ಬೆಂಗಳೂರು: ಸ್ವಲ್ಪ ಕಾಲ ತಣ್ಣಗಿದ್ದ ʻಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂʼ ಬಾಂಬ್ ಮತ್ತೆ ಸ್ಫೋಟಗೊಂಡಿದೆ. ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಈ ಹಿಂದೆ ಈ ಬಾರಿ ʻವಿಧಾನಸಭಾ ಚುನಾವಣೆಯ (Karnataka Election 2023) ಬಳಿಕ ಒಂದೊಮ್ಮೆ ಗೆದ್ದರೆ ಬ್ರಾಹ್ಮಣರನ್ನೇ ಸಿಎಂ ಮಾಡುವ ಪ್ಲ್ಯಾನ್‌ನ್ನು ಬಿಜೆಪಿ ಹೊಂದಿದೆʼ ಎಂದು ಹೇಳಿದ್ದರು. ಅದಕ್ಕೆ ಈಗ ಕಾಂಗ್ರೆಸ್ ಧ್ವನಿಗೂಡಿಸಿದೆ.
ಕಾಂಗೆಸ್ ಟ್ವಿಟರ್‌ನಲ್ಲಿ ಈ ವಿಚಾರವನ್ನು ಮಂಡಿಸಿದ್ದು, ತನ್ನ ವಾದಕ್ಕೆ ಎರಡು ವಿಚಾರಗಳನ್ನು ಬಳಸಿಕೊಂಡಿದೆ.
“ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರ ವಿಥ್ ಬಿ.ಎಲ್ ಸಂತೋಷ್” ಬಿಜೆಪಿಯ ಟ್ವಿಟರ್ ಸ್ಪೇಸ್‌ನ ಈ ಹೆಸರು ರಹಸ್ಯವನ್ನು ಸೂಚಿಸುತ್ತಿದೆ. ಸಿಎಂ ಹುದ್ದೆಯ ಆಸೆಯಲ್ಲಿರುವ ಸಂತೋಷರಿಗೆ ಸ್ಪರ್ಧಿಸಲು 224ರಲ್ಲಿ ಒಂದು ಕ್ಷೇತ್ರವೂ ಸಿಗಲಿಲ್ಲವೇ? ಇದುವರೆಗೂ ಒಂದೂ ಬಹಿರಂಗ ಪ್ರಚಾರಕ್ಕೆ ಹೋಗಲಿಲ್ಲ ಏಕೆ? ಬಿ.ಎಲ್ ಸಂತೋಷ್ ಅವರೇ, ತಾವು ಚಿರಂಜೀವಿಯೇ?ʼʼ- ಇದು ಕಾಂಗ್ರೆಸ್ ಮಾಡಿರುವ ಒಂದು ಟ್ವೀಟ್.
ಇತ್ತೀಚೆಗೆ ಬಿಜೆಪಿಯ ವತಿಯಿಂದ ಟ್ವಿಟರ್ ಸ್ಪೇಸ್‌ನಲ್ಲಿ ಒಂದು ಸಂವಾದ ನಡೆದಿತ್ತು. ಅದರ ಹೆಸರು ʻಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರ ವಿಥ್ ಬಿ.ಎಲ್ ಸಂತೋಷ್ʼ. ಇದು ಮುಂದೆ ಸಂತೋಷ್ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡುವುದರ ಪೂರ್ವ ಸೂಚನೆ ಎನ್ನುವುದು ಕಾಂಗ್ರೆಸ್‌ನ ಅಭಿಪ್ರಾಯ. ಸಂತೋಷ್ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡುವುದು ಎಂದಾದರೆ ಅವರನ್ನು ಚುನಾವಣಾ ಕಣಕ್ಕಿಳಿಸಬಹುದಿತ್ತಲ್ಲವೇ ಎಂದು ಅದು ಪ್ರಶ್ನಿಸಿದೆ.
ಹಾಗಿದ್ದರೆ ಬಿಎಸ್‌ವೈ, ಬೊಮ್ಮಾಯಿ ಕಥೆ ಏನು?
ಕಾಂಗ್ರೆಸ್ ಇನ್ನೊಂದು ಟ್ವೀಟ್ ಮೂಲಕ ಬಿಜೆಪಿಯ ಕಾಲೆಳೆದಿದೆ. ʻʻಬಿಜೆಪಿಗೆ ಬಿಎಸ್‌ವೈ ಅವರ ಅಗತ್ಯ ಇನ್ನು ಕೆಲವೇ ದಿನ, ನಂತರ ಉತ್ಸವ ಮೂರ್ತಿಯಾಗಿದ್ದವರನ್ನು ವಿಸರ್ಜನಾ ಮೂರ್ತಿಯನ್ನಾಗಿಸುತ್ತದೆ. ಬೊಮ್ಮಾಯಿಯವರ ಕೌಂಟ್ ಡೌನ್ ಕೂಡ ಶುರುವಾಗಿದೆʼʼ ಎಂದಿರುವ ಕಾಂಗ್ರೆಸ್, ಬೊಮ್ಮಾಯಿ ಅವರನ್ನು ಮತ್ತೆ ಸಿಎಂ ಮಾಡುವುದಿಲ್ಲ ಎಂದಿದೆ.
ʻʻಮೋದಿ ಮುಖ ನೋಡಿ ಮತ ಕೊಡಿ ಎನ್ನುತ್ತಿರುವ ಬಿಜೆಪಿ ಮುಂದೆ ಇಲ್ಲಿ ತೋರಿಸುವ ಮುಖ ಯಾವುದು ಜೋಷಿಯದ್ದೋ, ಸಂತೋಷರದ್ದೋ? ಜೋಶಿ ದರ್ಬಾರ್‌ಗಾಗಿ ಲಿಂಗಾಯತ ನಾಯಕರೆಲ್ಲರನ್ನೂ ಮುಗಿಸಿದ್ದೇ?ʼʼ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲ ಎಂದ ಕಾಂಗ್ರೆಸ್
“ಲಿಂಗಾಯತರ ಅಗತ್ಯವಿಲ್ಲ” ಎಂಬುದನ್ನು ಬಿಜೆಪಿ ತನ್ನ ಕ್ರಿಯೆಯಲ್ಲೂ ತೋರಿಸಿದೆ. ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಬಿ.ಎಸ್ ಯಡಿಯೂರಪ್ಪ ಅವರು ಸೇರಿದಂತೆ ಹಲವು ಲಿಂಗಾಯತ ನಾಯಕರನ್ನು ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕಾಗಿಯೇ ಅಲ್ಲವೇ? ಯಡಿಯೂರಪ್ಪ ಕಟ್ಟಿದ ಹುತ್ತದಲ್ಲಿ ಹಾವೊಂದು ಸಂತೋಷದಿಂದ ಸಾಮ್ರಾಜ್ಯ ಸ್ಥಾಪಿಸಲು ಹವಣಿಸುತ್ತಿರುವುದು ಬಿಜೆಪಿಯ ಅವನತಿಗೆ ಮುನ್ನುಡಿ ಬರೆಯಲಿದೆ- ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಈ ಮೂಲಕ ರಾಜ್ಯದಲ್ಲಿ ಈ ಬಾರಿ ಲಿಂಗಾಯತ ಸಿಎಂ ಇಲ್ಲ ಎಂಬ ವಾದವನ್ನು ಮುಂದಿಟ್ಟಿದೆ. ಅದು ಬ್ರಾಹ್ಮಣರ ಪಾಲಾಗಲಿದೆ ಎಂಬ ಎಚ್.ಡಿಕೆ ವಾದವನ್ನು ಬೆಂಬಲಿಸಿದೆ. ಆದರೆ, ಬಿಜೆಪಿ ಮಾತ್ರ ಈ ವಾದವನ್ನು ಅಲ್ಲಗಳೆಯುತ್ತಲೇ ಇದೆ. ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬೊಮ್ಮಾಯಿ ಅವರೇ ಮುಂದಿನ ಸಿಎಂ ಎಂದು ಘೋಷಿಸಿದ್ದರು.
ಇದನ್ನೂ ಓದಿ : Karnataka Election : ಬಿಜೆಪಿ, ಕಾಂಗ್ರೆಸ್ ರೀತಿ ದುಡ್ಡು ಇದ್ದಿದ್ದರೆ ನಾನೂ 150-160 ಕ್ಷೇತ್ರ ಗೆಲ್ಲುತ್ತಿದ್ದೆ ಎಂದ ಎಚ್‌ಡಿಕೆ