ಮೈಸೂರು: ʻʻರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಸೋಲಿನ ಹತಾಶೆಯಿಂದ ಕಾಂಗ್ರೆಸ್ ನಾಯಕರು ಕೀಳು ಮಟ್ಟದ ಮಾತುಗಳನ್ನು ಆಡುತ್ತಿದ್ದಾರೆ. ಪ್ರಿಯಾಂಕಾ ಖರ್ಗೆ ಅವರು ನರೇಂದ್ರ ಮೋದಿ ಅವರನ್ನು ನಾಲಾಯಕ್ ಎಂದಿದ್ದಾರೆ. ಅವರನ್ನು ನೀವು ಕ್ಷಮಿಸುತ್ತಿರಾ? ಅವರಿಗೆ ತಕ್ಕ ಪಾಠವನ್ನು ಕಲಿಸಲು ಬಿಜೆಪಿಗೆ ಮತ ನೀಡಿʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದರು. ಅವರು ಸೋಮವಾರ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಶ್ರೀವತ್ಸ ಪರ ಪ್ರಚಾರ ನಡೆಸಿದರು.
ʻʻನಾವು ನಮ್ಮ ಡಬಲ್ ಇಂಜಿನ್ ಸರ್ಕಾರದ ಕಾರ್ಯಕ್ರಮಗಳ ಮೂಲಕ ಸಕಾರಾತ್ಮಕ ಮತಗಳ ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ವಿರೋಧ ಪಕ್ಷ ತಳಮಟ್ಟದ ಮಾತುಗಳನ್ನಾಡಿ, ಹತಾಶರಾಗಿ ನಕಾರಾತ್ಮಕ ಚುನಾವಣೆ ಮಾಡುತ್ತಿದ್ದಾರೆ. ಯಾರು ಕೆಲಸ ಮಾಡಿದ್ದಾರೋ ಅವರಿಗೆ ಜನರು ಬೆಂಬಲ ಕೊಡುತ್ತಾರೆʼʼ ಎಂದು ಬೊಮ್ಮಾಯಿ ಹೇಳಿದರು.
ʻʻಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮೈಸೂರು ನಗರ ಅಭಿವೃದ್ಧಿ ಮಾಡಿದ್ದೇವೆ. ನರೇಂದ್ರ ಮೋದಿಯವರಿಗೆ ಮೈಸೂರಿನ ವಿಚಾರದಲ್ಲಿ ತುಂಬಾ ಒಲವು ಇದೆ. ಇಡೀ ಭಾರತದಲ್ಲಿ ಅವರು ಯೋಗ ದಿನಾಚರಣೆಗೆ ಆಯ್ಕೆ ಮಾಡಿದ್ದು ಮೈಸೂರು. ನರೇಂದ್ರ ಮೋದಿಯವರ ಮೈಸೂರಿನ ಮೇಲಿನ ಪ್ರೀತಿಗೆ ಶ್ರೀವತ್ಸವಗೆ ಮತ ನೀಡಬೇಕುʼʼ ಎಂದು ಬಸವರಾಜ ಬೊಮ್ಮಾಯಿ.
ʻʻನಾನು ಮುಖ್ಯಮಂತ್ರಿಯಾದ ಬಳಿಕ 250 ಕೋಟಿಗೂ ಅಧಿಕ ಅನುದಾನ ಕೊಟ್ಟಿದ್ದೇನೆ. ಮೈಸೂರು ದಸರಾಗೆ ಈ ಹಿಂದೆ 5 ಕೋಟಿ ರೂ. ಅನುದಾನ ನೀಡಲಾಗುತ್ತಿತ್ತು. ಈ ಬಾರಿ 25 ಕೋಟಿ ರೂ. ನೀಡಿ ದಸರಾ ಆಚರಣೆ ಮಾಡಿದ್ದೇವೆ. ಮೈಸೂರು ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿದೆ. ಮೈಸೂರು ಸರ್ಕಿಟ್ ಮಾಡಿ ಇಲ್ಲಿ ವಿಶೇಷವಾದ ಪ್ರವಾಸೋದ್ಯಮ ಮಾಡಲು ಮುಂದಾಗಿದ್ದೇವೆ. ಈಗಾಗಲೇ ಆ ಯೋಜನೆ ಕಾರ್ಯಗತಿಯಲ್ಲಿದ್ದು, ಮುಂದಿಬ ವರ್ಷ ಮೈಸೂರಿಗೆ ಬರುವ ಯಾತ್ರಾರ್ಥಿಗಳ ಸಂಖ್ಯೆ ದ್ವಿಗುಣ ಆಗಲಿದೆʼʼ ಎಂದರು.
ಯಡಿಯೂರಪ್ಪ ಕಾಲದಲ್ಲಿ 10 ಕೆಜಿ ಅಕ್ಕಿ ಕೊಡುತ್ತಿದ್ದೆವು
ಮೈಸೂರಿನ ಆಸ್ಪತ್ರೆ ಪುನರ್ ನಿರ್ಮಾಣ ಮಾಡಲು 80 ಕೋಟಿ ಕೊಟ್ಟಿದ್ದೇವೆ. ನಮ್ಮ ಬಜೆಟ್ ನಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಎಲ್ಲ ವಿದ್ಯಾರ್ಥಿಗಳಿಗೆ, ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಡಿಗ್ರಿವರೆಗೂ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಇಲ್ಲಿನ 50 ಸಾವಿರ ಕುಟುಂಬಕ್ಕೆ ಸರ್ಕಾರದ ಯೋಜನೆಗಳ ಲಾಭ ಸಿಕ್ಕಿದೆ. ಅವರೆಲ್ಲರೂ ಬಿಜೆಪಿ ಮತ ನೀಡಲು ತೀರ್ಮಾನ ಮಾಡಿದ್ದಾರೆ ಎಂದರು. ʻʻಕಾಂಗ್ರೆಸ್ ಪಕ್ಷ ಹತಾಶೆಗೊಂಡು ಹತ್ತು ಕೆ.ಜಿ ಅಕ್ಕಿ ಕೊಡುವ ಗ್ಯಾರೆಂಟಿ ಕೊಡುತ್ತಿದ್ದಾರೆ. 2013ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ 10 ಕೆ.ಜಿ ಅಕ್ಕಿ ಕೊಡುತ್ತಿದ್ದೆವು. ಇವರು ಅಧಿಕಾರಕ್ಕೆ ಬಂದ ಮೇಲೆ 5 ಕೆ.ಜಿ ಗೆ ಇಳಿಸಿದರು. ಕಾಂಗ್ರೆಸ್ ಚುನಾವಣೆಗಾಗಿ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆʼʼ ಎಂದರು.
ಇವತ್ತು ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಆಯುಷ್ಮಾನ್ ಯೋಜನೆಯ ವಿಮೆ ಹಣ 5 ಲಕ್ಷ ರೂ ಇರುವುದನ್ನು 10 ಲಕ್ಷ ರೂ ಹೆಚ್ಚಳ ಮಾಡಿದ್ದೇವೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟಲು ನೀಡಲಾಗುತ್ತಿದ್ದ 2 ಲಕ್ಷ ರೂ. ವನ್ನು 5 ಲಕ್ಷಕ್ಕೆ ಹೆಚ್ಚಿಸುತ್ತಿದ್ದೇವೆ. ಕಾಂಗ್ರೆಸ್ ನವರು ಸುಳ್ಳು ಹೇಳಿ, ರಾಜ್ಯವನ್ನು ದಿವಾಳಿ ಮಾಡುತ್ತಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಇದನ್ನೂ ಓದಿ : Karnataka Election: ‘ನಾಲಾಯಕ್’ ವಿಚಾರ; ಪ್ರಿಯಾಂಕ್ ಹೇಳಿದ್ದೇ ಬೇರೆ, ಮಾಧ್ಯಮದಲ್ಲಿ ತೋರಿಸೋದೇ ಬೇರೆ ಎಂದ ಖರ್ಗೆ
karnataka election cm bommai asks people to vote against people who dubbed modi as nalayak