ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಕಾಂಗ್ರೆಸ್‌ನ್ನು ಸೋಲಿಸಲು ಕರ್ನಾಟಕದ ಒಬ್ಬ ನಾಯಕರಿಗೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ೫೦೦ ಕೋಟಿ ರೂ. ಆಫರ್ ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಸಂಶಯದ ಮೊನೆಯಲ್ಲಿ ಕುಳಿತಿರುವ ಮಾಜಿ ಸಚಿವ, ಕಾಂಗ್ರೆಸ್ ಧುರೀಣ ಜಮೀರ್ ಅಹಮದ್ ಖಾನ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅವರದ್ದು ಒಂದೇ ಮಾತು: ನಾನವನಲ್ಲ, ನಾನವನಲ್ಲ, ನಾನವನಲ್ಲ!
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರೇ ಈ ಗಂಭೀರವಾದ ಆರೋಪ ಮಾಡಿದ್ದರು. ಆದರೆ, ನಾಯಕ ಯಾರು ಎನ್ನುವುದನ್ನು ಅವರೂ ಹೇಳಿರಲಿಲ್ಲ. ಹೀಗಾಗಿ ಭಾರತ ರಾಷ್ಟ್ರ ಸಮಿತಿಯ ಸಂಚಾಲಕರಾಗಿರುವ ಕೆ. ಚಂದ್ರಶೇಖರ್ ರಾವ್ ಅವರನ್ನು ಆಗಾಗ ಭೇಟಿಯಾಗುತ್ತಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರ ಮೇಲೆಯೇ ಸಹಜವಾಗಿ ಎಲ್ಲರ ದೃಷ್ಟಿ ಹೊರಳಿತ್ತು.
ಸಿದ್ದರಾಮಯ್ಯ ಭೇಟಿಗೆ ಬಂದ ಜಮೀರ್
ಈ ನಡುವೆ, ಎಲ್ಲ ಕಡೆಯಿಂದ ಪ್ರಶ್ನಾ ದಾಳಿ ಮತ್ತು ಸಂಶಯದ ಕಣ್ಣಿಗೆ ಈಡಾದ ಜಮೀರ್ ಅಹಮದ್ ಖಾನ್ ಅವರು ಶುಕ್ರವಾರ ಮೈಸೂರಿಗೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಇದೊಂದು ಖಾಸಗಿ ಮಾತುಕತೆ, ಗೌಪ್ಯ ಮಾತುಕತೆ ಆಗಿರುವುದರಿಂದ ಹೋಟೆಲ್‌ವರೆಗೆ ಬಂದ ಮಾಧ್ಯಮದವರನ್ನು ಸಿದ್ದರಾಮಯ್ಯ ಹೊರಗೆ ಕಳುಹಿಸಿದರು. ಖಾಸಗಿ ಮೀಟಿಂಗ್‌ಗಳಿಗೆಲ್ಲ ಯಾಕೆ ಬರ್ತೀರಾ? ನಮಗೆ ಸ್ವಲ್ಪ ಸ್ವತಂತ್ರವಾಗಿರಲು ಬಿಡಿ, ನಾವೇನೂ ಕೆ.ಸಿ.ಆರ್. ಆಫರ್ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದರು. ಈ ಮೂಲಕ ಖಾಸಗಿ ಹೋಟೆಲ್‌ನಲ್ಲಿ ನಡೆದಿದ್ದು ಅದೇ ೫೦೦ ಕೋಟಿ ರೂ. ಆಫರ್ ಬಗ್ಗೆ ಎನ್ನುವುದನ್ನು ಸಾಬೀತುಪಡಿಸಿದರು.
ಈ ನಡುವೆ, ಜಮೀರ್ ಅಹಮದ್ ಖಾನ್ ಕೊನೆಗೂ ಅಫರ್ ಬಗ್ಗೆ ಮಾತನಾಡಲೇಬೇಕಾಯಿತು. ಅವರು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದರು.
ನನಗಂತೂ ಯಾವ ಆಫರ್ ಬಂದಿಲ್ಲ
ʻʻನಾನು ತೆಲಂಗಾಣ ಸಿಎಂ ಭೇಟಿ ಮಾಡಿದ್ದು ಸತ್ಯ. ನಾನು ಹೈದರಾಬಾದ್ ಗೆ ಹೋಗಿದ್ದು ನಿಜ. ಆದರೆ 500 ಕೋಟಿ ರೂ. ಆಫರ್ ಬಗ್ಗೆ ಗೊತ್ತಿಲ್ಲʼʼ ಎಂದರು ಜಮೀರ್ ಅಹಮದ್ ಖಾನ್
ʻʻತಾಂಡೂರು ಶಾಸಕ ರೋಹಿತ್ ರೆಡ್ಡಿ ನನ್ನ ಸ್ನೇಹಿತ. ಅವರು ಸಿಎಂ ಚಂದ್ರಶೇಖರ್ ಭೇಟಿ ಮಾಡಿ ಎಂದು ಕೇಳಿಕೊಂಡ್ರು. ಅವರೇ ಬೇರೆ ಪಕ್ಷ, ನಾವೇ ಬೇರೆ ಪಕ್ಷ, ಏನೂ ಸಂಬಂಧವೇ ಇಲ್ಲ.
ನಮ್ಮ ಭೇಟಿಯಲ್ಲಿ ರಾಜಕೀಯ ಚರ್ಚೆ ಆಗಿಲ್ಲ.ʼʼ ಎಂದು ಹೇಳಿದರು ಜಮೀರ್.
ʻʻಬಹಳ ಜನ ಕೆಸಿಆರ್ ಅವರನ್ನು ಭೇಟಿ ಮಾಡಿದ್ದಾರೆ. ಅದು ಪ್ರಚಾರ ಆಗಿಲ್ಲ, ನನ್ನದು ಪ್ರಚಾರ ಆಗಿದೆ. ಮಾಧ್ಯಮಗಳು ನನ್ನ ವಿಚಾರ ಅಂದ್ರೆ ಜಾಸ್ತಿ ಪ್ರಚಾರ ಮಾಡ್ತವೆʼʼ ಎಂದು ಹೇಳಿದ ಜಮೀರ್, ʻʻಯಾರು ಆರೋಪ ಮಾಡಿದ್ದಾರೋ ಅವರನ್ನು ಕೇಳಿ.. ತೆಲಂಗಾಣದ ನಮ್ಮ ಅಧ್ಯಕ್ಷರೂ ನನ್ನ ಹೆಸರು ಹೇಳಿದ್ದಾರಾ ಹೇಳಿʼʼ ಎಂದರು. ರೇವಂತ್ ರೆಡ್ಡಿ ಅವರು ನೇರವಾಗಿ ನನ್ನ ಹೆಸರು ಹೇಳಿಲ್ಲ. ಹೀಗಾಗಿ ಯಾರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು ಜಮೀರ್.