ಬೆಳ್ತಂಗಡಿ: ಭಾರತವು ಯಾವುದೋ ಒಂದು ಧರ್ಮ, ಜಾತಿಯ ದೇಶ ಅಲ್ಲ. ನಾವು ಭಾರತೀಯರು ಅನ್ನೋದು ಯುವಕರ ತಲೆಯಲ್ಲಿ ಇರಬೇಕು. ಇದನ್ನು ನಾನು ಪ್ರಸ್ತಾಪ ಮಾಡಿದರೆ ಸಿ.ಟಿ. ರವಿಯಂಥ ಮತಾಂಧ ನನಗೆ ಮುಸಲ್ಮಾನರ ಹೆಸರನ್ನು ಇಡ್ತಾನೆ. ನನ್ನ ತಂದೆ ತಾಯಿ ನನಗೆ ಸಿದ್ದರಾಮಯ್ಯ ಅಂಥ ಹೆಸರಿಟ್ಟಿದ್ದಾರೆ. ಇವನ್ಯಾವ ಗಿರಾಕಿ ನನಗೆ ಸಿದ್ರಾಮುಲ್ಲಾ ಖಾನ್ ಅನ್ನೋಕೆ. ಈ ಚುನಾವಣೆಯಲ್ಲಿ (Karnataka Election) ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿ.ಟಿ.ರವಿಗಿಂತ ಹೆಚ್ಚಿನ ಹಿಂದು ನಾನು. ಆದರೆ ಇನ್ನೊಂದು ಧರ್ಮ ದ್ವೇಷಿಸೋ ಸಿ.ಟಿ.ರವಿಯಂಥ ಹಿಂದು ಅಲ್ಲ. ಸತ್ಯ ಹೇಳಿದರೆ ನನಗೆ ಸಿದ್ರಾಮುಲ್ಲಾ ಖಾನ್ ಅಂತ ಹೇಳ್ತಾರೆ. ಮಹಾತ್ಮ ಗಾಂಧೀಜಿ ಕೊಂದವರಿಂದ ನಾವು ಪಾಠ ಕಲೀಬೇಕಾ? ನಾಥೂರಾಮ್ ಗೋಡ್ಸೆಗೆ ಗುಡಿ ಕಟ್ಟಿಸಿ ಪೂಜೆ ಮಾಡುತ್ತಾರೆ. ಆದರೆ, ಇವರು ಗಾಂಧೀಜಿಗೆ ಪೂಜೆ ಮಾಡಲ್ಲ, ಗೋಡ್ಸೆಗೆ ಮಾಡ್ತಾರೆ. ಆರ್.ಎಸ್.ಎಸ್ ಅಜೆಂಡಾ ಇರುವ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಅಸಮಾಧಾನವನ್ನು ಹೊರಹಾಕಿದರು.
ಮುಂದಿನ ಚುನಾವಣೆಯಲ್ಲಿ ರಾಜಕೀಯ ಜಗ್ಗಾಟದಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು. ಇಲ್ಲದೇ ಇದ್ದರೆ ಈ ರಾಜ್ಯ ಮತ್ತು ದೇಶಕ್ಕೆ ಯಾವುದೇ ಭವಿಷ್ಯ ಇಲ್ಲ. ಪ್ರಜಾತಂತ್ರ ಉಳಿದು ಈ ದೇಶದ ಸಂವಿಧಾನ ರಕ್ಷಣೆ ಆಗಬೇಕು. ಸಂವಿಧಾನ ಕೊಡಲು ಬಿಜೆಪಿ ಕಾರಣ ಅಲ್ಲ, ಕಾಂಗ್ರೆಸ್ ಕಾರಣವಾಗಿದೆ. ಬಿಜೆಪಿಯವರಿಗೆ ಅಂಬೇಡ್ಕರ್ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಅವರು ಮನುಸ್ಮೃತಿ, ಜಾತಿ ವ್ಯವಸ್ಥೆ ಮತ್ತು ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಾರೆ. ನಮ್ಮ ಸಂವಿಧಾನ ಜಾತ್ಯತೀತ ರಾಷ್ಟ್ರ ನಿರ್ಮಾಣ ಮಾಡಲು ಹೇಳುತ್ತದೆ. ಆದರೆ, ಬಿಜೆಪಿಯವರು ಹಿಂದು ರಾಷ್ಟ್ರ ನಿರ್ಮಾಣ ಮಾಡಲು ಹೇಳುತ್ತಾರೆ. ಸಂವಿಧಾನ ಹಾಗೆ ಹೇಳಿಲ್ಲ. ರಾಜಕೀಯ ಪಕ್ಷಗಳು ಸಂವಿಧಾನದಂತೆ ಕೆಲಸ ಮಾಡಬೇಕು. ಯುವಕರಲ್ಲಿ ಜಾತಿ, ಧರ್ಮದ ಅಪಾಯಕಾರಿ ಅಫೀಮನ್ನು ಹುಟ್ಟು ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ನಾನೂ ಕಬಡ್ಡಿಯಲ್ಲಿ ಒಳ್ಳೇ ರೈಡರ್ ಆಗಿದ್ದೆ
ಈ ಕಬಡ್ಡಿ ಪಂದ್ಯಾವಳಿಯಲ್ಲಿ ಬಿಜೆಪಿ, ಜೆಡಿಎಸ್‌ನವರು ಇಲ್ಲ. ಇಲ್ಲಿನ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆಯೇ ಆಟ ನಡೆಯುತ್ತಿದೆ. ಕಬಡ್ಡಿ ದೇಸಿ ಕ್ರೀಡೆಯಾಗಿದ್ದು, ನಾನೂ ಹೈಸ್ಕೂಲ್‌ನಲ್ಲಿದ್ದಾಗ ಕಬಡ್ಡಿಯಲ್ಲಿ ಒಳ್ಳೆಯ ರೈಡರ್ ಆಗಿದ್ದೆ. ಕರಾವಳಿ ಪ್ರದೇಶದಲ್ಲಿ ಕೋಮುವಾದಿ ಬಿಜೆಪಿ ಸೋಲಿಸಬೇಕಿದೆ. ಈ ಉದ್ದೇಶ ಇಟ್ಟುಕೊಂಡು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಈ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ | Karnataka Election | ಬಿಎಸ್‌ವೈ ಮೂಲೆಗುಂಪು: ಇದು ಸಿಎಂ ಬೊಮ್ಮಾಯಿಗೆ ಆರೆಸ್ಸೆಸ್ ನೀಡಿದ ಟಾಸ್ಕ್ ಎಂದ ಕಾಂಗ್ರೆಸ್