದ್ದೇನೆ. ನಾನು ಸಚಿವನಾಗಿದ್ದಾಗಲೇ ಹೋಗಿ ಪತ್ರ ಕೊಟ್ಟು ಬಂದಿದ್ದೇನೆ.. ನಿಮ್ಮ ಕುಲ ಬಾಂಧವರಿಗೆ ನೀವೇ ಚೂರಿ ಹಾಕುತ್ತಿದ್ದೀರಿʼʼ ಎಂದು ಹೇಳಿದರು ಪ್ರಿಯಾಂಕ ಖರ್ಗೆ.
ಇದನ್ನೂ ಓದಿ : Karnataka Election : ಮೋದಿಗೆ ನಾಲಾಯಕ್ ಅಂದಿಲ್ಲ; ನಾನು ಹೇಳಿದ್ದೇ ಬೇರೆ ಅಂದ್ರು ಪ್ರಿಯಾಂಕ ಖರ್ಗೆ