ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಮತ ಎಣಿಕೆ ಮೇ 13ರಂದು ನಡೆಯಲಿದೆ. ಈ ನಡುವೆ ಮತದಾನ ಮುಗಿಯುತ್ತಿದ್ದಂತೆಯೇ ಚಿಗಿತುಕೊಂಡಿರುವ ಬೆಟ್ಟಿಂಗ್ ದಂಧೆ (Betting business) ವೇಗವನ್ನು ಪಡೆದುಕೊಂಡಿದೆ. ರಾಜ್ಯದಲ್ಲಿ ಅತಂತ್ರ ಸರ್ಕಾರ ಬರುತ್ತೋ? ಸ್ವತಂತ್ರ ಸರ್ಕಾರ ಬರುತ್ತೋ? ಯಾರಿಗೆ ಎಷ್ಟು ಸೀಟ್ ಬರಬಹುದು ಎನ್ನುವುದು ಬೆಟ್ಟಿಂಗ್‌ನ ಒಂದು ಲೆಕ್ಕಾಚಾರವಾದರೆ, ನಿರ್ದಿಷ್ಟ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ, ಲೀಡ್ ಎಷ್ಟು ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಬಿಸಿನೆಸ್ ಜೋರಾಗಿ ನಡೆಯುತ್ತಿದೆ.
ಒಂದು ಕಡೆ ಹಣದ ಬೆಟ್ಟಿಂಗ್ ನಡೆಯುತ್ತಿದ್ದರೆ, ಇನ್ನೊಂದು ಕಡೆ ಹಣ, ಚಿನ್ನ, ಜಮೀನು, ಬೈಕ್, ಟ್ರ್ಯಾಕ್ಟರ್ ಪಣಕ್ಕೆ ಇಟ್ಟು ಆಟವಾಡುತ್ತಿದ್ದಾರೆ ಜನರು.
ಬಳ್ಳಾರಿ ಗ್ರಾಮೀಣ, ನಗರ ಕ್ಷೇತ್ರದಲ್ಲಿ ಯಾರು?
ಬಳ್ಳಾರಿ ಭಾಗದಲ್ಲಿ ನಡೆಯುತ್ತಿರುವ ಅತಿ ದೊಡ್ಡ ಚರ್ಚೆ ಏನೆಂದರೆ ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು. ಈ ವಿಚಾರದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಬೆಟ್ಟಿಂಗ್ ನಡೆಯುತ್ತಿದೆ. ಆನ್ ಲೈನ್ ನಲ್ಲಿ ರಾಜ್ಯದಲ್ಲಿ ಯಾರು ಅಧಿಕಾರ ಪಡೆಯುತ್ತಾರೆ ಎಂಬುದು ಪ್ರಮುಖ ಅಂಶ. ಆಫ್‌ನಲ್ಲಿ ಬಳ್ಳಾರಿ ಗ್ರಾಮೀಣದಲ್ಲಿ ಬಿಜೆಪಿಯ ರಾಮುಲು ಗೆಲ್ತಾರಾ? ಕಾಂಗ್ರೆಸ್‌ನ ನಾಗೇಂದ್ರ ಗೆಲ್ಲುತ್ತಾರಾ ಎನ್ನುವ ಚರ್ಚೆ ಜೋರಾಗಿದೆ.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಕೆಆರ್‌ಪಿಸಿ ಮಧ್ಯೆಯೂ ಬೆಟ್ಟಿಂಗ್ ನಡೆದರೆ., ಬಳ್ಳಾರಿ ಗ್ರಾಮೀಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಬೆಟ್ಟಿಂಗ್ ನಡೆದಿದೆ. ಬಳ್ಳಾರಿ ನಗರದಲ್ಲಿ 1:1 ನಡೆದರೆ, ಗ್ರಾಮೀಣದಲ್ಲಿ 1:1.5 ನಡೆಯುತ್ತಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ಅವರೇ ಸೆಂಟ್ರಲ್!
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ರಾಜ್ಯದ ಎಲ್ಲ ಬೆಟ್ಟಿಂಗ್ ಪ್ರೇಮಿಗಳಿಗೆ ಖುಷಿಯ ತಾಣ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ನಡುವೆ ತೀವ್ರ ಹಣಾಹಣಿ ಇದೆ. ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರಿಂದ ಏನಾಗಲಿದೆ ಎಂಬ ಕುತೂಹಲದ ಕಣ್ಣು ಕ್ಷೇತ್ರದ ಮೇಲೆ ನೆಟ್ಟಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರು ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ಕಟ್ಟುತ್ತಿದ್ದು, ಕೆಲವರಂತೂ ಸೈಟ್ ಮತ್ತು ಚಿನ್ನದ ರೂಪದಲ್ಲೂ ಬಾಜಿ ಕಟ್ಟುತ್ತಿದ್ದಾರೆ. ಜಗದೀಶ್ ಶೆಟ್ಟರ್ ಸೋಲ್ತಾರಾ ಇಲ್ಲಾ ಗೆಲ್ತಾರಾ ಎನ್ನುವುದೇ ಬೆಟ್‌ನ ಕೇಂದ್ರ ಬಿಂದು.
ಕನಕಪುರದಲ್ಲಿ ಡಿಕೆಶಿ ಗೆಲ್ಲುವ ಲೀಡ್ ಮೇಲೆ ಬೆಟ್
ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಲಕ್ಷಾಂತರ ರೂ. ಬೆಟ್ ಮಾಡುತ್ತಿದೆ. ಮಾಗಡಿಯಲ್ಲಿ ಬಾಲಕೃಷ್ಣ, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ತಾರೆ ಎಂದು ಹೆಚ್ಚು ಬೆಟ್ಟಿಂಗ್ ಇದೆ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಗೆಲ್ಲುವುದಕ್ಕಿಂತಲೂ ಎಷ್ಟು ಅಂತರದಿಂದ ಗೆಲ್ತಾರೆ ಅನ್ನುವುದೇ ಲೆಕ್ಕಾಚಾರ. ಕನಕಪುರದಲ್ಲಿ ಡಿಕೆಶಿ 1 ಲಕ್ಷ ಲೀಡ್‌ನಲ್ಲಿ ಗೆಲ್ತಾರೆ ಎಂದು ಬೆಟ್ಟಿಂಗ್ ಕಟ್ಟಲಾಗುತ್ತಿದೆ.
ಮಂಡ್ಯದಲ್ಲಿ ಹಳ್ಳಿ ಹಳ್ಳಿಯಲ್ಲೂ ನಡೀತಿದೆ ಲಕ್ಷಾಂತರ ರೂ ಬೆಟ್ಟಿಂಗ್
ಮಂಡ್ಯ ಜಿಲ್ಲೆಯಲ್ಲಿ ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲೇ ಬೆಟ್ಟಿಗರ ಟಾರ್ಗೆಟ್. ಮೇಲುಕೋಟೆಯಲ್ಲಿ ಜೆಡಿಎಸ್ ನ ಸಿ ಎಸ್ ಪುಟ್ಟರಾಜು ಹಾಗೂ ಕಾಂಗ್ರೆಸ್ ಬೆಂಬಲಿತ ರೈತಸಂಘದ ದರ್ಶನ್ ಪುಟ್ಟಣಯ್ಯ ರ ನಡುವೆ ಟೈಟ್ ಫೈಟ್ ಇದ್ದರೆ, ಶ್ರೀರಂಗಪಟ್ಟಣದಲ್ಲಿ ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ ಮತ್ತು ಕಾಂಗ್ರೆಸ್‌ನ ರಮೇಶ್ ಬಾಬು ಬಂಡಿಸಿದ್ದೇಗೌಡರ ನಡುವೆ ಗೆಲುವಿಗಾಗಿ ಪೈಪೋಟಿ ನಡೆದಿದೆ.
ಅಥಣಿಯಲ್ಲಿ ಕುಮಟಳ್ಳಿನಾ? ಲಕ್ಷ್ಮಣ ಸವದಿನಾ?
ಅಥಣಿಯಲ್ಲಿ ಬೆಟ್ಟಿಂಗ್ ಭರಾಟೆ ಬಲು ಜೋರಾಗಿದ್ದು, ಬಿಜೆಪಿಯ ಮಹೇಶ ಕುಮಟಳ್ಳಿ ಗೆಲ್ತಾರಾ? ಬಿಜೆಪಿಯಿಂದ ಸಿಡಿದು ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿ ಗೆಲ್ತಾರಾ ಎನ್ನುವ ಬೆಟ್ಟಿಂಗ್ ತುರುಸಿದೆ.
ಬೆಟ್ಟಿಗರ ಕುತೂಹಲದ ಕೇಂದ್ರ ಬಿಂದು ಪುತ್ತೂರು
ರಾಜ್ಯದ ಹೈವೋಲ್ಟೇಜ್ ಕದನ ಕಣಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರ ಬೆಟ್ಟಿಂಗ್‌ನಲ್ಲೂ ಮುಂದಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಬಿಜೆಪಿ ಬಂಡುಕೋರ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆ ದೊಡ್ಡ ಮಟ್ಟದ ಜಿದ್ದಾಜಿದ್ದಿಯನ್ನು ಹುಟ್ಟು ಹಾಕಿದೆ.
ಇಲ್ಲಿನ ಬಿಜೆಪಿಯ ಆಶಾ ತಿಮ್ಮಪ್ಪ ಗೌಡರ ಪರ ಅತೀ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದೆ. ಎರಡನೇ ಸ್ಥಾನ ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ ಪರ. ಅರುಣ್ ಕುಮಾರ್ ಪುತ್ತಿಲ ಗೆಲ್ಲುತ್ತಾರೆ ಎಂದು ಬೆಟ್ ಕಟ್ಟಲು ಜನರು ಹಿಂಜರಿಯುತ್ತಿದ್ದಾರೆ. ಆದರೆ, ಯಾರನ್ನು ಸೋಲಿಸಬಹುದು ಎನ್ನುವ ಚರ್ಚೆ ಬಲವಾಗಿದೆ.
ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಪರ ಮೂರು ಲಕ್ಷ ಬೆಟ್ಟಿಂಗ್
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮಲ್ಲಯ್ಯನಪುರದಲ್ಲಿ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪರವಾಗಿ ಮೂರು ಲಕ್ಷ ರೂ. ಬೆಟ್ ಕಟ್ಟಿ ಸವಾಲು ಎಸೆದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುದ್ದರಾಮೇ ಗೌಡ ಎಂಬವರು ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಗೆಲ್ಲುತ್ತಾರೆ ಎಂದು ಹೇಳುತ್ತಾ ಬಿಜೆಪಿಯವರನ್ನು ಬೆಟ್ಟಿಂಗ್‌ಗೆ ಆಹ್ವಾನಿಸುವ ವಿಡಿಯೋ ವೈರಲ್ ಆಗಿದೆ. ಇತ್ತ ಮೈಸೂರಿನ ಕೆ.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಿ. ರವಿಶಂಕರ್ ಗೆಲ್ಲುತ್ತಾರೆ ಎಂದು ಸಿಕ್ಕಾಪಟ್ಟೆ ಬಾಜಿ ಕಟ್ಟಲಾಗುತ್ತಿದೆ.
ಇದನ್ನೂ ಓದಿ: Karnataka Election: ಲಿಂಗಾಯತ ಸೀಟ್ ಜಾಸ್ತಿ ಬಂದರೆ ಶಾಮನೂರು ಕೂಡಾ ಸಿಎಂ ರೇಸ್‌ಗೆ ಎಂಟ್ರಿ