Site icon Vistara News

Karnataka Election | ಹಳೆ ಮೈಸೂರಿನಲ್ಲಿ ಬಿಜೆಪಿ ಅಬ್ಬರಕ್ಕೆ ಬೆದರಿದ ಕಾಂಗ್ರೆಸ್‌-ಜೆಡಿಎಸ್‌?: ಹೌದೆನ್ನುತ್ತವೆ ಘಟನಾವಳಿಗಳು

karnataka-election-bjp-seemingly-becoming-serious-player-in-old-mysuru-region

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಲಗ್ಗೆ ಇಡುತ್ತಿರುವುದು ನಿಜವಾಗಿಯೂ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ವಲಯದಲ್ಲಿ ಆತಂಕ ಸೃಷ್ಟಿಸಿವೆ. ಇದಕ್ಕೆ ಕಾರಣಗಳೂ ಸಾಕಷ್ಟಿವೆ ಹಾಗೂ ಆ ಪಾಳೆಯಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಇವನ್ನು ಪುಷ್ಟೀಕರಿಸಿವೆ.

ಹಳೆ ಮೈಸೂರು ಭಾಗದ 11 ಜಿಲ್ಲೆಗಳಲ್ಲಿ ಬೆಂಗಳೂರೂ ಸೇರಿ 87 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳನ್ನು ಬೆಂಗಳೂರಿನಲ್ಲಿ ಬಿಜೆಪಿಗೆ ಸಾಕಷ್ಟು ಬಲವಿದ್ದರೂ ಇಲ್ಲಿನ ಎಲ್ಲ ಪಕ್ಷದ ನಾಯಕರುಗಳೊಂದಿಗಿನ ಅಡ್ಜಸ್ಟ್‌ಮೆಂಟ್‌ ರಾಜಕಾರಣದಿಂದಾಗಿ ಹೆಚ್ಚಿನ ಸೀಟುಗಳನ್ನು ಗೆಲ್ಲಲಾಗುತ್ತಿಲ್ಲ ಎನ್ನುವುದು ಜಗಜ್ಜಾಹೀರು.

ಉಳಿದ 59 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪೈಪೋಟಿ ನಡೆಸಲೇಬೇಕಿದೆ. ಈ ಎಲ್ಲ ಕಡೆಯೂ ಜೆಡಿಎಸ್‌ ವರ್ಸಸ್‌ ಕಾಂಗ್ರೆಸ್‌ ವಾತಾವರಣವಿದೆ. ಆದರೂ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹೆಚ್ಚು ಪ್ರಬಲವಾಗಿದ್ದರೆ, ರಾಮನಗರ, ಮಂಡ್ಯ, ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ ಹೆಚ್ಚು ಪ್ರಬಲವಾಗಿದೆ. ಮೈಸೂರಿನಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಜತೆಗೆ ಬಿಜೆಪಿ ಸಮಬಲದ ಹೋರಾಟವಿದೆ. ಕೊಡುಗು ಜಿಲ್ಲೆಯಲ್ಲಿ (ಎರಡು ಕ್ಷೇತ್ರ) ಮಾತ್ರವೇ ಬಿಜೆಪಿ ಸಂಪೂರ್ಣ ಹಿಡಿತ ಹೊಂದಿದೆ.

ಹೀಗಾಗಿ ಮೂರು ಜಿಲ್ಲೆಯಲ್ಲಿ ಜೆಡಿಎಸ್‌ ವಿರುದ್ಧ, ಐದು ಜಿಲ್ಲೆಯಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಸೆಣೆಸಬೇಕಿದೆ. ಇದಕ್ಕಾಗಿ ಸ್ಪಷ್ಟ ಕಾರ್ಯತಂತ್ರ ರೂಪಿಸಿಕೊಂಡಿರುವ ಬಿಜೆಪಿ ಈಗಾಗಲೆ ಎಲ್ಲ ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಹಾಗೂ ಚುನಾವಣಾ ಚಾಣಕ್ಯ ಎಂದೇ ಕರೆಯಲ್ಪಡುವ ಅಮಿತ್‌ ಶಾ ಮಂಡ್ಯಕ್ಕೆ ಆಗಮಿಸಿ ರಣಕಹಳೆ ಮೊಳಗಿಸಿದ್ದಾರೆ.

ಮಂಡ್ಯದಲ್ಲಿ ಕಾರ್ಯಕ್ರಮ ಇದ್ದದ್ದರಿಂದಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಆಹ್ವಾನಿಸಲಾಗಿತ್ತು, ಅವರೂ ಆಗಮಿಸಿದ್ದರು. ಈ ಹಿಂದೆ ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ದೇವೇಗೌಡರನ್ನು ಆಹ್ವಾನಿಸಿರಲಿಲ್ಲ ಎಂಬ ಮಾತುಗಳಿದ್ದವು. ಈ ಕಾರ್ಯಕ್ರಮಕ್ಕೆ ಆಗಮಿಸಿದ ದೇವೇಗೌಡರು ಆಡಿದ ನುಡಿಗಳು ಅಚ್ಚರಿಗೆ ಕಾರಣವಾದವು.

ಅಮಿತ್‌ ಶಾ ಅವರನ್ನು ಹಾಡಿ ಹೊಗಳಿದ ದೇವೇಗೌಡರು, ಕ್ಷೀರ ಕ್ರಾಂತಿಯ ಪಿತಾಮಹ ವರ್ಗೀಸ್‌ ಕುರಿಯನ್‌ ಅವರಿಗೆ ಹೋಲಿಕೆ ಮಾಡಿದರು. ದೇವೇಗೌಡರ ಈ ನಡೆಯು ಪರೋಕ್ಷವಾಗಿ ಬಿಜೆಪಿಯೊಂದಿಗೆ ಸಖ್ಯವನ್ನು ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದಂತೆ ಇದ್ದವು. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಹೊಂದಾಣಿಕೆ ರಾಜಕೀಯ ಹಿಂದಿನಿಂದಲೂ ಜಾರಿಯಲ್ಲಿದೆ.

ಒಂದು ಸಮಯದಲ್ಲಿ ಹಾಸನದಲ್ಲಿ ನಾಲ್ಕು ಶಾಸಕರನ್ನು ಹೊಂದಿದ್ದ ಪಕ್ಷ, ನಂತರದಲ್ಲಿ ಇಡೀ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಮೂರನೇ ಸ್ಥಾನದಲ್ಲೇ ಖುಷಿ ಪಡುತ್ತಿತ್ತು. 2018ರಲ್ಲಿ ಒಬ್ಬ ಶಾಸಕರು ಆಯ್ಕೆಯಾಗಿದ್ದು ಅಭ್ಯರ್ಥಿಯ ಸ್ವಯಂ ಸಾಮರ್ಥ್ಯದಿಂದಲೇ ಹೊರತು ಪಕ್ಷದ ಒತ್ತಾಸೆ ಇದ್ದದ್ದು ಅಷ್ಟಕ್ಕಷ್ಟೆ. ಎರಡು ಬಾರಿ ರಾಜ್ಯದ ಅಧಿಕಾರ ಹಿಡಿದಿದ್ದ ಬಿಜೆಪಿ, ತನ್ನ ಇತಿಹಾಸದಲ್ಲೇ ಮಂಡ್ಯದಲ್ಲಿ ಒಮ್ಮೆಯೂ ಖಾತೆ ತೆರೆದಿರಲಿಲ್ಲ. ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲೂ ಸ್ಥಳೀಯ ನಾಯಕರನ್ನು ಬೆಳೆಸಿ ಪಕ್ಷ ಸಂಘಟನೆ ಭದ್ರಪಡಿಸಿಕೊಳ್ಳಲು ಮುಂದಾಗಲಿಲ್ಲ.

ಈ ಬಾರಿ ಶತಾಯ ಗತಾಯ ಹಳೆ ಮೈಸೂರಿನಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲು ಬಿಜೆಪಿ ಮುಂದಾಗಿರುವಂತೆ ಕಾಣುತ್ತಿದೆ. ಇದಕ್ಕೆ ತಕ್ಕಂತೆ ಒಂದೆಡೆ ಮಂಡ್ಯದಲ್ಲಿ ಸಚಿವ ನಾರಾಯಣಗೌಡ, ಕೆ. ಗೋಪಾಲಯ್ಯ ಕ್ರಯಾಶೀಲರಾಗಿದ್ದರೆ ಇತ್ತ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಸಚಿವ ಅಶ್ವತ್ಥನಾರಾಯಣ ಪಕ್ಷ ಸಂಘಟನೆಯಲ್ಲಿದ್ದಾರೆ.

ಜೆಡಿಎಸ್‌ನಲ್ಲಿ ಕುಸಿದ ಉತ್ಸಾಹ
ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇವೇಗೌಡರು ಅಮಿತ್‌ ಶಾ ಅವರನ್ನು ಹಾಡಿ ಹೊಗಳಿದರೂ ಅತ್ತ ಕಡೆ ಅಮಿತ್‌ ಶಾ ಇದಕ್ಕೆ ಸ್ಪಂದನೆ ತೋರಲಿಲ್ಲ. ನಂತರ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ನೇರವಾಗಿ ಜೆಡಿಎಸ್‌ ಹಾಗೂ ದೇವೇಗೌಡರ ಕುಟುಂಬದ ವಿರುದ್ಧವೇ ಹರಿಹಾಯ್ದರು. ಮತ್ತೆ ಫ್ರೆಂಡ್ಲಿ ಮ್ಯಾಚ್‌ ಮುಂದುವರಿಸುವ ದೇವೇಗೌಡರ ಪ್ರಸ್ತಾಪವನ್ನು ಅಮಿತ್‌ ಶಾ ಈ ಮೂಲಕ ತಿರಸ್ಕರಿಸಿದ್ದಾರೆ ಎಂದು ಜೆಡಿಎಸ್‌ ವಲಯದಲ್ಲಿ ಚರ್ಚೆಯಾಗುತ್ತಿದೆ.

ಬಿಜೆಪಿಯು ಒಂದೇ ಬಾರಿಗೆ ಅಧಿಕಾರಕ್ಕೆ ಬಂದುಬಿಡುತ್ತದೆ ಎಂದು ಹೇಳಲಾಗದಿದ್ದರೂ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಮತಗಳನ್ನು ವಿಭಜನೆ ಮಾಡಿದರೆ ಸಾಕು. ಅಷ್ಟರ ಮಟ್ಟಿಗೆ ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ. ಈ ಮೂಲಕ ತಮ್ಮ ಅಸ್ತಿತ್ವ ಇಲ್ಲವಾಗುತ್ತದೆ ಎಂದು ಆತಂಕ ಮೂಡಿದೆ. ತರಹೇವಾರಿ ಹಾರಗಳ ಮೂಲಕ ದಾಖಲೆ ನಿರ್ಮಿಸಿರುವ ಪಂಚರತ್ನ ಯಾತ್ರೆಯ ಮೇಲೆಯೂ ಅಮಿತ್‌ ಶಾ ಮಾತಿನ ಕರಿಛಾಯೆ ಆವರಿಸಿದೆ.

ಅತ್ತ ದೇವೇಗೌಡರು ಅಮಿತ್‌ ಶಾ ಅವರನ್ನು ಹೊಗಳಿದರೆ ಇತ್ತ ಕುಮಾರಸ್ವಾಮಿ ಯದ್ವಾತದ್ವ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸೋಮವಾರ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಬಿಜೆಪಿಗೆ ಇಡೀ ಕರ್ನಾಟಕವೇ ಎಟಿಎಂ ಆಗಿದೆ. ಎಲ್ಲೆಲ್ಲೂ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ. 40% ಪರ್ಸೆಂಟ್ ವ್ಯವಹಾರ ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಇದು ಅಮಿತ್ ಶಾ ಅವರಿಗೆ ಗೊತ್ತಿಲ್ಲವೆ? ಅಮಿತ್ ಶಾ ಮಗ ಜೈ ಶಾಗೆ ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿ ಇದ್ದಾರೆ. ಕ್ರಿಕೆಟ್‌ಗೆ ಅವರ ಕೊಡುಗೆ ಏನು? ಬಿಸಿಸಿಐನಲ್ಲಿ ಬಂದು ಕೂರಲು ಜೈ ಶಾಗೆ ಏನು ಅರ್ಹತೆ ಇದೆ? ಎಚ್.ಡಿ.ದೇವೇಗೌಡರ ಉಗುರಿಗೆ ಸಮ ಆಗಲ್ಲ. ದೇವೇಗೌಡರ ಬಗ್ಗೆ ಮಾರಾಡುವ ನೈತಿಕತೆ ಅಮಿತ್ ಶಾಗೆ ಇಲ್ಲ ಎಂದಿದ್ದಾರೆ.

ಸಾಮಾನ್ಯವಾಗಿ ಕಾಂಗ್ರೆಸ್‌ ವಿರುದ್ಧ ಹರಿಹಾಯುತ್ತ, ಬಿಜೆಪಿ ಕುರಿತು ನೆಪಮಾತ್ರಕ್ಕೆ ಟೀಕೆ ಮಾಡುತ್ತಿದ್ದ ಕುಮಾರಸ್ವಾಮಿ ಅವರ ವರಸೆ ಬದಲಾಗಿದೆ. ಅನೇಕ ಸ್ಥಳೀಯ ಜೆಡಿಎಸ್‌ ಮುಖಂಡರು ಬಿಜೆಪಿ ಜತೆ ಗುರುತಿಸಿಕೊಳ್ಳುತ್ತಿದ್ದರೆ ಇನ್ನು ಕೆಲವರು ಜೆಡಿಎಸ್‌ನಿಂದ ದೂರವಿದ್ದಾರೆ. ಇತ್ತ ಸುಮಲತಾ ಅಂಬರೀಶ್‌ ಆಪ್ತ ಸಚ್ಚಿದಾನಂದ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೆಲ್ಲವನ್ನೂ ನೋಡಿದರೆ ಜೆಡಿಎಸ್‌ ಪ್ರಾಬಲ್ಯದ ಜಿಲ್ಲೆಗಳಲ್ಲಿ ಬಿಜೆಪಿ ಗಂಭೀರ ಪೈಪೋಟಿ ನೀಡುತ್ತಿರುವುದನ್ನು ಸೂಚಿಸುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಕ್ಷೇತ್ರದ ಪ್ರಚಾರಕ್ಕಿಳಿದ ಶಿವಕುಮಾರ್‌
ಬಿಜೆಪಿಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಪರಿಗಣಿಸಿದ್ದ ಡಿ.ಕೆ. ಶಿವಕುಮಾರ್‌ ಹಾಗೂ ಡಿ.ಕೆ. ಸುರೇಶ್‌ ಸಹೋದರರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಡಿ.ಕೆ. ಸುರೇಶ್‌ ಹಾಗೂ ಸಚಿವ ಅಶ್ವತ್ಥನಾರಾಯಣ ತೊಡೆತಟ್ಟಿದ್ದನ್ನು ಇಡೀ ರಾಜ್ಯವೇ ನೋಡಿದೆ.

ಕಾರ್ಯಕರ್ತರ ಮಟ್ಟದಲ್ಲಿ ಬಿಜೆಪಿಗೆ ಕಾಂಗ್ರೆಸ್‌ನಿಂದ ವಲಸೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ನಾಯಕರು ಅನೇಕರೂ ಬಿಜೆಪಿ ಕಡೆಗೆ ವಾಲುತ್ತಿದ್ದಾರೆ. ಇದೆಲ್ಲದರಿಂದಾಗಿ ಡಿ.ಕೆ. ಸಹೋದರರು ಬಿಜೆಪಿಯನ್ನು ಗಂಭೀರವಾಗಿ ತೆಗೆದುಕೊಂಡಿರುವುದನ್ನು ಸೂಚಿಸುತ್ತಿದೆ.

ತಮ್ಮ ಕ್ಷೇತ್ರವನ್ನು ಸಂಪೂರ್ಣವಾಗಿ ಸಹೋದರ ಡಿ.ಕೆ. ಸುರೇಶ್‌ಗೆ ಒಪ್ಪಿಸಿ ರಾಜ್ಯದ ವಿವಿಧೆಡೆ ಪ್ರವಾಸ ಮಾಡುವ ಡಿ.ಕೆ. ಶಿವಕುಮಾರ್‌ ಇದೇ ಮೊದಲ ಬಾರಿಗೆ ಕನಕಪುರಕ್ಕೆ ತಮ್ಮ ಕೊಡುಗೆಯ ವಿಡಿಯೋ ಸರಣಿ ಮಾಡಿ ಪ್ರಚಾರಕ್ಕೆ ಮುಂದಾಗಿರುವುದು ಹೊಸ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ʼಕನಕಪುರ ಆದರ್ಶ; ಕರ್ನಾಟಕಕ್ಕೆ ಹೊಸ ಸ್ಪರ್ಶʼ ಎಂಬ ಶೀರ್ಷಿಕೆಯಲ್ಲಿ ಕನಕಪುರದ ಅಭಿವೃದ್ಧಿ ಕುರಿತು ವಿಡಿಯೋಗಳನ್ನು ಮುದ್ರಿಸಿದ್ದಾರೆ.

ಅಲ್ಲಿನ ಕಾಲೇಜಿಗೆ ತಮ್ಮ ಕುಟುಂಬದ ಜಮೀನು ನೀಡಿದ್ದು, ಸೋಲಾರ್‌ ಯೋಜನೆ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಡಿಕೆ ಸಹೋದರರ ಕೊಡುಗೆಗಳನ್ನು ಸಾರ್ವಜನಿಕರ ಬಾಯಿಂದಲೇ ಹೇಳಿಸಲಾಗುತ್ತಿದೆ. ಡಿ.ಕೆ. ಶಿವಕುಮಾರ್‌ ಅವರು ಇಲ್ಲಿವರೆಗೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂಬ ಬಿಜೆಪಿ ಪ್ರಚಾರಾಂದೋಲನದಿಂದಾಗಿ ಆಡಳಿತ ವಿರೋಧಿ ಅಲೆ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಶಿವಕುಮಾರ್‌ ಅವರು ತಮ್ಮ ಕ್ಷೇತ್ರದ ಜನರಿಗಾಗಿಯೇ ಇಂತಹ ಅಭಿಯಾನಗಳನ್ನು ಆಯೋಜಿಸಿದ್ದಾರೆ ಎನ್ನಲಾಗಿದೆ.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಎಷ್ಟು ಸ್ಥಾನ ಹೆಚ್ಚು ಗೆಲ್ಲುತ್ತದೆ ಎನ್ನುವುದನ್ನು ಚುನಾವಣೆ ನಿರ್ಧಾರ ಮಾಡುತ್ತದೆ. ಆದರೆ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ದ್ವಿಪಕ್ಷೀಯ ಕದನವೇ ಏರ್ಪಡುತ್ತಿದ್ದ ಹಳೆ ಮೈಸೂರು ಭಾಗದಲ್ಲಿ 2023ರಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಡುವ ಎಲ್ಲ ಸಾಧ್ಯತೆಯೂ ಇದೆ.

ಇದನ್ನೂ ಓದಿ | DK Shivakumar | 2023 ಕಾಂಗ್ರೆಸ್ ಅಧಿಕಾರದ ವರ್ಷವಾಗಲಿದೆ: ಡಿ.ಕೆ. ಶಿವಕುಮಾರ್‌

Exit mobile version