Site icon Vistara News

Karnataka Election : ಕೊನೆ ಪ್ರಚಾರದಲ್ಲೂ ಸಿಎಂ ಕನಸು ಬಿಚ್ಚಿಟ್ಟ ಡಿ.ಕೆ ಶಿವಕುಮಾರ್‌

#image_title

ರಾಮನಗರ: ರಾಜ್ಯದಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ (Chief Minister post) ಮನದಿಂಗಿತ ಬಿಚ್ಚಿಟ್ಟಿದ್ದಾರೆ. ಪ್ರಚಾರದ ಕೊನೆಯ ದಿನವಾದ ಸೋಮವಾರ ಕನಕಪುರ ಮತ್ತು ರಾಮನಗರದಲ್ಲಿ ಪ್ರಚಾರ ಮಾಡಿದ ಅವರು ರಾಮನಗರದಲ್ಲಿ ಗೆದ್ದ ಹಲವು ನಾಯಕರನ್ನು ನೆನಪಿಸಿ ತನಗೂ ಸಿಎಂ ಆಗುವ ಅವಕಾಶ ಕೊಡಿ ಎಂದು ಕೇಳಿದರು.

ರಾಮನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್ ಹುಸೇನ್ ಪರ ಪ್ರಚಾರ ಮಾಡಿದ ಡಿ.ಕೆ. ಶಿವಕುಮಾರ್‌ ಅವರು, ರಾಮನಗರದಲ್ಲಿ ಇಕ್ಬಾಲ್ ಅಲ್ಲ ಅಭ್ಯರ್ಥಿ, ನಾನೇ ಅಭ್ಯರ್ಥಿ. ಇಕ್ಬಾಲ್‌ಗೆ ವೋಟ್ ಹಾಕ್ತಿದೀನಿ ಅಂತ ಮತ ಹಾಕಬೇಡಿ, ಡಿ.ಕೆ ಶಿವಕುಮಾರ್‌ನನ್ನು ವಿಧಾನಸೌಧಕ್ಕೆ ಕಳುಹಿಸಬೇಕು ಅಂತ ಮತ ಹಾಕಿ ಎಂದು ಕೇಳಿಕೊಂಡರು.

ರಾಮನಗರದಲ್ಲಿ ರೋಡ್‌ ಶೋ

ʻʻದೇವೇಗೌಡ್ರು ಮುಖ್ಯಮಂತ್ರಿ ಆಗೋಕೆ ರಾಮನಗರ ಅವಕಾಶ ನೀಡಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗೋಕೆ ರಾಮನಗರ ಜನತೆ ಅವಕಾಶ ನೀಡಿದೆ. ಉತ್ತರ ಕನ್ನಡದ ರಾಮಕೃಷ್ಣ ಹೆಗ್ಡೆ ಅವರು ಮುಖ್ಯಮಂತ್ರಿ ಆಗೋಕೆ ರಾಮನಗರ ಜನರು ಅವಕಾಶ ನೀಡಿದ್ದರು. ಇದೀಗ ನಾನು ಈ ಮಣ್ಣಿನ ಮಗ, ಈ ಜಿಲ್ಲೆಯ ರೈತನ ಮಗ. ಈ ಜಿಲ್ಲೆಯವನಿಗೆ ಒಂದು ಅವಕಾಶ ಕೊಡಿʼʼ ಎಂದು ಡಿ.ಕೆ ಶಿವಕುಮಾರ್‌ ಕೇಳಿಕೊಂಡರು.

ರಾಮನಗರದಲ್ಲಿ ಕಾರ್ಯಕರ್ತರು ಡಿಕೆ ಶಿವಕುಮಾರ್ ಮೇಲೆ ಹೂವಿನ ಸುರಿಮಳೆಗೈದರು. ಬೃಹತ್ ಗಾತ್ರದ ಸೇಬು ಹಾರ ಹಾಕಿ ಶಿವಕುಮಾರ್‌ ಅವರನ್ನು ಸ್ವಾಗತಿಸಿದರು. ಹಾರೋಹಳ್ಳಿಯಲ್ಲಿ ಮಾತನಾಡಿದಾಗಲೂ ಡಿ.ಕೆ. ಶಿವಕುಮಾರ್‌ ಅಡಿದ್ದು ಮುಖ್ಯಮಂತ್ರಿ ಮಾತೇ. ಜನರು ಕೂಡಾ ಮುಂದಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಂದು ಜಯ ಘೋಷ ಕೂಗಿದರು!

ಕನಕಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ ಜನಸ್ತೋಮ

ಇದೇ ವೇಳೆ ಮಾಧ್ಯಮಗಳ ಜತೆಗೂ ಮಾತನಾಡಿದ ಅವರು, ಕಾಂಗ್ರೆಸ್‌ 141 ಸ್ಥಾನ ಗೆಲ್ಲುವ ಕಾನ್ಫಿಡೆನ್ಸ್‌ ಇದೆ ಎಂದರು. ನೀವು 113 ಸ್ಥಾನದ ಬಗ್ಗೆ ಯೋಚನೆ ಮಾಡುತ್ತಿರಬಹುದು. ಆದರೆ, ನಾವು 141 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು ಡಿ.ಕೆ. ಶಿವಕುಮಾರ್.‌ ಮೇ 15ರಂದು ನಡೆಯುವ ಸಂಪುಟ ಸಭೆಯಲ್ಲಿ ನಾವು ಘೋಷಣೆ ಮಾಡಿರುವ ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಯಾರ ನೇತೃತ್ವದ ಕ್ಯಾಬಿನೆಟ್‌ ಎಂಬ ಪ್ರಶ್ನೆಗೆ ಅದರನ್ನು ಮೇ 15ರಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಘೋಷಿಸುತ್ತಾರೆ ಎಂದರು.

ಚುನಾವಣಾ ಆಯೋಗಕ್ಕೆ ಉತ್ತರ ಕೊಟ್ಟಿದ್ದೇನೆ

ಸರಕಾರದ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಎಂದು ಬಿಡುಗಡೆ ಮಾಡಿದ ಪತ್ರಿಕಾ ಜಾಹೀರಾತುಗಳಿಗೆ ಸಂಬಂಧಿಸಿ ಬಿಜೆಪಿ ನೀಡಿರುವ ದೂರು ಹಾಗೂ ಆಯೋಗ ನೀಡಿರುವ ನೋಟಿಸ್‌ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್‌ ಅವರು, ʻʻನಿಮ್ಮ ಆರೋಪಗಳಿಗೆ ಸಂಬಂಧಿಸಿ ಏನು ದಾಖಲೆ ಇದೆ ಎಂದು ನನಗೆ ನೋಟಿಸ್ ನೀಡಿದ್ದಾರೆ. ನಾನು ಚುನಾವಣಾ ಆಯೋಗಕ್ಕೆ ಉತ್ತರ ಕೊಟ್ಟಿದ್ದೇನೆ. ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್‌ ಅವರು ಹೇಳಿದ್ದು, ಬಿಜೆಪಿ ನಾಯಕರೇ ಆದ ಗೂಳಿಹಟ್ಟಿ ಶೇಖರ್‌ ಮತ್ತು ವಿಶ್ವನಾಥ್‌ ಅವರೇ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿದ್ದಾಗಿ ಸ್ಪಷ್ಟಡಿಸಿದ್ದೇನೆ, ನೆಹರೂ ಓಲೇಕಾರ್‌ ಹೇಳಿದ್ದು, ಸಿ.ಪಿ. ಯೋಗೇಶ್ವರ್‌ ಅವರ ಮಾತುಗಳು, ಇವೆಲ್ಲವೂ ಪ್ರಕಟವಾಗಿರುವ ಪತ್ರಿಕೆಗಳು, ಹೇಳಿಕೆಗಳ ವಿಡಿಯೊಗಳನ್ನು ದಾಖಲೆಯಾಗಿ ತೆಗೆದುಕೊಳ್ಳಬಹುದು ಎಂದು ಹೇಳಿದ್ದೇನೆʼʼ ಎಂದರು ಡಿಕೆಶಿ.

ಚುನಾವಣಾ ಆಯೋಗ ನೋಟಿಸ್‌ ಕೊಡಬೇಕಾಗಿರುವುದು ನಮಗಲ್ಲ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೋಮುಗಲಭೆ ಆಗುತ್ತದೆ ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ನೋಟಿಸ್‌ ನೀಡಬೇಕು ಎಂದರು.

ಇದನ್ನೂ ಓದಿ : Karnataka Election : 100ಕ್ಕೂ ಅಧಿಕ ಲಿಂಗಾಯತ ಸ್ವಾಮೀಜಿಗಳಿಂದ ಕಾಂಗ್ರೆಸ್‌ಗೆ ಬೆಂಬಲ ಎಂದ ಡಿಕೆಶಿ

Exit mobile version