ಕೋಲಾರ: ಇದು ಒಡೆಯರ್ ಸಿದ್ಧಾಂತ ಮತ್ತು ಟಿಪ್ಪು ಸಿದ್ಧಾಂತ ನಡುವಿನ ಸಂಘರ್ಷ- ಹೀಗೆಂದು ರಾಜ್ಯ ರಾಜಕೀಯವನ್ನು ವ್ಯಾಖ್ಯಾನಿಸಿದ್ದಾರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ. ಕೋಲಾರದಲ್ಲಿ (Karnataka Election) ಮಾತನಾಡಿದ ಅವರು, ಒಡೆಯರ್ ಸಿದ್ಧಾಂತ ಮತ್ತು ಸಾವರ್ಕರ್ ಸಿದ್ಧಾಂತ ಎರಡೂ ಒಂದೇ. ಕಾಂಗ್ರೆಸ್ ಟಿಪ್ಪು ಸಿದ್ಧಾಂತವನ್ನು ಬೆಂಬಲಿಸುತ್ತದೆ, ಬಿಜೆಪಿ ಒಡೆಯರ್ ಸಿದ್ಧಾಂತವನ್ನು ಬೆಂಬಲಿಸುತ್ತದೆ. ಹಾಗಾಗಿ ಇದು ಒಡೆಯರ್ ಮತ್ತು ಟಿಪ್ಪು ಸಿದ್ಧಾಂತಗಳ ನಡುವಿನ ಸಂಘರ್ಷ ಎಂದು ಹೇಳಿದರು.
ʻʻಟಿಪ್ಪು ಸುಲ್ತಾನ್ ಒಬ್ಬ ರಾಜನೇ ಅಲ್ಲ. ಮೈಸೂರು ಒಡೆಯರ ಸೇನಾಧಿಪತಿ ಅಷ್ಟೇ. ಅವರು ಮಾಡಿದ್ದೇನೆಂದರೆ ರಾಜಮ್ಮಣ್ಣಿ ಸೇರಿದಂತೆ ರಾಜ ಪರಿವಾರದವರನ್ನು ಸೆರೆಮನೆಗೆ ದೂಡಿದ್ದು. ಕೊಡಗಿನಲ್ಲಿ ನರಮೇಧ ಮಾಡಿದ್ದು, ಕನ್ನಡ ಭಾಷೆಯ ಬದಲಿಗೆ ಪಾರ್ಸಿ ಭಾಷೆಯನ್ನು ಹೇರಿದ್ದು ಇಷ್ಟೇʼʼ ಎಂದು ಹೇಳಿದರು ಸಿ.ಟಿ. ರವಿ. ಮೈಸೂರು ಮತ್ತು ರಾಜ್ಯಕ್ಕೆ ಟಿಪ್ಪುವಿನ ಕೊಡುಗೆ ಶೂನ್ಯ ಎಂದ ಸಿ.ಟಿ. ರವಿ, ಟಿಪ್ಪುವಿನ ಕೂಡುಗೆ ಏನು ಎಂಬುದಕ್ಕೆ ಒಂದು ಸಾಕ್ಷಿ ಕೊಡಿ ಎಂದು ಕೇಳಿದರು.
ಜೆಡಿಎಸ್‌ಗೆ ಎಲ್ಲ ಕಾಲದಲ್ಲೂ ಲಾಟರಿ ಹೊಡೆಯಲ್ಲ
ಎಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿಯೂ ಲಾಟರಿ ಹೊಡೆಯುತ್ತದೆ. ಕಳೆದ ಬಾರಿಯಂತೆ ತಾನೇ ಸಿಎಂ ಆಗುತ್ತೇನೆ ಎಂದು ಅವರು ಭಾವಿಸಬಾರದು. ಯಾಕೆಂದರೆ ಎಲ್ಲ ಕಾಲದಲ್ಲೂ ಲಾಟರಿ ಹೊಡೆಯುತ್ತದೆ ಎಂದು ಭಾವಿಸಬಾರದು ಎಂದು ಹೇಳಿದ ಅವರು, ಜಾತ್ಯತೀತತೆ ಸಿದ್ಧಾಂತದವರಿಗೆ ಜಾತಿ ಲೆಕ್ಕ ಏಕೆ ಬೇಕು, ಜಾತಿ ಹೆಸರು ಹೇಳಿಕೊಂಡು ರಾಜಕೀಯ ಮಾಡುವ ಅವಶ್ಯಕತೆ ಏಕೆ ಬಂತು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕೋಲಾರಕ್ಕೆ ಬರುವುದು ಉದ್ಧಾರ ಮಾಡೋದಕ್ಕಲ್ಲ!
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಪ್ರೀತಿಯಿಂದ ಕೋಲಾರಕ್ಕೆ, ಕೋಲಾರದ ಉದ್ಧಾರಕ್ಕೆ ಬರ್ತಿದ್ದಾರೆ ಅಂತ ಕೆಲವರು ಚಿಂತನೆ ಮಾಡುತ್ತಾರೆ. ಆದರೆ, ಅವರು ಬರುವುದು ಕೋಲಾರದ ಉದ್ಧಾರಕ್ಕೆ ಅಲ್ಲ, ಸ್ವಂತ ಗೆಲುವಿನ ಲೆಕ್ಕಾಚಾರ ಮಾಡಿಕೊಂಡು ಬರುತ್ತಿದ್ದಾರೆ ಎಂದು ಜನರು ತಿಳಿದುಕೊಳ್ಳಬೇಕು ಎಂದು ಹೇಳಿದರು ಸಿ.ಟಿ. ರವಿ.
ರಾಹುಲ್ ಹೆಸರು ಹೇಳಿದರೆ ಮತ ಬೀಳಲ್ಲ!
ನಮ್ಮದು ಸಿದ್ಧಾಂತ ಆಧರಿತ ಪಕ್ಷ. ಪಕ್ಷ ಅಭ್ಯರ್ಥಿ ಯಾರೆಂದು ನಿರ್ಣಯ ಮಾಡುತ್ತದೆ. ಪಕ್ಷದ ಒಳಗೆ ಮತ್ತು ಹೊರಗೆ ಸಮೀಕ್ಷೆ ಮಾಡಿ ಅಭ್ಯರ್ಥಿ ಆಯ್ಕೆ ನಡೆಯುತ್ತದೆ. ಆದರೆ, ಕೆಲವು ಪಕ್ಷಗಳಲ್ಲಿ ಕೆಲವರು ತಾವೇ ಅಭ್ಯರ್ಥಿ ಎಂದು ಮನೆಯಲ್ಲೇ ಘೋಷಣೆ ಮಾಡಿಕೊಳ್ಳುತ್ತಾರೆ ಎಂದು ಗೇಲಿ ಮಾಡಿದರು ಸಿ.ಟಿ. ರವಿ.
ʻʻರಾಜಕಾರಣದಲ್ಲಿ ಆಯಾ ಕ್ಷೇತ್ರಕ್ಕೆ ತಕ್ಕ ತಂತ್ರಗಾರಿಕೆ ಮಾಡಲಾಗುತ್ತದೆ. ನಾವು ಮೋದಿ ಹೆಸರು ಹೇಳಿ ಮತ ಕೇಳೋದು ನಿಜ. ಮೋದಿ ಹೆಸರು ಹೇಳಿದರೆ ಜನ ಮತ ಹಾಕುತ್ತಾರೆ. ಆದರೆ, ರಾಹುಲ್ ಹೆಸರು ಹೇಳಿದ್ರೆ ಮತವೇ ಬೀಳಲ್ಲʼʼ ಎಂದು ಹೇಳಿದ ಸಿ.ಟಿ. ರವಿ, ʻʻಇಂದಿರಾ ಗಾಂಧಿ ಕಾಲ ಹೋಗಿದೆ. ಅವರ ಹೆಸರಿಗೆ ಹೇಗೆ ಒಲವು ಇತ್ತೋ ಇವತ್ತು ಮೋದಿ ಹೆಸರಿಗೆ ಇದೆʼʼ ಎಂದರು.
ರಾಮುಲು ಇನ್ನಷ್ಟು ಪ್ರಚಾರ ಮಾಡಿದ್ದರೆ!!
ʻʻಮಾನಸಿಕ ಅಸ್ವಸ್ಥರು, ದಿವಾಳಿಯೆಂದು ಘೋಷಿಸಿದವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ, ಬೇರೆ ಯಾರು ಬೇಕಾದರು ಸ್ಪರ್ಧೆ ಮಾಡಬಹುದುʼʼ ಎಂದು ಸಿದ್ದರಾಮಯ್ಯ ಅವರ ಕೋಲಾರ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಅವರೇನೂ ಕೋಲಾರದ ಜನರ ಸಂಕಷ್ಟ ನಿವಾರಣೆಗೆ ಬರುತ್ತಿಲ್ಲ. ಕೇವಲ ಮತಕ್ಕಾಗಿಯೇ ಬರುತ್ತಾರೆ ಎಂದರು. ಅವರು ಗೆಲ್ಲುವ ಸಾಧ್ಯಾಸಾಧ್ಯತೆಗಳ ಬಗ್ಗೆ ಮಾತನಾಡಿದ ಅವರು, ʻʻಶ್ರೀರಾಮುಲು ಬಾದಾಮಿಯಲ್ಲಿ ಇನ್ನೂ ಹೆಚ್ಚು ಪ್ರಚಾರ ಮಾಡಿದ್ದರೆ ಕಳೆದ ಬಾರಿಯೇ ಸಿದ್ದರಾಮಯ್ಯ ಗೆಲ್ಲುತ್ತಿರಲಿಲ್ಲ. ಒಂದೊಮ್ಮೆ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಿರಲಿಲ್ಲʼʼ ಎಂದರು.
ಇದನ್ನೂ ಓದಿ : ಪ್ರಲ್ಹಾದ ಜೋಶಿಯವರಿಗೆ ಸಿಎಂ ಆಗುವ ಅರ್ಹತೆ ಇದೆ: ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಖಂಡಿಸಿದ ಸಿ.ಟಿ. ರವಿ