ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಕುಟುಂಬಿಕರ ಸರ್ವನಾಶ ಮಾಡುತ್ತೇನೆ ಎಂದು ಹೇಳಿದ್ದಾರೆನ್ನಲಾದ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ (Manikanta Rathod) ಅವರ ಆಡಿಯೊದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ಅವರು, ಆಡಿಯೊ ತಿರುಚಲಾಗಿದೆಯೇ ಎಂದು ನೋಡಬೇಕು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುವುದು ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮತ್ತವರ ಕುಟುಂಬದವರ ಹತ್ಯೆಗೆ ಸಂಚು ರೂಪಿಸಲಾಗಿದ್ದು, ಅವರಿಗೆ ಜೀವ ಬೆದರಿಕೆ ಇದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಹಾಗೂ ಕಾಂಗ್ರೆಸ್ ವಕ್ತಾರ ಪವನ್ ಖೇರಾ (Pawan Khera) ಗಂಭೀರ ಆರೋಪ ಮಾಡಿದ್ದು, ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ (Manikanta Rathod) ಈ ಬಗ್ಗೆ ಮಾತನಾಡಿದ್ದಾರೆನ್ನಲಾದ ಆಡಿಯೊವನ್ನು ಶನಿವಾರ ಬಿಡುಗಡೆ ಮಾಡಿದ್ದರು.
ಖರ್ಗೆ ಅವರ ಹೆಂಡತಿ ಮತ್ತು ಮಕ್ಕಳನ್ನು ಸಾಫ್ (ಸರ್ವನಾಶ) ಮಾಡುತ್ತೇನೆ ಎಂದು ಮಣಿಕಂಠ ರಾಠೋಡ್ ಹೇಳಿದ್ದಾನೆ. ಇದು ತುಂಬ ಅಪಾಯಕಾರಿ ನಡೆ. ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ಆತಂಕದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೊಲೆಗೆ ನಡೆದಿರುವ ಸ್ಕೆಚ್ ಬಗ್ಗೆ ತಿಳಿದಿದ್ದರೂ ಬಿಜೆಪಿ ನಾಯಕರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ದಲಿತ ನಾಯಕನ ಹತ್ಯೆಗೆ ಹೊರಟಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಗಂಭೀರ ಆರೋಪ ಮಾಡಿದ್ದರು.
ಲಿಂಗಾಯತ ಮತಗಳ ಅಗತ್ಯವಿಲ್ಲ ಎಂದಿಲ್ಲ
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್. ಸಂತೋಷ್ ಅವರು ಬಿಜೆಪಿಗೆ ಲಿಂಗಾಯತ ಮತಗಳ ಅಗತ್ಯವಿಲ್ಲ ಎಂಬ ಸುದ್ದಿ ಹರಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಸುಳ್ಳು ಸುದ್ದಿ, ಇದರ ವಿರುದ್ಧ ದೂರು ದಾಖಲಾಗಿದೆ ಎಂದರು.
ಶಿವರಾಜ್ ಕುಮಾರ್ ಪ್ರಚಾರಕ್ಕೆ ಅಭ್ಯಂತರ ಇಲ್ಲ
ಶಿವರಾಜ್ ಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಿದ್ದನ್ನು ಬಿಜೆಪಿ ನಾಯಕರು ಆಕ್ಷೇಪಿಸಿರುವ ಬಗ್ಗೆ ಕೇಳಿದಾಗ, ಪ್ರಜಾಪ್ರಭುತ್ವದಲ್ಲಿ ಯಾವ ನಟರು ಕೂಡ ಯಾವ ಪಕ್ಷ ಪರವಾಗಿಯೂ ಪ್ರಚಾರ ಮಾಡಬಹುದು. ಪ್ರತಾಪ್ ಸಿಂಹ ಮತ್ತು ಶಿವರಾಜ್ ಕುಮಾರ್ ಟೀಕೆ ಅವರಿಗೆ ಬಿಟ್ಟ ವಿಚಾರ. ಶಿವರಾಜ್ ಕುಮಾರ್ ಪ್ರಚಾರದ ಬಗ್ಗೆ ನನಗೇನು ಅಭ್ಯಂತರ ಇಲ್ಲ ಎಂದರು ಸಿಎಂ ಬಸವರಾಜ ಬೊಮ್ಮಾಯಿ.
ಮೋದಿ ಅಲೆ ಮೊದಲಿಗಿಂತ ಹೆಚ್ಚು
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಚಾರಕ್ಕೆ ಬರುತ್ತಿರುವ ಬಗ್ಗೆ ಮಾತನಾಡಿ ಅದರು, ಅದು ಅವರ ಪಕ್ಷದ ಪ್ರಚಾರ. ಇಂದು ಪ್ರಧಾನಿ ಮೋದಿ ಹಾವೇರಿಗೆ ಬರುತ್ತಿದ್ದು, ಮೊದಲಿಗಿಂತಲೂ ಈಗ ಮೋದಿ ಅಲೆ ಜಾಸ್ತಿಯಾಗಲಿದೆ ಎಂದರು.
ಇದನ್ನೂ ಓದಿ: ಮಣಿಕಂಠ ರಾಠೋಡ್ ಹಾಕಿದ ಬೆದರಿಕೆ ಏನು?