ರಾಮನಗರ: ಕಳೆದ ಕೆಲವು ತಿಂಗಳುಗಳಿಂದ ಕಾಲಿಗೆ ಚಕ್ರ ಕಟ್ಟಿಕೊಟ್ಟಂತೆ ಓಡಾಡಿದ, ಇಡೀ ಕಾಂಗ್ರೆಸ್ ಪಕ್ಷದ ಚುನಾವಣಾ ವ್ಯವಸ್ಥೆಯನ್ನು (Karnataka Election 2023) ಹೆಗಲ ಮೇಲೆ ಹೊತ್ತಿ ನಿಭಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ಮತದಾನ ಮುಗಿಯುತ್ತಿದ್ದಂತೆಯೇ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್‌ಡ್ ಮೂಡ್‌ನಲ್ಲಿದ್ದಾರೆ. ಅದರ ಜತೆಗೇ ಸಣ್ಣಗೆ ಸ್ವರ ಬಾಧಿಸಿದ್ದರಿಂದ ವಿಶ್ರಾಂತಿ ಪಡೆಯಬೇಕಾಗಿ ಬಂದಿದೆ.
ವಾಸು ಹೋಟೆಲ್‌ನಲ್ಲಿ ಟಿಫಿನ್
ಬುಧವಾರ ಸಂಜೆಯಿಂದಲೇ ಸ್ವಲ್ಪ ರಿಲ್ಯಾಕ್ಸ್ ಆಗಿದ್ದ ಡಿ.ಕೆ.ಶಿವಕುಮಾರ್ ಅವರು, ಬೆಳಗ್ಗೆ ಎದ್ದವರೇ ಸೋದರ, ಸಂಸದ ಡಿ.ಕೆ. ಸುರೇಶ್ ಅವರನ್ನು ಕರೆದುಕೊಂಡು ಕನಕಪುರ ಪಟ್ಟಣಕ್ಕೆ ಬಂದಿದ್ದರು. ಕನಕಪುರದ ಕೆಎನ್‌ಎಸ್ ವೃತ್ತದ ಬಳಿ ಇರುವ ವಾಸು ಹೋಟೆಲ್‌ಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು ಅಲ್ಲಿ ಸ್ವಲ್ಪ ಹೊತ್ತು ಮೇಜಿಗೆ ತಲೆ ಇತ್ತು ವಿಶ್ರಾಂತಿ ಪಡೆದರು. ನಂತರ ಅವರಿಗೆ ಇಡ್ಲಿ ಮತ್ತು ದೋಸೆ ನೀಡಲಾಯಿತು.
ಈ ವೇಳೆ ಮಾತನಾಡಿದ ಅವರು, ಕನಕಪುರ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಕಾಂಗ್ರೆಸ್ ರಾಜ್ಯದಲ್ಲಿ 141 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ತಾಯಿಯ ಆಶೀರ್ವಾದ
ಕನಕಪುರದಲ್ಲಿ ಉಪಾಹಾರ ಸೇವಿಸಿದ ಡಿ.ಕೆ. ಶಿವಕುಮಾರ್ ಅವರು ಬಳಿಕ ಕನಕಪುರದ ಕೋಡಿಹಳ್ಳಿಯ ತಮ್ಮ ಮೂಲ ಮನೆಗೆ ಭೇಟಿ ನೀಡಿದರು. ಅಲ್ಲಿ ತಾಯಿ ಗೌರಮ್ಮನವರ ಜತೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿದ ಅವರು, ಕಾಲು ಹಿಡಿದು ಆಶೀರ್ವಾದ ಪಡೆದರು. ಬಳಿಕ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರಿಬ್ಬರಿಗೂ ತಾಯಿ ಗೌರಮ್ಮ ಅವರು ತಲೆಗೆ ಕೈ ಇಟ್ಟು ಆಶೀರ್ವಾದ ಮಾಡಿದರು.
ಈ ನಡುವೆ, ಡಿ.ಕೆ. ಶಿವಕುಮಾರ್ ಅವರಿಗೆ ಸ್ವಲ್ಪ ಜ್ವರ ಕಾಡುತ್ತಿರುವುದರಿಂದ ಅವರು ಬಳಿಕ ಮನೆಗೆ ಹೋಗಿ ವಿಶ್ರಾಂತಿ ಪಡೆದರು.
ರಿಲ್ಯಾಕ್ಸ್ ಮೂಡ್‌ನಲ್ಲಿ ಲಕ್ಷ್ಮಣ ಸವದಿ
ಬೆಳಗಾವಿ: ಈ ಹಿಂದೆ ಬಿಜೆಪಿಯಲ್ಲಿದ್ದು ಕಾಂಗ್ರೆಸ್‌ಗೆ ಬಂದಿರುವ ಹಿರಿಯ ನಾಯಕ ಲಕ್ಷ್ಮಣ ಸವದಿ ಅವರು ಕೂಡಾ ಮತದಾನದ ಬಳಿಕ ರಿಲ್ಯಾಕ್ಸ್‌ಗೆ ಜಾರಿದರು. ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸದಲ್ಲಿ ಬೆಂಬಲಿಗರ ಜತೆ ಚರ್ಚೆ ಮಾಡಿದರು.
ಎಲ್ಲಿ ಎಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ ಆಗಿದೆ, ಎಲ್ಲಿ ಕಡಿಮೆ ಆಗಿದೆ ಎಂದು ಮಾಹಿತಿ ಪಡೆದ ಅವರು, ಸೋಲು ಗೆಲುವಿನ ಲೆಕ್ಕಾಚಾರ ಹೇಗೆ ಎಂದು ವಿಚಾರಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಚರ್ಚೆ ನಡೆಸಿದರು.
ಇದನ್ನೂ ಓದಿ : Karnataka Election : ಅತಂತ್ರ ಪ್ರಶ್ನೆಯೇ ಇಲ್ಲ, ಬಹುಮತ ಗ್ಯಾರಂಟಿ; ಸವದತ್ತಿ ಎಲ್ಲಮ್ಮನ ದರ್ಶನ ಮಾಡಿದ ಬೊಮ್ಮಾಯಿ