Site icon Vistara News

Karnataka Election : ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಕೋಮುಗಲಭೆ; ಶಾ ಬೆಂಬಲಕ್ಕೆ ನಿಂತ ಸಿ.ಟಿ. ರವಿ, ಕರಂದ್ಲಾಜೆ

karnataka-election: BJP leaders support Amit shah statement regarding communal clash in congress regime

karnataka-election: BJP leaders support Amit shah statement regarding communal clash in congress regime

ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮುಗಲಭೆಗಳು ನಡೆಯಲಿವೆ ಎಂಬ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಕಾಂಗ್ರೆಸ್‌ ನಡೆಯನ್ನು ಬಿಜೆಪಿ ಖಂಡಿಸಿದೆ. ಜತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮುಖಂಡರು ಅಮಿತ್‌ ಶಾ ಬೆಂಬಲಕ್ಕೆ ನಿಂತಿದ್ದಾರೆ.

ಕೈ ಅಧಿಕಾರಕ್ಕೇರಿದರೆ ತಾಲಿಬಾನ್‌ ಗ್ಯಾಂಗ್‌ ಸಕ್ರಿಯ ಎಂದ ಸಿ.ಟಿ. ರವಿ

ರಾಜ್ಯದಲ್ಲಿ ಸರ್ಕಾರ ಬಂದ್ರೆ ಕೋಮು ಗಲಭೆಯಾಗುತ್ತೆ ಎನ್ನುವ ಅಮಿತ್ ಶಾ ಹೇಳಿಕೆ ಸರಿಯಾಗಿಯೇ ಇದೆ. ಯಾಕೆಂದರೆ, ವಿಷಯ ಬಹಳ ಸ್ಪಷ್ಟವಿದೆ. ಒಂದು ಬಹಳ ಸ್ಪಷ್ಟವಿದೆ, ಕಾಂಗ್ರೆಸ್ ಪಿಎಫ್‌ಐ ಎಸ್ಡಿಪಿಐ ಜೊತೆ ಹೊಂದಾಣಿಕೆ‌ ಮಾಡಿಕೊಂಡಿದೆ. ಕಾಂಗ್ರೆಸ್‌ ಅಧಿಕಾರಕ್ಕೇರಿದರೆ ತಾಲಿಬಾನಿ ಸಂಘಟನೆಗಳು ಎದ್ದು ಕುಳಿತುಕೊಳ್ಳುತ್ತವೆ. ಡಿಜೆ ಹಳ್ಳಿ, ಕೆಜಿ‌ಹಳ್ಳಿ ಗ್ಯಾಂಗ್ ಗಳು ಸಕ್ರಿಯವಾಗುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ದೇವನಹಳ್ಳಿ ಯ ಬೂದಿಗೆರೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಪರ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ನೀತಿಯೇ ಇಂಥ ದುಷ್ಟ ಶಕ್ತಿಗಳಿಗೆ ಬೆಂಬಲ ಕೊಡುವುದಾಗಿದೆ ಎಂದರು.

ʻʻಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಡಿಜೆ ಹಳ್ಳಿ, ಕೆಜೆ ಹಳ್ಳಿ ಗ್ಯಾಂಗ್ ಉದ್ದೇಶಿಸಿ ಅವರೆಲ್ಲಾ ನಮ್ಮ ಬ್ರದರ್ಸ್ ಅಂತಾ ಹೇಳಿದ್ದಾರೆ, ಪಾದರಾಯನಪುರ ಗಲಾಟೆ ಸಂದರ್ಭದಲ್ಲಿ ಅವರ ಪರವಾಗಿ ನಿಂತುಕೊಂಡರು. ಇದರಿಂದಾಗಿ ತಾಲಿಬಾನ್ ಗ್ಯಾಂಗ್ ಎದ್ದು‌ ಕುಳಿತುಕೊಳ್ಳೋದು ಗ್ಯಾರಂಟಿ. ಕಾಂಗ್ರೆಸ್ ಆಡಳಿತ ಅಂದ್ರೆ ತಾಲಿಬಾನ್ ಮಾದರಿ ಆಡಳಿತ. ಕೋಮು ಗಲಭೆಗಳು ಗ್ಯಾರಂಟಿ, ಆ ಕೋಮಗಲಭೆ ಹುಟ್ಟು ಹಾಕುವಂತಹ ಎಲ್ಲರೂ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆʼʼ ಎಂದು ಸಿ.ಟಿ. ರವಿ ಹೇಳಿದರು.

ಅಮಿತ್‌ ಅಲ್ದೇ ಬಿನ್‌ ಲಾಡೆನ್‌ ತರ್ಬೇಕಾ?

ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರನ್ನು ಚುನಾವಣಾ ಪ್ರಚಾರದಿಂದ ದೂರ ಇಡಬೇಕೇ ಎನ್ನುವ ಬಗ್ಗೆ ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ ಎಂದು ಹೇಳಿದ ಸಿ.ಟಿ. ರವಿ ಅವರು, ನಾವು ಅಮಿತ್ ಶಾ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಬರದೆ ಬಿನ್ ಲಾಡೆನ್ ಕರೆದುಕೊಂಡು ಬರಬೇಕಾ..? ಇವರಿಗೆ ಮದನಿ‌ ಬೇಕು, ಲಾಡೆನ್ ಬೇಕು, ದಾವೂದ್ ಇಬ್ರಾಹಿಂ ಬೇಕು. ದೇಶಭಕ್ತ ಅಮಿತ್ ಷಾ ಬೇಡ್ವ ಎಂದು ವಾಗ್ದಾಳಿ ನಡೆಸಿದರು.

ಶೆಟ್ಟರ್‌ ನಿವೃತ್ತಿ ಪಡೆದು ಬಿಜೆಪಿ ಬೆಂಬಲಿಸಲಿ

ಲಕ್ಷಣ್ ಸವದಿ ಹಾಗೂ ಜಗದೀಶ್ ಶೆಟ್ಟರ್ ಇಬ್ಬರು ಪಕ್ಷ ಬಿಟ್ಟು ತಪ್ಪು ಮಾಡಿದ್ದಾರೆ. ಅವರಿಬ್ಬರು ಸೋಲುತ್ತಾರೆ, ಬಿಜೆಪಿ ಗೆಲ್ಲೋದು ನಿಶ್ಚಿತ ಎಂದರು ರವಿ. ಅದರ ಜತೆಗೆ ʻʻಸ್ವತಃ ಜಗದೀಶ್‌ ಶೆಟ್ಟರ್‌ ಅವರಿಗೂ ಪಕ್ಷ ಬಿಟ್ಟು ತಪ್ಪು ಮಾಡಿದೆ ಅಂತ ಅನಿಸುತ್ತಿರುತ್ತದೆ. ಈಗಲೂ ಕಾಲ‌ ಮಿಂಚಿಲ್ಲ ಜಗದೀಶ್ ಶೆಟ್ಟರ್ ಚುನಾವಣಾ ನಿವೃತ್ತಿ ಪಡೆದು ಬಿಜೆಪಿಗೆ ಬೆಂಬಲಿಸಲಿ ಎಂದರು.

ಕೋಮುಗಲಭೆ ತಡೆದಿದ್ದೇ ಅಮಿತ್‌ ಶಾ ಎಂದ ಕರಂದ್ಲಾಜೆ

ಕಾಂಗ್ರೆಸ್‌ ಕಾಲದಲ್ಲಿ ಕೋಮು ಗಲಭೆ ನಡೆಯುತ್ತಾ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಎಲ್ಲ ಸ್ಥಗಿತವಾಗಿದೆ. ಈ ದೇಶದಲ್ಲಿ ನಡೆಯುತ್ತಿದ್ದ ಕೋಮುಗಲಭೆ, ಭಯೋತ್ಪಾದನೆ ಕೃತ್ಯಗಳನ್ನು ತಡೆದಿದ್ದು ಅಮಿತ್ ಶಾ, ಸರ್ದಾರ್ ವಲ್ಲಭಭಾಯಿ ಪಟೇಲ್ ನಂತರ ಸಮರ್ಥ ಗೃಹಮಂತ್ರಿ ಅಮಿತ್ ಶಾ ಎಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು.

ʻʻಬಿಜೆಪಿಗೆ ಕಾಂಗ್ರೆಸ್‌ನಿಂದ ಕೋಮು ಸೌಹಾರ್ದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಕೋಮು ಸಂಘರ್ಷ ಮಾಡಿದವರ ಕೇಸ್ ವಾಪಸ್ ಪಡೆದರು. ಇದರಿಂದ ಮತ್ತೆ ಕೋಮು ಗಲಭೆಗೆ ಕಾರಣ ಆಗಿದ್ದಾರೆʼʼ ಎಂದು ಹೇಳಿದ ಶೋಭಾ ಅವರು, ʻʻಅಮಿತ್ ಶಾ ಪ್ರಚಾರದಿಂದ ಕಾಂಗ್ರೆಸ್ ಬೆಚ್ಚಿಬಿದ್ದಿದೆ. ಕಾಂಗ್ರೆಸ್‌ಗೆ ತನ್ನ ಸೋಲು ಖಚಿತ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ಎಫ್‌ಐಆರ್‌ ದಾಖಲಿಸಿದೆʼʼ ಎಂದು ಹೇಳಿದರು.

ಬಿಎಸ್‌ವೈ ಎಂದೂ ಜಾತಿ ರಾಜಕೀಯ ಮಾಡಿಲ್ಲʻʻ

ʻʻಯಡಿಯೂರಪ್ಪ ಯಾವತ್ತಿಗೂ ಜಾತಿ ಮೇಲೆ ರಾಜಕಾರಣ ಮಾಡಿದವರು ಅಲ್ಲʼʼ ಎಂದು ಶೋಭಾ ಹೇಳಿದರು. ಬಿಎಸ್‌ವೈ ಅವರು ಜಗದೀಶ್ ಶೆಟ್ಟರ್‌ ವಿರುದ್ಧ ಲಿಂಗಾಯತರನ್ನು ಒಟ್ಟುಗೂಡಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷ ಬಿಟ್ಟು ಹೋದ ಮೇಲೆ ʻಜಗದೀಶ್ ಶೆಟ್ಟರ್‌ ಅವರಿಗೆ ಜಾತಿ ಮೇಲೆ ಪ್ರೀತಿ ಬಂದಿದೆ. ಕಾಂಗ್ರೆಸ್‌ಗೆ ಹೋದ ತಕ್ಷಣ ಅವರಿಗೆ ಎಲ್ಲವೂ ನೆನಪು ಆಗುತ್ತದೆʼʼ ಎಂದರು.

ʻʻಬಿ.ಎಲ್ ಸಂತೋಷ್ ಬಗ್ಗೆ ಮಾತನಾಡಿದ್ದಕ್ಕೆ ನಾನು ಟಾರ್ಗೆಟ್ ಆಗಿದ್ದೇನೆʼʼ ಎಂಬ ಜಗದೀಶ್ ಶೆಟ್ಟರ್ ಆರೋಪಕ್ಕೆ ಶೋಭಾ ತಿರುಗೇಟು ನೀಡಿದರು. ಕಾಂಗ್ರೆಸ್‌ಗೆ ಹೋದ ಮೇಲೆ ಅವರಿಗೆ ಜಾತಿ,‌ ಟೋಪಿ ಎಲ್ಲ ನೆನಪು ಆಗುತ್ತದೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ : Karnataka Election 2023 : ಪ್ರಚೋದನಕಾರಿ ಹೇಳಿಕೆ; ಅಮಿತ್ ಶಾ ವಿರುದ್ಧ ದೂರು ನೀಡಿದ ಕಾಂಗ್ರೆಸ್

Exit mobile version