ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿರುವ ವರುಣ ವಿಧಾನಸಭಾ ಕ್ಷೇತ್ರ ಸೂಕ್ಷ್ಮ ಕಣವಾಗಿ ಪರಿವರ್ತನೆಯಾಗುತ್ತಿದೆ. ಗುರುವಾರ ರಾತ್ರಿ ಸಿದ್ದರಾಮಯ್ಯನವರ ಊರಾದ ಸಿದ್ದರಾಮನ ಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಬೆನ್ನಿಗೇ ಈಗ ಬಿಳುಗಲಿ ಗ್ರಾಮದವರು ವರುಣ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ.
ʻʻಸಂವಿಧಾನ ಬದಲಿಸುವ ಬಿಜೆಪಿ ಪಕ್ಷದ ಅಭ್ಯರ್ಥಿಗೆ ನಮ್ಮೂರಿಗೆ ನೋ ಎಂಟ್ರಿʼʼ ಎಂದು ಹೇಳಿದ ಗ್ರಾಮಸ್ಥರು, ಗ್ರಾಮಕ್ಕೆ ಬರುವುದಕ್ಕಿಂತ ಮುಂಚೆಯೇ ಗೇಟ್ ಪಾಸ್ ಕೊಟ್ಟಿದ್ದಾರೆ.
ಬಿಳುಗಲಿ ಗ್ರಾಮದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ಯುವಕರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಜಯಕಾರ ಕೂಗಿದರು. ʻʻಸಂವಿಧಾನ ಚೇಂಜ್ ಮಾಡ್ತೀವಿ ಅಂದ್ರೆ ಸುಮ್ಮನಿರಲ್ಲ. ಸಂವಿಧಾನ ಬರೆದು ಕಾನೂನನ್ನು ಬರೆದುಕೊಟ್ಟ ಅಂಬೇಡ್ಕರ್ ವಿರೋಧಿಗಳಿಗೆ ನಮ್ಮೂರಿಗೆ ಬರಲು ನೈತಿಕತೆ ಇಲ್ಲ. ಸಂವಿಧಾನದ ಅಡಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ. ಇಂತಹ ಸಂವಿಧಾನ ವಿರೋಧಿ ಬಿಜೆಪಿ ಪಕ್ಷಕ್ಕೆ ನಾವು ಮತ ಹಾಕಬೇಕಾ?ʼʼ ಎಂದು ಪ್ರಶ್ನಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು ಮತ್ತು ಪೊಲೀಸರು ಭೇಟಿ ನೀಡಿ ಮನವೊಲಿಕೆ ಮಾಡಿದರೂ ಯುವಕರು ಮತ್ತು ಗ್ರಾಮಸ್ಥರು ಪಟ್ಟು ಬಿಡಲಿಲ್ಲ. ಪೊಲೀಸರು ಮತ್ತು ಯುವಕರು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ವಿ. ಸೋಮಣ್ಣ ಅವರು ಗ್ರಾಮಕ್ಕೆ ಬರದೆಯೇ ಹೊರಟು ಹೋಗಿದ್ದಾರೆ.
ಸಿದ್ದರಾಮನಹುಂಡಿಯಲ್ಲಿ ನಡೆದಿದ್ದೇನು?
ಗುರುವಾರ ಮಧ್ಯ ರಾತ್ರಿ ವರುಣಾಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತನಿಗೆ ತೀವ್ರ ಪೆಟ್ಟು ಬಿದ್ದಿದ್ದು, ಆತನನ್ನು ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ಕೆ.ಎಂ.ನಾಗೇಶ್, ಗಾಯಗೊಂಡ ಯುವಕ ಸಿದ್ದರಾಮಯ್ಯ ಅವರ ಅಣ್ಣನ ಮನೆ ಮುಂದೆ ಪ್ರಚಾರ ಕಾರ್ಯದಲ್ಲಿ ಇದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ಸಂಬಂಧಿಕರು ನಮ್ಮ ಮೇಲೆ ಗಲಾಟೆ ಮಾಡಿದ್ರು. ಸಿದ್ದರಾಮಯ್ಯ ಕುಟುಂಬದ ವಿರುದ್ಧ ಬಿಜೆಪಿ ಕಾರ್ಯಕರ್ತ ರವಿಶಂಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಸಂಜೆ ಸಿದ್ದರಾಮನಹುಂಡಿಯಲ್ಲಿ ಸೋಮಣ್ಣ ಪ್ರಚಾರ ನಡೆಸುತ್ತಿದ್ದರು. ಏಕಾಏಕಿ ಸಿದ್ದರಾಮಯ್ಯಗೆ ಜೈ, ಸೋಮಣ್ಣಗೆ ಧಿಕ್ಕಾರ ಎಂದು ಕೂಗಿದ್ರು. ಕಲ್ಲು ತೂರಾಟ ನಡೆಸಿ ಕಾರುಗಳನ್ನು ಜಖಂಗೊಳಿಸಿದ್ರು. ದೊಣ್ಣೆಯಿಂದ ಹಲ್ಲೆ ಮಾಡಿದ್ರು. ಬಿಜೆಪಿ ಕಾರ್ಯಕರ್ತ ನಾಗೇಶ್ ಗೆ ಕಾಲು ಮತ್ತು ಕೈಗೆ ಪೆಟ್ಟಾಗಿದೆ. ಘಟನೆ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದ್ರು. ಸಿದ್ದರಾಮಯ್ಯ ಆಪ್ತ ಕುಮಾರ್ ಪೊಲೀಸರಿಗೆ ಕರೆ ಮಾಡಿ ಪ್ರಭಾವ ಬಳಸಿ ಮೂವರನ್ನೂ ಬಿಡುಗಡೆಗೊಳಿಸಿದ್ದಾರೆ. ಸಿದ್ದರಾಮಯ್ಯ ಹತಾಶೆಗೊಂಡಿದ್ದಾರೆ.ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡುತ್ತೇವೆ. ಬಿಜೆಪಿ ಕಾರ್ಯಕರ್ತ ಹಾಗೂ ಘಟನೆ ಸ್ಥಳದಲ್ಲಿದ್ದ ರವಿಶಂಕರ್ ಅವರು ಗುರುವಾರ ರಾತ್ರಿ ಹೇಳಿದ್ದಾರೆ.
ಇದನ್ನೂ ಓದಿ : Karnataka Election : ಯತ್ನಾಳ್ ವಿಷ ಕನ್ಯೆ ಹೇಳಿಕೆ ಹಿಂದೆ ಮೋದಿ ಪ್ರಚೋದನೆ; ಸಿದ್ದರಾಮಯ್ಯಗೆ ಸಂಶಯ