Site icon Vistara News

Karnataka Election : ಯಾವ ಕಾರಣಕ್ಕೂ ಶೆಟ್ಟರ್‌ ಅವರನ್ನು ಗೆಲ್ಲಲು ಬಿಡಲ್ಲ; ಬಿಎಸ್‌ವೈ ಭೀಷ್ಮ ಪ್ರತಿಜ್ಞೆ

BS Yediyurappa takes oath to defeat Jagadish Shettar in Dharwad

BS Yediyurappa

ಹುಬ್ಬಳ್ಳಿ: ʻʻನನ್ನ ರಕ್ತದಲ್ಲಿ ಬರೆದುಕೊಡ್ತೇನೆ. ಯಾವ ಕಾರಣಕ್ಕೂ ಜಗದೀಶ್‌ ಶೆಟ್ಟರ್‌ ಈ ಬಾರೈ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಗೆಲ್ಲುವುದಿಲ್ಲ. ಗೆಲ್ಲಲು ಬಿಡುಬಾರದುʼʼ- ಹೀಗೆಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa). ಹುಬ್ಬಳ್ಳಿಯಲ್ಲಿ ಲಿಂಗಾಯತ ಮುಖಂಡರ ಸಭೆಯಲ್ಲಿ‌ ನೇರವಾಗಿಯೇ ಈ ಮಾತುಗಳನ್ನು ಹೇಳಿದರು.

ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿರುವ ಜಗದೀಶ್‌ ಶೆಟ್ಟರ್‌ (jagadish shettar) ಒಬ್ಬ ಪಕ್ಷದ್ರೋಹಿ. ಅವರನ್ನು ಸೋಲಿಸುವ ಮೂಲಕ ಎಲ್ಲ ಪಕ್ಷದ್ರೋಹಿಗಳಿಗೆ ಪಾಠ ಕಲಿಸಬೇಕು ಎಂದು ಯಡಿಯೂರಪ್ಪ ಹೇಳಿದರು.

ಮಂಗಳವಾರ ಮುಂಜಾನೆಯಷ್ಟೇ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರಿಂದ ಶೆಟ್ಟರ್‌ ಅವರನ್ನು ಸೋಲಿಸುವ ರಣವೀಳ್ಯವನ್ನು ಪಡೆದಿದ್ದ ಯಡಿಯೂರಪ್ಪ (BS Yediyurappa) ಸಂಜೆಯ ಹೊತ್ತಿಗೆ ಹುಬ್ಬಳ್ಳಿಗೆ ಬಂದಿದ್ದರು. ಅಷ್ಟು ಹೊತ್ತಿಗೆ ಪ್ರಮುಖ ಲಿಂಗಾಯತ ನಾಯಕರ ಸಭೆಯನ್ನೇ ಆಯೋಜಿಸಲಾಗಿತ್ತು. ಅಲ್ಲಿ ಯಡಿಯೂರಪ್ಪ ಅವರು ತನಗೆ ಕೊಟ್ಟಿರುವ ಟಾಸ್ಕನ್ನು ಯಾವ ಮುಲಾಜೂ ಇಲ್ಲದೆ ಪೂರೈಸುವ ಸಂಕಲ್ಪವನ್ನು ಪ್ರಕಟಿಸಿದರು.

ʻʻನಾನು ನಿಮ್ಮನ್ನು ಕರೆದಿರೋದು ಸ್ಪಷ್ಟ ಕಾರಣಕ್ಕಾಗಿʼʼ ಎಂದೇ ಮಾತು ಆರಂಭಿಸಿದ ಯಡಿಯೂರಪ್ಪ ಅವರು, ಜಗದೀಶ್‌ ಶೆಟ್ಟರ್‌ (jagadish shettar) ಅವರ ಪಕ್ಷದ್ರೋಹ ಮತ್ತು ಸೋಲಿಸಲು ಮಾಡಬೇಕಾದ ಕೆಲಸಗಳ ವಿವರಣೆ ನೀಡಿದರು.

ʻʻಜಗದೀಶ್ ಶೆಟ್ಟರ್ ಬಗ್ಗೆ ನಡೆದ ಸತ್ಯ ಸಂಗತಿ ಹೇಳಲು ವೀರಶೈವರ ಸಭೆ ಕರೆದಿದ್ದೇನೆ. ನಾವು ಜಗದೀಶ್‌ ಶೆಟ್ಟರ್‌ (jagadish shettar) ಅವರನ್ನು ಸಿಎಂ, ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷನ್ನಾಗಿ ಮಾಡಿದ್ದೇವೆ. ಬಿ.ಬಿ.ಶಿವಪ್ಪ ಅವರನ್ನು ಬಿಟ್ಟು ಶೆಟ್ಟರ್ ಪರವಾಗ ನಿಂತು‌ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೆವುʼʼ ಎಂದು ನೆನಪಿಸಿದರು.

ಮೋದಿ ಮಾತೂ ಕೇಳದ ಜಗದೀಶ್‌ ಶೆಟ್ಟರ್‌

ʻʻಅವರಿಗೆ ಏನು ಅನ್ಯಾಯ ಮಾಡಿದ್ದೇವೆ ನಾವು? ಸ್ವತಃ ಪ್ರಧಾನಿಗಳೇ ಮಾತನಾಡಿದರು. ನಿಮ್ಮ ಶ್ರೀಮತಿಯವರನ್ನು ನಿಲ್ಲಿಸಿ‌, ಅವರಿಗೆ ಟಿಕೇಟ್ ಕೊಡ್ತೇವೆ ಅಂದರು. ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿ ಆಗುವಂತೆ ಆಫರ್ ನೀಡಲಾಯಿತು. ಇಷ್ಟೆಲ್ಲ ಆದಮೇಲೂ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಗೆ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಶೆಟ್ಟರ್ ಪರವಾಗಿ ನಿಲ್ಲಬೇಡಿ. ಚುನಾವಣೆಯಲ್ಲಿ ದಯನೀಯ ಸೋಲಾಗುವಂತೆ ಮಾಡಬೇಕು. ಅದೇ ಅವರಿಗೆ ಪಾಠವಾಗಲಿದೆʼʼ ಎಂದು ಯಡಿಯೂರಪ್ಪ ನುಡಿದರು.

ಹುಬ್ಬಳ್ಳಿಯಲ್ಲಿ ನಡೆದ ಸಭೆ

ʻʻಕಾಂಗ್ರೆಸ್ ನನ್ನ ಬಗ್ಗೆ ಸಿಂಪಥಿ ಕ್ರಿಯೇಟ್ ಮಾಡುವ ಪ್ರಯತ್ನ ಮಾಡುತ್ತಿದೆ. ನನ್ನ ರಾಜೀನಾಮೆಯನ್ನು ಸ್ವಂತಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದೆ. ಆದರೆ, ನಾನು ಸ್ವತಃ ರಾಜೀನಾಮೆ ನೀಡಿದ್ದಾರೆ. ಬೇರೆಯವರನ್ನು ಸಿಎಂ ಮಾಡಲು ಅವಕಾಶ ನೀಡಲು ಹೀಗೆ ಮಾಡಿದೆ. ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಅನ್ನೋ ಮಾತನ್ನು ಪ್ರಧಾನಿ ಮೋದಿಗೆ ಹೇಳಿದ್ದೆ. ಅದರಂತೆಯೇ ಬಿಜೆಪಿಯನ್ನು ಅಧಿಕಾರಕ್ಕೆ ತರೋಕೆ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆʼʼ ಎಂದು ವಿವರಿಸಿದರು.

ಯಾವುದೇ ಸಮೀಕ್ಷೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ

ʻʻನೀವು ಯಾವುದೇ ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ ಶೆಟ್ಟರ್‌ ಅವರನ್ನು ಸೋಲಿಸುವುದನ್ನು ಸವಾಲಾಗಿ ಸ್ವೀಕರಿಸಿʼʼ ಎಂದು ಹೇಳಿದರು.

ಮನೆಯಲ್ಲಿ ಕುಳಿತ ಶೆಟ್ಟರ್‌ ನಡುಗುವಂಥ ರ‍್ಯಾಲಿ ಮಾಡಿ

ʻʻಬುಧವಾರ ಇಲ್ಲಿ ರ‍್ಯಾಲಿ ಏರ್ಪಡಿಸಲಾಗಿದೆ. ಹತ್ತಾರು ಸಾವಿರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ‌ ಮಾಡಿ. ರಾಜಕೀಯ ದೊಂಬರಾಟ ಮಾಡೋರಿಗೆ ತಕ್ಕ ಪಾಠ ಕಲಿಸಬೇಕು. ಬೃಹತ್ ಮೆರವಣಿಗೆ ಆಯೋಜಿಸಬೇಕು. ಮನೆಯಲ್ಲಿ ಕುಳಿತ ಶೆಟ್ಟರ್ ಗೆ ನಡುಕ ಉಂಟಾಗಬೇಕುʼʼ ಎಂದಿರುವ ಬಿಎಸ್‌ವೈ, ಇವತ್ತಿನಿಂದ ನಾನು ಶೆಟ್ಟರ್‌ ಹೆಸರು ಹೇಳಲ್ಲ. ನಂಬಿಕೆ‌ ದ್ರೋಹಿ, ವಿಶ್ವಾಸ ದ್ರೋಹಿ ಅವರು. ಪಕ್ಷಾಂತರಿಗಳನ್ನು ಕ್ಷಮಿಸೋದಿಲ್ಲ ಅನ್ನೋ‌ ಸುದ್ದಿ ಎಲ್ಲೆಡೆ ಹೋಗಬೇಕು. ಆ ರೀತಿಯಾಗಿ ಶೆಟ್ಟರ್‌ ಮತ್ತು ಕಂಪನಿಗೆ ಪಾಠ ಕಲಿಸಿ ಎಂದರು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಭೆಯಲ್ಲಿ ಆಡಿದ ಮಾತುಗಳ ವಿವರಣೆ ನೀಡಿದರು. ಮೋದಿ ಅವರು ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲೇ ರ‍್ಯಾಲಿ ಮಾಡುವ ಸಾಧ್ಯತೆಗಳಿವೆ ಎಂದರು.

ಇದನ್ನೂ ಓದಿ : BJP Karnataka: ಬಿ.ಎಲ್‌. ಸಂತೋಷ್‌ ಹೇಳಿದಂತೆ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ: ಸಭೆ ನಂತರ ಬಿ.ಎಸ್‌. ಯಡಿಯೂರಪ್ಪ ಮಾತು

Exit mobile version