ಹುಬ್ಬಳ್ಳಿ: ಬಜರಂಗ ದಳದ ವಿಚಾರ ಎತ್ತಿದರೆ ನೀವ್ಯಾಕೆ ಆಂಜನೇಯನನ್ನು ಎಳೆದುತಂದಿರಿ, ಆಂಜನೇಯನಿಗೂ ಬಜರಂಗದಳಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಸಂಬಂಧದ ಪಾಠ ಮಾಡಿದ್ದಾರೆ.
ʻಬಜರಂಗ ದಳಕ್ಕೂ (Bajaranga dal) ಆಂಜನೇಯನಿಗೂ ಏನು ಸಂಬಂಧ ಎಂದು ಡಿಕೆಶಿ ಪ್ರಶ್ನಿಸುತ್ತಾರೆ. ರಾಮನಿಗೂ ಹನುಮನಿಗೂ ಏನು ಸಂಬಂಧ ಇದೆಯೋ ಅದೇ ಸಂಬಂಧ ಆಂಜನೇಯನಿಗೂ ಬಜರಂಗ ದಳಕ್ಕೂ ಇದೆ. ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕುʼʼ ಎಂದು ಗುರುವಾರ ಮುಂಜಾನೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ʻʻಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರೋ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ. ಹೀಗೆ ಜನರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡೋದು ಸರಿಯಲ್ಲʼʼ ಎಂದು ಬೊಮ್ಮಾಯಿ ಹೇಳಿದರು.
ʻʻನಾವು ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಅವರು ಅವರ ಭರವಸೆಗಳ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಅನವಶ್ಯಕವಾಗಿ ಕೆದಕಿ ಕೆದಕಿ ಚುನಾವಣೆಯಲ್ಲಿ ಜಾತಿ, ಧರ್ಮ, ಕೋಮು ಭಾವನೆ ಕೆರಳಿಸೋದು ಸರಿಯಲ್ಲ. ಇದು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣ ತೋರ್ಪಡಿಸುತ್ತದೆʼʼ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಎಸ್‌ಡಿಪಿಐ, ಪಿಎಫ್‌ಐ ಕಪಿಮುಷ್ಟಿಯಲ್ಲಿ ಕಾಂಗ್ರೆಸ್
ʻʻಕಾಂಗ್ರೆಸ್ ಪಕ್ಷ ಇಂದು ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಕಪಿಮುಷ್ಟಿಯಲ್ಲಿದೆ. ಅದರಿಂದ ಹೊರಬರಲು ಸಾಧ್ಯವೇ ಇಲ್ಲ. ಅವರ ಒತ್ತಡಕ್ಕೆ ಮಣಿಯುತ್ತಿದ್ದಾರೆ. ಹೀಗಾಗಿ ನಾವು ಎಸ್‌ಡಿಪಿಐ, ಪಿಎಫ್ಐ ವಿರುದ್ಧ ಮಾತಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆʼʼ ಎಂದು ಹೇಳಿದರು.
ʻʻಪಿಎಫ್ಐ ಬ್ಯಾನ್ ಆಗಿದ್ದರೂ ತಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂಬ ಸಿಟ್ಟು, ಅಸಮಾಧಾನ ಇದೆ. ನಮಗೆ ರಕ್ಷಣೆ ಕೊಡುತ್ತಿಲ್ಲ. ನಾವ್ಯಾಕೆ ನಿಮಗೆ ರಕ್ಷಣೆ ಕೊಡಬೇಕು ಅಂತ ಪಿ.ಎಫ್.ಐ ನಾಯಕರು ಪ್ರಶ್ನಿಸುತ್ತಿದ್ದಾರೆ. ಪಿಎಫ್ಐನ ಇನ್ನೊಂದು ರೂಪ ಎಸ್.ಡಿ.ಪಿ.ಐ.. ಇದೇ ಎಸ್‌ಡಿಪಿಐನ ಬೆಂಬಲವನ್ನು ಕಾಂಗ್ರೆಸ್ ಬಹಿರಂಗವಾಗಿ ಕೇಳಿತ್ತು. ಆದರೆ ಅವರು ಕೊಡುವುದಿಲ್ಲ ಅಂದಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಎಸ್.ಡಿ.ಪಿ.ಐ, ಪಿ.ಎಫ್.ಐ ಪ್ರಬಲವಾಗಿ ಬೆಳೆದಿದ್ದವು. ಈಗ ಬಾಲವೇ ದೇಹವನ್ನು ಅಲುಗಾಡಿಸಿದಂತಹ ಸ್ಥಿತಿ ಇದೆʼʼ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ʻʻಎಸ್‌ಡಿಪಿಐ ಬಿಜೆಪಿಯ ಬಿ ಟೀಂ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಬಿ ಟೀಂ ಆಗಿದ್ದರೆ ನಾವು ಪಿ.ಎಫ್.ಐ ಬ್ಯಾನ್ ಮಾಡ್ತಿದ್ದೆವಾ? ಕಾಂಗ್ರೆಸ್‌ನವರು ತಾವು ಮಾಡಿದ ತಪ್ಪನ್ನು ಮುಚ್ಚಲು ಈ ರೀತಿಯ ಆರೋಪ ಮಾಡುತ್ತಿದ್ದಾರೆʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಸೋನಿಯಾ ಗಾಂಧಿ ಬರಲಿ ಎಂದ ಬೊಮ್ಮಾಯಿ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಹುಬ್ಬಳ್ಳಿಗೆ ಬರುತ್ತಿರುವ ಬಗ್ಗೆ ಕೇಳಿದಾಗ, ʻʻನಾವು ಕಾಂಗ್ರೆಸ್ ನಾಯಕರ ರೀತಿ ಅಳುವುದಿಲ್ಲ. ನರೇಂದ್ರ ಮೋದಿ ಯಾಕೆ ಬಂದ್ರು? ಅಮಿತ್ ಶಾ ಯಾಕೆ ಬಂದ್ರು ಅಂತ ಕಾಂಗ್ರೆಸ್ ನವರು ಕೇಳಿದಂತೆ ನಾವು ಕೇಳುವುದಿಲ್ಲʼʼ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.
ಇದನ್ನೂ ಓದಿ : Karnataka Election: ಬಜರಂಗದಳಕ್ಕೂ, ಆಂಜನೇಯನಿಗೂ ಏನು ಸಂಬಂಧ; ಪ್ರಣಾಳಿಕೆ ಬದಲಿಸಲ್ಲ; ಡಿಕೆಶಿ ಸ್ಪಷ್ಟನೆ
karnataka-election: CM Bommai explains the relation between Bajarangadal and Anjaneya to DKS